‘ಪಾಠ ಕಲಿಸಿದ್ದೆವು’ ಹೇಳಿಕೆ; ನೀತಿ ಸಂಹಿತೆ ಉಲ್ಲಂಘನೆ ಆರೋಪದಿಂದ ಅಮಿತ್ ಶಾಗೆ ಕ್ಲೀನ್​​ಚಿಟ್

| Updated By: Ganapathi Sharma

Updated on: Dec 10, 2022 | 3:49 PM

ಅಮಿತ್ ಶಾ ಹೇಳಿಕೆಗೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಸೇರಿದಂತೆ ಅನೇಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಬಿಲ್ಕಿಸ್‌ ಬಾನು ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನು ಬಿಡುಗಡೆ ಮಾಡಿರುವುದು ನೀವು ಕಲಿಸಿದ ಪಾಠವೇ ಎಂದು ಅಮಿತ್ ಶಾಗೆ ಓವೈಸಿ ತಿರುಗೇಟು ನೀಡಿದ್ದರು.

‘ಪಾಠ ಕಲಿಸಿದ್ದೆವು’ ಹೇಳಿಕೆ; ನೀತಿ ಸಂಹಿತೆ ಉಲ್ಲಂಘನೆ ಆರೋಪದಿಂದ ಅಮಿತ್ ಶಾಗೆ ಕ್ಲೀನ್​​ಚಿಟ್
ಅಮಿತ್ ಶಾ (ಸಂಗ್ರಹ ಚಿತ್ರ)
Follow us on

ನವದೆಹಲಿ: ಗುಜರಾತ್ ವಿಧಾನಸಭೆ ಚುನಾವಣೆ (Gujrat Assembly Election) ಪ್ರಚಾರ ಅಭಿಯಾನದ ವೇಳೆ ‘2002ರ ದಂಗೆಯ ಬಳಿಕ ಗಲಭೆಕೋರರಿಗೆ ಪಾಠ ಕಲಿಸಿದ್ದೆವು’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ನೀಡಿದ್ದ ಹೇಳಿಕೆ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿಲ್ಲ ಎಂದು ಚುನಾವಣಾ ಆಯೋಗದ (Election Commission) ಮೂಲಗಳು ತಿಳಿಸಿವೆ. ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಿ ಖೇಡಾ ಜಿಲ್ಲೆಯ ಮಹುಧಾ ಪಟ್ಟಣದಲ್ಲಿ ಮಾತನಾಡಿದ್ದ ಶಾ, 2002 ರಲ್ಲಿ ಅವರಿಗೆ ಪಾಠ ಕಲಿಸಿದ ನಂತರ, ಸಮಾಜ ವಿರೋಧಿ ಶಕ್ತಿಗಳು ಹಿಂಸಾಚಾರದ ಹಾದಿ ತೊರೆದವು. ಅವರು 2002 ರಿಂದ 2022 ರವರೆಗೆ ಹಿಂಸಾಚಾರದಲ್ಲಿ ತೊಡಗುವುದನ್ನು ಬಿಟ್ಟುಬಿಟ್ಟರು ಎಂದು ಹೇಳಿದ್ದರು.

ಅಮಿತ್ ಶಾ ಹೇಳಿಕೆಗೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಸೇರಿದಂತೆ ಅನೇಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಬಿಲ್ಕಿಸ್‌ ಬಾನು ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನು ಬಿಡುಗಡೆ ಮಾಡಿರುವುದು ನೀವು ಕಲಿಸಿದ ಪಾಠವೇ ಎಂದು ಅಮಿತ್ ಶಾಗೆ ಓವೈಸಿ ತಿರುಗೇಟು ನೀಡಿದ್ದರು.

ಇದನ್ನೂ ಓದಿ: ಗುಜರಾತಿನಲ್ಲಿ ಶಾಶ್ವತ ಶಾಂತಿ ಸ್ಥಾಪಿಸಿದ್ದು ಬಿಜೆಪಿ : ಕೇಂದ್ರ ಗೃಹ ಸಚಿವ ಅಮಿತ್ ಶಾ

ಅಮಿತ್ ಶಾ ಹೇಳಿಕೆ ಬಗ್ಗೆ ಮಾಜಿ ಅಧಿಕಾರಿಯೊಬ್ಬರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ಈ ವಿಚಾರವಾಗಿ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಯಿಂದ ಚುನಾವಣಾ ಆಯೋಗ ವರದಿ ತರಿಸಿಕೊಂಡಿತ್ತು. ಜತೆಗೆ ಕಾನೂನು ಸಲಹೆಯನ್ನೂ ಕೇಳಿತ್ತು. ಪರಿಶೀಲನೆಯ ಬಳಿಕ ಅಮಿತ್ ಶಾ ಅವರ ಹೇಳಿಕೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆಯಾಗಿಲ್ಲ ಎಂಬ ನಿರ್ಧಾರಕ್ಕೆ ಆಯೋಗ ಬಂದಿದೆ ಎಂದು ಮೂಲಗಳು ಹೇಳಿವೆ.

ಏನು ಹೇಳಿದ್ದರು ಅಮಿತ್ ಶಾ?

ಗುಜರಾತ್‌ನಲ್ಲಿ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ (1995ಕ್ಕಿಂತ ಮೊದಲು) ಕೋಮುಗಲಭೆಗಳು ವ್ಯಾಪಕವಾಗಿದ್ದವು. ಕಾಂಗ್ರೆಸ್ ವಿವಿಧ ಸಮುದಾಯಗಳು ಮತ್ತು ಜಾತಿಗಳ ಜನರನ್ನು ಪರಸ್ಪರ ವಿರುದ್ಧ ಹೋರಾಡಲು ಪ್ರಚೋದಿಸುತ್ತದೆ. ಇಂತಹ ಗಲಭೆಗಳ ಮೂಲಕ ಕಾಂಗ್ರೆಸ್ ತನ್ನ ವೋಟ್ ಬ್ಯಾಂಕ್ ಅನ್ನು ಬಲಪಡಿಸಿತು. ಅದು ಸಮಾಜದ ದೊಡ್ಡ ವರ್ಗಕ್ಕೆ ಅನ್ಯಾಯ ಮಾಡಿದೆ. ಕಾಂಗ್ರೆಸ್​​ನಿಂದ ಪಡೆದ ದೀರ್ಘಕಾಲದ ಬೆಂಬಲದಿಂದಾಗಿ ದುಷ್ಕರ್ಮಿಗಳು ಹಿಂಸಾಚಾರದಲ್ಲಿ ಪಾಲ್ಗೊಳ್ಳುವ ಅಭ್ಯಾಸವನ್ನು ಹೊಂದಿದ್ದರಿಂದ 2002 ರಲ್ಲಿ ಗುಜರಾತ್ ಗಲಭೆಗಳಿಗೆ ಸಾಕ್ಷಿಯಾಯಿತು. ಆದರೆ 2002ರಲ್ಲಿ ಅವರಿಗೆ ಪಾಠ ಕಲಿಸಿದ ನಂತರ, ಸಮಾಜ ವಿರೋಧಿ ಶಕ್ತಿಗಳು ಹಿಂಸಾಚಾರದ ಹಾದಿ ತೊರೆದವು. ಅವರು 2002 ರಿಂದ 2022 ರವರೆಗೆ ಹಿಂಸಾಚಾರದಲ್ಲಿ ತೊಡಗುವುದನ್ನು ಬಿಟ್ಟುಬಿಟ್ಟರು ಎಂದು ಶಾ ಹೇಳಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ