Inside Story ದೆಹಲಿ ಚಲೋ ರೈತ ಚಳವಳಿಯ ಪರ-ವಿರೋಧ ಚರ್ಚೆಯ ತಿರುಳೇನು?

ಜಾಗತೀಕರಣದ ನಂತರ ಪಂಜಾಬ್ ನಲ್ಲಿ ಅತಿ ಹೆಚ್ಚು ಆಡಿ, ಬೆಂಜ್ ಕಾರುಗಳು ಮಾರಾಟವಾಗಿವೆ. ಇಲ್ಲಿಂದ ಕೆನಡಾ, ಅಮೆರಿಕಾಕ್ಕೆ ವಿದ್ಯಾಭ್ಯಾಸಕ್ಕೆ ತಮ್ಮ ಮಕ್ಕಳನ್ನು ಕಳಿಸುವವರ ಸಂಖ್ಯೆಯೂ ಹೆಚ್ಚಾಗಿದೆ.

Inside Story ದೆಹಲಿ ಚಲೋ ರೈತ ಚಳವಳಿಯ ಪರ-ವಿರೋಧ ಚರ್ಚೆಯ ತಿರುಳೇನು?
ಸಂಗ್ರಹ ಚಿತ್ರ
Follow us
|

Updated on:Dec 12, 2020 | 5:33 PM

ಭಾರತದ ಒಟ್ಟು ಭೂಪ್ರದೇಶದಲ್ಲಿ ಶೇ. 1.47 ರಷ್ಟನ್ನು ಮಾತ್ರ ಹೊಂದಿರುವ ಪಂಜಾಬ್  ರಾಜ್ಯವು ದೇಶದ 47 ಪ್ರತಿಶತಃ ಗೋಧಿಯನ್ನು, 27 ಪ್ರತಿಶತಃ ಅಕ್ಕಿಯನ್ನೂ ಉತ್ಪಾದಿಸುತ್ತದೆ. ಅಲ್ಲಿನ ರೈತರು ಕಳೆದ 16 ದಿನಗಳಿಂದ ನಡೆಸುತ್ತಿರುವ ಪ್ರತಿಭಟನೆ ರಾಷ್ಟ್ರ ರಾಜಧಾನಿಯ ಬಾಗಿಲು-ಕಿಟಕಿಗಳನ್ನೇ ಮುಚ್ಚಿದೆ. ಇದೆಲ್ಲ ಹೇಗೆ ಸಾಧ್ಯ ಎಂದು ಕೆದಕುತ್ತ ಹೋದರೆ ಪರ ವಿರೋಧದ ಚರ್ಚೆಗಳು ಮುನ್ನೆಲೆಗೆ ಬರುತ್ತವೆ.

2013ರ ವರದಿಯೊಂದರ ಪ್ರಕಾರ ಓರ್ವ ಪಂಜಾಬ್ ರೈತನ ವಾರ್ಷಿಕ ಆದಾಯ 2,16, 708 ರೂಪಾಯಿ. ಇದು ಇತರ ಎಲ್ಲ ರಾಜ್ಯಗಳ ರೈತರಿಗಿಂತಲೂ ಹೆಚ್ಚು. 7 ವರ್ಷಗಳ ತರುವಾಯ ಈ ಸಂಖ್ಯೆಯಲ್ಲಿ ವ್ಯತ್ಯಯ ಆಗಿದ್ದರೂ ಪಂಜಾಬ್ ರೈತರೇ ಮೊದಲ ಸ್ಥಾನವನ್ನು ಭದ್ರವಾಗಿ ಕಾಪಿಟ್ಟುಕೊಂಡಿದ್ದಾರೆ.  ಬ್ಯುಸಿನೆಸ್ ಟುಡೇ ವಾಣಿಜ್ಯ ಪತ್ರಿಕೆ ಪ್ರಕಟಿಸಿರುವ ಈ ಅಂಕಿ-ಅಂಶವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಂಚಿಕೊಂಡಿದ್ದಾರೆ. ಅತಿ ಕಡಿಮೆ ಆದಾಯ ಹೊಂದಿರುವ ಬಿಹಾರ ರೈತರ ವರಮಾನ 42,684 ರೂ ಮಾತ್ರ.

ಏಕೆ ಈ ಪ್ರತಿಭಟನೆ? ಕೇಂದ್ರ ಏಕೆ ರೈತರ ವಾದಕ್ಕೆ ಮಣೆ ಹಾಕುತ್ತಿಲ್ಲ? ಅಥವಾ ಸರ್ಕಾರ ಹಾಕಿದ ಮಣೆಯ ಮೇಲೆ ಕೂರಲು ಪಂಜಾಬಿ ರೈತರು ಏಕೆ ಒಪ್ಪುತ್ತಿಲ್ಲ? ಎಂಬ ಪ್ರಶ್ನೆಗೆ ಉತ್ತರ ಹಲವರಿಗೆ ಸ್ಪಷ್ಟವಾಗಿಲ್ಲ.

ಟೆಂಟ್​ಗಳಲ್ಲಿ ವಾಸ್ತವ್ಯ ಹೂಡಿರುವ ರೈತರು

ಅತಿ ಸರಳವಾಗಿ ಹೇಳಬೇಕೆಂದರೆ, ನೂತನ ಕೃಷಿ ಕಾಯ್ದೆಗಳು  ಈ ಆದಾಯವನ್ನು ತಗ್ಗಿಸುತ್ತವೆ ಎಂಬುದು ಪಂಜಾಬ್ ರೈತರ ವಾದ. ಅದೇ ಉಸುರಿನಲ್ಲಿ ರೈತರ ಆದಾಯ ಹೆಚ್ಚಿಸುತ್ತವೆ ಎಂದು ಕೇಂದ್ರ ಸರ್ಕಾರವೂ ತನ್ನನ್ನು ಸಮರ್ಥಿಸಿಕೊಳ್ಳುತ್ತಿದೆ. ಎರಡೂ ಕಡೆಯ ವಾದಗಳು ಸೃಷ್ಟಿ ಹಾಕಿರುವ ವಿವಾದವೇ ಅರ್ಧ ತಿಂಗಳಿಂದ ದೇಶದಲ್ಲಿ ಪ್ರತಿಭಟನೆಗಳು ಭುಗಿಲೇಳಲು ಕಾರಣವಾಗಿದೆ. ಹೊಸ ಕಾಯ್ದೆಗಳಿಂದ APMC ವ್ಯವಸ್ಥೆ ಮತ್ತು ಕನಿಷ್ಟ ಬೆಂಬಲ ಬೆಲೆಗಳಲ್ಲಿ ( MSP ) ಆಗಬಹುದಾದ ಬದಲಾವಣೆಗಳು ಈ ಇಡೀ ಪ್ರತಿಭಟನೆಯ ಮೂಲವಾಗಿದೆ.

ರೈತರ ವಾದವೇನು? ಹೊಸ ಕೃಷಿ ಕಾಯ್ದೆಗಳು ಎಲ್ಲ ರಾಜ್ಯಗಳ ರೈತರ ಆದಾಯವನ್ನೂ ಬಿಹಾರದ ರೈತರ ಆದಾಯದ ಮಟ್ಟಕ್ಕಿಳಿಸುತ್ತವೆ. APMC ಹೊರತುಪಡಿಸಿ,  ಇತರರೂ ಕೃಷಿ ಉತ್ಪನ್ನ ಕೊಳ್ಳಬಹುದಾದ ಅವಕಾಶವು ನಮ್ಮನ್ನು ಲೂಟಿ ಮಾಡುತ್ತದೆ. ಈಗ ಸಿಗುವ ಕನಿಷ್ಠ ಬೆಂಬಲ ಬೆಲೆಯೂ ಸಿಗದು. ಕೃಷಿ ಭೂಮಿ ಕಾರ್ಪೊರೇಟ್ ಕಂಪನಿಗಳ ಪಾಲಾಗುವ ಅಪಾಯವಿದೆ ಎಂಬುದು ದೆಹಲಿ ಚಲೋದವರ ವಾದ.

ಪಂಜಾಬಿನ ಕೃಷಿ ವ್ಯವಸ್ಥೆಯಲ್ಲಿ ಆರ್ಥಿಕವಾಗಿ ಬಲಿಷ್ಠ ರೈತ, ಕನಿಷ್ಠ ಆದಾಯದ ರೈತ ಮತ್ತು ಈಗಲೂ ಕಷ್ಟದಲ್ಲೇ ಇರುವ ಕೃಷಿ ಕೂಲಿಗಳು ಎಂಬ ಮೂರು ವರ್ಗಗಳಿವೆ. ಪ್ರತಿಭಟನೆಯ ಹಿಂದೆ  ಈ ಬಲಿಷ್ಠ ರೈತರ ಕೈಯಿದೆ ಎಂಬ ಮಾತೂ ಕೇಳಿಬಂದಿದೆ.

ಎಂ.ಎಸ್. ಶ್ರೀರಾಮ್ ಸಂದರ್ಶನ| ಕೃಷಿ ಕಾಯ್ದೆಗಳ ಉಪಯುಕ್ತತೆ ಬಗ್ಗೆ ದೊಡ್ಡ ಪ್ರಶ್ನಾರ್ಥಕ ಚಿಹ್ನೆ ಇದೆ

ಭಾರತದಲ್ಲಿ APMCಯ ಮೂಲ.. ಸುಮಾರು 150 ವರ್ಷಗಳ ಹಿಂದೆ, ಕೈಗಾರಿಕೀಕರಣದ ಏರುಗಾಲ. ಬ್ರಿಟಿಷರ ಬಟ್ಟೆ ಕಾರ್ಖಾನೆಗಳಿಗೆ ಹತ್ತಿಯ ಅಗತ್ಯತೆ ತಲೆದೋರಿತು. ಆಗ ಭಾರತದ ರೈತರು ಬೆಳೆದ ಹತ್ತಿಯನ್ನು ಕೆಲ ನಿರ್ದಿಷ್ಟ ಬ್ರಿಟಿಷ್ ವ್ಯಾಪಾರಿ, ಕಂಪನಿಗಳಿಗೇ ಮಾರಬೇಕು ಎಂಬ ನಿಯಮ ಜಾರಿಗೊಳಿಸಲಾಯಿತು. ಆಗಲೇ, ಭಾರತದ ಸಾಂಪ್ರದಾಯಿಕ ಬಟ್ಟೆ ಉದ್ಯಮ ನೆಲಕಚ್ಚಿದ್ದು. “ಕನಿಷ್ಠ ಬೆಂಬಲ ಬೆಲೆ” (MSP) ನೀಡುವ ಮೂಲಕ ಖರೀದಿಸುವ ನೀತಿ ರೂಪಿಸಲಾಯಿತು. ಇದು ಮುಂದೆ APMC ವ್ಯವಸ್ಥೆಗೆ ನಾಂದಿ ಹಾಡಿತು. ಸದ್ಯ ಭಾರತದಲ್ಲಿ 22 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಸೌಲಭ್ಯವಿದೆ.

ಹೊಸ APMC ಕಾಯ್ದೆ ಇಂಥವರಿಗೇ ಮಾರಬೇಕು ಎಂಬ ನಿಯಮವನ್ನು ಸಡಿಲಿಸಲಿದೆ. APMC ಯ ಹೊರಗೂ‌ ಕೃಷಿ ಉತ್ಪನ್ನ ಮಾರುವುದಕ್ಕೆ-ಕೊಳ್ಳುವುದಕ್ಕೆ ಅನುವು ಮಾಡಲಿದೆ.

ಇಲ್ಲಿ, ‘ತಮ್ಮ ಬೆಳೆಗೆ ದೊರಕುವ ಕನಿಷ್ಠ ಬೆಲೆಯೂ ಸಿಗದಿದ್ದರೆ..’ ಎಂಬ ಆತಂಕ ಪಂಜಾಬ್ ರೈತರದ್ದು. ಭವಿಷ್ಯದ ಭದ್ರತೆಯ ದೃಷ್ಟಿಯಿಂದ ಈ ಅಳಲು ಸರಿ. ಖಾಸಗಿ ವ್ಯಕ್ತಿಗಳು, ಕಾರ್ಪೊರೇಟ್ ಸಂಸ್ಥೆಗಳು ಬೆಳೆ ಕೊಂಡು ಮೋಸ ಮಾಡುವ ಸಾಧ್ಯತೆಯಿದೆ‌ ಎಂಬುದು ರೈತರ ಕೂಗು. ಇತ್ತ, APMCಯ ಕಟ್ಟುಪಾಡುಗಳಿಂದ ರೈತರಿಗೆ ಸ್ವಾತಂತ್ರ್ಯ ಲಭಿಸುತ್ತದೆ. ಯಾರಿಗೆ ಬೇಕಾದರೂ ಮಾರುವುದರಿಂದ ಬೆಳೆಗೆ ಹೆಚ್ಚು ದರ ಸಿಗುತ್ತದೆ ಎಂಬ ಮಾತು ಸರ್ಕಾರದ್ದು.

ದೆಹಲಿ ಚಲೋದ ಹಿಂದೆ APMC ದಲ್ಲಾಳಿಗಳ ಕೈವಾಡದ ವಾಸನೆಯೂ ನಿಧಾನವಾಗಿ ಹೊರಬರಲಾರಂಭಿಸಿದೆ. ಈವರೆಗೆ ತಮಗೆ ಲಭಿಸುತ್ತಿದ್ದ ವರಮಾನ ಕಳೆದುಕೊಳ್ಳುವ ಹತಾಶೆಯಲ್ಲಿ ದಲ್ಲಾಳಿಗಳು ರೈತರನ್ನು ಎತ್ತಿಕಟ್ಟಿದ್ದಾರೆ ಎಂದೂ ಹೇಳಲಾಗುತ್ತಿದೆ.

ಫುಡ್ ಕಾರ್ಪೊರೇಶನ್ ಆಫ್ ಇಂಡಿಯಾ (FCI) ಕನಿಷ್ಠ ಬೆಂಬಲ ಬೆಲೆ ನೀಡಿ ಬೃಹತ್ ಪ್ರಮಾಣದಲ್ಲಿ ಅಕ್ಕಿ, ಗೋಧಿ ಮುಂತಾದ ಆಹಾರ ವಸ್ತುಗಳನ್ನು ಖರೀದಿಸುತ್ತದೆ. ರೇಷನ್ ಅಂಗಡಿಗಳಲ್ಲಿ ಬಡ ಜನರಿಗಾಗಿ ಅತಿ ಕಡಿಮೆ ಬೆಲೆಗೆ ವಿತರಿಸುತ್ತದೆ. ಹಸಿರು ಕ್ರಾಂತಿಯ ತರುವಾಯ FCI ಗೆ ಪಂಜಾಬ್ ನ ಆಹಾರ ಧಾನ್ಯಗಳ ಪೂರೈಕೆ ಅಧಿಕ. MSP ಅಥವಾ ಕನಿಷ್ಠ ಬೆಂಬಲ‌ ಬೆಲೆಗೆ ಮಾರುವ ರೈತರು ಪಂಜಾಬ್ ನ ಬೃಹತ್ ರೈತರೇ ಆಗಿದ್ದಾರೆ.

Explainer | ಕನಿಷ್ಠ ಬೆಂಬಲ ಬೆಲೆ MSP ಎಂದರೇನು? ಪಂಜಾಬ್ ರೈತರಿಗೇಕೆ ಕೃಷಿ ಕಾಯ್ದೆಗಳ ಬಗ್ಗೆ ಇಷ್ಟು ಆತಂಕ?

ಸರ್ಕಾರದ ಕನಿಷ್ಟ ಬೆಂಬಲ ಬೆಲೆ ರೈತರನ್ನು ತಲುಪಲು ತಿಂಗಳುಗಳೇ ಬೇಕು. ಅಷ್ಟು ದಿನ ಕಾಯುವ ಶಕ್ತಿ ಸಣ್ಣ ರೈತರ ಬಳಿ ಸಹಜವಾಗಿ ಇರದು. ಹೀಗಾಗಿಯೇ, ಬೃಹತ್ ಹಿಡುವಳಿದಾರರ ಕೈಯಲ್ಲಿ ಬೆಂಬಲ‌ ಬೆಲೆ ಭದ್ರವಾಗಿದೆ. ಬೆಳೆಯ ಕೊಯ್ಲು ಮುಗಿಸಿದ ಕಾರಣಕ್ಕೇ ಇನ್ನೂ ತಿಂಗಳು ಬೇಕಾದರೂ ಪ್ರತಿಭಟನೆ ಮಾಡಲು ಸಿದ್ಧ ಎಂದು ದೆಹಲಿ ಚಲೋದಲ್ಲಿ ಪಾಲ್ಗೊಂಡವರು ಹೇಳುತ್ತಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ದೆಹಲಿ ಸುತ್ತಮುತ್ತ ಕೃಷಿ ತ್ಯಾಜ್ಯಕ್ಕೆ ಬೆಂಕಿ ಹಾಕಿದ ಸುದ್ದಿಗಳನ್ನು ಓದಿದ್ದೇವಲ್ಲವೇ.. ತಮ್ಮ ಹಿಡಿತದಿಂದ MSP ಕೈ ತಪ್ಪುವ ಕಾರಣ ಈ ಪ್ರತಿಭಟನೆಯ ಹಿಂದಿರುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸುತ್ತಾರೆ ಓರ್ವ ಕೃಷಿ ಆರ್ಥಿಕ ತಜ್ಞರು.

ಬಿಹಾರದಲ್ಲಿ APMC ಗಳೇ ಇಲ್ಲ! ರೈತರ ಬೆಳೆಗೆ ಹೆಚ್ಚಿನ‌ ಬೆಲೆ ಒದಗಿಸುವ ನೆಪದಲ್ಲಿ ಬಿಹಾರ 2006 ರಲ್ಲೇ APMC ಗಳನ್ನು ರದ್ದುಪಡಿಸಿತು. ಆದರೆ ಆದದ್ದೇ ಬೇರೆ. ಅತಿ ಹೆಚ್ಚು ಮೆಕ್ಕೆಜೋಳ, ಹಣ್ಣು, ತರಕಾರಿಗಳನ್ನು ಉತ್ಪಾದಿಸುವ ಬಿಹಾರದ ರೈತನ ಆದಾಯ ದೇಶದಲ್ಲೇ ಕಡಿಮೆ.‌ ಮೆಕ್ಕೆಜೋಳಕ್ಕೆ ಪ್ರತಿ ಕ್ವಿಂಟಲ್ಲಿಗೆ  1850 ಕನಿಷ್ಟ ಬೆಂಬಲ ಬೆಲೆ ನಿಗದಿಯಾಗಿದ್ದರೆ, ಬಿಹಾರ ರೈತನಿಗೆ ಸಿಗುತ್ತಿರುವುದು ಗರಿಷ್ಠ 1300 ಮಾತ್ರ. ಕೃಷಿ ಉತ್ಪನ್ನ ಮಾರಾಟದ ಖಾಸಗೀಕರಣದ ದುಷ್ಪರಿಣಾಮವನ್ನು ಬಿಹಾರದ ರೈತರು ಎದುರಿಸುತ್ತಿದ್ದಾರೆ. ತಮಗೂ ಇದೇ ಆಗಬಹುದು ಎಂಬ ಭಯ ಸಹಜವೇ.

ಇದಕ್ಕೆ ವಿರೋಧವಾಗಿ ಸಮಗ್ರ ಬದಲಾವಣೆ ಬಯಸುವ ಕೆಲವರು ಪಂಜಾಬ್ ರೈತರು ಎಷ್ಟು ದಿನ ಎಂದು MSP ಗೆ ಜೋತುಬೀಳುವುದು? ಅವರು ಅದನ್ನು ಬಿಟ್ಟು ಹೊರಬರುವುದು ಯಾವಾಗ? ಎಂದು ಪ್ರಶ್ನಿಸುತ್ತಾರೆ. ಪಂಜಾಬ್​ನಲ್ಲಿ ಹಸಿರು ಕ್ರಾಂತಿಯ ಅಲೆ ಇಳಿದು, ಮೂಲ ಸಮಸ್ಯೆಗಳು ಕಣ್ಣಿಗೆ ಕಾಣುತ್ತಿರುವಾಗ ಪಂಜಾಬಿನ ದೊಡ್ಡ ರೈತರಿಗೆ ಈ ಪ್ರಶ್ನೆಯನ್ನು ಅರಗಿಸಿಕೊಳ್ಳುವುದು ಸ್ವಲ್ಪ ಕಷ್ಟಕರವೇ.

Delhi Chalo: ಅಂತರ ಕಾಯ್ದುಕೊಂಡ ಆರ್​ಎಸ್​ಎಸ್ ಹಿನ್ನೆಲೆಯ ಭಾರತೀಯ ಕಿಸಾನ್ ಸಂಘ

ಕೇಂದ್ರ ಸರ್ಕಾರ ಕೃಷಿ‌ ಕಾಯ್ದೆಗಳಲ್ಲಿ ಒಟ್ಟು ಎಂಟು ತಿದ್ದುಪಡಿಗಳಿಗೆ ಸಿದ್ಧವಾಗಿತ್ತು. ಆದರೆ ಸಂಪೂರ್ಣ ವಾಪಸಾತಿಗೆ ಬೇಡಿಕೆಯಿಟ್ಟ ರೈತರು ತಿದ್ದುಪಡಿ ನಿರಾಕರಿಸಿದರು. ಕೃಷಿ ಕಾಯ್ದೆಗಳ ವಾಪಸಾತಿಯೊಂದೇ ತಮ್ಮ ಗುರಿಯೆಂದು ಖಚಿತಪಡಿಸಿದರು. ತಿದ್ದುಪಡಿಗಳಿಗೆ ಒಪ್ಪಿದರೆ ಪ್ರತಿಭಟನೆ ಮುಂದುವರೆಸಲು ಕಾರಣಗಳೇ ಇರದು ಎಂಬ ವಿಶ್ಲೇಷಣೆಗಳೂ ಇವೆ.

ದೇಶದಲ್ಲಿ ಈವರೆಗೆ ಕೃಷಿ ಕಾಯ್ದೆಗಳು ರಾಜ್ಯವಾರು ವಿಂಗಡಣೆಯಾಗಿವೆ. ಇಡೀ ದೇಶಕ್ಕೇ ಒಂದು ಕಾಯ್ದೆ ಬಂದರೆ ಕಾರ್ಪೊರೇಟ್ ಕಂಪನಿಗಳಿಗೆ ರೈತರ ಜೊತೆ ವ್ಯವಹರಿಸಲು ಸಹಾಯವಾಗುತ್ತದೆ.  ಪ್ರತಿ ರಾಜ್ಯಗಳ ಭಿನ್ನ ನಿಯಮಗಳ ಜೊತೆ ಕಿರಿಕಿರಿ‌ ತಪ್ಪುತ್ತದೆ. ಗುತ್ತಿಗೆ ಆಧಾರಿತ ಕೃಷಿ  (ಕಾಂಟ್ರಾಕ್ಟ್ ಫಾರ್ಮಿಂಗ್) ಹೆಸರಲ್ಲಿ ಭೂಮಾಲೀಕನಾದರೂ ರೈತನೇ ಕೂಲಿಯಾಗಿ ದುಡಿಯಬೇಕಾಗುತ್ತದೆ ಎಂದು ಹೊಸ ಕಾಯ್ದೆ ವಿರೋಧಿಸುವವರು ಹೇಳುತ್ತಾರೆ.

ಕೇಂದ್ರ ಸರ್ಕಾರದ ತಿದ್ದುಪಡಿ ಪ್ರಸ್ತಾವನೆಯಲ್ಲಿ ಕಾಂಟ್ರಾಕ್ಟ್ ಫಾರ್ಮಿಂಗ್ ನ ಕುರಿತು ಸ್ಪಷ್ಟಡಿಸಲಾಗಿದೆ. ಯಾವ ಕಾರಣಕ್ಕೂ ರೈತನಿಂದ ಭೂಮಿ ಕೈತಪ್ಪಲು ಅವಕಾಶ ನೀಡುವುದಿಲ್ಲ ಎಂಬ ಸಿದ್ಧ ಉತ್ತರ ಈಗಾಗಲೇ ಚಾಲ್ತಿಯಲ್ಲಿದೆ.

ಇಷ್ಟೆಲ್ಲ ‘ವೈರುಧ್ಯಗಳ’ ನಡುವೆ ಈ ಕಾಲದ ಎಲ್ಲ ಪ್ರತಿಭಟನೆಗಳ ಮೂಲ ಸ್ವರೂಪದಲ್ಲಿ ಶುದ್ಧತೆ ಉಳಿದಿದೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ.  ಸಣ್ಣ ರೈತರು ತಮ್ಮ ಕಸುಬು ಬಿಟ್ಟು ಇಷ್ಟೊಂದು ದಿನ ಇರಲು ಸಾಧ್ಯವೇ ಎಂದು ಎಷ್ಟೋ ಜನರಿಗೆ ಅನಿಸಿದ್ದು ಸುಳ್ಳಲ್ಲ. ಸದ್ಯ ಪಂಜಾಬಿಗಿಂತ ಉತ್ತರ ಪ್ರದೇಶ, ಛತ್ತೀಸಗಢ, ವಿದರ್ಭದ ರೈತರು ಕಷ್ಟದಲ್ಲಿದ್ದಾರೆ ಎನ್ನುತ್ತದೆ ಒಂದು ವರದಿ.

ಜಾಗತೀಕರಣದ ನಂತರ ಪಂಜಾಬ್ ನಲ್ಲಿ ಅತಿ ಹೆಚ್ಚು ಆಡಿ, ಬೆಂಜ್ ಕಾರುಗಳು ಮಾರಾಟವಾಗಿವೆ. ಇಲ್ಲಿಂದ ಕೆನಡಾ, ಅಮೆರಿಕಾಕ್ಕೆ ವಿದ್ಯಾಭ್ಯಾಸಕ್ಕೆ ತಮ್ಮ ಮಕ್ಕಳನ್ನು ಕಳಿಸುವವರ ಸಂಖ್ಯೆ ಇಲ್ಲಿಂದಲೇ ಹೆಚ್ಚಾಗಿದೆ. ಹಸಿರು ಕ್ರಾಂತಿ ಪಂಜಾಬಿನ ಬೃಹತ್ ರೈತರ ಆರ್ಥಿಕ ಮಟ್ಟವನ್ನು ದಿಢೀರ್ ಎತ್ತರಿಸಿದ್ದಂತೂ ಸತ್ಯ. ಹಸಿರು ಕ್ರಾಂತಿಯ ಯಶ ಇಳಿಯುವ ಸೂಚನೆಯಂತೂ ಕಾಣುತ್ತಿದೆ.

“ಏನೇ ಆದರೂ, ಬೆಳೆದ ಬೆಳೆಗೆ ಕನಿಷ್ಟ ಇಂತಿಷ್ಟಾದರೂ ಸಿಗುತ್ತದೆ” ಎಂಬ ದೃಢ ನಂಬಿಕೆಯ ತಳಪಾಯ ಪಂಜಾಬ್ ರೈತರಲ್ಲಿ ಕುಸಿಯತೊಡಗಿದ್ದೇ ದೆಹಲಿ ಚಲೋಗೆ ಕಾರಣ. ಆದರೆ, APMC ಗಿಂತ ಖಾಸಗಿ ಖರೀದಿ ಪ್ರಾಬಲ್ಯ ಗಳಿಸಿ ಬಿಹಾರ ಮಾದರಿ ಆಗುವ ಅಪಾಯವಂತೂ ಇದ್ದೇ ಇದೆ. ಈ ಎರಡೂ ಸಾಧ್ಯತೆಗಳ ನಡುವೆ ದೆಹಲಿ ಚಲೋ ತಾರ್ಕಿಕ ಅಂತ್ಯದತ್ತ ಮುಖಮಾಡಲಿ ನಮ್ಮ ಹಾರೈಕೆ. ಪೂರಕ ಮಾಹಿತಿ: ವಿಶ್ವೇಶ್ವರ ಭಟ್ ಬಂಗಾರಡ್ಕ

Published On - 4:42 pm, Sat, 12 December 20