ದೆಹಲಿ: ಭಾರತದಲ್ಲಿ ಕೊರೊನಾ ಎರಡನೇ ಅಲೆ ತೀವ್ರತೆ ಕೊಂಚ ತಗ್ಗುತ್ತಿರುವುದು ಸಮಾಧಾನಕರ ಸಂಗತಿಯಾದರೂ ಅದರ ಬೆನ್ನಲ್ಲೇ ಬಂದು ನಿಂತಿರುವ ರೂಪಾಂತರಿ ವೈರಾಣು ಡೆಲ್ಟಾ ಪ್ಲಸ್ ಮಾದರಿ ತಜ್ಞರಾದಿಯಾಗಿ ಎಲ್ಲರನ್ನೂ ಆತಂಕಕ್ಕೆ ನೂಕಿದೆ. ಭಾರತ ಸರ್ಕಾರದ ಆರೋಗ್ಯ ಸಚಿವಾಲಯವೂ ಡೆಲ್ಟಾ ಪ್ಲಸ್ ಮಾದರಿಯನ್ನು ಚಿಂತನೀಯ ಮಾದರಿ ಎಂದು ಘೋಷಿಸಿ ಅದರಿಂದ ಉಂಟಾಗಬಹುದಾದ ಅಪಾಯ ತಡೆಗಟ್ಟಲು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಎಲ್ಲಾ ರಾಜ್ಯಗಳಿಗೆ ಸೂಚನೆ ನೀಡಿದೆ. ಮೊದಲ ಅಲೆಯಲ್ಲಿದ್ದ ವೈರಾಣುವಿನ ರೂಪಾಂತರಿಯಾದ ಡೆಲ್ಟಾ ಎರಡನೇ ಅಲೆಗೆ ಕಾರಣವಾಯಿತು ಎನ್ನುವಾಗಲೇ ಡೆಲ್ಟಾ ರೂಪಾಂತರಗೊಂಡಿರುವುದು ಸಹಜವಾಗಿಯೇ ಮೂರನೇ ಅಲೆ ಕುರಿತು ಇನ್ನಷ್ಟು ಭಯ ಮೂಡಲು ಕಾರಣವಾಗಿದೆ. ಜತೆಗೆ, ಈಗಿರುವ ಕೊರೊನಾ ಲಸಿಕೆಗಳಿಗೆ ಮಣಿಯದಷ್ಟು ಶಕ್ತಿಶಾಲಿಯಾಗಿ ಡೆಲ್ಟಾ ಪ್ಲಸ್ ಹಬ್ಬಿದರೆ ಏನು ಮಾಡಬೇಕು ಎನ್ನುವುದೂ ಯೋಚನೆಗೆ ದಾರಿ ಮಾಡಿದೆ.
ಡೆಲ್ಟಾ ಪ್ಲಸ್ ಮಾದರಿಯ ಗುಣಲಕ್ಷಣಗಳ ಬಗ್ಗೆ ತಜ್ಞರು ಅಧ್ಯಯನ ನಡೆಸಿದಾಗ ಬಹುಮುಖ್ಯವಾಗಿ ಮೂರು ಸಂಗತಿಗಳು ಬೆಳಕಿಗೆ ಬಂದಿವೆ. ವೇಗವಾಗಿ ಹಬ್ಬುವುದು, ಶ್ವಾಸಕೋಶದ ಜೀವಕೋಶಗಳಿಗೆ ಹೆಚ್ಚು ಪರಿಣಾಮ ಬೀರುವುದು ಹಾಗೂ ಮೋನ್ಕ್ಲೋನಲ್ ಪ್ರತಿಕಾಯಗಳ ಶಕ್ತಿ ಕುಗ್ಗಿಸುವುದು ಡೆಲ್ಟಾಪ್ಲಸ್ಗೆ ಸಾಧ್ಯವಿದೆ ಎನ್ನಲಾಗಿದೆ. ಹೀಗಾಗಿ ಈ ವಿಚಾರಗಳೂ ರೂಪಾಂತರಿಯ ಬಗ್ಗೆ ಗಂಭೀರವಾಗಿ ಯೋಚಿಸಲು ಕಾರಣವಾಗಿವೆ.
ಭಾರತ ಸರ್ಕಾರದ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿರುವಂತೆ ದೇಶದಲ್ಲಿ ಈಗಾಗಲೇ 22 ಡೆಲ್ಟಾ ಪ್ಲಸ್ ಪ್ರಕರಣಗಳು ದೃಢವಾಗಿವೆ. ಈ ಮಾದರಿ ಭಾರತ ಮಾತ್ರವಲ್ಲದೇ ಅಮೆರಿಕಾ, ಬ್ರಿಟನ್, ಪೋರ್ಚುಗಲ್, ಸ್ವಿಜರ್ಲ್ಯಾಂಡ್, ಜಪಾನ್, ಪೋಲ್ಯಾಂಡ್, ನೇಪಾಳ, ಚೀನಾ ಮತ್ತು ರಷ್ಯಾ ದೇಶಗಳಲ್ಲೂ ಕಂಡುಬಂದಿದೆ ಎಂದು ಮಾಹಿತಿ ನೀಡಿದ್ದಾರೆ. ಏಮ್ಸ್ ನಿರ್ದೇಶಕ ರಣ್ದೀಪ್ ಗುಲೇರಿಯಾ ಮುಂದಿನ ಮೂರು ತಿಂಗಳು ಭಾರತಕ್ಕೆ ಅಪಾಯಕಾರಿಯಾಗಿದ್ದು, ಬ್ರಿಟನ್ನಲ್ಲಿ ಈಗ ಏರುಗತಿಯಲ್ಲಿ ಸಾಗುತ್ತಿರುವ ಸೋಂಕಿನ ಪ್ರಮಾಣ ದೇಶಕ್ಕೆ ಎಚ್ಚರಿಕೆಯ ಕರೆಗಂಟೆ ಎಂದಿದ್ದಾರೆ.
ಕೊರೊನಾ ಲಸಿಕೆಯ ವಿಚಾರಕ್ಕೆ ಬಂದರೆ ಭಾರತ್ ಬಯೋಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿದ ಕೊವ್ಯಾಕ್ಸಿನ್ ಹಾಗೂ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿದ ಕೊವಿಶೀಲ್ಡ್ ಈ ಎರಡೂ ಕೊರೊನಾ ಲಸಿಕೆಗಳು ಡೆಲ್ಟಾ ಮಾದರಿ ವಿರುದ್ಧ ಪರಿಣಾಮಕಾರಿಯಾಗಿದ್ದವು. ಆದರೆ, ಇವು ನಿರ್ದಿಷ್ಟವಾಗಿ ಯಾವ ಪ್ರಮಾಣದಲ್ಲಿ ಪ್ರತಿಕಾಯ ಉತ್ಪಾದಿಸಲು ಸಹಕರಿಸಿವೆ ಎನ್ನುವುದು ಹಾಗೂ ಅವುಗಳ ಕುರಿತಾದ ಇನ್ನಿತರ ವಿವರಗಳನ್ನು ಶೀಘ್ರದಲ್ಲೇ ಹಂಚಿಕೊಳ್ಳಲಾಗುವುದು ಎಂದು ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದ್ದಾರೆ.
ರಷ್ಯಾದ ಗಮಾಲಿಯಾ ಕೇಂದ್ರದ ಮುಖ್ಯಸ್ಥ ಅಲೆಕ್ಸಾಂಡರ್ ಗಿಂಟ್ಸ್ ಬರ್ಗ್ ಸ್ಪುಟ್ನಿಕ್ ಲಸಿಕೆಯ ಸಾಮರ್ಥ್ಯದ ಬಗ್ಗೆ ಮಾತನಾಡಿ, ಪ್ರಸ್ತುತ ಇರುವ ಎಲ್ಲಾ ಮಾದರಿಯ ಕೊರೊನಾ ವೈರಾಣುಗಳ ವಿರುದ್ಧವೂ ಸಶಕ್ತವಾಗಿ ಹೋರಾಡಬಲ್ಲದು, ಈಗಾಗಲೇ ಭಾರತದಲ್ಲೂ ಸ್ವಲ್ಪ ಪ್ರಮಾಣದಲ್ಲಿ ಸ್ಪುಟ್ನಿಕ್ ಲಸಿಕೆ ವಿತರಣೆ ಆಗಿದೆ. ರೂಪಾಂತರಿ ವಿರುದ್ಧ ಸ್ಪುಟ್ನಿಕ್ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವ ವಿಶ್ವಾಸವಿದೆ ಎಂದಿದ್ದಾರೆ. ಸದ್ಯ ಸ್ಪುಟ್ನಿಕ್ ಲಸಿಕೆ ಪ್ರಭಾವದ ಕುರಿತು ಅನೇಕ ತಜ್ಞರು ಧನಾತ್ಮಕ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದು, ಇತರೆ ಲಸಿಕೆ ಪಡೆದವರೂ ಎರಡು ಡೋಸ್ ನಂತರ ಸ್ಪುಟ್ನಿಕ್ ಲಸಿಕೆಯನ್ನು ಬೂಸ್ಟರ್ ಡೋಸ್ನಂತೆ ಪಡೆಯುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ.
ಇನ್ನು ಭಾರತದೊಂದಿಗೆ ಅಂತಿಮ ಹಂತದ ಒಪ್ಪಂದ ಮಾಡಿಕೊಳ್ಳಲು ಸಿದ್ಧವಾಗುತ್ತಿರುವ ಫೈಜರ್ ಡೆಲ್ಟಾ ಮಾದರಿ ವಿರುದ್ಧ ತಾನು ಸಿದ್ಧಪಡಿಸಿದ ಲಸಿಕೆ ಪರಿಣಾಮಕಾರಿಯಾಗಿದೆ. ಇದು ಶೇ.90ರಷ್ಟು ಪರಿಣಾಮಕಾರಿ ಎನ್ನುವುದು ಕಂಡುಬಂದಿದೆ. ಹೀಗಾಗಿ ರೂಪಾಂತರಿ ವೈರಾಣು ವಿರುದ್ಧ ಫೈಜರ್ ಉತ್ತಮ ಕಾರ್ಯಕ್ಷಮತೆ ತೋರುವ ವಿಶ್ವಾಸವಿದೆ ಎಂದು ಹೇಳಿಕೊಂಡಿದೆ.
ಇದನ್ನೂ ಓದಿ:
Delta Plus Variant ಹಿಂದಿನ ರೂಪಾಂತರಿಗೆ ಹೋಲಿಸಿದರೆ ಡೆಲ್ಟಾ ಪ್ಲಸ್ ವೈರಸ್ ಹೆಚ್ಚು ಸಾಂಕ್ರಾಮಿಕ: ಡಾ.ರಣದೀಪ್ ಗುಲೇರಿಯಾ
ಡೆಲ್ಟಾ ಪ್ಲಸ್ ವೈರಸ್ ವಿರುದ್ಧ ಕೊವಿಶೀಲ್ಡ್ ಲಸಿಕೆ ಹೆಚ್ಚು ಪರಿಣಾಮಕಾರಿಯಲ್ಲ: ಲ್ಯಾನ್ಸೆಟ್ ವರದಿ