ಭಾರತದಲ್ಲಿ ಕೊರೊನಾ 2ನೇ ಅಲೆಯ ತೀವ್ರತೆ ಕಡಿಮೆಯಾಗುತ್ತಿದೆ, ಲಸಿಕೆ ವಿತರಣೆ ಹೆಚ್ಚಾಗುತ್ತಿದೆ: ಕೇಂದ್ರ ಆರೋಗ್ಯ ಇಲಾಖೆ
ಭಾರತದಲ್ಲಿ ಸುಮಾರು 4.36 ಕೋಟಿ ಜನರು ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. 15.9 ಕೋಟಿ ಜನರಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ. ದೇಶದಲ್ಲಿ ಕೊರೊನಾ ಎರಡನೇ ಅಲೆಯ ತೀವ್ರತೆ ಕಡಿಮೆಯಾಗುತ್ತಿದೆ. ಲಸಿಕೆ ನೀಡಿಕೆಯ ವೇಗ ಹೆಚ್ಚಾಗುತ್ತಿದೆ ಎಂದು ಲಸಿಕೆ ಸಮಿತಿಯ ಮುಖ್ಯಸ್ಥ ವಿ.ಕೆ.ಪೌಲ್ ಹೇಳಿದರು.
ದೆಹಲಿ: ದೇಶದಲ್ಲಿ ಮೇ 17ರ ನಂತರ ಕೊರೊನಾ ಸೋಂಕಿತರ ಸಂಖ್ಯೆ ನಿತ್ಯ ಮೂರು ಲಕ್ಷಕ್ಕಿಂತ ಕಡಿಮೆ ಪ್ರಮಾಣದಲ್ಲಿ ಬರುತ್ತಿದೆ ಎಂದು ಕೇಂದ್ರದ ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಲವ್ ಅಗರವಾಲ್ ಹೇಳಿದರು. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈಗ 359 ಜಿಲ್ಲೆಯಲ್ಲಿ ಮಾತ್ರ ನಿತ್ಯ ನೂರಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕೊರೊನಾ ಕೇಸ್ಗಳು ಪತ್ತೆಯಾಗುತ್ತಿವೆ ಎಂದು ಮಾಹಿತಿ ನೀಡಿದರು.
ಏಪ್ರಿಲ್ 28ರಿಂದ ಮೇ 4ರ ಅವಧಿಯಲ್ಲಿ 531 ಜಿಲ್ಲೆಯಲ್ಲಿ ನಿತ್ಯ ನೂರಕ್ಕಿಂತ ಹೆಚ್ಚು ಕೊರೊನಾ ಕೇಸ್ ಪತ್ತೆ ಆಗುತ್ತಿದ್ದವು. ದೇಶದಲ್ಲಿ ಮೇ 10ರಂದು 37.45 ಲಕ್ಷ ಸಕ್ರಿಯ ಕೊರೊನಾ ಪ್ರಕರಣಗಳು ಇದ್ದವು. ಈಗ ದೇಶದಲ್ಲಿ 24 ಲಕ್ಷ ಕೊರೊನಾ ಪ್ರಕರಣಗಳಿವೆ. ಕಳೆದ 17 ದಿನಗಳಲ್ಲಿ 13 ಲಕ್ಷ ಸಕ್ರಿಯ ಕೊರೊನಾ ಕೇಸ್ ಕಡಿಮೆಯಾಗಿವೆ. 24 ರಾಜ್ಯಗಳಲ್ಲಿ ಕೊರೊನಾ ಸಕ್ರಿಯ ಕೇಸ್ಗಳಲ್ಲಿ ಕುಸಿತ ಆಗ್ತಿದೆ. ಇಂದು 25 ರಾಜ್ಯಗಳಲ್ಲಿ ಹೊಸದಾಗಿ ದೃಢಪಟ್ಟ ಕೊರೊನಾ ಪ್ರಕರಣಗಳಿಗಿಂತಲೂ ಗುಣಮುಖರಾಗುವವರ ಸಂಖ್ಯೆ ಹೆಚ್ಚಾಗಿ ವರದಿಯಾಗುತ್ತಿದೆ ಎಂದು ತಿಳಿಸಿದರು.
ಮೇ 3ರಂದು ದೇಶದಲ್ಲಿ ಕೊರೊನಾ ಗುಣಮುಖ ಪ್ರಮಾಣ ಶೇ 81ಕ್ಕೆ ಕುಸಿದಿತ್ತು. ಆದರೆ ಈಗ ದೇಶದಲ್ಲಿ ಕೊರೊನಾ ಗುಣಮುಖ ಪ್ರಮಾಣ ಶೇ 90ಕ್ಕೆ ಏರಿಕೆಯಾಗಿದೆ ಇದು ಬಹಳ ಒಳ್ಳೆಯ ಬೆಳವಣಿಗೆ. ದೇಶದಲ್ಲಿ ನಿತ್ಯ ಕೊರೊನಾ ಟೆಸ್ಟಿಂಗ್ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಮೇ 26 ರಂದು ಆಗಿರುವ 22 ಲಕ್ಷ ಕೊರೊನಾ ಸ್ಯಾಂಪಲ್ ಪರೀಕ್ಷೆ ಮಾಡಿರುವುದು ಈವರೆಗಿನ ಗರಿಷ್ಠ ಸಾಧನೆಯಾಗಿದೆ. ದೇಶದಲ್ಲಿ ಮೇ 20-26ರ ಅವಧಿಯಲ್ಲಿ ಕೊರೊನಾ ಟೆಸ್ಟಿಂಗ್ ಪಾಸಿಟಿವಿಟಿ ದರ ಶೇ 10.45ರಷ್ಟು ಇದೆ. ಮೇ 3ರಂದು ಕೊನೆಗೊಂಡ ವಾರದಲ್ಲಿ ಕೊರೊನಾ ಟೆಸ್ಟಿಂಗ್ ಪಾಸಿಟಿವಿಟಿ ದರ ಶೇ 21ರಷ್ಟಿತ್ತು ಎಂದು ಹೇಳಿದರು.
ಭಾರತದಲ್ಲಿ ಸುಮಾರು 4.36 ಕೋಟಿ ಜನರು ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. 15.9 ಕೋಟಿ ಜನರಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ. ದೇಶದಲ್ಲಿ ಕೊರೊನಾ ಎರಡನೇ ಅಲೆಯ ತೀವ್ರತೆ ಕಡಿಮೆಯಾಗುತ್ತಿದೆ. ಲಸಿಕೆ ನೀಡಿಕೆಯ ವೇಗ ಹೆಚ್ಚಾಗುತ್ತಿದೆ ಎಂದು ಲಸಿಕೆ ಸಮಿತಿಯ ಮುಖ್ಯಸ್ಥ ವಿ.ಕೆ.ಪೌಲ್ ಹೇಳಿದರು. ಜುಲೈ ಅಂತ್ಯದ ವೇಳೆಗೆ 51.6 ಕೋಟಿ ಡೋಸ್ ಲಸಿಕೆ ವಿತರಿಸಲಾಗುವುದು. ವಿದೇಶಿ ಲಸಿಕಾ ಕಂಪನಿಗಳ ಜೊತೆಗೆ ಚರ್ಚೆ ನಡೆಸುತ್ತಿದ್ದೇವೆ. ಭಾರತ್ ಬಯೋಟೆಕ್ ಕಂಪನಿ 90 ಲಕ್ಷ ಡೋಸ್ ಲಸಿಕೆಯಿಂದ ಉತ್ಪಾದನೆ ಆರಂಭಿಸಿತು. ಈಗ ಈಗ ಉತ್ಪಾದನೆ ಪ್ರಮಾಣ ಹೆಚ್ಚಿಸಿದೆ. ಇನ್ನೂ ಕೆಲವೇ ತಿಂಗಳಲ್ಲಿ ತಿಂಗಳಿಗೆ ಹತ್ತು ಕೋಟಿ ಡೋಸ್ ಲಸಿಕೆ ಉತ್ಪಾದಿಸಲಿದೆ. ಫೈಜರ್ ಕಂಪನಿಯು ಭಾರತಕ್ಕೆ ಲಸಿಕೆ ಪೂರೈಸಲು ಆಸಕ್ತಿ ತೋರಿಸಿದೆ ಅವರು ಮಾಹಿತಿ ನೀಡಿದರು.
ಮೊದಲ ಡೋಸ್ ಆಗಿ ಯಾವ ಲಸಿಕೆ ಪಡೆಯುತ್ತಾರೋ ಅದೇ ಲಸಿಕೆಯನ್ನು 2ನೇ ಡೋಸ್ ಆಗಿ ತೆಗೆದುಕೊಳ್ಳಬೇಕು. ಉತ್ತರ ಪ್ರದೇಶದಲ್ಲಿ ಬೇರೆಬೇರೆ ಲಸಿಕೆಗಳ ಡೋಸ್ ಪಡೆದಿರುವವರಿಗೆ ಯಾವುದೇ ಅಡ್ಡಪರಿಣಾಮಗಳು ಕಂಡು ಬಂದಿಲ್ಲ. ಎರಡೂ ಡೋಸ್ ಪಡೆದ ಬಳಿಕ ಆ್ಯಂಟಿಬಾಡಿ ಟೆಸ್ಟ್ ಅಗತ್ಯವಿಲ್ಲ. ಕೊವ್ಯಾಕ್ಸಿನ್ ಲಸಿಕೆಯ ಬೂಸ್ಟರ್ ಡೋಸ್ ನೀಡುವ ಪ್ರಯೋಗ ನಡೆಯುತ್ತಿದೆ ಎಂದು ಅವರು ವಿವರಿಸಿದರು.
(Coronavirus 2nd Wave Decreasing Vaccination Increasing in India says Union Health Ministry)
ಇದನ್ನೂ ಓದಿ: Karnataka Covid Update: ಕರ್ನಾಟಕದಲ್ಲಿ ಒಂದೇ ದಿನ 24,214, ಬೆಂಗಳೂರಿನಲ್ಲಿ 5,949 ಜನರಿಗೆ ಕೊವಿಡ್ ಸೋಂಕು ದೃಢ
ಇದನ್ನೂ ಓದಿ: Covid Warriors: ಕೊವಿಡ್ ಸೇನಾನಿಗಳಿಗೆ ಪ್ರೋತ್ಸಾಹ ಧನ 6 ತಿಂಗಳವರೆಗೂ ವಿಸ್ತರಣೆ ಮಾಡುವಂತೆ ಆದೇಶ