Video: ಐತಿಹಾಸಿಕ ಸಾಧನೆ; ದೇಶೀ ನಿರ್ಮಿತ ಯುದ್ಧನೌಕೆ ನಾಶಕ ಕ್ಷಿಪಣಿ ಪರೀಕ್ಷಾರ್ಥ ಉಡಾವಣೆ
ಈ ಕ್ಷಿಪಣಿಗಳನ್ನು ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ ಅಭಿವೃದ್ಧಿಪಡಿಸಿದೆ.
ದೆಹಲಿ: ಭಾರತವು ಇದೇ ಮೊದಲ ಬಾರಿಗೆ ದೇಶೀಯವಾಗಿ ನಿರ್ಮಿಸಿರುವ ಹೆಲಿಕಾಪ್ಟರ್ನಿಂದ ಹಾರಿಬಿಡಬಹುದಾದ ಯುದ್ಧನೌಕೆ ನಾಶಕ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆಯು ಬುಧವಾರ ಯಶಸ್ವಿಯಾಗಿ ನಡೆಯಿತು. ಈ ಕ್ಷಿಪಣಿಗಳನ್ನು ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (Defence Research and Development Organisation – DRDO) ಅಭಿವೃದ್ಧಿಪಡಿಸಿದೆ.
ಭಾರತೀಯ ನೌಕಾಪಡೆಯು ಬಿಡುಗಡೆ ಮಾಡಿರುವ ವಿಡಿಯೊ ತುಣುಕಿನಲ್ಲಿ 42 ಬಿ ಹೆಲಿಕಾಪ್ಟರ್ ಯುದ್ಧನಕೆ ನಾಶಕ ಕ್ಷಿಪಣಿ ಉಡಾಯಿಸುವುದು ದಾಖಲಾಗಿದೆ. ಒಡಿಶಾದ ಬಾಲಾಸೋರ್ ಕರಾವಳಿಯಲ್ಲಿ ಕ್ಷಿಪಣಿಯ ಪರೀಕ್ಷೆ ನಡೆಯಿತು. ಮತ್ತೊಂದು ಹೆಲಿಕಾಪ್ಟರ್ನಲ್ಲಿದ್ದ ತಜ್ಞರು ಪರೀಕ್ಷಾರ್ಥ ಉಡಾವಣೆಯ ಆಗುಹೋಗುಗಳನ್ನು ಗಮನಿಸುತ್ತಿದ್ದರು.
ಯುದ್ಧನೌಕೆ ನಾಶಕ ಕ್ಷಿಪಣಿಯು ಹೆಲಿಕಾಪ್ಟರ್ನಿಂದ ಬೇರ್ಪಟ್ಟು, ಕೆಲ ಮೀಟರ್ಗಳಷ್ಟು ಕೆಳಗಿಳಿದ ನಂತರ ಅದರ ಮೋಟಾರ್ಗಳು ಚಾಲನೆಯಾದವು. ಬೆಂಕಿಯುಗುಳುತ್ತಾ ಕ್ಷಿಪಣಿಯು ತನ್ನ ಗುರಿಯತ್ತ ಹಾರಿ ಹೋಯಿತು. ‘ಭಾರತೀಯ ನೌಕಾಪಡೆಗಾಗಿ ಅಭಿವೃದ್ಧಿಪಡಿಸಿದ ಮೊದಲ ಯುದ್ಧನೌಕೆ ನಾಶಕ ಕ್ಷಿಪಣಿ ವ್ಯವಸ್ಥೆ ಇದು’ ಎಂದು ಡಿಆರ್ಡಿಒ ಹೇಳಿಕೆಯಲ್ಲಿ ತಿಳಿಸಿದೆ.
#IndianNavy in association with @DRDO_India successfully undertook maiden firing of the first indigenously developed Naval #AntiShip Missile from Seaking 42B helo, today #18May 22 at ITR, Balasore.#AatmaNirbharBharat #MaritimeSecurity@DefenceMinIndia @SpokespersonMoD pic.twitter.com/3AA0F3kIsS
— SpokespersonNavy (@indiannavy) May 18, 2022
ಸಮುದ್ರದಲ್ಲಿ ಪೂರ್ವ ನಿಗದಿತ ಮಾರ್ಗವನ್ನು ಕ್ರಮಿಸಿದ ಕ್ಷಿಪಣಿಯು ನಿರ್ದೇಶಿತ ಗುರಿಯನ್ನು ನಿಖರವಾಗಿ ತಲುಪಿತು. ಕ್ಷಿಪಣಿಯು ಮಾರ್ಗ ಕ್ರಮಿಸುವ ಪ್ರತಿ ಹಂತವನ್ನೂ ದಾಖಲು ಮಾಡಲಾಯಿತು. ಕ್ಷಿಪಣಿಯ ಉಡಾವಣೆ, ನಿರ್ದೇಶನ ಕ್ರಮ, ಗುರಿಯನ್ನು ಅದು ನಾಶಪಡಿಸುವ ರೀತಿಯನ್ನು ಕ್ರಮಬದ್ಧವಾಗಿ ಗಮನಿಸಿ, ಪ್ರತಿಹಂತದಲ್ಲಿಯೂ ಇದು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವುದನ್ನು ಖಾತ್ರಿಪಡಿಸಿಕೊಳ್ಳಲಾಯಿತು. ‘ಎಲ್ಲ ಮುಖ್ಯ ವಸ್ಥೆ ಮತ್ತು ಉಪ ವ್ಯವಸ್ಥೆಗಳು ಸಮರ್ಪಕವಾಗಿ ಕೆಲಸ ಮಾಡಿದವು’ ಎಂದು ಡಿಆರ್ಡಿಒ ಹೇಳಿದೆ.
ಕ್ಷಿಪಣಿಯಲ್ಲಿ ಹಲವು ಸೆನ್ಸಾರ್ಗಳನ್ನೂ ಅಳವಡಿಸಲಾಗಿದೆ. ಹೀಗಾಗಿ ಕ್ಷಿಪಣಿ ಕಾರ್ಯನಿರ್ವಹಿಸುವ ಪ್ರತಿ ಹಂತವೂ ಸಮರ್ಪಕವಾಗಿ ದಾಖಲಾಗಿದೆ. ನಿಖರ ದಾಳಿಯ ಕ್ಷಿಪಣಿಗಳನ್ನು ದೇಶೀಯವಾಗಿ ನಿರ್ಮಿಸುವ ಯತ್ನದಲ್ಲಿ ಇಂದು ನಡೆದ ಪರೀಕ್ಷಾರ್ಥ ಉಡಾವಣೆಯು ಮಹತ್ವದ ಹೆಜ್ಜೆಯಾಗಿದೆ. ರಕ್ಷಣೆಯಲ್ಲಿ ಸ್ವಾವಲಂಬನೆ ಸಾಧಿಸಬೇಕೆನ್ನುವ ವಿಚಾರದಲ್ಲಿ ಭಾರತೀಯ ನೌಕಾಪಡೆಯ ಬದ್ಧತೆಯನ್ನು ಈ ಹೆಜ್ಜೆಯು ಸಾರಿ ಹೇಳಿದೆ ಎಂದು ನೌಕಾಪಡೆಯು ಟ್ವೀಟ್ನಲ್ಲಿ ತಿಳಿಸಿದೆ.
ಈ ಕ್ಷಿಪಣಿಯು ಹಲವು ಹೊಸ ತಂತ್ರಜ್ಞಾನಗಳನ್ನು ಹೊಂದಿದೆ. ಹೆಲಿಕಾಪ್ಟರ್ ಮೂಲಕ ಉಡಾಯಿಸಬಹುದಾದ ದೇಶೀ ನಿರ್ಮಿತ ಲಾಂಚರ್ ಅನ್ನು ಇದೇ ಮೊದಲ ಬಾರಿಗೆ ಬಳಸಲಾಯಿತು. ಡಿಆರ್ಡಿಒ ಮತ್ತು ಭಾರತೀಯ ನೌಕಾಪಡೆಯ ಹಿರಿಯ ಅಧಿಕಾರಿಗಳು ಪರೀಕ್ಷಾರ್ಥ ಉಡಾವಣೆಯನ್ನು ಹತ್ತಿರದಿಂದ ಗಮನಿಸಿದರು. ಪರೀಕ್ಷೆಯು ಯಶಸ್ಸಿಗಾಗಿ ಡಿಆರ್ಡಿ, ನೌಕಾಪಡೆ ಮತ್ತು ಇತರ ಸಂಬಂಧಿತ ತಂಡಗಳನ್ನು ರಕ್ಷಣಾ ಸಚಿವ ರಾಜನಾಥ ಸಿಂಗ್ ಅಭಿನಂದಿಸಿದ್ದಾರೆ.
ತಾಜಾ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
Published On - 2:35 pm, Wed, 18 May 22