Gyanvapi Case: ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪೂಜೆಗೆ ಅನುಮತಿ ಕೋರಿ ಅರ್ಜಿ; ತೀರ್ಪು ನ. 14ಕ್ಕೆ ಮುಂದೂಡಿಕೆ
ವಾರಣಾಸಿಯ ತ್ವರಿತ ನ್ಯಾಯಾಲಯವು ಜ್ಞಾನವಾಪಿ ಮಸೀದಿ ಆವರಣಕ್ಕೆ ಮುಸ್ಲಿಮರ ಪ್ರವೇಶ ಮತ್ತು ಅಲ್ಲಿ ಪತ್ತೆಯಾಗಿದೆ ಎನ್ನಲಾದ ಶಿವಲಿಂಗವನ್ನು ಪೂಜಿಸಲು ಅನುಮತಿ ನೀಡಲು ಹಿಂದೂಗಳು ಸಲ್ಲಿಸಿದ್ದ ಅರ್ಜಿಯ ತೀರ್ಪನ್ನು ಇಂದು ಪ್ರಕಟಿಸಬೇಕಿತ್ತು.
ವಾರಾಣಸಿ: ದೇಶಾದ್ಯಂತ ಚರ್ಚೆಯಲ್ಲಿರುವ ಜ್ಞಾನವಾಪಿ ಮಸೀದಿ (Gyanvapi Masjid) ವಿವಾದಕ್ಕೆ ಸಂಬಂಧಿಸಿದಂತೆ ಇನ್ನೂ ಯಾವುದೇ ಕಾನೂನು ಆದೇಶ ಹೊರಬಿದ್ದಿಲ್ಲ. ವಾರಣಾಸಿಯ ತ್ವರಿತ ನ್ಯಾಯಾಲಯವು ಜ್ಞಾನವಾಪಿ ಮಸೀದಿ ಆವರಣಕ್ಕೆ ಮುಸ್ಲಿಮರ ಪ್ರವೇಶ ಮತ್ತು ಅಲ್ಲಿ ಪತ್ತೆಯಾಗಿದೆ ಎನ್ನಲಾದ ಶಿವಲಿಂಗವನ್ನು (Shivling) ಪೂಜಿಸಲು ಅನುಮತಿ ನೀಡಲು ಹಿಂದೂಗಳು ಸಲ್ಲಿಸಿದ್ದ ಅರ್ಜಿಯ ತೀರ್ಪನ್ನು ಇಂದು ಪ್ರಕಟಿಸಬೇಕಿತ್ತು. ಆದರೆ, ಈ ಪ್ರಕರಣದ ವಿಚಾರಣೆಯನ್ನು ನವೆಂಬರ್ 14ಕ್ಕೆ ಮುಂದೂಡಲಾಗಿದೆ. ವಾರಾಣಸಿ ಕೋರ್ಟ್‌ನ ಸಿವಿಲ್ ನ್ಯಾಯಾಧೀಶ ಮಹೇಂದ್ರ ಪಾಂಡೆ ಅಕ್ಟೋಬರ್ 27ರಂದು ವಾದ-ಪ್ರತಿವಾದವನ್ನು ಆಲಿಸಿ, ತಮ್ಮ ತೀರ್ಪನ್ನು ಕಾಯ್ದಿರಿಸಿದ್ದರು.
ಈ ಹಿಂದೆ ಜ್ಞಾನವಾಪಿ ಸಂಕೀರ್ಣದಲ್ಲಿ ಪತ್ತೆಯಾದ ಶಿವಲಿಂಗದ ಆಯಸ್ಸನ್ನು ನಿರ್ಧರಿಸಲು ಕಾರ್ಬನ್ ಡೇಟಿಂಗ್ನಂತಹ ವೈಜ್ಞಾನಿಕ ತನಿಖೆ ನಡೆಸಬೇಕು ಎಂಬ ಹಿಂದೂ ಅರ್ಜಿದಾರರ ಬೇಡಿಕೆಯನ್ನು ವಾರಾಣಸಿ ನ್ಯಾಯಾಲಯ ತಿರಸ್ಕರಿಸಿತ್ತು. ಸ್ವಯಂಭೂ ಜ್ಯೋತಿರ್ಲಿಂಗ ಭಗವಾನ್ ವಿಶ್ವೇಶ್ವರನ ಪ್ರಾರ್ಥನೆಗೆ ತಕ್ಷಣದ ಅನುಮತಿ, ಸಂಪೂರ್ಣ ಜ್ಞಾನವಾಪಿ ಸಂಕೀರ್ಣವನ್ನು ಹಿಂದೂಗಳಿಗೆ ಹಸ್ತಾಂತರಿಸುವುದು ಮತ್ತು ನಿಷೇಧಿಸುವುದು, ಜ್ಞಾನವಾಪಿ ಸಂಕೀರ್ಣದ ಆವರಣದೊಳಗೆ ಮುಸ್ಲಿಮರ ಪ್ರವೇಶ ಈ 3 ಪ್ರಮುಖ ಬೇಡಿಕೆಗಳ ಮೇಲೆ ಸಿವಿಲ್ ನ್ಯಾಯಾಧೀಶರ ಹಿರಿಯ ವಿಭಾಗದ ತ್ವರಿತ ನ್ಯಾಯಾಲಯವು ತೀರ್ಪನ್ನಿ ಇಂದಿಗೆ ಕಾಯ್ದಿರಿಸಿತ್ತು.
ಇದನ್ನೂ ಓದಿ: ಜ್ಞಾನವಾಪಿ ಮಸೀದಿಯಲ್ಲಿ ಪತ್ತೆಯಾದ ಶಿವಲಿಂಗದ ವೈಜ್ಞಾನಿಕ ತನಿಖೆಗೆ ಮನವಿ; ವಿಚಾರಣೆ ಅಕ್ಟೋಬರ್ 11ಕ್ಕೆ ಮುಂದೂಡಿಕೆ
ಮಸೀದಿಯನ್ನು ನಿರ್ವಹಿಸುವ ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿ (ಎಐಎಂಸಿ) ವಿಶ್ವ ವೈದಿಕ ಸನಾತನ ಸಂಘದ (ವಿವಿಎಸ್‌ಎಸ್) ಆವರಣದ ನಿಷೇಧ ಮತ್ತು ಸ್ವಾಧೀನಕ್ಕೆ ಕೋರಿ ಹೂಡಿರುವ ದಾವೆಯ ನಿರ್ವಹಣೆಯನ್ನು ಪ್ರಶ್ನಿಸಿತ್ತು. ಮಸೀದಿಯನ್ನು ವಕ್ಫ್ ಆಸ್ತಿಯಾಗಿ ನೋಂದಾಯಿಸಲಾಗಿದೆ. ಸಿವಿಲ್ ನ್ಯಾಯಾಲಯವು ಈ ವಿಷಯವನ್ನು ಕೇಳಲು ಯಾವುದೇ ಅಧಿಕಾರವನ್ನು ಹೊಂದಿಲ್ಲ ಎಂದು ಅದು ವಾದಿಸಿತ್ತು. ವಕ್ಫ್ ನ್ಯಾಯಮಂಡಳಿಗೆ ಮಾತ್ರ ಈ ವಿಷಯವನ್ನು ಆಲಿಸುವ ಅಧಿಕಾರವಿದೆ ಎಂದು ಎಐಎಂಸಿ ವಾದಿಸಿತ್ತು.
#UPDATE | Verdict in the Gyanvapi mosque case to not come today; next date of hearing to be November 14th.#UttarPradesh https://t.co/a4IBgJYR2m
— ANI UP/Uttarakhand (@ANINewsUP) November 8, 2022
ಎಐಎಂಸಿಯ ವಕೀಲ ಮಿರಾಜುದ್ದೀನ್ ಸಿದ್ದಿಕಿ, ಜ್ಞಾನವಾಪಿ ಮಸೀದಿ ವಕ್ಫ್ ಆಸ್ತಿ ಎಂಬುದಕ್ಕೆ ಪುರಾವೆ ಸಲ್ಲಿಸಿದ್ದೇವೆ ಎಂದು ಹೇಳಿದ್ದರು. ಇದು ಹಿಂದೂ ದೇವಾಲಯದ ಸ್ಥಳ ಎಂದು ಹೇಳಿ ಹಿಂದೂ ಮಹಿಳೆಯರ ಗುಂಪು ಪ್ರತ್ಯೇಕವಾಗಿ ಮಸೀದಿಯಲ್ಲಿ ಪೂಜೆ ಮಾಡುವ ಹಕ್ಕಿಗಾಗಿ ಮನವಿ ಸಲ್ಲಿಸಿತ್ತು.
ಪ್ರಸ್ತುತ ಮುಸ್ಲಿಮರಿಗೆ ಜ್ಞಾನವಾಪಿ ಮಸೀದಿಯೊಳಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಅಕ್ಟೋಬರ್‌ನಲ್ಲಿ ನಡೆದ ಹಿಂದಿನ ವಿಚಾರಣೆಯ ಸಂದರ್ಭದಲ್ಲಿ ವಾರಾಣಸಿ ನ್ಯಾಯಾಲಯವು ‘ಶಿವಲಿಂಗ’ದ ವೈಜ್ಞಾನಿಕ ತನಿಖೆಗೆ ಅನುಮತಿ ನೀಡಲು ನಿರಾಕರಿಸಿತ್ತು. ಹಿಂದೂ ಕಡೆಯವರು ಜ್ಞಾನವಾಪಿ ಮಸೀದಿಯ ವಝುಖಾನಾದಲ್ಲಿ ಕಂಡುಬಂದಿರುವ ಶಿವಲಿಂಗ ಎಂದು ಹೇಳಿಕೊಳ್ಳುವ ರಚನೆಯ ಕಾರ್ಬನ್ ಡೇಟಿಂಗ್ಗೆ ಒತ್ತಾಯಿಸಿದ್ದರು.
ಆದರೆ, ಅಲ್ಲಿ ಸಿಕ್ಕಿರುವ ರಚನೆಯು ಶಿವಲಿಂಗವಲ್ಲ, ಅದೊಂದು ‘ಕಾರಂಜಿ’ ಎಂದು ಮುಸ್ಲಿಂ ಸಮುದಾಯದವರು ಹೇಳಿದ್ದರು. ನಂತರ ಹಿಂದೂ ಕಡೆಯವರು ವಾರಾಣಸಿ ಜಿಲ್ಲಾ ನ್ಯಾಯಾಲಯದಲ್ಲಿ ಸೆಪ್ಟೆಂಬರ್ 22ರಂದು ಅರ್ಜಿಯನ್ನು ಸಲ್ಲಿಸಿದ್ದು, ಅವರು ‘ಶಿವಲಿಂಗ’ ಎಂದು ಹೇಳಿಕೊಳ್ಳುವ ವಸ್ತುವಿನ ಕಾರ್ಬನ್ ಡೇಟಿಂಗ್ ಅನ್ನು ಕೋರಿದ್ದರು.
ಇದನ್ನೂ ಓದಿ: Gyanvapi Case: ಜ್ಞಾನವಾಪಿ ಪ್ರಕರಣ; ಶಿವಲಿಂಗದ ಪೂಜೆ ಕುರಿತು ಇಂದು ವಾರಾಣಸಿ ಕೋರ್ಟ್ನಿಂದ ಮಹತ್ವದ ತೀರ್ಪು
ಜ್ಞಾನವಾಪಿ ಮಸೀದಿ ಆವರಣದಲ್ಲಿ ಕಂಡುಬಂದ ಶಿವಲಿಂಗದ ವೈಜ್ಞಾನಿಕ ತನಿಖೆಗೆ ಅನುಮತಿ ನಿರಾಕರಿಸಿದ ವಾರಾಣಸಿ ನ್ಯಾಯಾಲಯದ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ನ ಮೊರೆ ಹೋಗುವುದಾಗಿ ಹಿಂದೂ ಸಮುದಾಯ ಹೇಳಿತ್ತು. ಕಾರ್ಬನ್ ಡೇಟಿಂಗ್ ಎನ್ನುವುದು ಪುರಾತತ್ತ್ವ ಶಾಸ್ತ್ರದ ವಸ್ತು ಅಥವಾ ಪುರಾತತ್ತ್ವ ಶಾಸ್ತ್ರದ ಸಂಶೋಧನೆಗಳ ವಯಸ್ಸನ್ನು ಕಂಡುಹಿಡಿಯುವ ವೈಜ್ಞಾನಿಕ ಪ್ರಕ್ರಿಯೆಯಾಗಿದೆ. ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಾಲಯ ಜ್ಞಾನವಾಪಿ ಮಸೀದಿ-ಶೃಂಗಾರ್ ಗೌರಿ ಪ್ರಕರಣದ ಆದೇಶವನ್ನು ಕಾಯ್ದಿರಿಸಿತ್ತು. ಜ್ಞಾನವಾಪಿ ಮಸೀದಿಯಲ್ಲಿ ಪೂಜೆಗೆ ಸಂಬಂಧಿಸಿದ ಪ್ರಕರಣವನ್ನು ಸಿವಿಲ್ ನ್ಯಾಯಾಧೀಶರಿಂದ ವಾರಾಣಸಿಯ ಜಿಲ್ಲಾ ನ್ಯಾಯಾಧೀಶರಿಗೆ ವರ್ಗಾಯಿಸಿ ಮೇ 20ರಂದು ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು.
ಮೇ 16ರಂದು ಜ್ಞಾನವಾಪಿ ಮಸೀದಿಯ ಆವರಣದಲ್ಲಿ ವಿಡಿಯೋ ಸಮೀಕ್ಷೆ ನಡೆಸಲಾಗಿತ್ತು. ಮುಸ್ಲಿಮರು ನಮಾಜ್ಗೂ ಮೊದಲು ಬಳಸುತ್ತಿದ್ದ ಕೊಳದ ಬಳಿ ಶಿವಲಿಂಗದ ಆಕೃತಿ ಪತ್ತೆಯಾಗಿದೆ ಎಂದು ಹೇಳಲಾಗಿತ್ತು. ಆ ಆಕೃತಿಯನ್ನು ಕಾರ್ಬನ್ ಡೇಟಿಂಗ್ಗೆ ಒಳಪಡಿಸಬೇಕೆಂದು ಹಿಂದೂ ಪರ ಅರ್ಜಿದಾರರು ಮನವಿ ಮಾಡಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:11 pm, Tue, 8 November 22