AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋಂಕು ಹರಡುವಿಕೆಯ ವೇಗ ಶೇ.5ರಷ್ಟು ಕಡಿಮೆ; ಎರಡನೇ ಅಲೆ ಉತ್ತುಂಗಕ್ಕೆ ತಲುಪಿ ಇಳಿಯುವ ಸೂಚನೆಯೇ ಇದು?

Coronavirus India: ಶನಿವಾರ (ಮೇ 8) ದಾಖಲಾಗಿದ್ದ ಒಟ್ಟು 4,03,738 ಪ್ರಕರಣಗಳಲ್ಲಿ ಶೇ.71ರಷ್ಟು ಪಾಲು ಭಾರತದ 10 ರಾಜ್ಯಗಳದ್ದಾಗಿದ್ದು, ಮಹಾರಾಷ್ಟ್ರ, ಕರ್ನಾಟಕ, ದೆಹಲಿ, ಕೇರಳ, ತಮಿಳುನಾಡು, ಉತ್ತರ ಪ್ರದೇಶ, ಆಂಧ್ರ ಪ್ರದೇಶ, ಪಶ್ಚಿಮ ಬಂಗಾಳ, ರಾಜಸ್ಥಾನ, ಹರಿಯಾಣ ಈ ಹತ್ತು ರಾಜ್ಯಗಳು ಸೋಂಕು ಹೆಚ್ಚಳದಲ್ಲಿ ಪ್ರಮುಖ ಪಾತ್ರ ವಹಿಸಿವೆ.

ಸೋಂಕು ಹರಡುವಿಕೆಯ ವೇಗ ಶೇ.5ರಷ್ಟು ಕಡಿಮೆ; ಎರಡನೇ ಅಲೆ ಉತ್ತುಂಗಕ್ಕೆ ತಲುಪಿ ಇಳಿಯುವ ಸೂಚನೆಯೇ ಇದು?
ಸಂಗ್ರಹ ಚಿತ್ರ
Skanda
| Updated By: preethi shettigar|

Updated on: May 10, 2021 | 11:28 AM

Share

ದೆಹಲಿ: ಕೊರೊನಾ ಎರಡನೇ ಅಲೆಯ ಸುಳಿಯಲ್ಲಿರುವ ಭಾರತದಲ್ಲಿ ಕಳೆದೊಂದು ವಾರದಲ್ಲಿ 27 ಸಾವಿರ ಸಾವು ಹಾಗೂ 27.4 ಲಕ್ಷ ಹೊಸ ಪ್ರಕರಣಗಳು ದಾಖಲಾಗಿವೆ. ಈ ಅವಧಿಯಲ್ಲಿ ಪ್ರಕರಣಗಳು ಏರಿಕೆ ಕಂಡ ವೇಗ ಶೇ.5ರಷ್ಟು ಇದ್ದು, ಇದು ಎರಡನೇ ಅಲೆಯ ವೇಳೆಯ ಅತಿ ಕಡಿಮೆ ವೇಗದ ಏರಿಕೆಯಾದರೂ ಸದರಿ ವಾರದಲ್ಲಿ ಕಂಡುಬಂದ ಪ್ರಕರಣಗಳ ಸಂಖ್ಯೆ ಮಾತ್ರ ಇದುವರೆಗಿನ ಗರಿಷ್ಠ ಮಟ್ಟವನ್ನು ತಲುಪಿದೆ ಎನ್ನುವುದು ಗಮನಾರ್ಹ. ಒಟ್ಟಾರೆ ಪ್ರಕರಣಗಳಲ್ಲಿ ಏರಿಕೆ ಕಂಡಿರುವುದು ಹಾಗೂ ಏರುವಿಕೆಯ ವೇಗ ಕಡಿಮೆಯಾಗುತ್ತಿರುವುದು ಗಮನಿಸಿದರೆ ಭಾರತದಲ್ಲಿ ಕೊರೊನಾ ಎರಡನೇ ಅಲೆ ಉಚ್ಛ್ರಾಯ ಸ್ಥಿತಿಯನ್ನು ತಲುಪಿದೆಯಾ ಎಂಬ ಅನುಮಾನವನ್ನು ಕೆಲ ತಜ್ಞರು ವ್ಯಕ್ತಪಡಿಸಿದ್ದಾರೆ.

ಮೇ 3 ರಿಂದ ಮೇ 9ನೇ ತಾರೀಖಿನ ನಡುವಲ್ಲಿ ದೇಶದಲ್ಲಿ 27,243 ಸಾವು ಕೊರೊನಾದಿಂದ ಸಂಭವಿಸಿವೆ. ಆ ಮೂಲಕ ಇದಕ್ಕೂ ಹಿಂದಿನ ವಾರ 23,781ರಷ್ಟಿದ್ದ ಮರಣ ಪ್ರಮಾಣ ಸುಮಾರು 4 ಸಾವಿರದಷ್ಟು ಏರಿಕೆ ಕಂಡಿದೆ ಹಾಗೂ ಮೊಟ್ಟಮೊದಲ ಬಾರಿಗೆ ದೇಶದಲ್ಲಿ ಸಾವಿನ ಪ್ರಮಾಣ ಒಂದು ವಾರದೊಳಗೆ 25 ಸಾವಿರದ ಗಡಿ ದಾಟಿದೆ. ಇನ್ನೊಂದೆಡೆ ಕಳೆದ ವಾರದಲ್ಲಿ 26.13 ಲಕ್ಷದಷ್ಟು ಪತ್ತೆಯಾಗಿದ್ದ ಹೊಸ ಸೋಂಕಿತರ ಸಂಖ್ಯೆ ಈ ವಾರದಲ್ಲಿ 27,44,545ರಷ್ಟು ಪತ್ತೆಯಾಗಿದೆ.

ನಿನ್ನೆ ಭಾನುವಾರ (ಮೇ 9) ಪತ್ತೆಯಾದ ಹೊಸ ಪ್ರಕರಣಗಳ ಪ್ರಮಾಣ 3,66,902ರಷ್ಟಿದ್ದು, ಕಳೆದ ಐದು ದಿನಗಳಲ್ಲಿ ಮೊಟ್ಟಮೊದಲ ಬಾರಿಗೆ 4 ಲಕ್ಷಕ್ಕಿಂತ ಕಡಿಮೆ ಪ್ರಕರಣ ದಾಖಲಾಗಿವೆ. ಇದುವರೆಗೆ 24 ತಾಸಿನಲ್ಲಿ ಅತಿ ಹೆಚ್ಚು ಪ್ರಕರಣಗಳು ಕಳೆದ ಗುರುವಾರದಂದು ದಾಖಲಾಗಿದ್ದು, ಅಲ್ಲಿಂದೀಚೆಗೆ ಪ್ರತಿನಿತ್ಯವೂ ಹೊಸ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಲೇ ಬಂದಿದೆ ಎನ್ನುವುದು ಗಮನಾರ್ಹ. ಜತೆಗೆ ಕಳೆದೆರೆಡು ದಿನಗಳಿಂದ 4 ಸಾವಿರಕ್ಕೂ ಹೆಚ್ಚಿದ್ದ ಮರಣ ಪ್ರಮಾಣ ನಿನ್ನೆ 3,751 ಆಗಿರುವುದು ಸಾವಿನ ಪ್ರಮಾಣದಲ್ಲೂ ಇಳಿಕೆ ಆಗುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.

ಭಾರತದಲ್ಲಿ ಕೊರೊನಾ ಸೋಂಕಿತರ ಮರಣ ಪ್ರಮಾಣ ಶೇ.1ಕ್ಕೆ ತಲುಪಿದೆಯಾದರೂ ಕೆಲ ರಾಜ್ಯಗಳಲ್ಲಿ ಪ್ರತಿನಿತ್ಯ ದಾಖಲಾಗುವ ಸೊಂಕಿತರ ಸಂಖ್ಯೆಯಲ್ಲಿ ಇಳಿಕೆಯಾಗಿರುವುದು ಕೊಂಚ ಸಮಾಧಾನ ಮೂಡಿಸಿದೆ. ಶನಿವಾರ (ಮೇ 8) ದಾಖಲಾಗಿದ್ದ ಒಟ್ಟು 4,03,738 ಪ್ರಕರಣಗಳಲ್ಲಿ ಶೇ.71ರಷ್ಟು ಪಾಲು ಭಾರತದ 10 ರಾಜ್ಯಗಳದ್ದಾಗಿದ್ದು, ಮಹಾರಾಷ್ಟ್ರ, ಕರ್ನಾಟಕ, ದೆಹಲಿ, ಕೇರಳ, ತಮಿಳುನಾಡು, ಉತ್ತರ ಪ್ರದೇಶ, ಆಂಧ್ರ ಪ್ರದೇಶ, ಪಶ್ಚಿಮ ಬಂಗಾಳ, ರಾಜಸ್ಥಾನ, ಹರಿಯಾಣ ಈ ಹತ್ತು ರಾಜ್ಯಗಳು ಸೋಂಕು ಹೆಚ್ಚಳದಲ್ಲಿ ಪ್ರಮುಖ ಪಾತ್ರ ವಹಿಸಿವೆ. ಆದರೆ, ಈಗ ಭಾನುವಾರದ ಅಂಕಿ ಅಂಶಗಳನ್ನು ಗಮನಿಸಿದರೆ ಸೋಂಕು ಏರುವ ವೇಗ ಕಡಿಮೆಯಾಗಿರುವುದು ತಜ್ಞರಿಗೆ ಕೊಂಚ ಸಮಾಧಾನ ಮೂಡಿಸಿದ್ದು, ಇದೊಂದು ವೇಳೆ ಉತ್ತುಂಗಕ್ಕೆ ತಲುಪಿ ಇಳಿಮುಖವಾಗುತ್ತಿರುವ ಸೂಚನೆಯೇ ಹೌದಾದಲ್ಲಿ ಎರಡನೇ ಅಲೆ ಇನ್ನು ಕೆಲ ದಿನಗಳಲ್ಲಿ ಹತೋಟಿಗೆ ಬರಬಹುದು ಎನ್ನುತ್ತಿದ್ದಾರೆ. ಅದಾಗ್ಯೂ ಈ ಹೊತ್ತಿನಲ್ಲಿ ಜನ ಮೈಮರೆತು ಕೊರೊನಾ ನಿಯಮಾವಳಿಗಳನ್ನು ಪಾಲಿಸದಿದ್ದರೆ ಇದು ಮತ್ತೆ ಅಪಾಯಕ್ಕೆ ನೂಕಲಿದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.

ಇದನ್ನೂ ಓದಿ: ಕೊವಿಡ್​ 19 ಚಿಕಿತ್ಸೆಗೆ ವರವಾಗಲಿದೆಯೇ ಪಶು ಔಷಧಿ ಐವೆರ್ಮೆಕ್ಟಿನ್?