Tv9 Digital Live | ಪೆಟ್ರೋಲ್, ಡೀಸೆಲ್ ಬೆಲೆಗಳು ಏಕೆ ಒಂದೇ ಸಮನೆ ಏರುತ್ತಿವೆ?
ಮೂಲ ಬೆಲೆಯ ವಿಚಾರವಾಗಿ ನಾವು ಪ್ರಶ್ನೆ ಮಾಡುತ್ತಾ ಇಲ್ಲ ಬದಲಾಗಿ ತೆರಿಗೆಯನ್ನು ಏಕೆ ಹೆಚ್ಚು ಮಾಡಿದ್ದಾರೆ ಎನ್ನುವುದು ನಮ್ಮ ಪ್ರಶ್ನೆಯಾಗಿದೆ. ತೆರಿಗೆ ಕಡಿಮೆ ಮಾಡಿ ಕಡಿಮೆ ಬೆಲೆಗೆ ಜನರಿಗೆ ಪೆಟ್ರೋಲಿಯಂ ನೀಡಬೇಕು ಸಾಮಾನ್ಯ ಜನರಿಗೆ ಬದುಕಲು ಅವಕಾಶ ಮಾಡಿಕೊಡಬೇಕು ಎಂದು ಎಂ ಲಕ್ಮ್ಮಣ್ ತಿಳಿಸಿದ್ದಾರೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಬಗ್ಗೆ ಇಡೀ ದೇಶವೇ ಚರ್ಚಿಸುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಜವಾಬ್ದಾರಿ ಏನು? ತೆರಿಗೆಯಲ್ಲಿನ ಏರಿಕೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಮತ್ತಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಿದೆ ಎನ್ನುವುದು ಎಷ್ಟರಮಟ್ಟಿಗೆ ನಿಜ ಎಂಬ ವಿಷಯಗಳನ್ನು ಇಂದು ಟಿವಿ9 ಡಿಜಿಟಲ್ ಲೈವ್ ಸಂವಾದದಲ್ಲಿ ಚರ್ಚಿಸಲಾಯಿತು. ತಜ್ಞರಾದ ರುದ್ರಮೂರ್ತಿ ಮತ್ತು ಎಂ. ಲಕ್ಷ್ಮಣ್ ಸಂವಾದದಲ್ಲಿ ಭಾಗಿಯಾದರು. ಆ್ಯಂಕರ್ ಮಾಲ್ತೇಶ್ ಸಂವಾದ ನಡೆಸಿಕೊಟ್ಟರು.
ಲೀಟರ್ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ 100 ರೂಪಾಯಿ ದಾಟಲು ಮುಖ್ಯವಾಗಿ ಎರಡು ಕಾರಣಗಳಿವೆ. ಒಂದು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲದ ಬೆಲೆಯಲ್ಲಿ ಬಾರಿ ಪ್ರಮಾಣದ ಏರಿಕೆ. ಮತ್ತೊಂದು, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡಿಸೇಲ್ ಮೇಲೆ ವಿಧಿಸುತ್ತಿರುವ ತೆರಿಗೆ ಪ್ರಮಾಣದಲ್ಲಿ ಆಗಿರುವ ಹೆಚ್ಚಳ.
ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಕಳೆದ 2 ವಾರಗಳಲ್ಲಿ ಶೇ 15ರಷ್ಟು ಏರಿಕೆಯಾಗಿದೆ. ಸರ್ಕಾರಗಳು ವಿಧಿಸುತ್ತಿರುವ ತೆರಿಗೆಯನ್ನು ಪಕ್ಕಕ್ಕೆ ಇಟ್ಟು ಗಮನಿಸುವುದಾದರೆ ಪೆಟ್ರೋಲ್ ಇಂದು ಪ್ರತಿ ಲೀಟರ್ಗೆ 30ರಿಂದ 35 ರೂಪಾಯಿಗೆ ಸಿಗಬೇಕು. ಆದರೆ ನಾವು ಸುಮಾರು 100 ರೂಪಾಯಿ ಕೊಡುತ್ತಿದ್ದೇವೆ. ಇದರಲ್ಲಿ ಶೇ 70ರಷ್ಟು ಮೊತ್ತ ಡೀಲರ್ ಕಮಿಷನ್ ಎಂದು ಹೋಗುತ್ತದೆ. ಹೀಗಾಗಿ ತೆರಿಗೆ ತೆಗೆದುಕೊಳ್ಳುವುದಕ್ಕೆ ನನ್ನ ದಿಕ್ಕಾರ ಇದೆ. ಸರ್ಕಾರ ತೆರಿಗೆಯಲ್ಲಿ ಶೇ 5ರಷ್ಟು ಕಡಿಮೆ ಮಾಡಿದರೆ ಪೆಟ್ರೋಲ್ ಮತ್ತು ಡಿಸೇಲ್ನ ಬೆಲೆಯಲ್ಲಿ ಶೇಕಡಾ 10ರಷ್ಟು ಕಡಿಮೆಯಾಗುತ್ತದೆ ಎಂದು ರುದ್ರಮೂರ್ತಿ ಹೇಳಿದರು.
ಡಿಸೇಲ್ ಬೆಲೆಯಲ್ಲಿ ಏರಿಕೆಯಾದರೆ ದಿನನಿತ್ಯ ಬಳಸುವ ವಸ್ತುಗಳಲ್ಲಿ ಏರಿಕೆಯಾಗುತ್ತದೆ. ಹಣದುಬ್ಬರ ಜಾಸ್ತಿಯಾಗುತ್ತದೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳಲ್ಲಿ ಬೆಲೆ ಹೆಚ್ಚಳವಾಗುತ್ತದೆ. ಹಾಲು, ಹಣ್ಣಿನಂಥ ವಸ್ತುಗಳ ಮೇಲಿನ ಬೆಲೆ ಹೆಚ್ಚಳವಾಗುತ್ತದೆ. ಹೀಗಾಗಿ ಪೆಟ್ರೋಲ್ ಮತ್ತು ಡಿಸೇಲ್ ದರ ಕಡಿಮೆಯಾಗಬೇಕಾಗುತ್ತದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ತೈಲಗಳ ಬೆಲೆಯಲ್ಲಿ ಏನಾದರೂ ಇಳಿಕೆ ಕಂಡರೆ ಆಗ ಖಂಡಿತ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಇಳಿಕೆ ಕಾಣಬಹುದು ಎಂದರು.
ಈಗ ಪೆಟ್ರೋಲ್ ಬೆಲೆ ನಿಯಂತ್ರಣಕ್ಕೆ ಸಿಗುತ್ತಿಲ್ಲ. 2010ರಲ್ಲಿ ಮನಮೊಹನ್ ಸಿಂಗ್ ಅವರ ಕಾಲದಲ್ಲಿಯೇ ಪೆಟ್ರೋಲ್ ನಿಯಂತ್ರಣ ಮೀರಿತ್ತು. ಮೋದಿ ಸರ್ಕಾರದ ಸಂದರ್ಭದಲ್ಲಿ ಅಂದರೆ 2014ರಲ್ಲಿ ಡಿಸೇಲ್ ಕೂಡ ಇದೇ ರೀತಿಯಾಗಿತ್ತು. ಭಾರತದಲ್ಲಿ ಇಂಧನ ಮೇಲಿನ ತೆರಿಗೆ ಪ್ರಮಾಣ ಹೆಚ್ಚಾಗಿದೆ. ಈ ಸಮಸ್ಯೆ ಏಕೆ ಇಷ್ಟು ದಿವಸಗಳ ಕಾಲ ನಮಗೆ ಕಾಣಿಸಲಿಲ್ಲ ಎಂದರೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲಗಳ ಬೆಲೆ ಕಡಿಮೆ ಇತ್ತು. ಲಾಕ್ಡೌನ್ ಸಂದರ್ಭದಲ್ಲಿ ಕಚ್ಚಾತೈಲಗಳ ಬೇಡಿಕೆ ಕಡಿಮೆಯಾದಾಗ ಬೆಲೆ ಇಳಿಕೆಯಾಗಿತ್ತು. ಆದರೆ ಈಗ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಜಾಸ್ತಿಯಾಗಿದೆ. ಕಳೆದ ಎರಡು ವಾರಗಳಲ್ಲಿ ಸರ್ಕಾರ ತೆರಿಗೆ ಹೆಚ್ಚು ಮಾಡಿಲ್ಲ, ಆದರೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಾಗಿದೆ. ಇಂತಹ ಸಮಯದಲ್ಲಿ ಜನ ಸಾಮಾನ್ಯರಿಗೆ ಹೊಡೆತ ಬೀಳದ ರೀತಿಯಲ್ಲಿ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ ಎಂದು ಅವರು ಅಭಿಪ್ರಾಯಪಟ್ಟರು.
2013- 2014ರ ಪೆಟ್ರೋಲಿಯಂ ಬೆಲೆಯನ್ನು ನಾವು ಇಂದಿನ ದರಗಳಿಗೆ ಹೋಲಿಕೆ ಮಾಡಬಾರದು. ಇದಕ್ಕೆ ಕಾರಣ ಹಣದುಬ್ಬರ. ಇನ್ನು ಸ್ವೀಕರಿಸುತ್ತಿರುವ ತೆರಿಗೆ ಆರ್ಥಿಕ ನೆಲೆಗಟ್ಟಿನಲ್ಲಿ ಬಳಕೆಯಾಗುತ್ತಿದೆಯೇ ಎನ್ನುವುದು ನನ್ನ ಪ್ರಶ್ನೆ. ಹಣಕಾಸಿನ ಸೋರಿಕೆ ಮುಂಚೆ ಇತ್ತು. ಅದು ಈಗ ಖಂಡಿತಾ ಕಡಿಮೆಯಾಗಿದೆ ಎಂದು ತಿಳಿಸಿದರು.
ಒಎಂಸಿ (ತೈಲ ಉತ್ಪಾದನಾ ದೇಶಗಳ ಒಕ್ಕೂಟ) ಈ ದರಗಳನ್ನು ನಿರ್ಧಾರ ಮಾಡುತ್ತವೆ, ಸರ್ಕಾರ ಅಲ್ಲ. ಎರಡನೇ ಅಲೆಯ ಕೊರೊನಾ ಏನಾದರೂ ಕಾಣಿಸಿಕೊಂಡು, ಮತ್ತೆ ಲಾಕ್ಡೌನ್ ಜಾರಿಯಾದರೆ ಆಗ ಇಂಧನ ಬಳಕೆ ಕಡಿಮೆಯಾಗುತ್ತದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆಯಾಗುತ್ತದೆ. ಚಿನ್ನ ಮತ್ತು ಬೆಳ್ಳಿಯ ಬೆಲೆ ಏರಿಕೆಯಾಗಬಹುದು ಎಂದು ರುದ್ರಮೂರ್ತಿ ಅಭಿಪ್ರಾಯಪಟ್ಟರು.
2014ರ ಮೇ ತಿಂಗಳಲ್ಲಿ ಒಂದು ಬ್ಯಾರಲ್ ಕಚ್ಚಾತೈಲಕ್ಕೆ 109 ಡಾಲರ್ ಇತ್ತು. ಆ ಕಾಲಕ್ಕೆ ಪೆಟ್ರೋಲ್ ಬೆಲೆ ₹ 71, ಡಿಸೇಲ್ ಬೆಲೆ ₹ 55 ಇತ್ತು. ಮೇ 2018ರಲ್ಲಿ ಕಚ್ಛಾ ತೈಲ 84 ಡಾಲರ್ ಇತ್ತು. ಪೆಟ್ರೋಲ್ ₹ 83 ಮತ್ತು ಡಿಸೇಲ್ ₹ 74 ಇತ್ತು. ಇಂದು ಪೆಟ್ರೋಲ್ ಬೆಲೆ ₹94 ಆಗಿದೆ, ಡಿಸೇಲ್ ₹ 83 ಮುಟ್ಟಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರು ನೆಮ್ಮದಿಯಾಗಿ ಜೀವನ ನಡೆಸಲು ಆಗದಂತೆ ಮಾಡಿದೆ. ಇದು ನಮ್ಮ ದೇಶದ ದೊಡ್ಡ ದುರಂತ. ಹೀಗಾಗಿ ಜಿಎಸ್ಟಿ ವ್ಯಾಪ್ತಿಗೆ ಪೆಟ್ರೋಲ್ ತೆಗೆದುಕೊಂಡು ಬರುವುದು ಒಳ್ಳೆಯದು ಎಂದು ಪೆಟ್ರೋಲಿಯಂ ತಜ್ಞರಾದ ಎಂ. ಲಕ್ಷ್ಮಣ್ ವಿಶ್ಲೇಷಿಸಿದರು.
ಮೂಲ ಬೆಲೆಯ ವಿಚಾರವಾಗಿ ನಾವು ಪ್ರಶ್ನೆ ಮಾಡುತ್ತಾ ಇಲ್ಲ. ತೆರಿಗೆಯನ್ನು ಏಕೆ ಹೆಚ್ಚು ಮಾಡಿದ್ದಾರೆ ಎನ್ನುವುದು ನಮ್ಮ ಪ್ರಶ್ನೆಯಾಗಿದೆ. ತೆರಿಗೆ ಕಡಿಮೆ ಮಾಡಿ. ಪೆಟ್ರೋಲಿಯಂ ಉತ್ಪನ್ನಗಳ ದರ ತಗ್ಗಿಸಿ. ಸಾಮಾನ್ಯ ಜನರಿಗೆ ಬದುಕಲು ಅವಕಾಶ ಮಾಡಿಕೊಡಬೇಕು ಎಂದು ತಿಳಿಸಿದರು.
ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆಯನ್ನು ಕಡಿಮೆ ಮಾಡುವಲ್ಲಿ ಗಮನಹರಿಸಬೇಕಿದೆ. ಇಂದು 30ಕ್ಕೂ ಹೆಚ್ಚು ತೆರಿಗೆಯನ್ನು ಸರ್ಕಾರ ವಿಧಿಸುತ್ತಿದೆ. ಹೀಗಾಗಿ ತೆರಿಗೆ ಕಡಿತ ಬಹಳ ಮುಖ್ಯ ಎನ್ನುವುದು ಜನಸಾಮಾನ್ಯರ ಆಶಯವಾಗಿದೆ.
ಇದನ್ನೂ ಓದಿ: Facebook Fraud | ಸಚಿವ ಸುರೇಶ್ ಕುಮಾರ್ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ; ನಕಲಿ ಖಾತೆದಾರರಿಂದ ಹಣಕ್ಕೆ ಬೇಡಿಕೆ