ಬಸ್ ಟಿಕೆಟ್​ಗೆ ದುಡ್ಡುಕೇಳಿ ‘ಧೋನಿ’ ಮೆಸೇಜ್ ಹಾಕ್ತಾರೆ ಹುಷಾರ್; ದೂರಸಂಪರ್ಕ ಇಲಾಖೆಯಿಂದ ಎಚ್ಚರಿಕೆ

|

Updated on: Apr 26, 2024 | 12:24 PM

Beware scammers, DoT Alerts in X post: ಫೋನ್​ನಲ್ಲಿ ಕರೆ ಮಾಡಿ ಕೆವೈಸಿ ಅಪ್​ಡೇಟ್ ಮಾಡುವುದಾಗಿ ಹೇಳಿ ವಂಚಿಸಲು ಯಾರಾದರೂ ಯತ್ನಿಸಿದರೆ ಅವರ ವಿರುದ್ಧ ಆದಷ್ಟೂ ಬೇಗ ಸಂಚಾರ್ ಸಾಥಿಯಲ್ಲಿನ ಚಕ್ಷು ವಿಭಾಗಕ್ಕೆ ದೂರು ಕೊಡಿ. ಎಂಎಸ್ ಧೋನಿ ಹೆಸರಿನಲ್ಲಿ ವಂಚಕನೊಬ್ಬ ಹಣಕ್ಕಾಗಿ ಮೆಸೇಜ್ ಹಾಕಿರುವ ಸ್ಕ್ರೀನ್​ಶಾಟ್​ವೊಂದನ್ನು ದೂರಸಂಪರ್ಕ ಇಲಾಖೆ ತನ್ನ ಎಕ್ಸ್ ಪೋಸ್ಟ್​ನಲ್ಲಿ ಶೇರ್ ಮಾಡಿದೆ. ಧೋನಿ ಹೆಸರಿನಲ್ಲಿ ನಿಮಗೆ ಈ ಮೆಸೇಜ್ ಬಂದಿದ್ದರೆ ಅದು ನಿಮ್ಮನ್ನು ಔಟ್ ಮಾಡಲು ಹಾಕಿರುವ ಗೂಗ್ಲಿಯಾಗಿರುತ್ತದೆ ಎಂದು ಡಿಪಾರ್ಟ್ಮೆಂಟ್ ಆಫ್ ಟೆಲಿಕಮ್ಯುನಿಕೇಶನ್ಸ್ ಎಚ್ಚರಿಸಿದೆ.

ಬಸ್ ಟಿಕೆಟ್​ಗೆ ದುಡ್ಡುಕೇಳಿ ‘ಧೋನಿ’ ಮೆಸೇಜ್ ಹಾಕ್ತಾರೆ ಹುಷಾರ್; ದೂರಸಂಪರ್ಕ ಇಲಾಖೆಯಿಂದ ಎಚ್ಚರಿಕೆ
ಮಹೇಂದ್ರ ಸಿಂಗ್ ಧೋನಿ
Follow us on

ನವದೆಹಲಿ, ಏಪ್ರಿಲ್ 26: ಸೋಷಿಯಲ್ ಮೀಡಿಯಾದಲ್ಲಿ ಸೆಲಬ್ರಿಟಿಗಳ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ ಜನರನ್ನು ವಂಚಿಸುವ ಹಲವಾರು ಪ್ರಕರಣಗಳು ಬೆಳಕಿಗೆ ಬಂದಿವೆ. ಹಣ ಕೇಳಿ ಮೆಸೇಜ್ ಹಾಕುವುದು, ಹುಡುಗಿಯರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಅವರಿಗೆ ವಂಚಿಸುವುದು ಇತ್ಯಾದಿ ನಡೆದೇ ಇರುತ್ತವೆ. ಜನಪ್ರಿಯ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ (MS Dhoni) ತಾನು ಪರ್ಸ್ ಕಳೆದುಕೊಂಡಿದ್ದು ಹಣ ಇಲ್ಲ. ತಾವು 600 ರೂ ಫೋನ್ ಪೇ ಮಾಡಿದರೆ ಮನೆಗೆ ಹೋದ ಬಳಿಕ ವಾಪಸ್ ಕೊಡ್ತೀನಿ ಎಂದು ಅವರೇ ಖುದ್ದಾಗಿ ಮೆಸೇಜ್ ಹಾಕಿದರೆ ಅಮಾಯಕರು ಒಂದು ಕ್ಷಣ ನಂಬಿ ಕೂಡಲೇ ಹಣ ಕಳುಹಿಸುವ ಸಾಧ್ಯತೆ ಉಂಟು. ಇಂಥದ್ದೊಂದು ನಕಲಿ ಧೋನಿ ಮೆಸೇಜ್​ನ ಸ್ಕ್ರೀನ್​ಶಾಟ್ ಲಗತ್ತಿಸಿ ದೂರಸಂಪರ್ಕ ಇಲಾಖೆ ಎಚ್ಚರಿಕೆಯ ಸಂದೇಶ ನೀಡಿದೆ. ಇಂಥ ವಂಚನೆ ಪ್ರಕರಣ ಕಂಡುಬಂದರೆ ಸಂಚಾರ್ ಸಾಥಿ ತಾಣದಲ್ಲಿ ಚಕ್ಷು ವಿಭಾಗಕ್ಕೆ ರಿಪೋರ್ಟ್ ಮಾಡಿ ಎಂದು ಮನವಿ ಮಾಡಿದೆ.

‘ನಿಮ್ಮನ್ನು ಬೌಲೌಟ್ ಮಾಡಲು ವಂಚಕರು ಪ್ರಯತ್ನಿಸುತ್ತಿರುತ್ತಾರೆ ಹುಷಾರಾಗಿರಿ. ಎಂಎಸ್ ಧೋನಿ ಎಂದು ಹೇಳಿಕೊಂಡು ಯಾರಾದರೂ ಬಸ್ ಟಿಕೆಟ್​ಗೆ ದುಡ್ಡು ಕೇಳುತ್ತಿದ್ದರೆ ಅದು ನಿಮ್ಮನ್ನು ಔಟ್ ಮಾಡಲು ಎಸದಿರುವ ಗೂಗ್ಲಿಯಾಗಿರುತ್ತದೆ. ಎಂಎಸ್ ಧೋನಿ ಎಷ್ಟು ವೇಗವಾಗಿ ಸ್ಟಂಪಿಂಗ್ ಮಾಡುತ್ತಾರೆ. ನೀವೂ ಕೂಡ ಅಷ್ಟೇ ವೇಗವಾಗಿ ಸ್ಟಂಪಿಂಗ್ ಮಾಡಬೇಕೆಂದರೆ ಸಂಚಾರ್ ಸಾಥಿಯಲ್ಲಿ ಚಕ್ಷು ವಿಭಾಗದಲ್ಲಿ ದೂರು ದಾಖಲಿಸಿ’ ಎಂದು ದೂರಸಂಪರ್ಕ ಇಲಾಖೆ ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದೆ.

ಡಿಪಾರ್ಟ್ಮೆಂಟ್ ಆಫ್ ಟೆಲಿಕಮ್ಯೂನಿಕೇಶನ್ಸ್ ತನ್ನ ಪೋಸ್ಟ್ ಜೊತೆಗೆ ಲಗತ್ತಿಸಿರುವ ಸ್ಕ್ರೀನ್​ಶಾಟ್​ನಲ್ಲಿ ನಕಲಿ ಧೋನಿ ಮೆಸೇಜ್ ಹೀಗಿದೆ:

‘ಹಾಯ್, ನಾನು ಎಂಎಸ್ ಧೋನಿ. ಪ್ರೈವೇಟ್ ಅಕೌಂಟ್​ನಿಂದ ನಿಮಗೆ ಮೆಸೇಜ್ ಮಾಡುತ್ತಿದ್ದೇನೆ. ನಾನೀಗ ರಾಂಚಿ ಹೊರವಲಯದಲ್ಲಿದ್ದೇನೆ. ವ್ಯಾಲಟ್ ಮರೆತು ಬಂದಿದ್ದೇನೆ. ತಾವೀಗ ನನಗೆ 600 ರೂ ಹಣವನ್ನು ಫೋನ್ ಪೆ ಮಾಡಿದರೆ ಬಸ್ ಮೂಲಕ ನಾನು ಮನೆಗೆ ಮರಳಬಹುದು. ಮನೆಗೆ ಹೋದ ಬಳಿಕ ಹಣ ಮರಳಿಸುತ್ತೇನೆ,’ ಎಂದು ಮೆಸೇಜ್ ಇದೆ. ಧೋನಿ ಯಾವುದೋ ಜಮೀನಿನಲ್ಲಿ ಸೆಲ್ಫೀ ತೆಗೆದುಕೊಂಡಿದ್ದ ಒಂದು ಫೋಟೋವನ್ನೂ ಆ ವ್ಯಕ್ತಿ ಹಾಕಿದ್ದಾನೆ.

ಇದನ್ನೂ ಓದಿ: ವಾಟ್ಸಾಪ್​ನಲ್ಲಿ ಇಂಟರ್ನೆಟ್ ಇಲ್ಲದೆಯೂ ಫೋಟೋ, ವಿಡಿಯೋ ಷೇರ್ ಮಾಡಬಹುದು; ಬರಲಿದೆ ಹೊಸ ಫೀಚರ್

ಚಕ್ಷು ಪೋರ್ಟಲ್​ಗೆ ದೂರು ಕೊಡಿ

ಫೋನ್ ಮತ್ತು ಸಿಮ್​ಗಳಿಗೆ ಸಂಬಂಧಿಸಿದ ಅಪರಾಧ ಘಟನೆಗಳನ್ನು ರಿಪೋರ್ಟ್ ಮಾಡಲು ಸಂಚಾರ್ ಸಾಥಿ ವೆಬ್​ಸೈಟ್ ರೂಪಿಸಲಾಗಿದೆ. ಇದರಲ್ಲಿ ಚಕ್ಷು ವಿಭಾಗ ಕೂಡ ಇದ್ದು ವಂಚನೆ ಸಂದೇಶಗಳ ವಿರುದ್ಧ ದೂರು ಕೊಡಲು ಇಲ್ಲಿ ಅವಕಾಶ ಇದೆ.

ಬೇರೆಯವರ ಹೆಸರಿನಲ್ಲಿ ಕರೆ ಮಾಡಿಯೋ, ಎಸ್ಸೆಮ್ಮೆಸ್ ಕಳುಹಿಸಿಯೋ, ವಾಟ್ಸಾಪ್ ಮಾಡಿಯೋ ವಂಚಿಸುವ ಪ್ರಯತ್ನ ಆಗಿದ್ದರೆ ಅವರ ವಿರುದ್ಧ ಚಕ್ಷುವಿನಲ್ಲಿ ದೂರು ಕೊಡಬಹುದು. ಸರ್ಕಾರಿ ಅಧಿಕಾರಿಗಳು ಅಥವಾ ಇನ್ಯಾವುದಾದರೂ ಚಿರಪರಿಚಿತರ ಹೆಸರಿನಲ್ಲಿ ಫೋನ್ ಮಾಡಿ ಬ್ಯಾಂಕ್ ಖಾತೆ, ಪೇಮೆಂಟ್ ವ್ಯಾಲಟ್, ಸಿಮ್, ಗ್ಯಾಸ್ ಕನೆಕ್ಷನ್, ಎಲೆಕ್ಟ್ರಿಸಿಟಿ ಕನೆಕ್ಷನ್, ಕೆವೈಸಿ ಅಪ್​ಡೇಟ್ ಇತ್ಯಾದಿ ಮಾಡಬೇಕೆಂದು ಹೇಳಿ ವಂಚನೆ ಆಗಿರುವುದು ಇತ್ಯಾದಿ ಪ್ರಕರಣಗಳಿದ್ದರೆ ಇಲ್ಲಿ ದೂರು ಕೊಡಬಹುದು.

ಚಕ್ಷು ಪೋರ್ಟಲ್​ನ ವಿಳಾಸ: sancharsaathi.gov.in/sfc/

ಇದನ್ನೂ ಓದಿ: ಆಧಾರ್ ನಂಬರ್ ಮರೆತು ಹೋಯ್ತಾ? ಈ ಟ್ರಿಕ್ಸ್ ಟ್ರೈ ಮಾಡಿ..

ಸೈಬರ್ ಕ್ರೈಮ್ ಪ್ರಕರಣಗಳಲ್ಲಿ ದೂರು ಕೊಡಲು ಬೇರೆ ಮಾರ್ಗ

ನೀವು ವಂಚನೆಯ ಜಾಲಕ್ಕೆ ಬಿದ್ದು ಹಣ ಕಳೆದುಕೊಂಡಿದ್ದರೆ ಚಕ್ಷುವಿನಲ್ಲಿ ದೂರು ಕೊಡಲು ಆಗುವುದಿಲ್ಲ. ಅಂಥ ಪ್ರಕರಣಗಳಿಗೆ ಹೆಲ್ಪ್​ಲೈನ್ ನಂಬರ್ 1930ಕ್ಕೆ ಕರೆ ಮಾಡಬಹುದು. ಅಥವಾ ಸೈಬರ್ ಕ್ರೈಮ್ ವೆಬ್​ಸೈಟ್​ನಲ್ಲಿ ದೂರು ಕೊಡಬಹುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ