ಕೊರೊನಾ ಲಸಿಕೆಯೊಂದಿಗೆ ರಾಜಕೀಯ ಬೆರಕೆ.. ಒಬ್ಬೊಬ್ಬರದ್ದೂ ಒಂದೊಂದು ರಾಗ: ಆರೋಗ್ಯ ಸಚಿವರು ಹೇಳಿದ್ದೇನು?

ಭಾರತ್ ಬಯೋಟೆಕ್​ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೊವ್ಯಾಕ್ಸಿನ್ ಲಸಿಕೆ ಇನ್ನೂ 3ನೇ ಹಂತದ ಪರೀಕ್ಷೆ ಪೂರೈಸಿಲ್ಲ. ಆದ್ದರಿಂದ ಪೂರ್ಣ ಪರೀಕ್ಷೆಗೂ ಮುನ್ನ ಆತುರದಲ್ಲಿ ಬಳಕೆಗೆ ಅಸ್ತು ಎಂದಿರುವುದು ಏಕೆ? ಅದರಿಂದ ತೊಂದರೆ ಆದರೆ ಯಾರು ಹೊಣೆ? ಎನ್ನುವುದು ಹಲವರ ಪ್ರಶ್ನೆ.

ಕೊರೊನಾ ಲಸಿಕೆಯೊಂದಿಗೆ ರಾಜಕೀಯ ಬೆರಕೆ.. ಒಬ್ಬೊಬ್ಬರದ್ದೂ ಒಂದೊಂದು ರಾಗ: ಆರೋಗ್ಯ ಸಚಿವರು ಹೇಳಿದ್ದೇನು?
ಕೊರೊನಾ ಲಸಿಕೆಯಲ್ಲೂ ರಾಜಕೀಯ
Skanda

| Edited By: Ghanashyam D M | ಡಿ.ಎಂ.ಘನಶ್ಯಾಮ

Jan 04, 2021 | 2:45 PM

ದೇಶದಲ್ಲಿ ಕೊರೊನಾ ಲಸಿಕೆ ವಿತರಣೆಗೆ ಸಂಬಂಧಿಸಿದಂತೆ ಭಾರತೀಯ ಔಷಧ ನಿಯಂತ್ರಣಾ ಮಂಡಳಿ ಎರಡು ಲಸಿಕೆಗಳಿಗೆ ಅನುಮತಿ ನೀಡಿದೆ. ಸೆರಮ್ ಸಂಸ್ಥೆಯ ಕೊವಿಶೀಲ್ಡ್ ಮತ್ತು ಭಾರತ್ ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್​ ಲಸಿಕೆಗಳ ಬಳಕೆಗೆ ಒಪ್ಪಿಗೆ ಸಿಕ್ಕಿದೆ. ಆದರೆ, ಈ ವಿಚಾರದಲ್ಲೀಗ ರಾಜಕೀಯ ಜಗಳಗಳು ಹಾಗೂ ಹಲವು ಗೊಂದಲಗಳು ತಳುಕು ಹಾಕಿಕೊಂಡು ಹೊಸ ಚರ್ಚೆಗೆ ನಾಂದಿ ಹಾಡಿದೆ.

ಸೆರಮ್​ ಸಂಸ್ಥೆಯ ಕೊವಿಶೀಲ್ಡ್ ಲಸಿಕೆ 3 ಹಂತಗಳ ಪರೀಕ್ಷೆಯನ್ನು ಎದುರಿಸಿ ನಂತರ ಅನುಮತಿ ಗಿಟ್ಟಿಸಿಕೊಂಡಿದೆ. ಆದರೆ, ಭಾರತ್ ಬಯೋಟೆಕ್​ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೊವ್ಯಾಕ್ಸಿನ್ ಲಸಿಕೆ ಇನ್ನೂ 3ನೇ ಹಂತದ ಪರೀಕ್ಷೆ ಪೂರೈಸಿಲ್ಲ. ಆದ್ದರಿಂದ ಪೂರ್ಣ ಪರೀಕ್ಷೆಗೂ ಮುನ್ನ ಆತುರದಲ್ಲಿ ಬಳಕೆಗೆ ಅಸ್ತು ಎಂದಿರುವುದು ಏಕೆ? ಅದರಿಂದ ತೊಂದರೆ ಆದರೆ ಯಾರು ಹೊಣೆ? ಎನ್ನುವುದು ಹಲವರ ಪ್ರಶ್ನೆ.

ಮುಖ್ಯವಾಗಿ ಈ ವಿಚಾರವನ್ನು ಪ್ರಸ್ತಾಪಿಸಿರುವ ಕಾಂಗ್ರೆಸ್ ನಾಯಕ ಶಶಿ ತರೂರ್​ ನಿನ್ನೆಯಿಂದಲೂ ಒಂದರ ಮೇಲೊಂದರಂತೆ ಟ್ವೀಟ್ ಮಾಡುತ್ತಿದ್ದಾರೆ. ಕೊವ್ಯಾಕ್ಸಿನ್​ ವಿಶ್ವಾಸಾರ್ಹತೆಯ ಕುರಿತು ಪ್ರಶ್ನೆ ಎತ್ತಿರುವ ತರೂರ್​ ಟ್ವಿಟರ್​ನಲ್ಲಿ ಕೇಂದ್ರ ಆರೋಗ್ಯ ಸಚಿವರ ನಿರ್ಧಾರವನ್ನು ಪ್ರಶ್ನಿಸಿದ್ದಾರೆ.

ಮೂರನೇ ಹಂತದ ಪರೀಕ್ಷೆ ಮುಗಿಯುವ ಮುನ್ನವೇ ಅನುಮತಿ ನೀಡಿರುವುದು ಎಷ್ಟು ಸಮಂಜಸ? ಈ ನಿರ್ಧಾರ ಆತುರದ್ದಾಗಿದ್ದು ಅಪಾಯಕ್ಕೆ ಆಹ್ವಾನ ನೀಡುವ ಸಾಧ್ಯತೆ ಇದೆ. ಆದರೆ, ಆರೋಗ್ಯ ಸಚಿವರು ಕೊವ್ಯಾಕ್ಸಿನ್​ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆ ಇದೆ. ಇನ್ನಿತರ ಲಸಿಕೆಗಳಂತೆಯೇ ಕಾರ್ಯ ನಿರ್ವಹಿಸುವ ಸಾಧ್ಯತೆ ಇದೆ ಎನ್ನುತ್ತಿದ್ದಾರೆ. ಹೀಗೆ ‘ಸಾಧ್ಯತೆ’ಯ ಮೇಲೆ ವಿಶ್ವಾಸವಿಡುವುದಕ್ಕಿಂತ 3 ಹಂತದ ಪರೀಕ್ಷೆ ಮುಗಿದ ಮೇಲೆ ಅಧಿಕೃತವಾಗಿ ಹೇಳುವುದು ಉತ್ತಮ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ಧ್ವನಿ ಎತ್ತಿರುವ ಕಾಂಗ್ರೆಸ್​ ಪಕ್ಷದ ಜೈರಾಮ್​ ರಮೆಶ್ ಸಹ ಅಂತಾರಾಷ್ಟ್ರೀಯ ನಿಯಮಗಳನ್ನು ಉಲ್ಲಂಘಿಸಿ ಕೊವ್ಯಾಕ್ಸಿನ್​ ಲಸಿಕೆಗೆ ಅನುಮತಿ ನೀಡಿರುವ ಕುರಿತು ಆರೋಗ್ಯ ಸಚಿವರು ವಿವರಣೆ ನೀಡಬೇಕೆಂದು ಆಗ್ರಹಿಸಿದ್ದಾರೆ.

ಬಿಜೆಪಿ ಲಸಿಕೆ ಮೇಲಿಲ್ಲ ನಂಬಿಕೆ ಇದೆಲ್ಲಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿರುವ ಅಖಿಲೇಶ್​ ಯಾದವ್ ಈ ಲಸಿಕೆಗಳನ್ನು ಬಿಜೆಪಿ ಲಸಿಕೆ ಎಂದು ಕರೆದಿದ್ದು, ತನಗೆ ಲಸಿಕೆ ಮೇಲೆ ನಂಬಿಕೆ ಇಲ್ಲ ಎಂದಿದ್ದಾರೆ. ಲಸಿಕೆಗೂ ರಾಜಕೀಯ ಬೆರೆಸಿರುವುದಕ್ಕೆ ಅಖಿಲೇಶ್​ ಯಾದವ್​ ವಿರುದ್ಧ ಅನೇಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್​ನ ರಶೀದ್ ಅಲ್ವಿ, ಅಖಿಲೇಶ್​ ಹೇಳಿರುವುದರಲ್ಲಿ ತಪ್ಪಿಲ್ಲ ಎಂದಿದ್ದಾರೆ.

ಸಿಬಿಐ, ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯಗಳನ್ನು ವಿರೋಧ ಪಕ್ಷಗಳ ವಿರುದ್ಧ ಕೇಂದ್ರ ಸರ್ಕಾರ ದುರ್ಬಳಕೆ ಮಾಡುತ್ತಿದೆ. ಅದನ್ನು ಗಮನಿಸಿದರೆ, ಅಖಿಲೇಶ್ ಯಾದವ್​ರ ಕೊರೊನಾ ಲಸಿಕೆ ಕುರಿತ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ ಎನಿಸುತ್ತದೆ ಎಂದು ರಶೀದ್ ಅಲ್ವಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸ್ಪಷ್ಟನೆ ಕೊಟ್ಟ ಹರ್ಷವರ್ಧನ್​ ಈ ಎಲ್ಲಾ ವಿರೋಧಗಳಿಗೆ ತಿರುಗೇಟು ನೀಡಿರುವ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಕೊವಿಶೀಲ್ಡ್​ಗೆ ನೀಡಿರುವ ಅನುಮತಿಗೂ ಕೊವ್ಯಾಕ್ಸಿನ್​ಗೆ ನೀಡಿರುವ ಅನುಮತಿಗೂ ವ್ಯತ್ಯಾಸವಿದೆ. ಕೊವ್ಯಾಕ್ಸಿನ್​ ಲಸಿಕೆ ಪಡೆದವರ ಮೇಲೆ ಹೆಚ್ಚಿನ ನಿಗಾ ವಹಿಸಲು ತಿಳಿಸಲಾಗಿದೆ. ಇದು ಪರೀಕ್ಷಾ ಮಾದರಿಯಲ್ಲೇ ಇರುತ್ತದೆ. ಭಾರತ ಲಸಿಕೆ ವಿಚಾರದಲ್ಲಿ ತೆಗೆದುಕೊಂಡಿರುವ ನಿರ್ಧಾರವನ್ನು ವಿಶ್ವ ಆರೋಗ್ಯ ಸಂಸ್ಥೆಯೇ ಸ್ವಾಗತಿಸಿದೆ. ಆದರೆ, ಪ್ರತಿಪಕ್ಷದವರಿಗೆ ಇದನ್ನು ಒಪ್ಪಿಕೊಳ್ಳಲು ಕಷ್ಟವಾಗಿರುವುದು ವಿಪರ್ಯಾಸ ಎಂದು ಕಾಲೆಳೆದಿದ್ದಾರೆ.

ಕೊರೊನಾ ಲಸಿಕೆಯನ್ನು ದೇಶಾದ್ಯಂತ ಹಂಚುತ್ತೇವೆ: ಪ್ರಧಾನಿ ನರೇಂದ್ರ ಮೋದಿ ಅಭಯ ಹಸ್ತ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada