Delta plus b1 617.2: ಭಾರತದಲ್ಲಿ ಪತ್ತೆಯಾಗಿದೆ ಡೆಲ್ಟಾ ಪ್ಲಸ್ ರೂಪಾಂತರಿ; ಸದ್ಯ ಕಳವಳದ ಅಗತ್ಯ ಇಲ್ಲ ಎಂದರು ವಿಜ್ಞಾನಿಗಳು
ಡೆಲ್ಟಾ ಪ್ರಭೇದದ ವೈರಸ್ ರೂಪಾಂತರಗೊಂಡ ಡೆಲ್ಟಾ ಪ್ಲಸ್ ಪ್ರಭೇದದ ವೈರಸ್ ರೂಪಾಂತರ ಪತ್ತೆಯಾಗಿದೆ. ಆದರೇ, ಡೆಲ್ಟಾ ಪ್ಲಸ್ ಪ್ರಭೇದದಿಂದ ಸದ್ಯಕ್ಕಂತೂ ಜನರು ಹೆಚ್ಚಿನ ಚಿಂತೆ, ಕಳವಳಪಡಬೇಕಾದ ಅಗತ್ಯವಿಲ್ಲ ಎಂದು ವಿಜ್ಞಾನಿಗಳು ಹೇಳಿರುವುದು ಸಮಾಧಾನಪಡುವ ವಿಷಯ. ಮುಂದೇನಾಗುತ್ತೋ ಯಾರಿಗೂ ಗೊತ್ತಿಲ್ಲ.
ಭಾರತದಲ್ಲಿ ಈಗಾಗಲೇ ಡೆಲ್ಟಾ ಪ್ರಭೇದದ ವೈರಸ್ ವೇಗವಾಗಿ ಹರಡುತ್ತಿದೆ. ಭಾರತದಲ್ಲಿ ಕೊರೊನಾ ಎರಡನೇ ಅಲೆಯಲ್ಲಿ ಪಾಸಿಟಿವ್ ಪ್ರಕರಣಗಳ ಏರಿಕೆಗೆ ಡೆಲ್ಟಾ ಪ್ರಭೇದದ ವೈರಸ್ ಕೂಡ ಪ್ರಮುಖ ಕಾರಣ. ಆದರೆ, ಈಗ ಡೆಲ್ಟಾ ಪ್ರಭೇದದ ವೈರಸ್, ಮತ್ತೆ ರೂಪಾಂತರಗೊಂಡಿದೆ. ಡೆಲ್ಟಾ ಪ್ರಭೇದದಿಂದ ರೂಪಾಂತರಗೊಂಡ ವೈರಸ್ ಗೆ ಡೆಲ್ಟಾ ಪ್ಲಸ್ ಪ್ರಭೇಧದ ವೈರಸ್ ಎಂದು ನಾಮಕರಣ ಮಾಡಲಾಗಿದೆ. ಡೆಲ್ಟಾ ಪ್ಲಸ್ ಪ್ರಭೇದದ ವೈರಸ್ ನಿಂದ ದೇಶದ ಜನರು ಆತಂಕಕ್ಕೊಳಗಾಗಬೇಕಾದ ಅಗತ್ಯ ಇದೆಯೇ ಇಲ್ಲವೇ ಎನ್ನುವ ಬಗ್ಗೆ ವಿಜ್ಞಾನಿಗಳು ಏನು ಹೇಳ್ತಾರೆ, ಈ ಡೆಲ್ಟಾ ಪ್ಲಸ್ ಪ್ರಭೇದದ ವೈರಸ್ ವಿಶೇಷತೆ ಏನು ಎನ್ನುವುದರ ರಿಪೋರ್ಟ್ ಇಲ್ಲಿದೆ ನೋಡಿ.
ಭಾರತದಲ್ಲಿ ಈಗಾಗಲೇ ಪತ್ತೆಯಾಗಿರುವ ಬಿ.1.617.2 ರೂಪಾಂತರಿ ಪ್ರಭೇದದ ವೈರಸ್ ಗೆ ವಿಶ್ವ ಆರೋಗ್ಯ ಸಂಸ್ಥೆಯು ಡೆಲ್ಟಾ ವೈರಸ್ ಎಂದು ಹೆಸರಿಟ್ಟಿದೆ. ಹೊಸ ಪ್ರಭೇದದ ವೈರಸ್ ಗಳನ್ನ ದೇಶಗಳ ಹೆಸರಿನಿಂದ ಕರೆಯುವುದು ಬೇಡ ಎಂಬ ಕಾರಣದಿಂದ ಡೆಲ್ಟಾ ಪ್ರಭೇದದ ವೈರಸ್ ಎಂದು ಹೆಸರಿಟ್ಟಿದೆ. ಆದರೆ, ಈಗ ಇದೇ ಡೆಲ್ಟಾ ಪ್ರಭೇದದ ವೈರಸ್ ಮತ್ತೆ ರೂಪಾಂತರಗೊಂಡಿದೆ. ರೂಪಾಂತರಗೊಂಡ ಹೊಸ ಪ್ರಭೇದದ ವೈರಸ್ ಗೆ ಡೆಲ್ಟಾ ಪ್ಲಸ್ ಅಥವಾ AY.1 ಎಂದು ಹೆಸರಿಡಲಾಗಿದೆ. ಭಾರತದಲ್ಲಿ ಡೆಲ್ಟಾ ವೈರಸ್ ಪ್ರಭೇದವೇ ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದೆ. ಇದರಿಂದಾಗಿ ಕೊರೊನಾದ ಎರಡನೇ ಅಲೆಯಲ್ಲಿ ಕೊರೊನಾ ಕೇಸ್ ಗಳು ಬಾರಿ ಸಂಖ್ಯೆಯಲ್ಲಿ ಏರಿಕೆಯಾಗಿದ್ದವು. ಆದರೆ, ಈಗ ಡೆಲ್ಟಾ ಪ್ಲಸ್ ಪ್ರಭೇದದ ವೈರಸ್ ಕೂಡ ಡೆಲ್ಟಾ ಪ್ರಭೇದದಂತೆಯೇ ವೇಗವಾಗಿ ಹರಡುತ್ತಾ ಎಂಬ ಪ್ರಶ್ನೆ ಉದ್ಭವವಾಗಿದೆ.
ಆದರೇ, ನಮ್ಮ ದೇಶದ ವಿಜ್ಞಾನಿಗಳು ಡೆಲ್ಟಾ ಪ್ಲಸ್ ವೇಗವಾಗಿ ಹರಡುತ್ತೆ ಎನ್ನುವುದಕ್ಕೆ ಸದ್ಯಕ್ಕೆ ವೈಜ್ಞಾನಿಕವಾಗಿ ಯಾವುದೇ ಸಾಕ್ಷ್ಯಿ ಲಭ್ಯವಾಗಿಲ್ಲ. ತಕ್ಷವೇ ಕಳವಳಪಡಬೇಕಾದ ಅಗತ್ಯ ಇಲ್ಲ. ಭಾರತದಲ್ಲಿ ಡೆಲ್ಟಾ ಪ್ರಭೇದದ ವೈರಸ್ ಹರಡುವಿಕೆ ಕಡಿಮೆ ಇದೆ ಎಂದು ಹೇಳಿದ್ದಾರೆ. ಜೊತೆಗೆ ಡೆಲ್ಟಾ ಪ್ಲಸ್ ಪ್ರಭೇದದ ವೈರಸ್ ನಿಂದಾಗಿ ಕೊರೊನಾ ಸೋಂಕು ಗಂಭೀರವಾಗುವ ಯಾವುದೇ ಲಕ್ಷಣವೂ ಇಲ್ಲ ಎಂದು ವಿಜ್ಞಾನಿಗಳು ಪ್ರತಿಪಾದಿಸಿದ್ದಾರೆ. ಆದರೆ, ನಮ್ಮ ದೇಶದಲ್ಲಿ ಈಗ ಗಂಭೀರ ಸ್ಥಿತಿಯಲ್ಲಿರುವ, ಹೈ ರಿಸ್ಕ್ ಕೊರೊನಾ ರೋಗಿಗಳಿಗೆ ಮಾನೋಕ್ಲೋನಲ್ ಆ್ಯಂಟಿಬಾಡಿ ಕಾಕ್ ಟೈಲ್ ಔಷಧಿಯ ಚಿಕಿತ್ಸೆ ನೀಡಲಾಗುತ್ತಿದೆ. ಈ ಆ್ಯಂಟಿಬಾಡಿ ಕಾಕ್ ಟೈಲ್ ಔಷಧಿಯು ಡೆಲ್ಟಾ ಪ್ಲಸ್ ಪ್ರಭೇದದ ವೈರಸ್ ವಿರುದ್ಧ ಪರಿಣಾಮಕಾರಿಯಲ್ಲ ಎಂದು ಕೂಡ ವಿಜ್ಞಾನಿಗಳು ಹೇಳಿದ್ದಾರೆ.
ಆ್ಯಂಟಿಬಾಡಿ ಕಾಕ್ ಟೈಲ್, ದೇಹದಲ್ಲಿ ಹೆಚ್ಚಿನ ಪ್ರತಿಕಾಯಗಳನ್ನು ಸೃಷ್ಟಿಸಿ, ವೈರಸ್ ಮನುಷ್ಯನ ಜೀವಕೋಶಗಳಿಗೆ ಪ್ರವೇಶ ಮಾಡದಂತೆ ತಡೆಯುತ್ತೆ. ಆದರೆ, ಮಾನೋಕ್ಲೋನಲ್ ಆ್ಯಂಟಿಬಾಡಿ ಕಾಕ್ ಟೈಲ್ ಔಷಧಿಗೂ ಪ್ರತಿರೋಧವನ್ನು ತೋರುವ ಸಾಮರ್ಥ್ಯ ಡೆಲ್ಟಾ ಪ್ಲಸ್ ಪ್ರಭೇದದ ವೈರಸ್ ಗೆ ಇದೆ. ಹೀಗಾಗಿ ಯಾರಿಗಾದರೂ, ಡೆಲ್ಟಾ ಪ್ಲಸ್ ಪ್ರಭೇದದ ವೈರಸ್ ಹೊಕ್ಕರೇ, ಮಾನಕ್ಲೋನಲ್ ಆ್ಯಂಟಿಬಾಡಿ ಕಾಕ್ ಟೈಲ್ ಔಷಧಿಯ ಚಿಕಿತ್ಸೆಯಿಂದಲೂ ಪ್ರಯೋಜನವಿಲ್ಲ. ಇದು ವೈದ್ಯರು ಹಾಗೂ ಜನರಲ್ಲಿ ಸ್ಪಲ್ಪ ಚಿಂತೆಗೆ ಕಾರಣವಾಗಿದೆ.
ಈಗ ಹೊಸದಾಗಿ ಬಂದಿರುವ ಬಿ.1.617.2.1 ಅಥವಾ ಎವೈ.1 ಹೆಸರಿನ ಪ್ರಭೇದದ ವೈರಸ್, ಕೆ417ಎನ್ ರೂಪಾಂತರಿ ಪ್ರಭೇದದ ವೈರಸ್ ಲಕ್ಷಣಗಳನ್ನು ಹೊಂದಿದೆ ಎಂದು ದೆಹಲಿಯ ಸಿಎಸ್‌ಐಆರ್ ನ ಇನ್ಸ್ ಟಿಟ್ಯೂಟ್ ಆಫ್ ಜೆನೋಮಿಕ್ಸ್ ಮತ್ತು ಇಂಟಿಗ್ರೇಟಿವಿ ಬಯೋಲಾಜಿ ವಿಜ್ಞಾನಿ ವಿನೋದ್ ಸರ್ಕಾರಿಯಾ ಹೇಳಿದ್ದಾರೆ. ವೈರಸ್ ರೂಪಾಂತರವು ವೈರಸ್ ನ ಸ್ಪೈಕ್ ಪ್ರೋಟೀನ್ ಮನುಷ್ಯನ ಜೀವಕೋಶಗಳಿಗೆ ಪ್ರವೇಶಿಸಲು ಸಹಾಯ ಮಾಡುತ್ತೆ ಎಂದು ವಿನೋದ್ ಸರ್ಕಾರಿಯಾ ಹೇಳಿದ್ದಾರೆ.
ಇಂಗ್ಲೆಂಡ್ ನ ಆರೋಗ್ಯ ಇಲಾಖೆಯಾದ ಪಬ್ಲಿಕ್ ಹೆಲ್ತ್ ಇಂಗ್ಲೆಂಡ್ ಪ್ರಕಾರ, ಡೆಲ್ಟಾ ಪ್ರಭೇದದ 63 ಜೆನೋಮ್ ಪತ್ತೆಯಾಗಿವೆ. ಭಾರತದಲ್ಲಿ ಜೂನ್ 7ರವರೆಗಿನ ಮಾಹಿತಿ ಪ್ರಕಾರ, ಆರು ಜೆನೋಮ್ ಗಳಲ್ಲಿ ಡೆಲ್ಟಾ ಪ್ಲಸ್ ಪ್ರಭೇದದ ವೈರಸ್ ಪತ್ತೆಯಾಗಿದೆ. ಈಗ ತಕ್ಷಣಕ್ಕೆ ಭಾರತದಲ್ಲಿ K417N ಭಾರತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇಲ್ಲ. ಈ ಪ್ರಧೇದದ ಸಿಕ್ವೇನ್ಸ್ ಹೆಚ್ಚಾಗಿ ಯೂರೋಪ್, ಏಷ್ಯಾ, ಆಮೆರಿಕಾ ದೇಶಗಳಲ್ಲಿ ಇರಬಹುದು. ಈ ವರ್ಷದ ಮಾರ್ಚ್ ತಿಂಗಳಲ್ಲಿ K417N ಪ್ರಭೇದದ ವೈರಸ್ ನ ಜೆನೋಮ್ ಸಿಕ್ವೇನ್ಸ್ ಯೂರೋಪ್ ನಲ್ಲಿ ಪತ್ತೆಯಾಗಿತ್ತು ಎಂದು ವಿನೋದ್ ಸರ್ಕಾರಿಯಾ ಹೇಳಿದ್ದಾರೆ.
ಇನ್ನೂ ಪುಣೆಯ ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಷನ್ ಅಂಡ್ ರಿಸರ್ಚ್ ಸಂಸ್ಥೆಯ ವಿನಿತಾ ಬಾಲ ಹೇಳುವ ಪ್ರಕಾರ, ಡೆಲ್ಟಾ ಪ್ಲಸ್ ಪ್ರಭೇದದ ವೈರಸ್ ವಿರುದ್ಧ ಮಾನೋಕ್ಲೋನಲ್ ಆ್ಯಂಟಿಬಾಡಿ ಕಾಕ್ ಟೈಲ್ ಔಷಧಿ ಬಳಕೆಗೆ ಸ್ಪಲ್ಪ ಹಿನ್ನಡೆ ಆಗಿರಬಹುದು. ಆದರೇ, ಇದೇ, ವೈರಸ್ ವೇಗವಾಗಿ ಹರಡುತ್ತೆ ಅಥವಾ ಗಂಭೀರವಾಗಿದೆ ಎನ್ನುವುದಕ್ಕೆ ಸೂಚನೆ ಅಲ್ಲ ಅಂತಾರೆ. ಹೊಸ ಪ್ರಭೇದದ ಡೆಲ್ಟಾ ಪ್ಲಸ್ ವೈರಸ್ ಹೇಗೆ ಹರಡುತ್ತೆ ಎನ್ನುವುದು ಬಹಳ ಮುಖ್ಯ.
ಡೆಲ್ಟಾ ಪ್ಲಸ್ ರೂಪಾಂತರದಿಂದ ಮನುಷ್ಯರ ದೇಹವನ್ನು ವೈರಸ್ ನಿಂದ ರಕ್ಷಿಸುವ ಪ್ರತಿಕಾಯಗಳ ಪ್ರಮಾಣ, ಗುಣಮಟ್ಟದ ಮೇಲೆ ಯಾವುದೇ ಪರಿಣಾಮ ಆಗಲ್ಲ ಎಂದು ವಿನಿತಾ ಬಾಲ ಹೇಳ್ತಾರೆ. ಹೀಗಾಗಿ ಯಾರಿಗಾದರೂ, ಡೆಲ್ಟಾ ಪ್ಲಸ್ ಪ್ರಭೇದದ ವೈರಸ್ ಪತ್ತೆಯಾದರೇ, ಚಿಂತೆ ಮಾಡಬೇಕಾದ ಅಗತ್ಯವಿಲ್ಲ ಎಂದು ವಿನಿತಾ ಬಾಲ ಹೇಳ್ತಾರೆ. ಇನ್ನು ದೆಹಲಿಯ CSIR, IGIB ಯಲ್ಲಿ ನಿರ್ದೇಶಕರಾಗಿರುವ ಅನುರಾಗ್ ಅಗರವಾಲ್ ಹೇಳುವ ಪ್ರಕಾರ, ಭಾರತದಲ್ಲಿ ಸದ್ಯಕ್ಕೆ ಡೆಲ್ಟಾ ಪ್ಲಸ್ ಪ್ರಭೇದದಿಂದ ಕಳವಳಪಡಬೇಕಾದ ಅಗತ್ಯವಿಲ್ಲ.
ಇನ್ನೂ ಭಾರತದಲ್ಲಿ ಈಗಾಗಲೇ ಕೊರೊನಾ ಲಸಿಕೆಯ 2 ಡೋಸ್ ಪಡೆದವರ ರಕ್ತದ ಪ್ಲಾಸ್ಮಾ ಥೆರಪಿಯು ಡೆಲ್ಟಾ ಪ್ಲಸ್ ಪ್ರಭೇದದ ವಿರುದ್ಧ ಪರಿಣಾಮಕಾರಿ ಆಗುತ್ತಾ ಎನ್ನುವ ಬಗ್ಗೆ ಅಧ್ಯಯನ ನಡೆಸಬೇಕಾಗಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಡೆಲ್ಟಾ ಪ್ಲಸ್ ಪ್ರಭೇದವು ನಿರಂತರವಾಗಿ ರೂಪಾಂತರವಾಗುತ್ತಿದೆ. ಜೊತೆಗೆ ಹೊಸ ಪ್ರಭೇದಗಳನ್ನು ತನ್ನೊಳಗೆ ಸೇರ್ಪಡೆ ಮಾಡಿಕೊಳ್ಳುತ್ತಿದೆ. ಇದರ ವಿಕಸನವನ್ನು ಅರ್ಥ ಮಾಡಿಕೊಳ್ಳಲು ಬಹಳ ಆಸಕ್ತಿ ಇದೆ. ಪ್ರತಿಯೊಂದು ಪ್ರಭೇದದ ವೈರಸ್ ಹೆಚ್ಚುವರಿಯಾಗಿ ಹೊಸ ಪ್ರಭೇದವನ್ನು ತನ್ನೊಳಗೆ ಸೇರಿಸಿಕೊಳ್ಳುತ್ತಿದೆ ಎಂದು ಅನುರಾಗ್ ಅಗರವಾಲ್ ಹೇಳಿದ್ದಾರೆ.
ಒಟ್ಟಿನಲ್ಲಿ ಡೆಲ್ಟಾ ಪ್ರಭೇದದ ವೈರಸ್ ರೂಪಾಂತರಗೊಂಡ ಡೆಲ್ಟಾ ಪ್ಲಸ್ ಪ್ರಭೇದದ ವೈರಸ್ ರೂಪಾಂತರ ಪತ್ತೆಯಾಗಿದೆ. ಆದರೇ, ಡೆಲ್ಟಾ ಪ್ಲಸ್ ಪ್ರಭೇದದಿಂದ ಸದ್ಯಕ್ಕಂತೂ ಜನರು ಹೆಚ್ಚಿನ ಚಿಂತೆ, ಕಳವಳಪಡಬೇಕಾದ ಅಗತ್ಯವಿಲ್ಲ ಎಂದು ವಿಜ್ಞಾನಿಗಳು ಹೇಳಿರುವುದು ಸಮಾಧಾನಪಡುವ ವಿಷಯ. ಮುಂದೇನಾಗುತ್ತೋ ಯಾರಿಗೂ ಗೊತ್ತಿಲ್ಲ.
(ಲೇಖನ: ಎಸ್. ಚಂದ್ರಮೋಹನ್, ಹಿರಿಯ ವರದಿಗಾರ, ಟಿವಿ9)
Published On - 2:44 pm, Tue, 15 June 21