AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಸ್ತೆಗಿಳಿಯಲಿವೆ ಡೀಸೆಲ್ ರಹಿತ ಟ್ರ್ಯಾಕ್ಟರ್! ಮುರುಗೇಶ್ ನಿರಾಣಿ ಒಡೆತನದ ಸಂಸ್ಥೆಯಿಂದ ದೇಶದಲ್ಲೇ ಮೊದಲ CNG ಅನಿಲದ ಟ್ರ್ಯಾಕ್ಟರ್ ಉತ್ಪಾದನೆ

ಪ್ರಸ್ತುತ ಡೀಸೆಲ್ ಬೆಲೆ ಲೀಟರ್‌ಗೆ ₹ 77 ಕ್ಕೂ ಹೆಚ್ಚಿದ್ದು, ಪ್ರತಿ ಕೆಜಿ ಸಿಎನ್‌ಜಿಗೆ ₹ 42 ಮಾತ್ರ ತಗಲುತ್ತದೆ. ಹೀಗಾಗಿ, ರೈತರು ವಾರ್ಷಿಕ ₹ 1.5 ಲಕ್ಷಕ್ಕಿಂತ ಹೆಚ್ಚು ಇಂಧನ ವೆಚ್ಚ ಉಳಿಸಬಹುದು ಎಂದು ಸಂಸ್ಥೆ ತಿಳಿಸಿದೆ.

ರಸ್ತೆಗಿಳಿಯಲಿವೆ ಡೀಸೆಲ್ ರಹಿತ ಟ್ರ್ಯಾಕ್ಟರ್!  ಮುರುಗೇಶ್ ನಿರಾಣಿ ಒಡೆತನದ ಸಂಸ್ಥೆಯಿಂದ ದೇಶದಲ್ಲೇ ಮೊದಲ CNG ಅನಿಲದ ಟ್ರ್ಯಾಕ್ಟರ್ ಉತ್ಪಾದನೆ
guruganesh bhat
|

Updated on:Feb 13, 2021 | 4:22 PM

Share

ಬೆಂಗಳೂರು: ದೇಶದಲ್ಲಿ ಮೊದಲ ಬಾರಿಗೆ ಸಂಕುಚಿತಗೊಂಡ ನೈಸರ್ಗಿಕ ಅನಿಲ (ಸಿಎನ್‌ಜಿ) ಆಧಾರಿತ ಟ್ರಾಕ್ಟರ್ ಅನ್ನು ಸಚಿವ ಮುರುಗೇಶ್ ನಿರಾಣಿ ನೇತೃತ್ವದ ಎಂಆರ್​ಎನ್ ಸಮೂಹ ಸಂಸ್ಥೆ ದೆಹಲಿಯಲ್ಲಿ ಬಿಡುಗಡೆಗೊಳಿಸಿದೆ. ಮೊದಲ ಹಂತದಲ್ಲಿ 500 ಡೀಸೆಲ್ ಟ್ರಾಕ್ಟರ್​ಗಳನ್ನು ಸಿಎನ್‍ಜಿ ಎಂಜಿನ್ ಟ್ರಾಕ್ಟರ್​ಗಳಾಗಿ ಪರಿವರ್ತಿಸಿ, 2023ರ ವೇಳೆಗೆ 1,500 ಟ್ರಾಕ್ಟರ್​ಗಳನ್ನು ಸಿಎನ್‍ಜಿ ಟ್ರಾಕ್ಟರ್​ಗಳಾಗಿ ಪರಿವರ್ತಿಸುವ ಗುರಿ ಹೊಂದಿದೆ.

ಕೇಂದ್ರ ರಸ್ತೆ ಸಾರಿಗೆ ಮತ್ತು ಭೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹಾಗೂ ಎಂಆರ್​ಎನ್ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿಜಯ್ ನಿರಾಣಿ ಶುಕ್ರವಾರ ಮೊದಲ ಸಿಎನ್​ಜಿ ಟ್ರ್ಯಾಕ್ಟರ್ ಅನ್ನು ಲೋಕಾರ್ಪಣೆಗೊಳಿಸಿದ್ದಾರೆ. ರಾಮ್ಯಾಟ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್‍ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿರುವ ಎಂಆರ್​ಎನ್ ಸಂಸ್ಥೆ ತಯಾರಿಸುವ ಸಿಎನ್‍ಜಿ ಟ್ರ್ಯಾಕ್ಟರ್​ ಎಂಜಿನ್ 10 ರಿಂದ 15 ವರ್ಷಗಳಷ್ಟು ಬಾಳಿಕೆ ಬರಲಿವೆ ಎಂದು ತಿಳಿಸಿದೆ. ಸದ್ಯದಲ್ಲೇ ಸಿಎನ್‍ಜಿ ವಿತರಣಾ ಕೇಂದ್ರಗಳನ್ನು ಸ್ಥಾಪಿಸಲಿದ್ದು, ಎಂಜಿನ್ ಪರಿವರ್ತನೆ ಮತ್ತು ಸಿಎನ್‍ಜಿ ಅನಿಲ ಕೇಂದ್ರವನ್ನು ಬಾಗಲಕೋಟೆ ಜಿಲ್ಲೆಯಲ್ಲಿ ಸ್ಥಾಪಿಸಲು ನಿರ್ಧರಿಸಲಾಗಿದೆ.

ರೈತರಿಗೆ ಹೇಗೆ ಅನುಕೂಲ? ಈ ತಂತ್ರಜ್ಞಾನದ ಮೂಲಕ ರೈತರು ತಮ್ಮ ಡೀಸೆಲ್ ಟ್ರಾಕ್ಟರ್​ಗಳನ್ನು ಸಿಎನ್‍ಜಿ ಟ್ರಾಕ್ಟರ್​ಗಳನ್ನಾಗಿ ಪರಿವರ್ತಿಸಿ ವಾರ್ಷಿಕ ₹ 1.5 ಲಕ್ಷಕ್ಕಿಂತ ಹೆಚ್ಚು ಇಂಧನ ವೆಚ್ಚ ಉಳಿಸಬಹುದು. ಪ್ರಸ್ತುತ ಡೀಸೆಲ್ ಬೆಲೆ ಲೀಟರ್‌ಗೆ ₹ 77 ಕ್ಕೂ ಹೆಚ್ಚಿದ್ದು, ಪ್ರತಿ ಕೆಜಿ ಸಿಎನ್‌ಜಿ ಬೆಲೆ ₹ 42 ಮಾತ್ರ ಇರುವುದರಿಂದ ಹಣ ಉಳಿತಾಯಕ್ಕೆ ದಾರಿಯಾಗಲಿದೆ. ಟ್ರ್ಯಾಕ್ಟರ್​ಗಳ ದಕ್ಷತೆಯನ್ನು ಹೆಚ್ಚಿಸಲು ಸಹ ಇದು ಅನುಕೂಲಕರವಾಗಿದ್ದು, ವಾಯು ಮಾಲಿನ್ಯ ನಿಯಂತ್ರಣಕ್ಕೂ ಸಹಕಾರಿಯಾಗಿದೆ. ಅಲ್ಲದೇ, ಡೀಸೆಲ್ ಎಂಜಿನ್‌ಗೆ ಹೋಲಿಸಿದರೆ ಸಿಎನ್​ಜಿ ಇಂಜಿನ್ ಹೆಚ್ಚು ಶಕ್ತಿ ಉತ್ಪಾದಿಸುತ್ತದೆ.

MURUGESH NIRANI CNG TRACTOR

ತಮ್ಮ ಸಂಸ್ಥೆ ಉತ್ಪಾದಿಸಿದ ದೇಶದ ಮೊದಲ ಸಿಎನ್​ಜಿ ಟ್ರ್ಯಾಕ್ಟರ್ ಮೇಲೆ ಕುಳಿತ ಸಚಿವ ಮುರುಗೇಶ್ ನಿರಾಣಿ

ಉಳಿತಾಯವಾಗಲಿದೆ 1 ಟ್ರಿಲಿಯನ್ ಮೊತ್ತದ ಇಂಧನ! ಸಿಎನ್‌ಜಿ ಶುದ್ಧ ಇಂಧನವಾಗಿದ್ದು, ಇಂಗಾಲ ಮತ್ತು ಇತರ ಮಾಲಿನ್ಯಕಾರಕಗಳ ಕಡಿಮೆ ಅಂಶವನ್ನು ಹೊಂದಿದೆ. ಇದು ಶೂನ್ಯ ಸೀಸವನ್ನು ಹೊಂದಿದ್ದು, ಎಂಜಿನ್‌ನ ಜೀವಿತಾವಧಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಸಿಎನ್​ಜಿ ಇಂಧನದಿಂದ 1 ಟ್ರಿಲಿಯನ್ ಮೊತ್ತದ ತೈಲ ಉಳಿತಾಯವಾಗಲಿದ್ದು, ಸರಳವಾಗಿ ನಿರ್ವಹಣೆಯನ್ನೂ ಮಾಡಬಹುದಾಗಿದೆ. ಸಿಎನ್‌ಜಿ ಟ್ಯಾಂಕ್‌ಗಳು ಬಿಗಿಯಾದ ಮುದ್ರೆ ಹೊಂದಿದ್ದು, ಇಂಧನ ತುಂಬುವಾಗ ಅಥವಾ ಸೋರಿಕೆಯಾದಾಗ ಸ್ಫೋಟದ ಸಾಧ್ಯತೆಯನ್ನು ಕಡಿಮೆ ಮಾಡಲಿದೆ ಎಂದು ಸಂಸ್ಥೆ ತಿಳಿಸಿದೆ.

ಆತ್ಮನಿರ್ಭರ ಭಾರತ ಯೋಜನೆಯಡಿ ಈ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಎಂಆರ್​ಎನ್ ಸಂಸ್ಥೆ ತಿಳಿಸಿದ್ದು, ಕೇಂದ್ರ ಭೂ ಸಾರಿಗೆ ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್, ಕೇಂದ್ರ ಕೃಷಿ ರಾಜ್ಯ ಸಚಿವ ಪರಶೋತ್ತಮ್ ರೂಪಾಲ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ರಾಜ್ಯ ಸಚಿವ ಜನರಲ್ ವಿ.ಕೆ.ಸಿಂಗ್, ಕರ್ನಾಟಕದ ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ಆರ್ ನಿರಾಣಿ ಮತ್ತು ಎಂಆರ್‌ಎನ್ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿಜಯ್ ನಿರಾಣಿ ಸೇರಿದಂತೆ ಮತ್ತಿತರರು ಲೋಕಾರ್ಪಣೆ ಸಮಾರಂಭದಲ್ಲಿ ಉಪಸ್ಥಿತರಿದ್ದರು.

MURUGESH NIRANI NTHIN GADKARI CNG TRACTOR

ಆತ್ಮನಿರ್ಭರ ಭಾರತ ಯೋಜನೆಯಡಿ ಈ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಎಂಆರ್​ಎನ್ ಸಂಸ್ಥೆ ತಿಳಿಸಿದೆ.

ಇದನ್ನೂ ಓದಿ:7 ವರ್ಷಗಳ ಹಿಂದೆ ತೀವ್ರ ನಷ್ಟದ ಸುಳಿಗೆ ಸಿಲುಕಿದ್ದ ಬ್ಯಾಂಕ್​ ಇಂದು ದೇಶದಲ್ಲೇ ನಂಬರ್​ ಒನ್ !

Published On - 4:12 pm, Sat, 13 February 21