ನಿಯಂತ್ರಣಕ್ಕೆ ಬರ್ತಿದೆ ಕೊರೊನಾ 2ನೇ ಅಲೆ: ದೇಶದ 350 ಜಿಲ್ಲೆಯಲ್ಲಿ ಶೇ 5ಕ್ಕಿಂತ ಕಡಿಮೆ ಪಾಸಿಟಿವಿಟಿ ದರ

ನಿಯಂತ್ರಣಕ್ಕೆ ಬರ್ತಿದೆ ಕೊರೊನಾ 2ನೇ ಅಲೆ: ದೇಶದ 350 ಜಿಲ್ಲೆಯಲ್ಲಿ ಶೇ 5ಕ್ಕಿಂತ ಕಡಿಮೆ ಪಾಸಿಟಿವಿಟಿ ದರ
ಕೊವಿಡ್ ಆಸ್ಪತ್ರೆಯೊಂದರ ಚಿತ್ರ

ದೇಶದ ಅರ್ಧಕ್ಕಿಂತ ಹೆಚ್ಚಿನ ಭಾಗದಲ್ಲಿ ಕೊರೊನಾ ಟೆಸ್ಟಿಂಗ್ ಪಾಸಿಟಿವಿಟಿ ದರ ಶೇ 5ಕ್ಕಿಂತ ಕಡಿಮೆಯಾಗಿದೆ ಎಂದು ಐಸಿಎಂಆರ್ ಹೇಳಿದೆ. ದೇಶದಲ್ಲಿ ಕೊರೊನಾ ಸಾಂಕ್ರಾಮಿಕದ 2ನೇ ಅಲೆ ನಿಯಂತ್ರಣಕ್ಕೆ ಬಂದಿದೆ ಎನ್ನುವುದೇ ಇದರ ಅರ್ಥ.

TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Jun 01, 2021 | 8:06 PM

ದೆಹಲಿ: ದೇಶದ ಅರ್ಧಕ್ಕಿಂತ ಹೆಚ್ಚಿನ ಭಾಗದಲ್ಲಿ ಕೊರೊನಾ ಟೆಸ್ಟಿಂಗ್ ಪಾಸಿಟಿವಿಟಿ ದರ ಶೇ 5ಕ್ಕಿಂತ ಕಡಿಮೆಯಾಗಿದೆ ಎಂದು ಐಸಿಎಂಆರ್ ಹೇಳಿದೆ. ದೇಶದಲ್ಲಿ ಕೊರೊನಾ ಸಾಂಕ್ರಾಮಿಕದ 2ನೇ ಅಲೆ ನಿಯಂತ್ರಣಕ್ಕೆ ಬಂದಿದೆ ಎನ್ನುವುದೇ ಇದರ ಅರ್ಥ. ಮುಂದಿನ ದಿನಗಳಲ್ಲಿ ಮಕ್ಕಳಿಗೆ ಕೊರೊನಾ ಸೋಂಕು ತಗುಲಬಹುದು ಎಂಬ ವಿಶ್ಲೇಷಣೆ ಚಾಲ್ತಿಯಲ್ಲಿದೆ. ಮಕ್ಕಳು ಆಸ್ಪತ್ರೆಗೆ ದಾಖಲಾಗುವ ಅಗತ್ಯ ಬೀಳುವುದಿಲ್ಲ. ಮಕ್ಕಳಲ್ಲಿ ಕೊರೊನಾ ಸೋಂಕು ತಗುಲಿದರೇ, ಅದನ್ನ ಎದುರಿಸಲು ಅಗತ್ಯ ಸಿದ್ದತೆ ಮಾಡಿಕೊಂಡಿದ್ದೇವೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಕೊರೊನಾದ ಎರಡನೇ ಅಲೆ ಏಪ್ರಿಲ್ ತಿಂಗಳಿನಿಂದ ಭಾರತವನ್ನು ಇನ್ನಿಲ್ಲದಂತೆ ಕಾಡಿತ್ತು. ಮೊದಲ ಅಲೆಗಿಂತ ಹೆಚ್ಚಿನ ಸಾವು ಎರಡನೇ ಅಲೆಯಲ್ಲಿ ಸಂಭವಿಸಿವೆ. ಈಗ ಕೊನೆಗೂ ಕೊರೊನಾದ ಎರಡನೇ ಅಲೆ ನಿಯಂತ್ರಣಕ್ಕೆ ಬಂದಿದೆ. ದೇಶದ ಒಟ್ಟು 720 ಜಿಲ್ಲೆಯ ಪೈಕಿ 350 ಜಿಲ್ಲೆಯಲ್ಲಿ ಕೊರೊನಾ ಟೆಸ್ಟಿಂಗ್ ಪಾಸಿಟಿವಿಟಿ ದರ ಶೇ 5ಕ್ಕಿಂತ ಕಡಿಮೆಯಾಗಿದೆ. ಕೊರೊನಾ ಟೆಸ್ಟಿಂಗ್ ಪಾಸಿಟಿವಿಟಿ ದರ ಶೇ 5ಕ್ಕಿಂತ ಕಡಿಮೆಯಾದರೆ, ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದಿದೆ ಎಂದರ್ಥ. ‘ಕೊರೊನಾದ 2ನೇ ಅಲೆ ನಿಯಂತ್ರಣಕ್ಕೆ ಬಂದಿದೆ’ ಎನ್ನುವುದು ಸ್ಪಷ್ಟ ಎಂದು ಐಸಿಎಂಆರ್ ಪ್ರಧಾನ ನಿರ್ದೇಶಕ ಬಲರಾಮ್ ಭಾರ್ಗವ್ ದೆಹಲಿಯಲ್ಲಿ ನಡೆದ ಕೇಂದ್ರದ ಆರೋಗ್ಯ ಇಲಾಖೆಯ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ದೇಶದ ಇತರ 239 ಜಿಲ್ಲೆಗಳಲ್ಲಿ ಈಗಲೂ ಕೊರೊನಾ ಟೆಸ್ಟಿಂಗ್ ಪಾಸಿಟಿವಿಟಿ ದರ ಶೇ 10ಕ್ಕಿಂತ ಹೆಚ್ಚಾಗಿದೆ. ದೇಶದ 145 ಜಿಲ್ಲೆಗಳಲ್ಲಿ ಶೇ5ರಿಂದ 10ರಷ್ಟು ಕೊರೊನಾ ಟೆಸ್ಟಿಂಗ್ ಪಾಸಿಟಿವಿಟಿ ದರ ಇದೆ ಎಂದು ಐಸಿಎಂಆರ್ ಡಿಜಿ ಬಲರಾಮ್ ಭಾರ್ಗವ್ ಹೇಳಿದ್ದಾರೆ. ವಿಶ್ವದಲ್ಲಿ ಆಮೆರಿಕ, ಇಂಗ್ಲೆಂಡ್, ಚೀನಾ, ರಷ್ಯಾ, ಭಾರತ ಸೇರಿದಂತೆ ಐದು ದೇಶಗಳು ಮಾತ್ರ ಲಸಿಕೆಯನ್ನು ಸಂಶೋಧನೆ ನಡೆಸಿ ಅಭಿವೃದ್ದಿಪಡಿಸಿವೆ. ಒಂದು ವೇಳೆ ಲಸಿಕೆ ಇಲ್ಲದಿದ್ದರೆ, ಸಮಸ್ಯೆ ಗಂಭೀರವಾಗುತ್ತಿತ್ತು. ಲಸಿಕೆ ಉತ್ಪಾದನೆಯಾಗುತ್ತಿರುವ ಐದು ದೇಶಗಳ ಪೈಕಿ ಭಾರತ ಕೂಡ ಒಂದು. ನಮ್ಮ ದೇಶದಲ್ಲಿ ಆಮೆರಿಕಕ್ಕಿಂತ ಐದು ಪಟ್ಟು ಹೆಚ್ಚಿನ ಜನಸಂಖ್ಯೆ ಇದೆ. ಹೀಗಾಗಿ ಲಸಿಕೆಯ ಬಗ್ಗೆ ಸ್ವಲ್ಪ ತಾಳ್ಮೆ ಇರಲಿ. ಜುಲೈ-ಆಗಸ್ಟ್ ತಿಂಗಳ ವೇಳೆಗೆ ಪ್ರತಿ ನಿತ್ಯ ಒಂದು ಕೋಟಿ ಡೋಸ್ ಲಸಿಕೆ ನೀಡುತ್ತೇವೆ. ಕೆಲವೊಮ್ಮೆ ಲಸಿಕೆ ನೀಡಿಕೆ ವೇಗ ಹೆಚ್ಚಾಗಿರುತ್ತೆ, ಇನ್ನೂ ಕೆಲವೊಮ್ಮೆ ಲಸಿಕೆ ನೀಡಿಕೆಯ ವೇಗ ಕಡಿಮೆ ಇರುತ್ತೆ ಎಂದು ಬಲರಾಮ್ ಭಾರ್ಗವ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನೀತಿ ಆಯೋಗದ ಸದಸ್ಯ ಹಾಗೂ ಕೊರೊನಾ ಟಾಸ್ಕ್​ಪೋರ್ಸ್ ಮುಖ್ಯಸ್ಥ ವಿ.ಕೆ.ಪೌಲ್, ದೇಶದಲ್ಲಿ ಮಕ್ಕಳಿಗೆ ಕೊರೊನಾ ಬಂದರೂ, ಆಸ್ಪತ್ರೆಗೆ ದಾಖಲಿಸುವ ಅಗತ್ಯ ಇರಲ್ಲ. ಮಕ್ಕಳಲ್ಲಿ ಗಂಭೀರ ಸ್ವರೂಪದ ಕೊರೊನಾ ಲಕ್ಷಣ ಇರಲ್ಲ. ಶೇ 2ರಿಂದ 3ರಷ್ಟು ಮಕ್ಕಳಿಗೆ ಕೊರೊನಾ ಬಂದರೂ, ಬರಬಹುದು. ಮಕ್ಕಳಿಗೆ ಕೊರೊನಾ ಬಂದರೆ, ನ್ಯೂಮೋನಿಯಾ ಬರಬಹುದು. ಆಗ ಆಸ್ಪತ್ರೆಗೆ ದಾಖಲಾಗಬೇಕು. ಮಕ್ಕಳು ಕೊರೊನಾದಿಂದ ಗುಣಮುಖ ಆದ 6 ವಾರದ ಬಳಿಕ ಮತ್ತೆ ಜ್ವರ, ಕಣ್ಣು ನೋವು, ಭೇದಿ ಆಗಬಹುದು. ಇದನ್ನು ಮಲ್ಟಿಸಿಸ್ಟಮ್ ಇನ್​ಫ್ಲಮೇಟರಿ ಎನ್ನುತ್ತೇವೆ. ಪೆಡಿಯಾಟ್ರಿಕ್ ಕೊರೊನಾ ಸಮಸ್ಯೆ ಎದುರಿಸಲು ಸಿದ್ದತೆ ಮಾಡಿಕೊಂಡಿದ್ದೇವೆ ಎಂದು ವಿ.ಕೆ.ಪೌಲ್ ಹೇಳಿದರು. ಕೊರೊನಾ ವೈರಸ್ ತನ್ನ ಸ್ವರೂಪ ಬದಲಾಯಿಸಿದರೇ, ಮಕ್ಕಳ ಮೇಲಿನ ಪರಿಣಾಮ ಹೆಚ್ಚಾಗುತ್ತೆ ಎಂದು ವಿ.ಕೆ.ಪೌಲ್ ಹೇಳಿದ್ದಾರೆ.

ಇನ್ನೂ ಬೇರೆಬೇರೆ ಲಸಿಕೆಗಳನ್ನು ಪರಸ್ಪರ ಮಿಶ್ರಣ ಮಾಡುವ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಆದರೇ, ಲಸಿಕೆಯ ಮಿಶ್ರಣದಿಂದ ಅಡ್ಡ ಪರಿಣಾಮ ಆಗಬಹುದು. ಆದರೆ, ಅದೇ ವೇಳೆ ಲಸಿಕೆಗಳ ಮಿಶ್ರಣದಿಂದ ಪಾಸಿಟಿವ್ ಎಫೆಕ್ಟ್ ಕೂಡ ಆಗಬಹುದು. ಒಳ್ಳೆಯ ಫಲಿತಾಂಶ ಕೂಡ ಸಿಗಬಹುದು ಎಂದು ವಿ.ಕೆ.ಪೌಲ್ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರದ ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಲವ್ ಅಗರವಾಲ್, ಕಳೆದೊಂದು ವಾರದಲ್ಲಿ ಕೊರೊನಾ ಟೆಸ್ಟಿಂಗ್ ಪಾಸಿಟಿವಿಟಿ ದರ ಶೇ 8.31ಕ್ಕೆ ಕುಸಿದಿದೆ. ಕಳೆದ 7 ದಿನದಲ್ಲಿ ಕೊರೊನಾ ಟೆಸ್ಟಿಂಗ್ ಪಾಸಿಟಿವಿಟಿ ದರ ಶೇ 10ಕ್ಕಿಂತ ಕಡಿಮೆ ಇದೆ ಎಂದಿದ್ದಾರೆ. 32 ರಾಜ್ಯಗಳಲ್ಲಿ ಹೊಸ ಪ್ರಕರಣಗಳಿಗಿಂತಲೂ ಗುಣಮುಖ ಆದವರ ಸಂಖ್ಯೆ ಹೆಚ್ಚಾಗಿದೆ. 30 ರಾಜ್ಯಗಳಲ್ಲಿ ಕಳೆದೊಂದು ವಾರದಿಂದ ಸಕ್ರಿಯ ಪ್ರಕರಣಗಳಲ್ಲಿ ಕುಸಿತವಾಗಿದೆ’ ಎಂದು ಲವ್ ಅಗರವಾಲ್ ಹೇಳಿದ್ದಾರೆ. ಈಗ ದೇಶದಲ್ಲಿ 18.95 ಲಕ್ಷ ಕೊರೊನಾ ಸಕ್ರಿಯ ಕೇಸ್​ಗಳು ಇವೆ. ನಿತ್ಯ ಕೊರೊನಾ ಸಕ್ರಿಯ ಕೇಸ್​ಗಳು ಕಡಿಮೆಯಾಗುತ್ತಿವೆ.

(Coronavirus Infection in Control Reducing Positivity Rate Symbolizes Recovery in India Says Niti Ayog Member VK Paul)

ಇದನ್ನೂ ಓದಿ: 2ನೇ ಡೋಸ್​ನ ಲಸಿಕೆ ಪಡೆಯಲು 12 ವಾರದ ಅಂತರ ನಿಗದಿಪಡಿಸಿದ ಕೇಂದ್ರ ಸರ್ಕಾರ

ಇದನ್ನೂ ಓದಿ: Sputnik V Vaccine ಭಾರತಕ್ಕೆ ಬಂತು ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯ 30 ಲಕ್ಷ ಡೋಸ್‌

Follow us on

Most Read Stories

Click on your DTH Provider to Add TV9 Kannada