ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ವಿರುದ್ಧ ಭುಗಿಲೆದ್ದ ಅಸಮಾಧಾನ, ಕಾಂಗ್ರೆಸ್ ಹೈಕಮಾಂಡ್ ಮಧ್ಯಪ್ರವೇಶ
ಸಮಸ್ಯೆಯ ತೀವ್ರತೆಯನ್ನು ಅರ್ಥಮಾಡಿಕೊಂಡಂತೆ ಕಾಣುತ್ತಿರುವ ಪಕ್ಷ್ದದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮೂವರು ಹಿರಿಯ ಸದಸ್ಯರ ಸಮಿತಿಯೊಂದನ್ನು ರಚಿಸಿ ಪಂಜಾಬಿನ ನಾಯಕರನ್ನು ವೈಯಕ್ತಿಕವಾಗಿ ಮಾತಾಡಿಸಿ ಅವರ ದೂರಗಳನ್ನು ಆಲಿಸಲು ತಿಳಿಸಿದ್ದಾರೆ.
ಅಮೃತ್ಸರ: ಕಾಂಗ್ರೆಸ್ ಪಕ್ಷಕ್ಕೆ ತನ್ನ ಅಸ್ತಿತ್ವ ಉಳಿಸಿಕೊಳ್ಳುವ ಬಗ್ಗೆ ಯೋಚನೆ ಇದ್ದಂತಿಲ್ಲ. ದೇಶದ ಹಲವಾರು ರಾಜ್ಯಗಳಲ್ಲಿ ಅದು ರಾಜಕೀಯವಾಗಿ ಮಣ್ಣುಮುಕ್ಕಿದೆ. ಅದು ಅಧಿಕಾರದಲ್ಲಿರುವ ಬೆರಳೆಣಿಕೆಯ ರಾಜ್ಯಗಳಲ್ಲೂ ಅದರ ನಾಯಕರು ತಮ್ಮ ಒಳಜಗಳಗಳಿಂದ ಪಕ್ಷದ ಅಳಿದುಹೋಗುತ್ತಿರುವ ವರ್ಚಿಸ್ಸಿಗೆ ಮತ್ತಷ್ಟು ಮಸಿ ಬಳಿಯುವ ಪ್ರಯತ್ನ ಮಾಡುತ್ತಿದ್ದಾರೆ. ಯಾವುದೇ ಪಕ್ಷದೊಂದಿಗೆ ಮೈತ್ರಿಯಿಲ್ಲದೆ ಕಾಂಗ್ರೆಸ್ ಪಕ್ಷ ಸರ್ಕಾರ ನಡೆಸುತ್ತಿರುವ ರಾಜ್ಯಗಳಲ್ಲಿ ಪಂಜಾಬ ಸಹ ಒಂದು. ರಾಜ್ಯದ ಮುಖ್ಯಮಂತ್ರಿ ಮತ್ತು 2017ರಲ್ಲಿ ನಡೆದ ಚುನಾವಣೆಯಲ್ಲಿ 10 ವರ್ಷಗಳ ಅಕಾಲಿ-ಬಿಜೆಪಿ ಮೈತ್ರಿ ಸರ್ಕಾರವನ್ನು ಪತನಗೊಳಿಸಿ ಕಾಂಗ್ರೆಸ್ ಅಧಿಕಾರಪಡೆದುಕೊಳ್ಳುವಂತೆ ಮಾಡಿದ ಕ್ಯಾಪ್ಟನ್ ಅಮರಿಂದರ್ ಸಿಂಗ್ ವಿರುದ್ಧ ಸ್ಥಳೀಯ ನಾಯಕರು ಅಸಾಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಮುಂದಿನ ವರ್ಷ ನಡೆಯಲಿರುವ ವಿಧಾನ ಸಭಾ ಚುನಾವಣೆಯಲ್ಲಿ ಕ್ಯಾಪ್ಟನ್ (ಅಮರಿಂದರ್ ಸಿಂಗ್ ಇದೇ ಹೆಸರಿನಿಂದ ಜನಪ್ರಿಯರು) ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸ್ಫರ್ಧೆಗಿಳಿದರೆ ಪಕ್ಷದ ಅಭ್ಯರ್ಥಿಗಳು ಗೆಲ್ಲುವುದು ಅಸಾಧ್ಯ ಅಂತ ಅವರು ಹೇಳುತ್ತಿದ್ದಾರೆ.
ಸಮಸ್ಯೆಯ ತೀವ್ರತೆಯನ್ನು ಅರ್ಥಮಾಡಿಕೊಂಡಂತೆ ಕಾಣುತ್ತಿರುವ ಪಕ್ಷ್ದದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮೂವರು ಹಿರಿಯ ಸದಸ್ಯರ ಸಮಿತಿಯೊಂದನ್ನು ರಚಿಸಿ ಪಂಜಾಬಿನ ನಾಯಕರನ್ನು ವೈಯಕ್ತಿಕವಾಗಿ ಮಾತಾಡಿಸಿ ಅವರ ದೂರಗಳನ್ನು ಆಲಿಸಲು ತಿಳಿಸಿದ್ದಾರೆ. ಮಲ್ಲಿಕಾರ್ಜುನ್ ಖರ್ಗೆ ಆವರ ನೇತೃತ್ವದ ಈ ಸಮಿತಿಯು ಸೋಮವಾರದಂದು, ಪಂಜಾಬ್ ಪ್ರದೇಶ ಕಾಂಗ್ರೆಸ್ ನಾಯಕ ಸುನಿಲ್ ಜಾಖರ್ ಸೇರಿದಂತೆ 25 ನಾಯಕರನ್ನು ಭೇಟಿ ಮಾಡಿತು.
ತನ್ನ ಮೊದಲ ಸಭೆಯನ್ನು ಶನಿವಾರದಂದು ದೆಹಲಿಯಲ್ಲಿ ನಡೆಸಿದ ಸಮಿತಿಯು, ಎಲ್ಲಾ ಸಚಿವರು, ಪಕ್ಷದ ರಾಜ್ಯ ಘಟಕದ ಮಾಜಿ ಮತ್ತು ಹಾಲಿ ಮುಖ್ಯಸ್ಥರು, ಸಂಸದರು, ಶಾಸಕರರು ಮತ್ತು ಪಕ್ಷದ ಇತರ ಹಿರಿಯ ನಾಯಕರನ್ನು ಕರೆಸಿ ಮಾತಾಡಲು ನಿರ್ಧಿರಿಸಿದೆ.
ಪಕ್ಷದ ಮೂಲಗಳ ಪ್ರಕಾರ ನಾಯಕರು ತೋಡಿಕೊಳ್ಳುತ್ತಿರುವ ದೂರುಗಳು ವಿಭಿನ್ನ ಬಗೆಯವಾಗಿವೆ. ಕೆಲವರು ಸಂಪುಟದ ಸಚಿವರೊಬ್ಬರ ವಿರುದ್ಧ ಮೀ ಟೂ ಪ್ರಕರಣ ದಾಖಲಾದ ನಂತರದಿಂದ ಕ್ಯಾಪ್ಟನ್ ಕಿರುಕುಳ ನೀಡುತ್ತಿದ್ದಾರೆ ಅಂತ ದೂರಿದ್ದಾರೆ. ಆದರೆ, 2015ರಲ್ಲಿ ಗುರು ಗ್ರಂಥ್ ಸಾಹಿಬ್ ಅಪವಿತ್ರಗೊಂಡ ಪ್ರಕರಣದಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಪೊಲೀಸರು ಗುಂಡು ಹಾರಿಸಿದ್ದರೂ ಸರ್ಕಾರ ದೋಷಿಗಳಿಗೆ ಶಿಕಕ್ಷೆಗೊಳಪಡಿಸಲು ವಿಫಲವಾಗಿದ್ದು ಭಿನ್ನ ನಾಯಕರ ಅಸಾಮಾಧಾನಕ್ಕೆ ಪ್ರಮುಖ ಕಾರಣವಾಗಿದೆ.
ಕಾಂಗ್ರೆಸ್ ಪಕ್ಷವು 2017ರ ಚುನಾವಣೆಗೆ ಮೊದಲು ನೀಡಿದ ಭರವಸೆಗಳಲ್ಲಿ ದೋಷಿಗಳಿಗೆ ಶಿಕ್ಷೆಗೊಳಡಿಸುವುದು ಒಂದಾಗಿತ್ತಾದ್ದರಿಂದ ಈ ಬಾರಿಯ ಚುನಾವಣೆಯಲ್ಲಿ ಮತದಾರರ ಕೋಪ ಎದುರಿಸಬೇಕಾಗುತ್ತದೆ ಎಂದು ಅವರು ಸಮಿತಿಗೆ ಹೇಳಿದ್ದಾರೆ.
ಪಕ್ಷದೊಳಗೆ ಸಿಂಗ್ ಅವರ ಅತಿದೊಡ್ಡ ವೈರಿಯೆಂದರೆ ನವಜೋತ್ ಸಿಂಗ್ ಸಿದ್ಧು, ಇವರಿಬ್ಬರ ನಡುವೆ 2017ರಲ್ಲಿ ಪಕ್ಷ ಜಯಭೇರಿ ಬಾರಿಸಿದ ನಂತರದಿಂದ ಗುದ್ದಾಟ ಜಾರಿಯಲ್ಲಿದೆ. ಅಮರಿಂದರ್ ಅವರ ಸಂಪುಟದಲ್ಲಿ ಎರಡನೇ ಸ್ಥಾನ ಗಿಟ್ಟಿಸಿಲಿದ್ದಾರೆಂದು ಭಾವಿಸಲಾಗಿದ್ದ ಮಾಜಿ ಕ್ರಿಕೆಟರ್ ಸಿದ್ಧು ಅವರು, ಸಿಂಗ್ ಅವರ ವಿರೋಧದಿಂದಾಗಿ ಉಪ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡರು ಎಂದು ವರದಿಯಾಗಿತ್ತು.
ಅದಾದ ನಂತರದಿಂದ ಅವರಿಬ್ಬರ ನಡುವೆ ಕಾದಾಟ ಜಾರಿಯಲ್ಲಿದೆ. ಸಿದ್ಧು ಅವರು ಪಾಕಿಸ್ತಾನದ ಸೇನಾ ಮುಖ್ಯಸ್ಥ ಖಮರ್ ಜಾವೆದ್ ಬಾಜ್ವಾ ಅವರನ್ನು ಆಲಂಗಿಸಿ ಫೋಟೋಗಳಿಗೆ ಪೋಸ್ ನೀಡಿದ್ದು, ಮತ್ತು ಪಾಕಿಸ್ತಾನದ ಪ್ರಧಾನ ಮಂತ್ರಿ ಮತ್ತು ಸಿದ್ಧು ಅವರ ಸ್ನೇಹಿತ ಇಮ್ರಾನ್ ಖಾನ್ ಅವರ ಪರವಾಗಿ ಮಾತಾಡಿದ್ದನ್ನು ಸಿಂಗ್ ಖಂಡಿಸಿದ್ದರು. ತಮ್ಮ ವಿರುದ್ಧ ಸಿದ್ಧು ಕೂಗಾಡಿದ್ದನ್ನು ‘ಸಂಪೂರ್ಣ ಅಶಿಸ್ತು’ ಎಂದಿದ್ದ ಸಿಂಗ್, ಸಿದ್ಧು ಅವರು ಆಮ್ ಆದ್ಮಿ ಪಾರ್ಟಿ ಸೇರಲಿದ್ದಾರೆ ಅಂತಲೂ ಹೇಳಿದ್ದರು.
ಅಮರಿಂದರ್ ಅವರನ್ನು ಟೀಕಿಸಲು ಯಾವದೇ ಆವಕಾಶವನ್ನು ಬಿಟ್ಟುಕೊಡದ ಸಿದ್ಧ ಅವರು, ಮುಖ್ಯಮಂತ್ರಿಗಳು ತನ್ನ ವಿರುದ್ಧ ಮಾಡಿರುವ ಆರೋಪಗಳನ್ನು ಸಾಬೀತು ಮಾಡುವಂತೆ ಸವಾಲು ಎಸೆದಿದ್ದರು.
‘ಬೇರೆ ಯಾವುದೇ ಪಕ್ಷದೆ ಸದಸ್ಯನೊಂದಿಗೆ ನಾನು ಸಭೆ ನಡೆಸಿದ್ದನ್ನುಸಾಬೀತು ಮಾಡಿ. ನನಗೊಂದು ಹುದ್ದೆ ಬೇಕೆಂದು ಇದುವರೆಗೆ ನಾನು ಯಾರನ್ನೂ ಕೇಳಿಲ್ಲ. ನನಗೆ ಬೇಕಾಗಿರೋದು ಪಂಜಾಬಿನ ಏಳಿಗೆ ಅಷ್ಟೇ! ಹಲವಾರು ಬಾರಿ ಕರೆದು ಸಂಪುಟ ದರ್ಜೆ ಸಚಿವನ ಹುದ್ದೆ ತೆಗೆದುಕೊಳ್ಳುವಂತೆ ನನಗೆ ಒತ್ತಾಯಿಸಲಾಗಿತ್ತು. ಆದರೆ ನಾನು ಆ ಪ್ರಸ್ತಾಪಗಳನ್ನು ಅಂಗೀಕರಿಸಲಿಲ್ಲ. ಈಗ ನಮ್ಮ ಗೌರವಾನ್ವಿತ ಹೈಕಮಾಂಡ್ ಮಧ್ಯಪ್ರವೇಶ ಮಾಡಿದೆ, ಅವರ ನಿರ್ಧಾರಕ್ಕಾಗಿ ಕಾಯುತ್ತಿದ್ದೇನೆ,’ ಎಂದು ಸಿದ್ಧು ತಮ್ಮ ಟ್ವೀಟೊಂದರಲ್ಲಿ ಹೇಳಿದ್ದಾರೆ.
(Captain Amarinder Singh Navjot Singh Sidhu Mallikarjun Kharge Congress High Command)
ಇದನ್ನೂ ಓದಿ: ಪಂಜಾಬ್ ಸರ್ಕಾರದಿಂದ ರಾಜ್ಯದ ಎಲ್ಲಾ ಮಹಿಳೆಯರಿಗೆ ಸರ್ಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ