ದೆಹಲಿ: ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈ ಶಂಕರ್ ಮೇ 24ರಿಂದ ಮೇ 28ರವರೆಗೆ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ. ಅಮೆರಿಕದ ಹಿರಿಯ ಅಧಿಕಾರಿಗಳೊಂದಿಗೆ ನಡೆಯುವ ಸಂವಾದದಲ್ಲಿ ಜೈಶಂಕರ್, ಕೊವಿಡ್ -19 ಲಸಿಕೆಗಳು ಮತ್ತು ಲಸಿಕೆ ಕಚ್ಚಾ ವಸ್ತುಗಳ ರಫ್ತು ಮೇಲೆ ಅಮೆರಿಕದ ಕಾನೂನಿನ ದೀರ್ಘಕಾಲದ ಪ್ರಭಾವದ ಬಗ್ಗೆ ಚರ್ಚಿಸುವ ನಿರೀಕ್ಷೆ ಇದೆ.
ಜೈಶಂಕರ್ ಅವರು ಮೇ 24-28ರ ಅವಧಿಯಲ್ಲಿ ಅಮೆರಿಕ ಭೇಟಿಯ ಅಂಗವಾಗಿ ನ್ಯೂಯಾರ್ಕ್ ನಲ್ಲಿರುವ ವಿಶ್ವಸಂಸ್ಥೆ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಮತ್ತು ವಾಷಿಂಗ್ಟನ್ ನಲ್ಲಿ ರಾಜ್ಯ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಶುಕ್ರವಾರ ಹೇಳಿದೆ.
ಅವರು ದ್ವಿಪಕ್ಷೀಯ ಸಂಬಂಧಗಳನ್ನು ನಿರ್ವಹಿಸುವ ಕ್ಯಾಬಿನೆಟ್ ಸದಸ್ಯರು ಮತ್ತು ಬಿಡೆನ್ ಆಡಳಿತದ ಹಿರಿಯ ಅಧಿಕಾರಿಗಳನ್ನು ಭೇಟಿಯಾಗಲಿದ್ದಾರೆ. ಭಾರತ ಮತ್ತು ಅಮೆರಿಕ ನಡುವಿನ ಆರ್ಥಿಕ ಮತ್ತು ಕೊವಿಡ್ ಸಂಬಂಧಿತ ಸಹಕಾರದ ಕುರಿತು ವ್ಯಾಪಾರ ವೇದಿಕೆಗಳೊಂದಿಗೆ ಎರಡು ಸಂವಾದಗಳನ್ನು ನಡೆಸಲಿದ್ದಾರೆ ಎಂದು ಸಚಿವಾಲಯ ಸಂಕ್ಷಿಪ್ತ ಹೇಳಿಕೆಯಲ್ಲಿ ತಿಳಿಸಿದೆ.
ಕೊವಿಡ್ -19 ಲಸಿಕೆಗಳ ಖರೀದಿ ಮತ್ತು ಉತ್ಪಾದನೆಯನ್ನು ಹೆಚ್ಚಿಸುವ ಮಾರ್ಗಗಳ ಬಗ್ಗೆ ಸಚಿವರು ಅಮೆರಿಕದ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ, ಈ ಬೆಳವಣಿಗೆಗಳ ಪರಿಚಯವಿರುವ ವ್ಯಕ್ತಿಯೊಬ್ಬರು ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಜೂನ್ ವೇಳೆಗೆ ವಿತರಿಸಲು ನಿಗದಿಪಡಿಸಿರುವ 80 ಮಿಲಿಯನ್ ಡೋಸ್ ಲಸಿಕೆಗಳ ಹಂಚಿಕೆ ಕುರಿತು ಈ ಚರ್ಚೆಯನ್ನು ಒಳಗೊಂಡಿರುತ್ತದೆ ಎಂದು ಮೇಲೆ ಉಲ್ಲೇಖಿಸಿದ ಜನರಲ್ಲಿ ಒಬ್ಬರು ಹೇಳಿದರು. ಲಸಿಕೆ ಕಚ್ಚಾ ವಸ್ತುಗಳ ರಫ್ತು ನಿರ್ಬಂಧಿಸಲು ಫೆಬ್ರವರಿಯಲ್ಲಿ ಅಧ್ಯಕ್ಷ ಜೋ ಬಿಡೆನ್ ಅವರು ಅಮೆರಿಕ ರಕ್ಷಣಾ ಉತ್ಪಾದನಾ ಕಾಯ್ದೆಯ ನಿರಂತರ ಪರಿಣಾಮವನ್ನು ಚರ್ಚೆಯಲ್ಲಿ ಕಾಣುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.
ಜೈಶಂಕರ್ ಅವರು ವ್ಯಾಪಾರ ಮುಖಂಡರೊಂದಿಗಿನ ಯೋಜಿತ ಸಭೆಗಳ ವಿವರಗಳನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಒದಗಿಸದಿದ್ದರೂ, ಅಮೆರಿಕದ ನ ಪ್ರಮುಖ ಲಸಿಕೆ ತಯಾರಕರಾದ ಫೈಜರ್, ಮಾಡರ್ನಾ ಮತ್ತು ಜಾನ್ಸನ್ ಆಂಡ್ ಜಾನ್ಸನ್ ಅವರ ಪ್ರತಿನಿಧಿಗಳೊಂದಿಗೆ ಸಂವಹನ ನಡೆಸುವ ಸಾಧ್ಯತೆಯನ್ನು ಅವರು ತಳ್ಳಿಹಾಕಲಿಲ್ಲ.
ಇಲ್ಲಿಯವರೆಗೆ, ಭಾರತ ಮೂರು ಲಸಿಕೆಗಳನ್ನು ಅನುಮೋದಿಸಿದೆ – ಭಾರತ್ ಬಯೋಟೆಕ್‌ನ ಕೊವಾಕ್ಸಿನ್, ಸೆರಮ್ ಇನ್‌ಸ್ಟಿಟ್ಯೂಟ್‌ನ ಕೊವಿಶೀಲ್ಡ್ ಮತ್ತು ರಷ್ಯಾದ ಸ್ಪುಟ್ನಿಕ್ ವಿ. ಆದಾಗ್ಯೂ, ಈ ಸಂಸ್ಥೆಗಳಿಂದ ಸರಬರಾಜು ಕೊವಿಡ್‌ನ ಎರಡನೇ ಅಲೆಯ ಹೊತ್ತಲ್ಲಿ ಕಡಿಮೆ ಆಗಿದೆ.
ಭಾರತವು ದೇಶದಲ್ಲಿ ಲಸಿಕೆ ಕೊರತೆಯನ್ನು ಎದುರಿಸುತ್ತಿದ್ದು ರಾಜ್ಯಗಳು ಎಲ್ಲ ಜನರಿಗೆ ಲಸಿಕೆ ನೀಡಲು ವಿದೇಶಿ ಆಯ್ಕೆಗಳನ್ನು ಹುಡುಕುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುತ್ತಿವೆ.
Published On - 7:03 pm, Fri, 21 May 21