ದೋಷಪೂರಿತ ವಾಹನ ತಯಾರಿಸಿದ ಕಂಪೆನಿಗಳಿಗೆ ಬೀಳಲಿದೆ ಭಾರೀ ಜುಲ್ಮಾನೆ

ದೋಷಪೂರಿತ ವಾಹನಗಳನ್ನು ಕಡ್ಡಾಯವಾಗಿ ವಾಪಸ್ ಕರೆಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಬುಧವಾರ ಅಧಿಸೂಚನೆ ಹೊರಡಿಸಲಾಗಿದೆ. ಅದರ ಪ್ರಕಾರ, 10 ಲಕ್ಷ ರೂಪಾಯಿಯಿಂದ 1 ಕೋಟಿ ರೂ. ತನಕ ವಾಹನ ತಯಾರಕ ಸಂಸ್ಥೆಗಳಿಗೆ ದಂಡ ವಿಧಿಸಬಹುದು.

ದೋಷಪೂರಿತ ವಾಹನ ತಯಾರಿಸಿದ ಕಂಪೆನಿಗಳಿಗೆ ಬೀಳಲಿದೆ ಭಾರೀ ಜುಲ್ಮಾನೆ
ಪ್ರಾತಿನಿಧಿಕ ಚಿತ್ರ
Follow us
|

Updated on:Mar 18, 2021 | 1:45 PM

ದೋಷಪೂರಿತ ವಾಹನಗಳನ್ನು ತಯಾರಕರು ವಾಪಸ್ ಕರೆಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಬುಧವಾರದಂದು ನಿಯಮವನ್ನು ವಿತರಣೆ ಮಾಡಿದೆ. ಏಪ್ರಿಲ್ 1, 2021ರ ನಂತರ ಈ ನಿಯಮ ಜಾರಿಗೆ ಬರಲಿದೆ. ಆಟೋಮೊಬೈಲ್ ಪ್ರಮುಖ ಸಂಸ್ಥೆಗಳು ಒಂದು ವೇಳೆ ಕಡ್ಡಾಯವಾಗಿ ವಾಹನಗಳನ್ನು ವಾಪಸ್ ಕರೆಸಿಕೊಳ್ಳಬೇಕಾದಲ್ಲಿ ಆ ಸಂಸ್ಥೆಗಳ ಮೇಲೆ ಸರ್ಕಾರವು 1 ಕೋಟಿ ರೂಪಾಯಿ ತನಕ ದಂಡ ವಿಧಿಸಬಹುದು. ಯಾವ ವಾಹನ ಹಾಗೂ ಎಷ್ಟು ಸಂಖ್ಯೆಯಲ್ಲಿ ವಾಹನಗಳು ದೋಷಪೂರಿತ ಎಂದು ಕಂಪೆನಿಯಿಂದ ವಾಪಸ್ ಕರೆಸಿಕೊಂಡಿದೆ ಎಂಬುದರ ಆಧಾರದಲ್ಲಿ ರೂ. 10 ಲಕ್ಷದಿಂದ ರೂ. 1 ಕೋಟಿಯ ತನಕ ಜುಲ್ಮಾನೆ ವಿಧಿಸಬಹುದು.

“ಅಧಿಸೂಚನೆ ಹೊರಡಿಸಿದ ಪ್ರಕಾರ, ನಿರ್ದಿಷ್ಟ ಕೆಟಗರಿಯ ವಾಹನಗಳ ಬಗ್ಗೆ ಬಂದಿರುವ ಕನಿಷ್ಠ ಸಂಖ್ಯೆಯ ದೂರುಗಳು ಹಾಗೂ ಒಟ್ಟಾರೆಯಾಗಿ ವಾಹನ ವಾಪಸ್ ಕರೆಸಿಕೊಂಡಿರುವ ಸಂಖ್ಯೆ ಮತ್ತು ಆ ವಾಹನದ ಮಾರಾಟ ಸಂಖ್ಯೆ, ಇಷ್ಟನ್ನೂ ಗಮನದಲ್ಲಿ ಇರಿಸಿಕೊಂಡು ವಾಹನ ವಾಪಸ್ ಕಡ್ಡಾಯ ಪ್ರಕ್ರಿಯೆ ಶುರು ಮಾಡಲಾಗುವುದು,” ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಕನಿಷ್ಠ 100 ದೂರುಗಳು ಬಂದಲ್ಲಿ ಪ್ರಕ್ರಿಯೆ ಶುರು ಕಾರು, ಎಸ್​ಯುವಿ, ದ್ವಿಚಕ್ರ ವಾಹನ, ತ್ರಿಚಕ್ರ ವಾಹನ ಇತರ ವಾಹನಗಳ ವಾಪಸ್ ಕರೆಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಮಿತಿಯನ್ನು ನಿಗದಿ ಮಾಡಲಾಗಿದೆ. ಉದಾಹರಣೆಗೆ, ವಾಹನಗಳ ಮಾರಾಟ ವಾರ್ಷಿಕ500 ಯೂನಿಟ್ ಇದ್ದಲ್ಲಿ ಶೇ 20 ಅಥವಾ 100 ದೂರುಗಳು ಬಂದಲ್ಲಿ ವಾಪಸ್ ಕರೆಸಿಕೊಳ್ಳುವ ಪ್ರಕ್ರಿಯೆ ಆರಂಭಿಸುವುದಕ್ಕೆ ಇಷ್ಟು ಸಂಖ್ಯೆ ಸಾಕು.

ಒಂದು ವೇಳೆ ದೊಡ್ಡ ವಾಹನಗಳಾದ ಬಸ್​ಗಳು, ಟ್ರಕ್​ಗಳು ಇಂಥವಕ್ಕೆ ಸಂಬಂಧಿಸಿದಂತೆ ದೂರುಗಳು ಅಥವಾ ದೋಷಗಳು ವಾರ್ಷಿಕ ಮಾರಾಟದ ಶೇಕಡಾ 3ರಷ್ಟು ಬಂದರೂ ಸರ್ಕಾರದಿಂದ ವಾಪಸ್ ಕರೆಸಿಕೊಳ್ಳುವ ಘೋಷಣೆ ಮಾಡಬಹುದು. ಕೇಂದ್ರೀಯ ಮೋಟಾರು ವಾಹನ ಕಾಯ್ದೆ ಅಡಿಯಲ್ಲಿ, ಒಂದು ವೇಳೆ ವಾಹನ ಉತ್ಪಾದಕರು ಅಥವಾ ಆಮದುದಾರರು ಸ್ವಯಂಪ್ರೇರಿತರಾಗಿ ದೋಷಪೂರಿತ ವಾಹನಗಳನ್ನು ವಾಪಸ್ ಕರೆಸಿಕೊಳ್ಳದಿದ್ದಲ್ಲಿ ಆಗ ದಂಡ ವಿಧಿಸುತ್ತದೆ. ಸದ್ಯಕ್ಕೆ ಅಂಥ ದಂಡ ಯಾವುದೂ ಇಲ್ಲ.

ಏಳು ವರ್ಷ ಹಳೆಯ ವಾಹನಗಳಿಗೆ ಅನ್ವಯ ಹೊಸ ನಿಯಮವು ಬಂದ ಮೇಲೆ ಏಳು ವರ್ಷ ಹಳೆಯ ವಾಹನಗಳಿಗೆ ಅನ್ವಯ ಆಗುತ್ತದೆ. ಮತ್ತು ಅವುಗಳಲ್ಲಿನ ದೋಷಗಳು ಅಥವಾ ವಾಹನದಲ್ಲಿನ ಲೋಪ ಅಥವಾ ಬಿಡಿಭಾಗ ತೊಂದರೆ ಅಥವಾ ಸಾಫ್ಟ್​ವೇರ್ ಸಮಸ್ಯೆ ಅಥವಾ ರಸ್ತೆ ಸುರಕ್ಷತೆಗೆ ಅಪಾಯ ತಂದೊಡ್ಡುವಂತಿದ್ದಲ್ಲಿ ಆಗ ಅನ್ವಯಿಸುತ್ತದೆ. ಒಂದು ವೇಳೆ ಆರು ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಅಥವಾ ಒಂದು ಲಕ್ಷಕ್ಕೂ ಹೆಚ್ಚು ನಾಲ್ಕು ಚಕ್ರದ ವಾಹನಗಳನ್ನು ಕಡ್ಡಾಯವಾಗಿ ವಾಪಸ್ ಕರೆಸಿಕೊಂಡಲ್ಲಿ ಗರಿಷ್ಠ ಮಟ್ಟದ ದಂಡ 1 ಕೋಟಿ ರೂಪಾಯಿ ವಿಧಿಸಲಾಗುತ್ತದೆ.

ಒಂಬತ್ತಕ್ಕಿಂತ ಹೆಚ್ಚು ಪ್ರಯಾಣಿಕರನ್ನು ಒಯ್ಯುವ ವಾಹನ ಮತ್ತು ಭಾರೀ ಸರಕು ವಾಹನಗಳು 50 ಸಾವಿರ ಯೂನಿಟ್​ಗಿಂತ ಹೆಚ್ಚು ವಾಪಸ್ ಕರೆಸಿಕೊಂಡಲ್ಲಿ ಆಗ ರೂ. 1 ಕೋಟಿ ಜುಲ್ಮಾನೆ ಹಾಕಲಾಗುತ್ತದೆ. ಒಂದು ಲಕ್ಷ ಸಂಖ್ಯೆಯ ದೋಷಪೂರಿತ ಕಾರುಗಳು ಮತ್ತು ಎಸ್​ಯುವಿಗಳು ಮಾರಾಟ ಮಾಡಿದ್ದಲ್ಲಿ ಆಗ 1 ಕೋಟಿ ರೂ. ದಂಡ, ತ್ರಿಚಕ್ರ ವಾಹನಗಳ ಸಂಖ್ಯೆ ಮೂರು ಲಕ್ಷ ದಾಟಿದಲ್ಲಿ 1 ಕೋಟಿ ರೂ. ದಂಡ, ದ್ವಿಚಕ್ರ ವಾಹನ ಆರು ಲಕ್ಷ ಯೂನಿಟ್​ಗಿಂತ ಹೆಚ್ಚು ದೋಷಪೂರಿತವಾಗಿದ್ದಲ್ಲಿ 1 ಕೋಟಿ ರೂಪಾಯಿ ದಂಡ ವಿಧಿಸಲಾಗುತ್ತದೆ.

ದೂರು ದಾಖಲಿಸಲು ಸರ್ಕಾರದಿಂದ ಪೋರ್ಟಲ್ ವಾಹನ ಮಾಲೀಕರು ದೂರು ದಾಖಲಿಸುವುದಕ್ಕೆ ಅಂತಲೇ ಸರ್ಕಾರದಿಂದ ಪೋರ್ಟಲ್ ಮಾಡಲಾಗುತ್ತದೆ. ಅದರ ಆಧಾರದಲ್ಲಿ 30 ದಿನದೊಳಗಾಗಿ ಪ್ರತಿಕ್ರಿಯೆ ನೀಡುವಂತೆ ವಾಹನ ತಯಾರಕರಿಗೆ ನೋಟಿಸ್ ನೀಡಲಾಗುತ್ತದೆ. ಕಡ್ಡಾಯವಾಗಿ ವಾಹನ ವಾಪಸ್ ಕರೆಸಿಕೊಳ್ಳಬೇಕು ಎಂಬ ಆದೇಶವನ್ನು ನೀಡುವ ಮುಂಚಿತವಾಗಿ ಸಂಸ್ಥೆಯೊಂದು ದೂರಿನ ಬಗ್ಗೆ ವಿಚಾರಣೆ ಮಾಡುತ್ತದೆ. ಸರ್ಕಾರದ ಅಧಿಸೂಚನೆಯಲ್ಲಿ ತಿಳಿಸಿರುವ ಪ್ರಕಾರ, ಒಂದು ವೇಳೆ ವಾಹನ ವಾಪಸ್ ಕರೆಸಿಕೊಳ್ಳುವ ನೋಟಿಸ್ ಬಗ್ಗೆ ಅಸಮಾಧಾನ ಇದ್ದಲ್ಲಿ ನೋಟಿಸ್ ಪಡೆದ 90 ದಿನದೊಳಗೆ ಕೋರ್ಟ್​ಗೆ ಅರ್ಜಿ ಹಾಕಿಕೊಳ್ಳಬೇಕು.

ಇದನ್ನೂ ಓದಿ: ರೈಲ್ವೆಯಲ್ಲಿ ಖಾಸಗಿ ಹೂಡಿಕೆ ಅಷ್ಟೇ, ಸಂಪೂರ್ಣ ಖಾಸಗೀಕರಣ ಇಲ್ಲ ಎಂದ ಕೇಂದ್ರ ಸರ್ಕಾರ

Published On - 1:45 pm, Thu, 18 March 21