FASTag ಡೆಡ್ಲೈನ್ಗೆ ಕೆಲವೇ ದಿನ ಬಾಕಿ: ಹೊಸ FASTag ಖರೀದಿಸೋದು ಹೇಗೆ? ಇಲ್ಲಿದೆ ಉತ್ತರ
FASTag ಜಾರಿಗೆ ಬಂದ ನಂತರ, FASTag ಇಲ್ಲದ ವಾಹನಗಳಿಗೆ ಎರಡು ಪ್ರತ್ಯೇಕ ದಾರಿಗಳನ್ನು ಬಿಡಲಾಗುತ್ತಿತ್ತು. ಆದರೆ, ಫೆ.15ರಿಂದ ಈ ವ್ಯವಸ್ಥೆ ಇರುವುದಿಲ್ಲ.
ಕೊರೊನಾ ವೈರಸ್ ಕಾಣಿಸಿಕೊಂಡ ನಂತರ ಸಂಪರ್ಕರಹಿತ ಹಣ ಪಾವತಿಗೆ ಕೇಂದ್ರ ಸರ್ಕಾರ ಹೆಚ್ಚು ಆದ್ಯತೆ ನೀಡುತ್ತಿದೆ. ಈಗ ಇದನ್ನು ಟೋಲ್ ಪ್ಲಾಜಾಗಳಲ್ಲೂ ಕೇಂದ್ರ ಸರ್ಕಾರ ಕಡ್ಡಾಯ ಮಾಡಿದೆ. ಕಳೆದ ವರ್ಷ ಜಾರಿಗೆ ತಂದಿರುವ FASTag ವ್ಯವಸ್ಥೆ ಈಗ ಎಲ್ಲಾ ಟೋಲ್ಗಳಲ್ಲೂ ಕಡ್ಡಾಯ ಆಗಲಿದ್ದು, ಈ ನಿಯಮ ಫೆ.15ರಿಂದ ಜಾರಿಗೆ ಬರಲಿದೆ. ಅಂದರೆ, FASTag ಇಲ್ಲದೆ ನೀವು ಹೆದ್ದಾರಿಯಲ್ಲಿ ಸಂಚಾರ ಮಾಡುವಂತಿಲ್ಲ. FASTag ಅನ್ನು ಜಾರಿಗೆ ತಂದ ನಂತರ, FASTag ಇಲ್ಲದ ವಾಹನಗಳಿಗೆ ಎರಡು ಪ್ರತ್ಯೇಕ ದಾರಿಗಳನ್ನು ಬಿಡಲಾಗುತ್ತಿತ್ತು. ಆದರೆ, ಫೆ.15ರಿಂದ ಈ ವ್ಯವಸ್ಥೆ ಇರುವುದಿಲ್ಲ. FASTag ಇಲ್ಲದೆ ಹೋದರೆ ನೀವು ದೊಡ್ಡ ಮೊತ್ತದ ದಂಡ ಪಾವತಿಸಬೇಕಾಗುತ್ತದೆ.
FASTag ತೆಗೆದುಕೊಳ್ಳೋದು ಹೇಗೆ? FASTag ಕೊಂಡುಕೊಳ್ಳಲು ನಿಮಗೇ ಸಾಕಷ್ಟು ಆಯ್ಕೆಗಳಿವೆ. ಕೆಲ ಟೋಲ್ ಪ್ಲಾಜಾಗಳಲ್ಲೇ FASTag ನೀಡುವ ವ್ಯವಸ್ಥೆ ಇದೆ. ನಿಮ್ಮ ಗುರುತಿನ ಚೀಟಿ ಜತೆಗೆ, ವಾಹನಕ್ಕೆ ಸಂಬಂಧಿಸಿದ ದಾಖಲೆಗಳನ್ನು ನೀಡಿದರೆ FASTag ಸಿಗುತ್ತದೆ. ಇದಲ್ಲದೆ, Amazon.in ಎಚ್ಡಿಎಫ್ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೋಟಕ್ ಬ್ಯಾಂಕ್, ಆ್ಯಕ್ಸಿಸ್ ಬ್ಯಾಂಕ್ಗಳಲ್ಲಿ ನೀವು FASTag ಪಡೆದುಕೊಳ್ಳಬಹುದು. ಏರ್ಟೆಲ್ ಪೇಮೆಂಟ್ ಬ್ಯಾಂಕ್ನಲ್ಲೂ ನಿಮಗೆ ಈ ಟ್ಯಾಗ್ ಸಿಗಲಿದೆ.
FASTag ಬೆಲೆ ಎಷ್ಟು? ನಾಲ್ಕು ಚಕ್ರದ ವಾಹನ ಹಾಗೂ ನಾಲ್ಕಕ್ಕಿಂತ ಹೆಚ್ಚು ಚಕ್ರವಿರುವ ವಾಹನಗಳ FASTag ಬೆಲೆಯಲ್ಲಿ ವ್ಯತ್ಯಾಸ ಇರಲಿದೆ. Paytmನಿಂದ FASTag ಕೊಂಡುಕೊಳ್ಳುತ್ತೀರಿ ಎಂದಾದರೆ, 250 ರೂಪಾಯಿ ಭದ್ರತಾ ಠೇವಣಿ ಹಾಗೂ 150 ರೂಪಾಯಿ ಕನಿಷ್ಠ ಹಣವನ್ನು ನೀವು ಇಡಲೇಬೇಕು. ಐಸಿಐಸಿಐ ಬ್ಯಾಂಕ್ನಿಂದ FASTag ಖರೀದಿಸದರೆ 99.12 ವಿತರಣೆ ಹಣ ಹಾಗೂ 200 ರೂಪಾಯಿ ಡಿಪಾಸಿಟ್ ಹಣ ಹಾಗೂ 200 ರೂಪಾಯಿ ಕನಿಷ್ಠ ಹಣ ಇರಬೇಕು.
FASTag ರೀಚಾರ್ಜ್ ಮಾಡೋದು ಹೇಗೆ? FASTag ರೀಚಾರ್ಜ್ ಮಾಡೋಕೆ ಎರಡು ವಿಧಾನವಿದೆ. ಬ್ಯಾಂಕ್ನವರು FASTag ವ್ಯಾಲೆಟ್ ನೀಡಿರುತ್ತಾರೆ. ಅದಕ್ಕೆ ನೆಟ್ ಬ್ಯಾಂಕಿಂಗ್, ಕ್ರೆಡಿಟ್-ಡೆಬಿಟ್ ಕಾರ್ಡ್ ಅಥವಾ ಯುಪಿಐ ಮೂಲಕ ಹಣ ಪಾವತಿಸಬಹುದು. ಇನ್ನು, ಪೇಟಿಎಂ ಅಥವಾ ಫೋನ್ಪೆ ಮೂಲಕ ನೀವು ರೀಚಾರ್ಜ್ ಮಾಡಬಹುದು.
ಇದನ್ನೂ ಓದಿ: NICE FASTag: ನೈಸ್ ರಸ್ತೆಗೂ ಬಂತು ಫಾಸ್ಟ್ಯಾಗ್; ಟೋಲ್ ಕಿರಿಕಿರಿಯಿಂದ ಮುಕ್ತಿ