ಮೋಡ ಎದುರಾದಾಗ ಪೈಲಟ್​ ತೆಗೆದುಕೊಂಡ ತಪ್ಪು ನಿರ್ಧಾರವೇ ಸೇನಾ ಹೆಲಿಕಾಪ್ಟರ್ ಪತನಕ್ಕೆ ಕಾರಣ; ಅಂತಿಮ ವರದಿ ಬಹಿರಂಗ

| Updated By: Lakshmi Hegde

Updated on: Jan 15, 2022 | 2:28 PM

Army Chopper Crash: ಅಂದು ಸಿಡಿಎಸ್​ ಬಿಪಿನ್​ ರಾವತ್​ ಮತ್ತು ಇತರ ಸೇನಾಧಿಕಾರಿಗಳು ಪ್ರಯಾಣ ಮಾಡುತ್ತಿದ್ದ ಎಂಐ-17ವಿ5 ವಿಮಾನ ರೈಲ್ವೆ ಹಳಿಯೊಂದರ ಮೇಲೆ ಅದೇ ಮಾರ್ಗದಲ್ಲಿ ಹಾರಾಟ ನಡೆಸುತ್ತಿತ್ತು.

ಮೋಡ ಎದುರಾದಾಗ ಪೈಲಟ್​ ತೆಗೆದುಕೊಂಡ ತಪ್ಪು ನಿರ್ಧಾರವೇ ಸೇನಾ ಹೆಲಿಕಾಪ್ಟರ್ ಪತನಕ್ಕೆ ಕಾರಣ; ಅಂತಿಮ ವರದಿ ಬಹಿರಂಗ
ಹೆಲಿಕಾಪ್ಟರ್​ ಪತನದ ಚಿತ್ರ
Follow us on

2021ರ ಡಿಸೆಂಬರ್​ 8ರಂದು ತಮಿಳುನಾಡಿನ ಕೂನೂರು ಬಳಿ ನಡೆದ ಸೇನಾ ಹೆಲಿಕಾಪ್ಟರ್​ ಪತನಕ್ಕೆ ಪೈಲಟ್​ನ ಅಜಾಗರೂಕತೆಯೇ ಕಾರಣ ಎಂದು, ತನಿಖಾ ಸಮಿತಿಯ ಪ್ರಾಥಮಿಕ ಫಲಿತಾಂಶದಲ್ಲಿ ಉಲ್ಲೇಖವಾಗಿದೆ. ಅಂದು ನೀಲಗಿರಿ ಕಾಡುಗಳ ಬಳಿ ಹವಾಮಾನದಲ್ಲಿ ಒಮ್ಮೆಲೇ ಬದಲಾವಣೆ ಉಂಟಾಯಿತು. ಮೋಡ ಅಡ್ಡಬಂದಿದ್ದರಿಂದ ಪೈಲೆಟ್​​ಗೆ ದಿಗ್ಭ್ರಮೆಯಾಗಿದೆ.  ಅವರಿಗೆ ಮುಂದೆ ಏನು ಮಾಡಬೇಕು ಎಂದು ತಿಳಿಯದ ಕಾರಣ ಹೆಲಿಕಾಪ್ಟರ್​ ಮೇಲೆ ನಿಯಂತ್ರಣ ಕಳೆದುಕೊಂಡಿದ್ದಾರೆ. ಹೀಗಾಗಿ ಅದು ಕಲ್ಲುಬಂಡೆಗೆ ಅಪ್ಪಳಿಸಿ ಸ್ಫೋಟಗೊಂಡಿದೆ ಎಂದು ತಂಡ ವರದಿ ನೀಡಿದೆ.  ಅಪಘಾತದ ನಂತರ ಹೆಲಿಕಾಪ್ಟರ್​​ನಲ್ಲಿದ್ದ ಡಾಟಾ ರಿಕಾರ್ಡರ್ ಮತ್ತು ಕಾಕ್​ಪಿಟ್​ ವೈಸ್ ರಿಕಾರ್ಡರ್​​ಗಳನ್ನು ವಿಶ್ಲೇಷಿಸಿದ ನಂತರ, ಲಭ್ಯವಿರುವ ಸಾಕ್ಷಿಗಳನ್ನು ಪ್ರಶ್ನಿಸಿ, ಉತ್ತರ ಪಡೆದ ಬಳಿಕ ತನಿಖಾ ತಂಡ ಈ ವರದಿ ನೀಡಿದೆ. 

ಸದ್ಯ ತನಿಖೆ ಮುಕ್ತಾಯಗೊಂಡು ವರದಿ ಇನ್ನೇನು ಶೀಘ್ರದಲ್ಲೇ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಕೈಸೇರಲಿದೆ. ಅಂದು ಸಿಡಿಎಸ್​ ಬಿಪಿನ್​ ರಾವತ್​ ಮತ್ತು ಇತರ ಸೇನಾಧಿಕಾರಿಗಳು ಪ್ರಯಾಣ ಮಾಡುತ್ತಿದ್ದ ಎಂಐ-17ವಿ5 ವಿಮಾನ ರೈಲ್ವೆ ಹಳಿಯೊಂದರ ಮೇಲೆ ಅದೇ ಮಾರ್ಗದಲ್ಲಿ ಹಾರಾಟ ನಡೆಸುತ್ತಿತ್ತು. ಆದರೆ ಅದೇ ಮಾರ್ಗದಲ್ಲಿ ದೊಡ್ಡದಾದ ಮೋಡ ಅಡ್ಡಬಂದು ಹೆಲಿಕಾಪ್ಟರ್​ ಆ ಮೋಡದೊಳಗೆ ಸಿಕ್ಕಿತು. ಆ ಸಮಯದಲ್ಲಿ ಸೇನಾ ಹೆಲಿಕಾಪ್ಟರ್​ ಅತ್ಯಂತ ಕೆಳಗೆ ಹಾರುತ್ತಿದ್ದುದರಿಂದ ಭೂಪ್ರದೇಶ ಪೈಲೆಟ್​ ಗಮನದಲ್ಲಿ ಇತ್ತು. ಮೋಡದಿಂದ ಪಾರಾಗಲು ಹೆಲಿಕಾಪ್ಟರ್ ಲ್ಯಾಂಡ್ ಮಾಡಲು ಪ್ರಯತ್ನಿಸಿದಾಗ ಬಂಡೆಗೆ ಅಪ್ಪಳಿಸಿದೆ ಎಂದು ವರದಿಯಲ್ಲಿ ಸವಿಸ್ತಾರವಾಗಿ ಉಲ್ಲೇಖ ಮಾಡಲಾಗಿದೆ. ಹೆಲಿಕಾಪ್ಟರ್​​ನಲ್ಲಿ ಇದ್ದವರೆಲ್ಲ ಮಾಸ್ಟರ್​ ಗ್ರೀನ್​ ವರ್ಗದವರೇ ಆಗಿದ್ದರು. ಅಂದರೆ ತಮ್ಮ ತಮ್ಮ ಕ್ಷೇತ್ರದಲ್ಲಿ ನುರಿತ ಅನುಭವಿಗಳಾಗಿದ್ದರು. ಈ ಸಂದರ್ಭವನ್ನು ಎದುರಿಸಲು ಸಾಧ್ಯ ಎಂದು ಭಾವಿಸಿದ್ದರು. ಹೀಗಾಗಿ ಸಮೀಪದ ಏರ್​ ಕಂಟ್ರೋಲ್​ರೂಂಗೆ ತುರ್ತು ಕರೆ ಕೂಡ ಮಾಡಲಿಲ್ಲ ಎಂದೂ ಹೇಳಲಾಗಿದೆ.

ಡಿಸೆಂಬರ್ 8ರಂದು ಸಿಡಿಎಸ್​ ಬಿಪಿನ್ ರಾವತ್​, ಅವರ ಪತ್ನಿ ಮಧುಲಿಕಾ ರಾವತ್​ ಮತ್ತು ಇತರ 12 ಸೇನಾಧಿಕಾರಿಗಳನ್ನು ಒಳಗೊಂಡ ಹೆಲಿಕಾಪ್ಟರ್​ ತಮಿಳುನಾಡಿನ ವೆಲ್ಲಿಂಗ್ಟನ್​​ಗೆ ಹೋಗುತ್ತಿತ್ತು.  ಈ ದುರಂತದಲ್ಲಿ ಸಿಡಿಎಸ್​ ಬಿಪಿನ್​ ರಾವತ್ ಸೇರಿ ಎಲ್ಲರೂ ಸುಟ್ಟ ಗಾಯಗಳಿಂದ ಮೃತಪಟ್ಟಿದ್ದರು. ಅದರಲ್ಲಿ ಬದುಕಿದ್ದ ವಾಯುಪಡೆ ಗ್ರೂಪ್​ ಕ್ಯಾಪ್ಟನ್​ ವರುಣ್​ ಸಿಂಗ್​ ಡಿಸೆಂಬರ್​ 15ರಂದು ನಿಧನರಾಗಿದ್ದರು. ಎಲ್ಲವೂ ಸರಿಯಾಗಿದ್ದರೂ ಪತನಗೊಂಡ ಹೆಲಿಕಾಪ್ಟರ್​ ಬಗ್ಗೆ ಅನೇಕ ಪ್ರಶ್ನೆಗಳು ಎದ್ದಿದ್ದವು. ಅದರ ಸೂಕ್ತ ತನಿಖೆ ನಡೆಸಲು ದೇಶದ ಉನ್ನತ ಮಟ್ಟದ ಹೆಲಿಕಾಪ್ಟರ್ ಪೈಲಟ್​ ಏರ್​ ಮಾರ್ಶಲ್​ ಮನ್ವೇಂದ್ರ್​ ಸಿಂಗ್​ ನೇತೃತ್ವದಲ್ಲಿ, ಮೂರೂ ಸೇನೆಗಳ ಅಧಿಕಾರಿಗಳನ್ನೊಳಗೊಂಡ ಕೋರ್ಟ್ ಆಫ್​ ಎನ್​ಕ್ವೈರಿ ಎಂಬ ತನಿಖಾ ಸಮಿತಿ ರಚನೆ ಮಾಡಲಾಗಿತ್ತು.

ಇದನ್ನೂ ಓದಿ: ತಂದೆಗೆ ವ್ಯಾಕ್ಸಿನ್​​ ಕೊಡಿಸಲು 6 ಗಂಟೆಗಳ ಕಾಲ ಬೆನ್ನಿನ ಮೇಲೆ ಹೊತ್ತೊಯ್ದ ಯುವಕ: ಆಧುನಿಕ ಶ್ರವಣಕುಮಾರ ಎಂದ ನೆಟ್ಟಿಗರು

Published On - 12:56 pm, Sat, 15 January 22