ಉತ್ತರಪ್ರದೇಶದ ಸಾಕೇತ್ ಡಿಗ್ರಿ ಕಾಲೇಜಿನಲ್ಲಿ ಈಚೆಗೆ ನಡೆದ ಪ್ರತಿಭಟನೆ ವೇಳೆ ದೇಶ ವಿರೋಧಿ ಘೋಷಣೆ ಕೂಗಿದ ಆರೋಪದಲ್ಲಿ 6 ವಿದ್ಯಾರ್ಥಿಗಳ ವಿರುದ್ಧ Indian Penal Code ಭಾರತೀಯ ದಂಡ ಸಂಹಿತೆ 124 ಎ (ದೇಶದ್ರೋಹ) ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಕೆಟ್ಟ ಪ್ರಾಚಾರ್ಯರಿಂದ ಮುಕ್ತಿಕೋರಿ ಆಜಾದಿ ಘೋಷಣೆ ಕೂಗಿದೆವು, ನಾವು ದೇಶದ್ರೋಹಿಗಳಲ್ಲ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. ಈ ಪ್ರಕರಣವು ದೇಶದಲ್ಲಿ ಮತ್ತೊಮ್ಮೆ ‘ದೇಶದ್ರೋಹ’ ಪ್ರಕರಣದ ಬಗ್ಗೆ ಚರ್ಚೆ ಹುಟ್ಟುಹಾಕಿದೆ.
2016ರಲ್ಲಿ ದೆಹಲಿಯ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ (ಜೆಎನ್ಯು) ದೇಶ ವಿರೋಧಿ ಘೋಷಣೆ ಕೂಗಿದ್ದಾರೆ ಎಂದು ವಿದ್ಯಾರ್ಥಿ ಸಂಘಟನೆಗಳ ಅಧ್ಯಕ್ಷ ಕನ್ಹಯ್ಯಾ ಕುಮಾರ್ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಿತ್ತು. ಇದಾದ ನಂತರ 2019ರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಸಿದ ಭಾಷಣದಲ್ಲಿ ದೇಶ ವಿರೋಧಿ ಮಾತುಗಳನ್ನಾಡಿದ್ದಾರೆ ಎಂಬ ಆರೋಪದಲ್ಲಿ ಜೆಎನ್ಯು ಹಳೇ ವಿದ್ಯಾರ್ಥಿ ಶಾರ್ಜಿಲ್ ಇಮಾಮ್, ಸಿಎಎ ವಿರೋಧಿಸಿ ಫೆಬ್ರುವರಿಯಲ್ಲಿ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದ ವಿದ್ಯಾರ್ಥಿನಿ ಅಮೂಲ್ಯ ಲಿಯೋನಾ ವಿರುದ್ಧವೂ ದೇಶದ್ರೋಹ ಪ್ರಕರಣ ದಾಖಲಾಗಿತ್ತು. ಬೀದರ್ನ ಶಾಹೀನ್ ವಿದ್ಯಾಸಂಸ್ಥೆಯ ಶಿಕ್ಷಕಿಯೊಬ್ಬರ ಮೇಲೆಯೂ ದೇಶದ್ರೋಹ ಪ್ರಕರಣ ದಾಖಲಾಗಿತ್ತು.
ಉತ್ತರ ಪ್ರದೇಶ ವಿದ್ಯಾರ್ಥಿಗಳ ಮೇಲೆ ದೇಶದ್ರೋಹ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಹಲವೆಡೆ ಈ ಪ್ರಕರಣಗಳ ಕುರಿತ ಚರ್ಚೆಯೂ ಆರಂಭವಾಗಿದೆ. ದೇಶದ್ರೋಹದ ಕುರಿತು ಐಪಿಸಿಯಲ್ಲಿ ಏನಿದೆ ಮತ್ತು ಸುಪ್ರೀಂಕೋರ್ಟ್ ಹೇಗೆ ವಿಶ್ಲೇಷಿಸಿದೆ ಎಂಬುದನ್ನು ವಿವರಿಸುವ ಪ್ರಯತ್ನ ಇಲ್ಲಿದೆ.
ದೇಶದ್ರೋಹ ಕಾನೂನು ಮತ್ತು ಅದರ ಅವಧಿ
ಭಾರತೀಯ ದಂಡ ಸಂಹಿತೆ 124 (ಎ) ಕಲಮಿನ ಪ್ರಕಾರ ಯಾವುದೇ ವ್ಯಕ್ತಿಯ ಭಾಷಣ, ಬರಹ ಅಥವಾ ಇತರ ವಿಧಾನಗಳು ಸರ್ಕಾರದ ವಿರುದ್ಧ ದ್ವೇಷ ಅಥವಾ ತಿರಸ್ಕಾರವನ್ನು ಬೆಳೆಸುತ್ತವೆಯೋ/ ಬೆಳೆಸಲು ಪ್ರಯತ್ನಿಸುತ್ತವೆಯೋ ಅಥವಾ ಅತೃಪ್ತಿಯನ್ನು ಪ್ರಚೋದಿಸುತ್ತವೆಯೋ/ಪ್ರಚೋದಿಸಲು ಪ್ರಯತ್ನಿಸುತ್ತವೆಯೋ ಅಂಥ ವ್ಯಕ್ತಿಯ ವಿರುದ್ಧ ರಾಜದ್ರೋಹ ಅಥವಾ ದೇಶದ್ರೋಹದ ಆಪಾದನೆ ಹೊರಿಸಬಹುದು. ಆರೋಪ ಸಾಬೀತಾದರೆ ಜೀವಾವಧಿ ಶಿಕ್ಷೆ, ದಂಡ ಅಥವಾ ಮೂರು ವರ್ಷಗಳ ಜೈಲು, ದಂಡ ಅಥವಾ ದಂಡ ರಹಿತ ಜೈಲು ಶಿಕ್ಷೆ ವಿಧಿಸಬಹುದಾಗಿದೆ.
ಇದನ್ನೂ ಓದಿ: ಫ್ರೀಡಂಪಾರ್ಕ್ನಲ್ಲಿ ನಿಂತು ಪಾಕ್ ಪರ ಘೋಷಣೆ, ಅಮೂಲ್ಯಗೆ 14 ದಿನ ನ್ಯಾಯಾಂಗ ಬಂಧನ
ದೇಶದ್ರೋಹ ಕಾನೂನು ಹಿನ್ನೆಲೆ
1857ರಲ್ಲಿ ಭಾರತದಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಆಳ್ವಿಕೆ ಕೊನೆಗೊಂಡು ಬ್ರಿಟಿಷ್ ಸರ್ಕಾರದ ನೇರ ಆಳ್ವಿಕೆ ಶುರುವಾಗಿತ್ತು. 1858ರಲ್ಲಿ ದೇಶದಲ್ಲಿ ಬ್ರಿಟಿಷ್ ಮಾದರಿಯ ನ್ಯಾಯಾಲಯಗಳು ಸ್ಥಾಪನೆಯಾಗಿ ಇದರ ಮೂಲಕ ಸಿವಿಲ್ ಮತ್ತು ಕ್ರಿಮಿನಲ್ ಕಾನೂನುಗಳು ಜಾರಿಗೆ ಬಂದವು. 1860ರಲ್ಲಿ ಭಾರತೀಯ ದಂಡ ಸಂಹಿತೆ (ಐಪಿಸಿ) ಕಾನೂನು ಜಾರಿಗೆ ಬಂತು. ಭಾರತದಲ್ಲಿ ಬ್ರಿಟಿಷರ ವಿರುದ್ಧ ಸಿಡಿದೆದ್ದ ಜನತೆ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದರು. ಈ ಹೋರಾಟ ಪ್ರಬಲವಾದಾಗ ಪತ್ರಿಕಾ ಸ್ವಾತಂತ್ರ್ಯ ಮತ್ತು ಸ್ವಾತಂತ್ರ್ಯ ಹೋರಾಟಗಾರರನ್ನು ಹಿಮ್ಮೆಟ್ಟಿಸಲು ಬ್ರಿಟಿಷರು 15 ಬಗೆಯ ವಿವಿಧ ಕಾನೂನುಗಳನ್ನು ಜಾರಿಗೆ ತಂದರು. ದೇಶದ್ರೋಹ ಅಪರಾಧದ ಬಗ್ಗೆ ಒಂದು ಕಾನೂನು ಅದರಲ್ಲಿತ್ತು. ಭಾರತೀಯ ದಂಡ ಸಂಹಿತೆ 124 (ಎ) ಎಂಬ ಕಲಂ ರಾಜದ್ರೋಹ ಅಥವಾ ದೇಶದ್ರೋಹವನ್ನು ವ್ಯಾಖ್ಯಾನಿಸುತ್ತದೆ.
ದೇಶದ್ರೋಹ ಪ್ರಕರಣ ಬಗ್ಗೆ ಸುಪ್ರೀಂಕೋರ್ಟ್ ಏನು ಹೇಳುತ್ತದೆ?
ಕೇದಾರನಾಥ್ ಸಿಂಗ್ ವರ್ಸಸ್ ಸ್ಟೇಟ್ ಆಫ್ ಬಿಹಾರ್ 1962 ಪ್ರಕರಣದಲ್ಲಿ ಐವರು ನ್ಯಾಯಮೂರ್ತಿಗಳ ನ್ಯಾಯಪೀಠವು, ಯಾವುದೇ ಭಾಷಣ ಅಥವಾ ಇನ್ನಾವುದೇ ಚಟುವಟಿಕೆ ದೇಶದ್ರೋಹ ಎಂದು ಪರಿಗಣಿಸಬೇಕಾದರೆ ಅದು ಹಿಂಸೆಗೆ ಪ್ರಚೋದನೆ ನೀಡುವಂತಿರಬೇಕು ಇಲ್ಲವೇ ಕಾನೂನು ಮತ್ತು ಸುವ್ಯವಸ್ಥೆಯನ್ನು ಹದಗೆಡಿಸುವಂತಿರಬೇಕು ಎಂದು ಹೇಳಿತ್ತು.
ಇಂದ್ರಾದಾಸ್ ವರ್ಸಸ್ ಸ್ಟೇಟ್ ಆಫ್ ಅಸ್ಸಾಂ ಆ್ಯಂಡ್ ಅರುಣಾಚಲ್ ಪ್ರದೇಶ್ – 2011 ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಸಾರ್ವಜನಿಕ ಶಾಂತಿಗೆ ಭಂಗ ತರುವ ಕ್ರಿಯೆ ಮಾತ್ರವೇ ದೇಶದ್ರೋಹ ಎಂದಿತ್ತು. ಬಲವಂತ್ ಸಿಂಗ್ ವರ್ಸಸ್ ಸ್ಟೇಟ್ ಆಫ್ ಪಂಜಾಬ್ ಪ್ರಕರಣ- 1982ರಲ್ಲಿ ಇಂದಿರಾ ಗಾಂಧಿ ಹತ್ಯೆಯಾದ ನಂತರ ಖಾಲಿಸ್ತಾನ್ ಜಿಂದಾಬಾದ್, ರಾಜ್ ಕರೇಗಾ ಖಾಲ್ಸಾ ಎಂದು ಕೂಗಿದ್ದ ಆರೋಪಿಗಳನ್ನು ಬಿಡುಗಡೆ ಮಾಡಿದ್ದ ನ್ಯಾಯಾಲಯ ಇದು ದೇಶದ್ರೋಹ ಅಲ್ಲ ಎಂದು ಹೇಳಿತ್ತು.
ಭಾರತೀಯ ಸಂವಿಧಾನದ 19 (ಎ) ಪರಿಚ್ಛೇದದ ಅನುಸಾರ ಭಾರತದ ಪ್ರತಿಯೊಬ್ಬ ಪ್ರಜೆಗೂ ಅಭಿವ್ಯಕ್ತಿ ಸ್ವಾತಂತ್ರ್ಯ ವಿದೆ. ಹಾಗಾಗಿ ದೇಶದ್ರೋಹ ಪ್ರಕರಣ ದಾಖಲಿಸಿ ಬಂಧನ ಉಚಿತವಲ್ಲ ಎಂಬ ವಾದವೂ ಇದೆ. ಆದರೆ ಸಂವಿಧಾನದ 19 (ಬಿ) ಕಲಂ ಪ್ರಕಾರ ದೇಶದ ಸಮಗ್ರತೆಯನ್ನು ಪ್ರಶ್ನಿಸುವ, ಇನ್ನೊಬ್ಬರನ್ನು ತುಚ್ಛೀಕರಿಸುವ, ದೇಶಕ್ಕೆ ಅಗೌರವ ಸೂಚಿಸುವ ಯಾವುದೇ ಸಂಗತಿ ಈ ಸ್ವಾತಂತ್ರ್ಯದ ಪರಿಧಿಗೆ ಬರುವುದಿಲ್ಲ ಎಂದು ಹೇಳಿದೆ.
ತಿದ್ದುಪಡಿಗೆ ಒತ್ತಾಯ
ದೇಶದ್ರೋಹಕ್ಕೆ ಸಂಬಂಧಿಸಿದ ಐಪಿಸಿ 124 (ಎ) ಕಲಂಗೆ ತಿದ್ದುಪಡಿ ಮಾಡಬೇಕು ಎಂದು ಹೋರಾಟಗಾರರು ಒತ್ತಾಯಿಸುತ್ತಿದ್ದಾರೆ. ಆದರೆ ಸದ್ಯ ಈ ಕಾನೂನಿಗೆ ಯಾವುದೇ ತಿದ್ದುಪಡಿ ಮಾಡುವ ಉದ್ದೇಶವಿಲ್ಲ ಎಂದು ಕೇಂದ್ರ ಸರ್ಕಾರ ಹಲವು ಬಾರಿ ಸಂಸತ್ತಿನಲ್ಲಿಯೇ ಹೇಳಿತ್ತು.
ದೇಶ ವಿರೋಧಿ ಘೋಷಣೆ ಆರೋಪ: ಉತ್ತರಪ್ರದೇಶದ ಕಾಲೇಜು ವಿದ್ಯಾರ್ಥಿಗಳ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು
Published On - 7:01 am, Tue, 29 December 20