Fact Check: ‘ಮಸೀದಿಗಳಲ್ಲಿ ಸಂಗ್ರಹವಾದ ಹಣಕ್ಕೆ ತೆರಿಗೆ ಇಲ್ಲ’, ಚೀಲಗಳಲ್ಲಿ ನೋಟು ತುಂಬುತ್ತಿರುವ ವಿಡಿಯೊ ಭಾರತದ್ದಲ್ಲ

|

Updated on: Jun 08, 2023 | 8:57 PM

ನೋಡಿ, ಮಸೀದಿಯಲ್ಲಿ ಎಷ್ಟು ಹಣ ಬರುತ್ತದೆ, ಈ ಹಣಕ್ಕೆ ತೆರಿಗೆ ಇಲ್ಲ, ದೇವಸ್ಥಾನದ ಹಣಕ್ಕೆ ಮಾತ್ರ ತೆರಿಗೆ. ಮಸೀದಿಯಲ್ಲಿ ಕೊಟ್ಟ ದೇಣಿಗೆ ಹಿಂದೂಗಳ ವಿರುದ್ಧ ಜಿಹಾದ್‌ನಲ್ಲಿ ಬಳಸಲ್ಪಡುತ್ತದೆ ಎಂಬ ಬರಹದೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೊದ ಫ್ಯಾಕ್ಟ್ ಚೆಕ್ ಇಲ್ಲಿದೆ.

Fact Check: ‘ಮಸೀದಿಗಳಲ್ಲಿ ಸಂಗ್ರಹವಾದ ಹಣಕ್ಕೆ ತೆರಿಗೆ ಇಲ್ಲ’, ಚೀಲಗಳಲ್ಲಿ ನೋಟು ತುಂಬುತ್ತಿರುವ ವಿಡಿಯೊ ಭಾರತದ್ದಲ್ಲ
ವೈರಲ್ ವಿಡಿಯೊದ ದೃಶ್ಯ
Follow us on

ಮಸೀದಿಯಂತೆ (mosque) ಕಾಣುವ ಸ್ಥಳದಲ್ಲಿ ಪ್ಲಾಸ್ಟಿಕ್ ಚೀಲಗಳಲ್ಲಿ ಹಣವನ್ನು ತುಂಬುತ್ತಿರುವುದನ್ನು ತೋರಿಸುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ (Social  media) ವೈರಲ್ ಆಗಿದೆ. ಮಸೀದಿಗಳಲ್ಲಿ ಸಂಗ್ರಹವಾಗುವ ಹಣಕ್ಕೆ ತೆರಿಗೆ ಇಲ್ಲ. ಈ ಹಣವನ್ನು ಮತಾಂತರ, ಭಯೋತ್ಪಾದನೆ ಮತ್ತು ‘ಲವ್ ಜಿಹಾದ್’ ಮಾಡಲು ಬಳಸಲಾಗುತ್ತದೆ. ದೇವಸ್ಥಾನಗಳಂತೆ ಧಾರ್ಮಿಕ ಸಂಸ್ಥೆಗಳಿಗೆ ತೆರಿಗೆ ವಿಧಿಸದೆ 70 ವರ್ಷಗಳಿಂದ ಕಾಂಗ್ರೆಸ್ ಪಕ್ಷವು (Congress) ಈ  ಸಮುದಾಯಕ್ಕೆ ರಕ್ಷಣೆ ನೀಡಿದೆ ಎಂಬ ಬರಹದೊಂದಿಗೆ ಈ ವಿಡಿಯೊ ಶೇರ್ ಆಗುತ್ತಿದೆ.

‘ನೋಡಿ, ಮಸೀದಿಗಳಲ್ಲಿ ಮತ್ತು ಪೀರ್ ದರ್ಗಾಗಳಲ್ಲಿ ಎಷ್ಟು ದೇಣಿಗೆ ಹಣ ಬರುತ್ತದೆ. ಸಹಸ್ರಾರು ಹಿಂದೂಗಳು ಸಹ ಅದರಲ್ಲಿ ಕೊಡುಗೆ ನೀಡುತ್ತಾರೆ. ಮಸೀದಿ ದೇಣಿಗೆಗೆ ಸರ್ಕಾರ ತೆರಿಗೆ ವಿಧಿಸುವುದಿಲ್ಲ. ಆದರೆ, ಹಿಂದೂ ದೇವಾಲಯದ ದೇಣಿಗೆಗೆ ತೆರಿಗೆ ವಿಧಿಸಲಾಗುತ್ತದೆ.  ದೇವಸ್ಥಾನದ ಹಣದಿಂದ ಧರ್ಮಗುರುಗಳಿಗೆ ಸರ್ಕಾರ ಸಂಬಳ ಮತ್ತು ಪಿಂಚಣಿ ನೀಡುತ್ತದೆ. ಆದರೆ, ಮಸೀದಿಗೆ ನೀಡುವ ದೇಣಿಗೆಯನ್ನು ಯಾವ ರೀತಿಯ ಕಾರ್ಯಗಳಿಗೆ ಬಳಸುತ್ತಾರೆ ಎಂಬುದು ನಮಗೆಲ್ಲರಿಗೂ ಚೆನ್ನಾಗಿ ತಿಳಿದಿದೆ. ಹಿಂದುಗಳು ಕಣ್ಣು ಮುಚ್ಚಿ ಜಾತಿವಾದದಲ್ಲಿ ಬದುಕುತ್ತಿದ್ದಾರೆ. ತಡವಾಗುವ ಮೊದಲು ಈ ವಿಡಿಯೊ ನಿಮ್ಮ ಕಣ್ಣು ತೆರೆಸುವಂತೆ ಮಾಡಲಿ’ ಎಂಬ ಒಕ್ಕಣೆಯೊಂದಿಗೆ ಈ ವಿಡಿಯೊವನ್ನು ವ್ಯಾಪಕವಾಗಿ ಶೇರ್ ಮಾಡಲಾಗಿದೆ.


ಫ್ಯಾಕ್ಟ್ ಚೆಕ್

ಈ ವೈರಲ್ ವಿಡಿಯೊದ ಫ್ಯಾಕ್ಟ್ ಚೆಕ್ ಮಾಡಿದ ದಿ ಕ್ವಿಂಟ್, ವಿಡಿಯೊ ಮಸೀದಿಯದ್ದಾಗಿದ್ದರೂ ಇದು ಭಾರತದ್ದು ಅಲ್ಲ. ಇದು ಬಾಂಗ್ಲಾದೇಶದ ಕಿಶೋರ್‌ಗಂಜ್‌ನಲ್ಲಿರುವ ಪಾಗ್ಲಾ ಮಸೀದಿ (ಮಸ್ಜಿದ್). ಹಣದ ಎಣಿಕೆಗಾಗಿ ಪ್ರತಿ ಮೂರು ತಿಂಗಳಿಗೊಮ್ಮೆ ಇಲ್ಲಿನ ಕಾಣಿಕೆ ಡಬ್ಬಿ ತೆರೆಯಲಾಗುತ್ತದೆ.

ವೈರಲ್ ವಿಡಿಯೊದಲ್ಲಿ ಪ್ಲಾಸ್ಟಿಕ್ ಬ್ಯಾಗ್‌ಗಳಲ್ಲಿ ಹಣ ತುಂಬುತ್ತಿರುವುದನ್ನು ಕಾಣಬಹುದು. ಈ ಪ್ಲಾಸ್ಟಿಕ್ ಬ್ಯಾಗ್ ಮೇಲೆ ಬರೆದ ಪಠ್ಯವನ್ನು ಜೂಮ್ ಮಾಡಿ ನೋಡಿದರೆ ಅದು ಬಂಗಾಳಿಯಲ್ಲಿದೆ. ಅದನ್ನು ಇಂಗ್ಲಿಷ್‌ಗೆ ಅನುವಾದಿಸಿದಾಗ, ” In coal, Broiler and BG ಎಂದು ತೋರಿಸುತ್ತದೆ.

Google ನಲ್ಲಿ  Bangla, mosque and money- ಹೀಗೆ ಕೀವರ್ಡ್‌ಗಳಿಂದ ಹುಡುಕಿದಾಗ ಮೇ 7 ರಂದು ಪ್ರಕಟವಾದ ಡೈಲಿ ಸ್ಟಾರ್ ವರದಿ ಸಿಕ್ಕಿದೆ. ಈ ವರದಿಯಲ್ಲಿ ವೈರಲ್ ವಿಡಿಯೊದಲ್ಲಿರುವ ಅದೇ ಸ್ಥಳವಿದೆ. ಅದು ಬಾಂಗ್ಲಾದೇಶದ ಕಿಶೋರೆಗಂಜ್ ಪಾಗ್ಲಾ ಮಸೀದಿ. ಜನವರಿಯಲ್ಲಿ 7ರಂದು ಬಿಸಿನೆಸ್ ಸ್ಟ್ಯಾಂಡರ್ಡ್‌ನಲ್ಲಿ ಪ್ರಕಟವಾದ ಸುದ್ದಿಯಲ್ಲಿ ಪಾಗ್ಲಾ ಮಸೀದಿಯಲ್ಲಿ ಸಂಗ್ರಹಿಸಿದ ಹಣವನ್ನು ಎಣಿಸಲು ಪ್ರತಿ ಮೂರು ತಿಂಗಳಿಗೊಮ್ಮೆ ದೇಣಿಗೆ ಪೆಟ್ಟಿಗೆಗಳನ್ನು ತೆರೆಯಲಾಗುತ್ತದೆ ಎಂದು ಹೇಳಿದೆ. ಈ ಹಣವನ್ನು ಇತರ ಮಸೀದಿಗಳು, ಮದರಸಾಗಳ ಅಭಿವೃದ್ಧಿ ಮತ್ತು ಸಾಮಾಜಿಕ ಕಾರ್ಯಗಳಿಗೆ ಬಳಸಲಾಗುತ್ತದೆ ಎಂದು ವರದಿ ಹೇಳಿದೆ.

ದಿ ಕ್ವಿಂಟ್‌ನೊಂದಿಗೆ ಮಾತನಾಡಿದ ಬಾಂಗ್ಲಾದೇಶದ ಚಾನೆಲ್ I ನ ಸಿಬ್ಬಂದಿ ವರದಿಗಾರ್ತಿ ಹಬೀಬಾ ನಜ್ನಿನ್, ಕಿಶೋರೆಗಂಜ್‌ನ ಪಾಗ್ಲಾ ಮಸೀದಿಯಲ್ಲಿ ದೇಣಿಗೆ ಪೆಟ್ಟಿಗೆಗಳ ಎಣಿಕೆ ಪ್ರತಿ ಮೂರು ತಿಂಗಳಿಗೊಮ್ಮೆ ನಡೆಯುತ್ತದೆ ಎಂದಿದ್ದಾರೆ.

ಇದನ್ನೂ ಓದಿ: Fact Check: ಒಡಿಶಾದ ಸ್ಟೇಷನ್ ಮಾಸ್ಟರ್ ಷರೀಫ್ ತಲೆಮರೆಸಿಕೊಂಡಿದ್ದಾರೆ ಎಂಬುದು ಸುಳ್ಳು ಸುದ್ದಿ; ಅಲ್ಲಿ ಷರೀಫ್ ಎಂಬ ಸಿಬ್ಬಂದಿಯೇ ಇಲ್ಲ

ಬಾಂಗ್ಲಾದೇಶ ಸುದ್ದಿ ವಾಹಿನಿ ಸೊಮೊಯ್ ಟಿವಿ ಮೇ 6 ರಂದು ಪೋಸ್ಟ್ ಮಾಡಿದ YouTube ವಿಡಿಯೊದಲ್ಲಿ ವೈರಲ್ ವಿಡಿಯೊದಲ್ಲಿರುವ ದೃಶ್ಯಗಳನ್ನು ಕಾಣಬಹುದು. ವಿಡಿಯೊದ ಶೀರ್ಷಿಕೆಯನ್ನು ಬೆಂಗಾಲಿಯಿಂದ ಇಂಗ್ಲಿಷ್‌ಗೆ ಅನುವಾದಿಸಿದಾಗ “ಕಿಶೋರೆಗಂಜ್ ಪಾಗ್ಲಾ ಮಸೀದಿಯ ದೇಣಿಗೆ ಪೆಟ್ಟಿಗೆಯನ್ನು ಮತ್ತೆ ತೆರೆಯಲಾಗಿದೆ” ಎಂದು ಬರೆಯಲಾಗಿದೆ. ವೈರಲ್ ವಿಡಿಯೊದ ಯಾವಾಗಿನದ್ದು ಎಂಬುದು ತಿಳಿದಿಲ್ಲವಾದರೂ ವೈರಲ್ ವಿಡಿಯೊ ಭಾರತದ್ದು ಅಲ್ಲ ಎಂಬುದು ಸ್ಪಷ್ಟ.

ಮತ್ತಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:56 pm, Thu, 8 June 23