ದೆಹಲಿ: ಕೊರೊನಾ ಲಸಿಕೆಯಲ್ಲಿ ಹರಾಮ್ (ಧರ್ಮ ಬಾಹಿರವಾದ) ಅಂಶಗಳಿದ್ದರೂ ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ಲಸಿಕೆಯನ್ನು ಪಡೆದುಕೊಳ್ಳಬಹುದು ಎಂದು ಜಮಾತ್-ಎ-ಇಸ್ಲಾಮಿ (ಹಿಂದ್) ಸಂಘಟನೆ ಶನಿವಾರ ಸ್ಪಷ್ಟನೆ ನೀಡಿದೆ.
ಕೊವಿಡ್-19 ವಿರುದ್ಧದ ಲಸಿಕೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಹರಾಮ್ ಆದ ಪದಾರ್ಥಗಳಿವೆ, ಹಾಗಾಗಿ ಲಸಿಕೆ ಪಡೆಯಬಾರದು ಎಂದು ಕೆಲವು ಮುಸ್ಲಿಂ ವಿದ್ವಾಂಸರು ಅಭಿಪ್ರಾಯಪಟ್ಟಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಜಮಾತ್-ಎ-ಇಸ್ಲಾಮಿ (ಹಿಂದ್), ಹರಾಮಿ ಅಂಶಗಳಿರದ ಲಸಿಕೆ ಅಲಭ್ಯವಾದರೆ ಯಾವುದೇ ಲಸಿಕೆ ಪಡೆದುಕೊಳ್ಳಬಹುದು ಎಂದು ತಿಳಿಸಿದೆ.
ಜಮಾತ್-ಎ-ಇಸ್ಲಾಮಿ, ಶರಯಾ ಕೌನ್ಸಿಲ್ ಕಾರ್ಯದರ್ಶಿ ಡಾ. ರಾಝಿ-ಉಲ್-ಇಸ್ಲಾಂ ನದ್ವಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಹರಾಮಿ ಅಂಶಗಳು ಮತ್ತೊಂದು ವಸ್ತುವಿನಲ್ಲಿ ಸಂಪೂರ್ಣ ಭಿನ್ನವಾಗಿ ಸೇರಿಕೊಂಡರೆ. ಹರಾಮಿ ಅಂಶಗಳ ಗುಣಲಕ್ಷಣಗಳು ಅದರಲ್ಲಿ ಇಲ್ಲದಿದ್ದರೆ ಅಂಥಾ ವಸ್ತುವನ್ನು ಬಳಸಬಹುದು. ಈ ನೀತಿಯ ಅನ್ವಯ, ಕೊರೊನಾ ಲಸಿಕೆ ಪಡೆದುಕೊಳ್ಳಬಹುದು ಎಂದು ಹೇಳಿದ್ದಾರೆ. ಒಂದುವೇಳೆ ಈ ನಿಯಮವನ್ನು ತಿರಸ್ಕರಿಸುವವರಿದ್ದರೆ ಅಂಥವರು ಆಪತ್ಕಾಲದ ಅಥವಾ ತುರ್ತು ಸಂದರ್ಭದ ಕಾರಣದಿಂದ, ಹರಾಮಿ ಅಂಶಗಳಿದ್ದರೂ ಲಸಿಕೆ ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.
ಲಸಿಕೆಯಲ್ಲಿ ಬಳಸಿಕೊಂಡಿರುವ ವಸ್ತುಗಳ ಬಗ್ಗೆ ಈವರೆಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಹಾಗಾಗಿ, ಲಸಿಕೆಯ ಬಗ್ಗೆ ಸದ್ಯ ಗೊಂದಲ ಬೇಡ. ಮುಂದೆ, ಲಸಿಕೆಗೆ ಬಳಸಿರುವ ಅಂಶಗಳ ಬಗ್ಗೆ ವಿವರ ಸಿಕ್ಕಿದರೆ ನಂತರ ಮುಂದಿನ ನಿರ್ಧಾರಗಳನ್ನು ಕೈಗೊಳ್ಳಲಾಗುವುದು ಎಂದು ಡಾ. ರಾಝಿ-ಉಲ್-ಇಸ್ಲಾಂ ನದ್ವಿ ಮಾಹಿತಿ ನೀಡಿದ್ದಾರೆ.
ಭಾರತ, ಇಂಡೊನೇಷ್ಯಾ ಹಾಗೂ ಯುಎಇ ದೇಶಗಳಲ್ಲಿ ಕೆಲವು ಮುಸ್ಲಿಂ ಸಂಘಟನೆಯ ವಿದ್ವಾಂಸರು, ಕೊರೊನಾ ಲಸಿಕೆಯಲ್ಲಿ ಹಂದಿ ಜೆಲೆಟಿನ್ ಇರುವುದರಿಂದ ಅವುಗಳನ್ನು ಸ್ವೀಕರಿಸಬಾರದು ಎಂದು ಹೇಳಿದ್ದರು. ಭಾರತದ ಸುನ್ನಿ ಜಮಿಯಾತ್-ಉಲ್-ಉಲೆಮಾ ಕೌನ್ಸಿಲ್ ಮತ್ತು ರಾಝಾ ಅಕಾಡೆಮಿ ಕೊವಿಡ್-19 ವಿರುದ್ಧದ ಲಸಿಕೆಯನ್ನು ಹರಾಮ್ ಎಂದು ಹೇಳಿತ್ತು. ಮುಸ್ಲಿಂ ಸಮುದಾಯದ ಜನರು ಲಸಿಕೆ ಪಡೆಯದಂತೆಯೂ ಸೂಚಿಸಿತ್ತು.
Explainer | ಕೊವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಗೆ ಅನುಮೋದನೆ ಸಿಕ್ಕಿದ್ದಾಯ್ತು; ಮುಂದೇನು?