ಡಿಜಿಟಲ್ ಮಾಧ್ಯಮಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಯತ್ನ ವಿರೋಧಿಸಿ ದೆಹಲಿ ಹೈಕೋರ್ಟ್​ಗೆ ಅರ್ಜಿ

Freedom of Media: ಡಿಜಿಟಲ್ ಮಾಧ್ಯಮಗಳಲ್ಲಿ ಹಸ್ತಕ್ಷೇಪ ಮಾಡುವ ಮೂಲಕ ಸರ್ಕಾರ ಮಾಧ್ಯಮಗಳ ಸ್ವಾತಂತ್ರ್ಯ ಕಿತ್ತುಕೊಳ್ಳಲು ಪ್ರಯತ್ನಿಸುತ್ತಿವೆ ಎಂದು ಹಲವು ಪತ್ರಕರ್ತರು, ವಕೀಲರು ಮತ್ತು ಚಳಿವಳಿಗಾರರು ಆರೋಪಿಸಿದ್ದರು.

ಡಿಜಿಟಲ್ ಮಾಧ್ಯಮಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಯತ್ನ ವಿರೋಧಿಸಿ ದೆಹಲಿ ಹೈಕೋರ್ಟ್​ಗೆ ಅರ್ಜಿ
ದೆಹಲಿ ಹೈಕೋರ್ಟ್
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on:Mar 09, 2021 | 9:52 PM

ದೆಹಲಿ: ಡಿಜಿಟಲ್ ಮಾಧ್ಯಮಗಳ ಸ್ವಾತಂತ್ರ್ಯಕ್ಕೆ ನಿಯಂತ್ರಣ ಹೇರುವ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿ ಆನ್​ಲೈನ್​ ನ್ಯೂಸ್​ ಪೋರ್ಟಲ್​ಗಳಾದ ‘ದಿ ವೈರ್’ ಮತ್ತು ‘ದಿ ನ್ಯೂಸ್​ ಮಿನಟ್’ ಮಂಗಳವಾರ ದೆಹಲಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿವೆ. ಮುಖ್ಯ ನ್ಯಾಯಮೂರ್ತಿ ಡಿ.ಎನ್.ಪಟೇಲ್ ನೇತೃತ್ವದ ವಿಭಾಗೀಯ ನ್ಯಾಯಪೀಠವು ಬುಧವಾರ (ಮಾರ್ಚ್ 10) ಈ ಸಂಬಂಧ ವಿಚಾರಣೆ ನಡೆಸಲಿದೆ.

‘ದಿ ವೈರ್​’ ಜಾಲತಾಣದ ಮಾಲೀಕತ್ವ ಹೊಂದಿರುವ ‘ಫೌಂಡೇಶನ್ ಫಾರ್ ಇಂಡಿಪೆಂಡೆಂಟ್ ಜರ್ನಲಿಸ್ಟ್’ ಅರ್ಜಿ ಸಲ್ಲಿಸಿದೆ. ದಿ ನ್ಯೂಸ್ ಮಿನಟ್​ನ ಪ್ರಧಾನ ಸಂಪಾದಕಿ ಧನ್ಯ ರಾಜೇಂದ್ರನ್ ಮತ್ತು ದಿ ವೈರ್​ನ ಸಂಸ್ಥಾಪಕ ಸಂಪಾದಕ ಎಂ.ಕೆ.ವೇಣು ಅರ್ಜಿಗೆ ಸಹಿ ಹಾಕಿದ್ದಾರೆ.

ಕೇಂದ್ರ ಸರ್ಕಾರವು ಫೆ.25ರಂದು ‘ಮಾಹಿತಿ ತಂತ್ರಜ್ಞಾನ (ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ ಮತ್ತು ಮಾರ್ಗದರ್ಶಿ ಸೂತ್ರಗಳು) ನಿಯಮಗಳು 2021’ ಘೋಷಿಸಿತ್ತು. ದಶಕಗಳಷ್ಟು ಹಳೆಯದಾದ ಮಾಹಿತಿ ತಂತ್ರಜ್ಞಾನ ಕಾಯ್ದೆ (2000) ಆಧರಿಸಿ ನೀತಿ ಸಂಹಿತೆ ಮತ್ತು ಮೂರು ಹಂತದ ಕಂಟೆಂಟ್ ನಿಯಂತ್ರಣ ವ್ಯವಸ್ಥೆಯನ್ನು ರೂಪಿಸಲಾಗಿತ್ತು.

ಡಿಜಿಟಲ್ ಮಾಧ್ಯಮಗಳಲ್ಲಿ ಹಸ್ತಕ್ಷೇಪ ಮಾಡುವ ಮೂಲಕ ಸರ್ಕಾರ ಮಾಧ್ಯಮಗಳ ಸ್ವಾತಂತ್ರ್ಯ ಕಿತ್ತುಕೊಳ್ಳಲು ಪ್ರಯತ್ನಿಸುತ್ತಿವೆ ಎಂದು ಹಲವು ಪತ್ರಕರ್ತರು, ವಕೀಲರು ಮತ್ತು ಚಳಿವಳಿಗಾರರು ಆರೋಪಿಸಿದ್ದರು. ಸಂಪಾದಕರ ಒಕ್ಕೂಟ (ಎಡಿಟರ್ಸ್​ ಗಿಲ್ಡ್​) ಸಹ ಈ ನಿಯಮಗಳನ್ನು ಹಿಂಪಡೆಯುವಂತೆ ಆಗ್ರಹಿಸಿತ್ತು.

ಆದರೆ ಕೇಂದ್ರ ಮಾಹಿತಿ ತಂತ್ರಜ್ಞಾನ ಮತ್ತು ಕಾನೂನು ಸಚಿವ ರವಿಶಂಕರ್ ಪ್ರಸಾದ್ ಟೀಕೆಗಳನ್ನು ತಳ್ಳಿಹಾಕಿದ್ದರು. ನಾಗರಿಕರನ್ನು ರಕ್ಷಿಸಲು ಇಂಥ ಕಾಯ್ದೆಗಳು ಅನಿವಾರ್ಯ ಎಂದು ಹೇಳಿದ್ದರು. ಸಂಬಂಧಿಸಿದವರೊಡನೆ ಸಮಾಲೋಚನೆ ನಡೆಸಿದ ನಂತರ ಈ ನಿಯಮಗಳನ್ನು ರೂಪಿಸಲಾಗಿದೆ ಎಂದು ಹೇಳಿದ್ದರು.

ಕೇಂದ್ರ ಸರ್ಕಾರವು ರೂಪಿಸಿರುವ ನಿಯಮಗಳ ಬಗೆಗಿನ ಭೀತಿಯ ಬಗ್ಗೆ ಪ್ರತಿಕ್ರಿಯಿಸಿದ್ದ ವಾರ್ತಾ ಮತ್ತು ಪ್ರಸಾರ ಇಲಾಖೆ ಕಾರ್ಯದರ್ಶಿ ಅಮಿತ್ ಖರೆ, ‘ಈ ಕುರಿತು ಕೆಲವರು ಅನಗತ್ಯವಾಗಿ ಭಯಬಿತ್ತುವ ಯತ್ನ ಮಾಡುತ್ತಿದ್ದಾರೆ. ಕತ್ತಲಕೋಣೆಯೊಂದರಲ್ಲಿ ಕಪ್ಪುಬೆಕ್ಕು ಹುಡುಕಲು ಅವರು ಯತ್ನಿಸುತ್ತಿದ್ದಾರೆ. ವಾಸ್ತವವಾಗಿ ಆ ಕೋಣೆಯಲ್ಲಿ ಬೆಕ್ಕೇ ಇಲ್ಲ’ ಎಂದು ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದರು.

ಇದನ್ನೂ ಓದಿ: ಸೋಷಿಯಲ್ ಮೀಡಿಯಾ, ಒಟಿಟಿ, ಡಿಜಿಟಲ್ ಕಂಟೆಂಟ್ ನಿಯಂತ್ರಣಕ್ಕೆ ಕೇಂದ್ರದಿಂದ ಹೊಸ ನಿಯಮ: ನೀವು ತಿಳಿಯಬೇಕಾದ 10 ಅಂಶಗಳು

Published On - 9:51 pm, Tue, 9 March 21