ಇನ್ನೊಂದು ಸ್ವದೇಶಿ ಲಸಿಕೆ ಕ್ಲಿನಿಕಲ್ ಟ್ರಯಲ್ಗೆ ಡಿಸಿಜಿಐ ಅನುಮತಿ; ಇದು ರಿಲಯನ್ಸ್ ಲೈಫ್ ಸೈನ್ಸ್ ಸಂಸ್ಥೆಯ ವ್ಯಾಕ್ಸಿನ್
Covid-19 Vaccine: ರಿಲಯನ್ಸ್ ಲೈಫ್ ಸೈನ್ಸ್ ಸಂಸ್ಥೆ ಅಭಿವೃದ್ಧಿ ಪಡಿಸಿದ ಕೊರೊನಾ ಲಸಿಕೆಯ ಮೊದಲನೇ ಹಂತದ ಕ್ಲಿನಿಕಲ್ ಟ್ರಯಲ್ಗೆ ಶುಕ್ರವಾರ ಸಂಜೆ ಡಿಸಿಜಿಐ ಅನುಮತಿ ನೀಡಿದ್ದು, ಕೆಲವು ಷರತ್ತುಗಳನ್ನು ವಿಧಿಸಿದೆ.

ಕೊವಿಡ್ 19 ವಿರುದ್ಧ ಹೋರಾಟಕ್ಕೆ ಔಷಧೀಯ ಸಂಸ್ಥೆಗಳು ಮುಂದಾಗಿದ್ದು, ಲಸಿಕೆ ಅಭಿವೃದ್ಧಿಯಲ್ಲಿ ತೊಡಗಿವೆ. ಇದೀಗ ಇನ್ನೊಂದು ಲಸಿಕೆಯ 1ನೇ ಹಂತದ ಕ್ಲಿನಿಕಲ್ ಟ್ರಯಲ್ಗೆ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ(DCGI) ಅನುಮೋದನೆ ಕೊಟ್ಟಿದೆ. ಈ ಲಸಿಕೆ ಕ್ಲಿನಿಕಲ್ ಟ್ರಯಲ್ನಲ್ಲಿ ಯಶಸ್ವಿಯಾದರೆ, ಭಾರತದಲ್ಲಿ ಇನ್ನೊಂದು ಸ್ವದೇಶಿ ಲಸಿಕೆ ಬಳಕೆಗೆ ಸಿಗಲಿದೆ.
ರಿಲಯನ್ಸ್ ಲೈಫ್ ಸೈನ್ಸ್ ಸಂಸ್ಥೆ ಅಭಿವೃದ್ಧಿ ಪಡಿಸಿದ ಕೊರೊನಾ ಲಸಿಕೆಯ ಮೊದಲನೇ ಹಂತದ ಕ್ಲಿನಿಕಲ್ ಟ್ರಯಲ್ಗೆ ಶುಕ್ರವಾರ ಸಂಜೆ ಡಿಸಿಜಿಐ ಅನುಮತಿ ನೀಡಿದ್ದು, ಕೆಲವು ಷರತ್ತುಗಳನ್ನು ವಿಧಿಸಿದೆ. ಆರೋಗ್ಯವಂತ ಸ್ವಯಂಸೇವಕರ ಮೇಲೆ ಈ ರಿಲಯನ್ಸ್ ಲೈಫ್ ಸೈನ್ಸ್ನ SARS-CoV-2 ಮರುಸಂಯೋಜಕ ಪ್ರೊಟೀನ್ ಉಪಘಟಕ ಲಸಿಕೆಯ ಪ್ರಯೋಗ ನಡೆಯಲಿದೆ. ಈ ಹಂತದಲ್ಲಿ ಲಸಿಕೆಯ ಸುರಕ್ಷತೆ, ಸಹಿಷ್ಣುತೆ ಮತ್ತು ಪ್ರತಿರೋಧಕ ಶಕ್ತಿಯನ್ನು ಮೌಲ್ಯಮಾಪನವನ್ನು ಶಿಷ್ಟಾಚಾರದ ಅನ್ವಯ ಮಾಡಲಾಗುವುದು ಎಂದು ರಿಲಯನ್ಸ್ ಲೈಫ್ ಸೈನ್ಸ್ ಹೇಳಿದೆ.
ರಿಲಯನ್ಸ್ ಲೈಫ್ ಸೈನ್ಸ್ ಸಂಸ್ಥೆಯು ತನ್ನ ಸ್ವದೇಶಿ ಲಸಿಕೆ ಕ್ಲಿನಿಕಲ್ ಟ್ರಯಲ್ಗೆ ಅನುಮೋದನೆ ಕೋರಿ ಆಗಸ್ಟ್ 26ರಂದು ಡಿಸಿಜಿಐಗೆ ಅರ್ಜಿ ಸಲ್ಲಿಸಿತ್ತು. ಇದೀಗ ಡಿಸಿಜಿಐನ ವಿಷಯ ತಜ್ಞರ ಸಮಿತಿ (SEC-Special Expert Committee) ಶಿಫಾರಸ್ಸಿನ ಅನ್ವಯ ಲಸಿಕೆ ಮೊದಲ ಹಂತದ ಕ್ಲಿನಿಕಲ್ ಟ್ರಯಲ್ಗೆ ಅನಿಮೋದನೆ ಸಿಕ್ಕಿದೆ. ಹಾಗೇ, ಸಂಸ್ಥೆಯು ಪರಿಷ್ಕೃತ ಕ್ಲಿನಿಕಲ್ ಪ್ರಯೋಗದ ಪ್ರೊಟೊಕಾಲ್ನ್ನು 14 ದಿನದ ಬದಲಾಗಿ, 42ನೇ ದಿನಕ್ಕೆ ಸಲ್ಲಿಸಬೇಕಿದೆ ಎಂದೂ ಹೇಳಲಾಗಿದೆ. ಹಾಗೇ ಕ್ಲಿನಿಕಲ್ ಪ್ರಯೋಗ ಮಹಾರಾಷ್ಟ್ರದ ಎಂಟು ಪ್ರದೇಶಗಳಲ್ಲಿ ನಡೆಯಲಿದೆ.
ಸದ್ಯ ದೇಶದಲ್ಲಿ ಎರಡು ಸ್ವದೇಶಿ ಲಸಿಕೆಗಳನ್ನು ನೀಡಲಾಗುತ್ತಿದೆ. ಅದರಲ್ಲಿ ಸೆರಂ ಇನ್ಸ್ಟಿಟ್ಯೂಟ್ನ ಕೊವಿಶೀಲ್ಡ್ ಮತ್ತು ಭಾರತ್ ಬಯೋಟೆಕ್ನ ಕೊವ್ಯಾಕ್ಸಿನ್ ಮುಖ್ಯವಾಗಿ ನೀಡಲಾಗುತ್ತಿರುವ ಲಸಿಕೆ. ಅದು ಬಿಟ್ಟರೆ ರಷ್ಯಾದ ಸ್ಪುಟ್ನಿಕ್ ವಿ, ಯುಎಸ್ನ ಮಾಡೆರ್ನಾ, ಜಾನ್ಸನ್ ಆ್ಯಂಡ್ ಜಾನ್ಸನ್ ಮತ್ತು ಜೈಡಸ್ ಕ್ಯಾಡಿಲಾದ ಜೈಕೊವ್-ಡಿ ಲಸಿಕೆಗಳಿಗೂ ಭಾರತದಲ್ಲಿ ತುರ್ತು ಬಳಕೆಗೆ ಅವಕಾಶ ಸಿಕ್ಕಿದೆ.
ಇದನ್ನೂ ಓದಿ: ರೋಹಿಣಿ ಸಿಂಧೂರಿ ಆರೋಪಕ್ಕೆ ಮರುಜೀವ; ಸಾ.ರಾ ಮಹೇಶ್ ಒಡೆತನದ ಜಾಗಗಳ ಮರು ಸರ್ವೇ ಮಾಡಲು ಆದೇಶ
ಚಿರು ಫೋಟೋ ನೋಡಿದರೆ ಅಳು ನಿಲ್ಲಿಸ್ತಾನೆ ಮೇಘನಾ ಪುತ್ರ ರಾಯನ್ ರಾಜ್ ಸರ್ಜಾ
Published On - 10:28 am, Sat, 4 September 21