ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನಲ್ಲಿಂದು ವಿವಿಧ ಪ್ರಮುಖ ರೈಲ್ವೆ ಯೋಜನೆಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಲಿದ್ದಾರೆ. ಈ ವೇಳೆ ಗುಜರಾತ್ನ ವಿಜ್ಞಾನ ನಗರಿಯಲ್ಲಿ ‘ಅಕ್ವಾಟಿಕ್ಸ್ ಮತ್ತು ರೊಬೊಟಿಕ್ಸ್ ಗ್ಯಾಲರಿ’ ಮತ್ತು ‘ನಿಸರ್ಗ ಉದ್ಯಾನ’ವನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಹೊಸದಾಗಿ ಪುನರ್ ಅಭಿವೃದ್ಧಿಪಡಿಸಿರುವ ಗಾಂಧಿ ನಗರ ರಾಜಧಾನಿ ರೈಲು ನಿಲ್ದಾಣ, ಗೇಜ್ ಪರಿವರ್ತನೆಯಾಗಿ ವಿದ್ಯುದೀಕರಣವಾಗಿರುವ ಮಹೆಸಾನ-ವರೇಥಾ ರೈಲು ಮಾರ್ಗ ಮತ್ತು ಹೊಸದಾಗಿ ವಿದ್ಯುದೀಕರಿಸಿರುವ ಸುರೇಂದ್ರನಗರ-ಪಿಪವಾವ್ ರೈಲು ಮಾರ್ಗವನ್ನು ಪ್ರಧಾನಿ ಅವರು ಲೋಕಾರ್ಪಣೆ ಮಾಡಲಿದ್ದಾರೆ. ಗಾಂಧಿನಗರ ರಾಜಧಾನಿ-ವಾರಾಣಸಿ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ಮತ್ತು ಗಾಂಧಿನಗರ ರಾಜಧಾನಿ-ವರೇಥಾ ನಡುವೆ ಮೆಮು ರೈಲು ಸೇವೆಗೆ ನರೇಂದ್ರ ಮೋದಿ ಅವರು ಹಸಿರು ನಿಶಾನೆ ತೋರಿಸಲಿದ್ದಾರೆ.
ಸುಮಾರು 71 ಕೋಟಿ ರೂ. ವೆಚ್ಚದಲ್ಲಿ ಗಾಂಧಿ ನಗರ ರಾಜಧಾನಿ ರೈಲು ನಿಲ್ದಾಣವನ್ನು ಅಭಿವೃದ್ಧಿಪಡಿಸಿ, ಮೇಲ್ದರ್ಜೆಗೇರಿಸಲಾಗಿದೆ. ಆಧುನಿಕ ವಿಮಾನ ನಿಲ್ದಾಣಗಳಲ್ಲಿ ಇರುವಂತೆ ಈ ರೈಲು ನಿಲ್ದಾಣಕ್ಕೆ ವಿಶ್ವ ದರ್ಜೆಯ ಸೌಲಭ್ಯಗಳನ್ನು ಒದಗಿಸಲಾಗಿದೆ. ವಿಶೇಷಚೇತನ-ಸ್ನೇಹಿ ಸೌಲಭ್ಯಗಳನ್ನು ಒದಗಿಸಲಾಗಿದೆ. ವಿಶೇಷಚೇತನರಿಗೆ ವಿಶೇಷ ಟಿಕೆಟ್ ಬುಕಿಂಗ್ ಕೌಂಟರ್, ಇಳಿಜಾರುಗಳು, ಲಿಫ್ಟ್‌ಗಳು, ಮೀಸಲಾದ ಪಾರ್ಕಿಂಗ್ ಸ್ಥಳ ಇತ್ಯಾದಿ ಸೌಲಭ್ಯಗಳನ್ನು ಒದಗಿಸಲು ಎಚ್ಚರ ವಹಿಸಲಾಗಿದೆ. ಸಂಪೂರ್ಣ ಕಟ್ಟಡವನ್ನು ಗ್ರೀನ್ ಬಿಲ್ಡಿಂಗ್ ರೇಟಿಂಗ್ ವೈಶಿಷ್ಟ್ಯಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ.
ನಿಲ್ದಾಣದ ಮುಂಭಾಗವು ಅತ್ಯಾಧುನಿಕ 32 ಥೀಮ್ ಗಳೊಂದಿಗೆ ದೈನಂದಿನ ಥೀಮ್ ಆಧಾರಿತ ಬೆಳಕನ್ನು ಪ್ರಕಾಶಮಾನಗೊಳಿಸಲಿದೆ. ಈ ನಿಲ್ದಾಣದಲ್ಲಿ ಐದು ಪಂಚತಾರಾ ಹೋಟೆಲ್ಗಳು ತಲೆಎತ್ತಿವೆ. ಮಹೆಸಾನ-ವರೇಥಾ ಗೇಜ್ ಪರಿವರ್ತಿತ ವಿದ್ಯುದೀಕರಣ ಬ್ರಾಡ್ ಗೇಜ್ ಮಾರ್ಗ(ವಡ್ನಗರ್ ನಿಲ್ದಾಣ ಸೇರಿ) ಮಹೆಸಾನ-ವರೇಥಾ ನಡುವಿನ 55 ಕಿ.ಮೀ. ದೂರದ ರೈಲು ಮಾರ್ಗವನ್ನು ಬ್ರಾಡ್ ಗೇಜ್ಗೆ ಪರಿವರ್ತಿಸಿ, ವಿದ್ಯುದೀಕರಣ ಮಾಡಲಾಗಿದೆ. ಗೇಜ್ ಪರಿವರ್ತನೆಗೆ 293 ಕೋಟಿ ರೂ. ಹಾಗೂ ವಿದ್ಯುದೀಕರಣ ಕಾಮಗಾರಿಗೆ 74 ಕೋಟಿ ರೂ. ವೆಚ್ಚ ಮಾಡಲಾಗಿದೆ. ಈ ಮಾರ್ಗದಲ್ಲಿ 10 ನಿಲ್ದಾಣಗಳಿದ್ದು, ಅವುಗಳಲ್ಲಿ 4 ಹೊಸ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗಿದೆ. ವಿಸ್ ನಗರ್, ವದ್ ನಗರ್, ಖೇರಾಲು ಮತ್ತು ವರೇಥಾದಲ್ಲಿ ಹೊಸ ನಿಲ್ದಾಣಗಳು ತಲೆಎತ್ತಿವೆ. ಈ ಮಾರ್ಗದಲ್ಲಿ ವದ್ ನಗರ ರೈಲು ನಿಲ್ದಾಣವು ಪ್ರಮುಖವಾಗಿದ್ದು, ಇದನ್ನು ವಡ್ನಗರ್ – ಮೊಧೇರಾ-ಪಟಾನ್ ಹೆರಿಟೇಜ್ ಸರ್ಕಿಟ್ ಅಡಿ ಅಭಿವೃದ್ಧಿಪಡಿಸಲಾಗಿದೆ.
ಕಲ್ಲಿನ ಕೆತ್ತನೆಗಳನ್ನು ಬಳಸಿ ವಡ್ನನಗರ ನಿಲ್ದಾಣದ ಕಟ್ಟಡವನ್ನು ಕಲಾತ್ಮಕವಾಗಿ ವಿನ್ಯಾಸಗೊಳಿಸಲಾಗಿದೆ. ವಡ್ನಗರ ರೈಲು ಮಾರ್ಗವನ್ನು ಬ್ರಾಡ್ ಗೇಜ್ಗೆ ಪರಿವರ್ತಿಸಲಾಗಿದ್ದು, ಈ ಮಾರ್ಗದಲ್ಲಿ ನಿರಂತರ ಪ್ರಯಾಣಿಕ ಮತ್ತು ಸರಕು ರೈಲುಗಳು ಸಂಚರಿಸಲಿವೆ.
ಸುರೇಂದ್ರನಗರ-ಪಿಪವಾವ್ ಮಾರ್ಗದ ವಿದ್ಯುದೀಕರಣ
ಸುರೇಂದ್ರನಗರ-ಪಿಪವಾವ್ ರೈಲು ಮಾರ್ಗದ ವಿದ್ಯುದೀಕರಣ ಯೋಜನೆಯನ್ನು 289 ಕೋಟಿ ರೂ. ವೆಚ್ಚದಲ್ಲಿ ನೆರವೇರಿಸಲಾಗಿದೆ. ಪಲಾನ್ ಪುರ, ಅಹ್ಮದಾಬಾದ್ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಮಾರ್ಗ ಬದಲಿಸದೆ ರೈಲುಗಳು ಪಿಪವಾವ್ ಬಂದರಿಗೆ ಸಂಚರಿಸಲು ಈ ಯೋಜನೆ ಸಹಾಯಕವಾಗಿದೆ.
ಅಕ್ವಾಟಿಕ್ಸ್ ಗ್ಯಾಲರಿ
ಅತ್ಯಾಧುನಿಕ ಶೈಲಿಯಲ್ಲಿ ಸುಸಜ್ಜಿತವಾಗಿ ನಿರ್ಮಿಸಿರುವ ಸಾರ್ವಜನಿಕ ಅಕ್ವಾಟಿಕ್ ಗ್ಯಾಲರಿಯಲ್ಲಿ ವಿಶಿಷ್ಟವಾಗಿ ಕೊಳಗಳನ್ನು ನಿರ್ಮಿಸಲಾಗಿದೆ. ವಿಶ್ವದೆಲ್ಲೆಡೆ ಸಿಗುವ ಮೀನುಗಳನ್ನು ಇಲ್ಲಿ ಸಾಕಣೆ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರಮುಖ ಕೊಳದಲ್ಲಿ ಶಾರ್ಕ್ ಮೀನುಗಳನ್ನು ಸಾಕಲಾಗುತ್ತದೆ. ಜತೆಗೆ, 28 ಮೀಟರ್ ಉದ್ದದ ಅನನ್ಯ ವಾಕ್ ವೇ ಸುರಂಗ ನಿರ್ಮಿಸಲಾಗಿದೆ.
ಇದನ್ನೂ ಓದಿ: World Youth Skill Day 2021: ಯುವಜನರ ಕೌಶಲಾಭಿವೃದ್ಧಿ ರಾಷ್ಟ್ರೀಯ ಅಗತ್ಯತೆ: ಪ್ರಧಾನಿ ಮೋದಿ
Published On - 8:03 am, Fri, 16 July 21