ಹಾವು ಹರಿದಾಡಲು ಮೇಲುಸೇತುವೆ: ಉತ್ತರಾಖಂಡ ಅರಣ್ಯಾಧಿಕಾರಿ ಕ್ರಿಯೆಟಿವ್ ಚಿಂತನೆ
ಹುಲಿ, ಚಿರತೆ, ಆನೆ, ಸರಿಸೃಪಗಳಿರುವ ಕಾಡಿಗೆ ಈಚೆಗೆ ಘೇಂಡಾಮೃಗಗಳನ್ನು ಬಿಡಲಾಗಿತ್ತು. 520 ಚಕಿಮೀ ಇರುವ ಈ ರಾಷ್ಟ್ರೀಯ ಉದ್ಯಾನದಲ್ಲಿ ಜೀವವೈವಿಧ್ಯ ಹೇರಳವಾಗಿದೆ.
ಡೆಹ್ರಾಡೂನ್: ರಸ್ತೆಗಳಲ್ಲಿ ಜನರ ಸಂಚಾರ ಸುಲಭಗೊಳಿಸಲು ಮೇಲುಸೇತುವೆ (ಫುಟ್ಓವರ್ ಬ್ರಿಡ್ಜ್) ನಿರ್ಮಾಣ ಸಾಮಾನ್ಯ. ಉತ್ತರಾಖಂಡದ ಈ ಕಾಡಿನಲ್ಲಿ ಹಾವುಗಳು ಮತ್ತು ಇತರ ಸರಿಸೃಪಗಳ ಸುಗಮ ಸಂಚಾರಕ್ಕಾಗಿ ಮೇಲುಸೇತುವೆ ನಿರ್ಮಿಸಲಾಗಿದೆ.
ವಿಶ್ವಪ್ರಸಿದ್ಧ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದಲ್ಲಿ ಹಾದುಹೋಗುವ ಕಾಲಂಧುಂಗಿ-ನೈನಿತಾಲ್ (ರಾಹೆ ಸಂಖ್ಯೆ 109) ಹೆದ್ದಾರಿಯಲ್ಲಿ ರಸ್ತೆ ದಾಟುವಾಗ ವಾಹನಗಳ ಚಕ್ರಗಳಿಗೆ ಸಿಲುಕಿ ಹಾವುಗಳು ಸಾವನ್ನಪ್ಪುತ್ತಿದ್ದವು. ಇದನ್ನು ತಪ್ಪಿಸಲೆಂದು ಸರಿಸೃಪಗಳು ಮತ್ತು ಇತರ ಸಣ್ಣ ಪ್ರಾಣಿಗಳ ಒಡಾಟಕ್ಕಾಗಿ ಪರಿಸರ ಸ್ನೇಹಿ ಮೇಲುಸೇತುವೆಯನ್ನು ನಿರ್ಮಾಣ ಮಾಡಲಾಗಿದೆ.
ಹುಲಿ, ಚಿರತೆ, ಆನೆ, ಸರಿಸೃಪಗಳಿರುವ ಕಾಡಿಗೆ ಈಚೆಗೆ ಘೇಂಡಾಮೃಗಗಳನ್ನು ಬಿಡಲಾಗಿತ್ತು. 520 ಚಕಿಮೀ ಇರುವ ಈ ರಾಷ್ಟ್ರೀಯ ಉದ್ಯಾನದಲ್ಲಿ ಜೀವವೈವಿಧ್ಯ ಹೇರಳವಾಗಿದೆ.
ಕಾಡಿನೊಳಗೆ ಹಾದು ಹೋಗಿರುವ ಹೆದ್ದಾರಿಯ ಅಕ್ಕಪಕ್ಕದಲ್ಲಿಯೇ ದಟ್ಟ ಕಾಡುಗಳಿವೆ. ಪ್ರಾಣಿಗಳ ನಿಯಮಿತ ಓಡಾಟ ಸ್ಥಳದಲ್ಲಿ ರಸ್ತೆ ಬಂದ ಕಾರಣ ಅವುಗಳ ನಿತ್ಯದ ಬದುಕಿಗೂ ತೊಂದರೆಯಾಗಿತ್ತು. ವಾಹನಗಳಿಗೆ ಸಿಕ್ಕಿ ಅನೇಕ ಪ್ರಾಣಿಗಳು ಸಾವನ್ನಪ್ಪಿದ್ದವು. ಸದ್ಯ ಇದನ್ನು ತಡೆಯುವ ನಿಟ್ಟಿನಲ್ಲಿ ಒಂದು ಮಹತ್ವ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಸ್ಥಳೀಯ ಗುತ್ತಿಗೆದಾರರು ಸರಿಸೃಪಗಳ ರಕ್ಷಣೆ ಮಾಡುವ ನಿಟ್ಟಿನಲ್ಲಿ ಕೈ ಜೋಡಿಸಿದ್ದು, 10 ದಿನಗಳ ಅವಧಿಯಲ್ಲಿ 5 ಅಡಿ ಅಗಲ, 40 ಅಡಿ ಎತ್ತರ ಮತ್ತು 90 ಅಡಿ ಉದ್ದದ ಮೇಲುಸೇತುವೆಯನ್ನು ನಿರ್ಮಿಸಿದ್ದಾರೆ. ಈ ಸೇತುವೆಯ ನಿರ್ಮಾಣಕ್ಕೆ ₹ 2 ಲಕ್ಷ ರೂ ಖರ್ಚು ಮಾಡಲಾಗಿದ್ದು, ಬಿದಿರು, ಸೆಣಬು ಮತ್ತು ಹುಲ್ಲನ್ನು ಬಳಸಿ ನಿರ್ಮಿಸಲಾಗಿದ್ದು, ಪ್ರಾಣಿಗಳ ಚಲನವಲನವನ್ನು ಗಮನಿಸಲು ಸೇತುವೆಯ ಎರಡೂ ಬದಿಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ರಾಮನಗರ ವಿಭಾಗೀಯ ಅರಣ್ಯ ಅಧಿಕಾರಿ (ಡಿಎಫ್ಒ) ಚಂದ್ರಶೇಖರ್ ಜೋಶಿ ತಿಳಿಸಿದ್ದಾರೆ.
ದೊಡ್ಡ ಪ್ರಾಣಿಗಳಾದರೆ ದೂರದಿಂದಲೇ ನೋಡಿ ವಾಹನವನ್ನು ನಿಲ್ಲಿಸಬಹುದು ಆದರೆ ಸರಿಸೃಪದಂತಹ ಸಣ್ಣ ಪ್ರಾಣಿಗಳನ್ನು ಸಂಚಾರದ ವೇಳೆ ಗಮನಿಸುವುದು ಕಷ್ಟ ಈ ನಿಟ್ಟಿನಲ್ಲಿ ಅವುಗಳ ರಕ್ಷಣೆಗೆ ಮೇಲುಸೇತುವೆ ಹೆಚ್ಚು ಪೂರಕವಾಗಿದೆ ಎಂದು ಜೋಶಿ ಹೇಳಿದ್ದಾರೆ.
ಜಿಮ್ ಕಾರ್ಬೆಡ್ ಉದ್ಯಾನದಲ್ಲಿ ನಾಗರಹಾವು, ಹೆಬ್ಬಾವು, ಕೊಳಕುಮಂಡಲ, ಹಸಿರುಹಾವು ಸೇರಿದಂತೆ ಹಲವು ಬಗೆಯ ಹಾವುಗಳು ಗಮನಾರ್ಹ ಸಂಖ್ಯೆಯಲ್ಲಿವೆ.
ಪ್ರಾಣಿಗಳು ಸುಗಮವಾಗಿ ರಸ್ತೆ ದಾಟಲು ಅನುಕೂಲವಾಗುವಂತೆ ಅಮೆರಿಕ, ಕೀನ್ಯಾ, ಸಿಂಗಾಪುರ ಸೇರಿದಂತೆ ಹಲವು ದೇಶಗಳಲ್ಲೂ ಮೇಲುಸೇತುವೆ ನಿರ್ಮಾಣ ಮಾಡಲಾಗಿದೆ.
ಇದನ್ನೂ ಓದಿ: ಆಹಾರ ಅರಸಿ ಮನೆಯೊಳಗೆ ಬಂದ ಚಿರತೆ ಮಾಡಿದ್ದೇನು ಗೊತ್ತಾ?
Published On - 12:22 pm, Tue, 1 December 20