ರೈತರ ದಿಲ್ಲಿ ಚಲೋ ಪ್ರತಿಭಟನೆ ರಾಜಕೀಯ ಸ್ವರೂಪ ಪಡೆಯಲಾರಂಭಿಸಿದೆ!

ರಾಷ್ಟ್ರೀಯ ಲೋಕತಾಂತ್ರಿಕ್ ಪಕ್ಷದ ಅಧ್ಯಕ್ಷ ಹನುಮಾನ್ ಬೆನಿವಾಲ್ ಕೇಂದ್ರ ಸರ್ಕಾರವು ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗೆ ಸೂಕ್ತವಾದ ರೀತಿಯಲ್ಲಿ ಮಾತುಕತೆ ನಡೆಸಿ ಜಾರಿಗೊಳಿಸಿರುವ ಕೃಷಿ ಕಾಯಿದೆಗಳನ್ನು ಹಿಂಪಡೆಯದಿದ್ದರೆ, ತಾವು ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ಪುನರ್​ಪರಿಶೀಲಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ರೈತರ ದಿಲ್ಲಿ ಚಲೋ ಪ್ರತಿಭಟನೆ ರಾಜಕೀಯ ಸ್ವರೂಪ ಪಡೆಯಲಾರಂಭಿಸಿದೆ!
ಅರುಣ್​ ಕುಮಾರ್​ ಬೆಳ್ಳಿ

Updated on: Nov 30, 2020 | 9:38 PM

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ನೂತನ ಕೃಷಿ ಕಾಯಿದೆಗಳ ವಿರುದ್ಧ ಸಿಡಿದೆದ್ದಿರುವ ಉತ್ತರ ಭಾರತದ ರೈತಾಪಿ ವರ್ಗ ದಿಲ್ಲಿ ಚಲೋ ಆಂದೋಲನ ನಡೆಸುತ್ತಿರುವುದರ ಹಿಂದೆ ಯಾವುದೇ ರಾಜಕೀಯ ಪಕ್ಷದ ಕೈವಾಡವಿಲ್ಲವೆಂದು ಸ್ಪಷ್ಟಪಡಿಸಿದರೂ ಅವರ ಈ ಮುಷ್ಕರ ರಾಜಕೀಯ ಬಣ್ಣಪಡೆದುಕೊಳ್ಳುವ ಸೂಚನೆಗಳು ನಿಚ್ಚಳವಾಗಿ ಕಾಣುತ್ತಿವೆ.

ಕೇಂದ್ರದಲ್ಲ್ಲಿ ಎನ್​ಡಿಎ ಸರ್ಕಾರಕ್ಕೆ ಬೆಂಬಲ ನೀಡಿರುವ ರಾಷ್ಟ್ರೀಯ ಲೋಕತಾಂತ್ರಿಕ್ ಪಕ್ಷದ ಅಧ್ಯಕ್ಷ ಹನುಮಾನ್ ಬೆನಿವಾಲ್ ಅವರು ಗೃಹ ಸಚಿವ ಅಮಿತ್​ ಶಾ ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗೆ ಸೂಕ್ತವಾದ ರೀತಿಯಲ್ಲಿ ಮಾತುಕತೆ ನಡೆಸಿ ಜಾರಿಗೊಳಿಸಿರುವ ಕೃಷಿ ಕಾಯಿದೆಗಳನ್ನು ಹಿಂಪಡೆಯದಿದ್ದರೆ, ತಾವು ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ಪುನರ್​ಪರಿಶೀಲಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಹಾಗೆಯೇ, ಸ್ವಾಮಿನಾಥನ್ ಆಯೋಗದ ಶಿಫಾರಸ್ಸುಗಳನ್ನು ಜಾರಿಗೊಳಿಸಬೇಕೆಂದು ಸಹ ಅವರು ಗೃಹ ಸಚಿವರನ್ನು ಒತ್ತಾಯಿಸಿದ್ದಾರೆ.

ರಾಜಸ್ತಾನದ ನಗೌರ್ ಲೋಕಸಭಾ ಕ್ಷೇತ್ರದಿಂದ ಸಂಸತ್ತಿಗೆ ಆಯ್ಕೆಯಾಗಿರುವ ಬೆನಿವಾಲ್ ಮೊದಲು ಬಿಜೆಪಿಯಲ್ಲಿದ್ದರು. 2018ರಲ್ಲಿ ಪಕ್ಷವನ್ನು ತೊರೆದು ತಮ್ಮದೇ ಆದ ರಾಷ್ಟ್ರೀಯ ಲೋಕತಾಂತ್ರಿಕ್ ಪಕ್ಷವನ್ನು ಸ್ಥಾಪಿಸಿದರಾದರೂ 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಎನ್​ಡಿಎ ಕೂಟವನ್ನು ಸೇರಿದರು. ಅವರ ಪಕ್ಷ ರಾಜಸ್ತಾನದ ವಿಧಾನಸಭಾ ಚುನಾವಣೆಯಲ್ಲಿ 3 ಸ್ಥಾನಗಳನ್ನು ಗೆದ್ದಿದ್ದೂ ಅಲ್ಲದೆ ರಾಷ್ಟ್ರೀಯ ಪಕ್ಷಗಳಿಗೆ ಉತ್ತಮ ಪೈಪೋಟಿಯನ್ನೊಡ್ಡಿತ್ತು.

ಹನುಮಾನ್ ಬೆನಿವಾಲ್

ನೂತನ ಕೃಷಿ ಕಾಯಿದೆಗಳು ರೈತ-ಸ್ನೇಹಿಯಾಗಿವೆ ಎಂಧು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಶಾ ಅವರು ಪದೇಪದೆ ಹೇಳುತ್ತಿದ್ದರೂ ಉತ್ತರ ಭಾರತದ ರೈತರು ಅವುಗಳನ್ನು ಹಿಂಪಡೆಯುವವರೆಗೆ ಚಳುವಳಿ ನಿಲ್ಲಿಸುವುದಿಲ್ಲವೆಂದು ಹೇಳಿದ್ದಾರೆ. ದಿಲ್ಲಿ ಚಲೋ ಪ್ರತಿಭಟನೆಯನ್ನು ನವೆಂಬರ್ 27 ರಂದು ಆರಂಭಿಸಿರುವ ರೈತರು ರಾಷ್ಟ್ರ ರಾಜಧಾನಿಯ ಹೊರವಲಯ ಮತ್ತು ಬುರಾರಿ ಮೈದಾನದಲ್ಲಿ ಬೀಡುಬಿಟ್ಟಿದ್ದಾರೆ. ಸದರಿ ಆಂದೋಲನವನ್ನು ಶುರು ಮಾಡಿದ್ದು ಪಂಜಾಬಿನ ರೈತರಾದರೂ ಕ್ರಮೇಣವಾಗಿ ಉತ್ತರ ಭಾರತದ ಇತರ ರಾಜ್ಯಗಳ ರೈತರು ಸಹ ಇದರಲ್ಲಿ ಪಾಲ್ಗೊಳ್ಳಲಾರಂಭಿಸಿದರು.

ರೈತರ ಪ್ರತಿಭಟನೆ ಕುರಿತು ಈಗಾಗಲೆ ಹರಿಯಾಣ ಮತ್ತು ಪಂಜಾಬ್ ಮುಖ್ಯಮಂತ್ರಿಗಳ ನಡುವೆ ವಾಕ್ಸಮರ ಶುರುವಾಗಿದೆ. ಹಲವಾರು ಪ್ರಾದೇಶಿಕ ಪಕ್ಷಗಳು ಸಹ ನೂತನ ಕೃಷಿ ಕಾಯಿದೆಗಳು ರೈತರ ಹಿತಾಸಕ್ತಿಗಳಿಗೆ ಮಾರಕವಾಗಿವೆಯೆಂದು ವಾದಿಸುತ್ತಿವೆ.

 

Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Follow Us