ಎಡಿಟರ್ಸ್ ಗಿಲ್ಡ್ ಪ್ರಕರಣ: ವರದಿ ನೀಡುವುದು ಅಪರಾಧ ಹೇಗಾಗುತ್ತದೆ?: ಸುಪ್ರೀಂಕೋರ್ಟ್
ದೂರುದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಎಸ್.ಗುರು ಕೃಷ್ಣಕುಮಾರ್, 'ಇದು ಗುಂಪುಗಳ ನಡುವಿನ ವೈಷಮ್ಯವನ್ನು ಮತ್ತಷ್ಟು ಹೆಚ್ಚಿಸುವ ವರದಿಯಾಗಿದೆ. ಅವರು ಹೇಳುವಂತೆ, ಇದು ಸತ್ಯಶೋಧನೆಯ ವರದಿಯಾಗಿದ್ದರೆ, ಹಾನಿ ಅನುಭವಿಸಿದ ಸಮುದಾಯದ ಜನರ 100-200 ಫೋಟೋಗಳನ್ನು ಹೊಂದಿರಬೇಕು. ನಾನು ಈ ಎಲ್ಲವನ್ನು ಉಲ್ಲೇಖಿಸಲು ಕಾರಣವೇನೆಂದರೆ, ಅರ್ಜಿದಾರರು ಸಂಪೂರ್ಣವಾಗಿ ನಿಷ್ಪಕ್ಷಪಾತ ವರದಿಯನ್ನು ಸಲ್ಲಿಸಲಾಗಿದೆ ಎಂದು ಚಿತ್ರಿಸಲು ಪ್ರಯತ್ನಿಸುತ್ತಿದ್ದಾರೆ
ದೆಹಲಿ ಸೆಪ್ಟೆಂಬರ್ 15: ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ (Editors Guild Case) ಪ್ರಕರಣದಲ್ಲಿ ಕೆಲವು ತೀಕ್ಷ್ಣ ಅವಲೋಕನಗಳನ್ನು ಮಾಡಿದ ಸುಪ್ರೀಂಕೋರ್ಟ್ (Supreme Court), ಮಣಿಪುರ ಪೊಲೀಸ್ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿರುವ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಅಂಶ ವರದಿಯಲ್ಲಿ ಕಾಣುತ್ತಿಲ್ಲ. ಕೇವಲ ವರದಿಯನ್ನು ನೀಡುವುದು ಹೇಗೆ ಅಪರಾಧವಾಗುತ್ತದೆ ಎಂದು ಕೇಳಿದೆ. ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಸಂಘರ್ಷದ ಕುರಿತು ಮಾಧ್ಯಮಗಳ ವರದಿಯನ್ನು ಪರಿಶೀಲಿಸಲು ಮಣಿಪುರಕ್ಕೆ ತೆರಳಿದ್ದ ಎಡಿಟರ್ಸ್ ಗಿಲ್ಡ್ ಸತ್ಯ ಶೋಧನೆ ತಂಡದ ಮೂವರು ಸದಸ್ಯರು ಮತ್ತು ಅಧ್ಯಕ್ಷರ ವಿರುದ್ಧ ಪ್ರಕರಣ ದಾಖಲಾಗಿತ್ತು. ತಂಡವು ಸಲ್ಲಿಸಿದ ವರದಿಯು “ಸುಳ್ಳು, ಕಪೋಲಕಲ್ಪಿತ ಮತ್ತು ಪ್ರಾಯೋಜಿತ” ಎಂದು ದೂರುದಾರರು ಆರೋಪಿಸಿದ್ದರು. ಮೊದಲ ಮಾಹಿತಿ ವರದಿಯಲ್ಲಿ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಆರೋಪಗಳನ್ನು ಒಳಗೊಂಡಿತ್ತು.
ಶುಕ್ರವಾರ ನಡೆದ ವಿಚಾರಣೆಯಲ್ಲಿ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರ ಪೀಠವು, “ಪ್ರಥಮ ದೃಷ್ಟಿಯಲ್ಲಿ, ಎಫ್‌ಐಆರ್‌ನಲ್ಲಿ ಉಲ್ಲೇಖಿಸಿರುವ ಅಪರಾಧವು ವರದಿಯಲ್ಲಿ ಕಾಣುತ್ತಿಲ್ಲ. ಎಫ್‌ಐಆರ್ ದಾಖಲಿಸಿರುವ ದೂರಿನಲ್ಲಿ ಅಪರಾಧದ ಬಗ್ಗೆ ಪಿಸುಮಾತು ಇಲ್ಲ.
ಎಡಿಟರ್ಸ್ ಗಿಲ್ಡ್ ತಂಡವನ್ನು ಸೇನೆಯು ಮಣಿಪುರಕ್ಕೆ ಆಹ್ವಾನಿಸಿರುವುದನ್ನು ಗಮನಿಸಿದ ಸಿಜೆಐ ಚಂದ್ರಚೂಡ್, “ಮಿಸ್ಟರ್ ಸಾಲಿಸಿಟರ್ ಜನರಲ್, ಸೇನೆಯು ಇಜಿಐಗೆ ಪತ್ರ ಬರೆಯುತ್ತದೆ. ಪಕ್ಷಪಾತ ವರದಿಯಾಗಿದೆ ಎಂದು ಸೇನೆ ಹೇಳಿದೆ. ಅವರು ಅಲ್ಲಿ ಖುದ್ದಾಗಿ ಹೋಗಿ ವರದಿ ಸಲ್ಲಿಸುತ್ತಾರೆ. ಅವರು ಸರಿ ಅಥವಾ ತಪ್ಪಾಗಿರಬಹುದು. ಇದುವೇ ವಾಕ್ ಸ್ವಾತಂತ್ರ್ಯ ಎಂದು ಹೇಳಿದ್ದಾರೆ.
ಎಫ್‌ಐಆರ್ ಅನ್ನು ಏಕೆ ರದ್ದುಗೊಳಿಸಬಾರದು ಎಂದು ದೂರುದಾರರನ್ನು ಪ್ರಶ್ನಿಸಿದ ಪೀಠ, ಉತ್ತರಕ್ಕಾಗಿ ಎರಡು ವಾರಗಳ ಕಾಲಾವಕಾಶ ನೀಡಿದೆ. ಪತ್ರಕರ್ತರಿಗೆ ನೀಡಿರುವ ಮಧ್ಯಂತರ ಪರಿಹಾರವನ್ನು ವಿಸ್ತರಿಸಿದ ನ್ಯಾಯಾಲಯ, ಅಲ್ಲಿಯವರೆಗೆ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದೆ.
ಸೆಪ್ಟೆಂಬರ್ 2 ರಂದು ಪ್ರಕಟವಾದ ತನ್ನ ವರದಿಯಲ್ಲಿ, ಮಣಿಪುರದ ನಾಯಕತ್ವವು ಸಂಘರ್ಷದ ಸಮಯದಲ್ಲಿ ಪಕ್ಷಪಾತಿಯಾಗಿದೆ ಎಂಬ ಸ್ಪಷ್ಟ ಸೂಚನೆಗಳಿವೆ ಎಂದು ಗಿಲ್ಡ್ ಹೇಳಿದೆ. ರಾಜ್ಯದಲ್ಲಿ ಇಂಟರ್‌ನೆಟ್ ನಿಷೇಧ ಹೇರಿದ್ದು, ವರದಿಗಾರಿಕೆಗೆ ಹಾನಿಕರ ಮತ್ತು ಕೆಲವು ಮಾಧ್ಯಮಗಳು ಏಕಪಕ್ಷೀಯ ವರದಿ ಮಾಡಿರುವುದನ್ನು ಟೀಕಿಸಲಾಗಿದೆ.
ದೂರುದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಎಸ್.ಗುರು ಕೃಷ್ಣಕುಮಾರ್, ‘ಇದು ಗುಂಪುಗಳ ನಡುವಿನ ವೈಷಮ್ಯವನ್ನು ಮತ್ತಷ್ಟು ಹೆಚ್ಚಿಸುವ ವರದಿಯಾಗಿದೆ. ಅವರು ಹೇಳುವಂತೆ, ಇದು ಸತ್ಯಶೋಧನೆಯ ವರದಿಯಾಗಿದ್ದರೆ, ಹಾನಿ ಅನುಭವಿಸಿದ ಸಮುದಾಯದ ಜನರ 100-200 ಫೋಟೋಗಳನ್ನು ಹೊಂದಿರಬೇಕು. ನಾನು ಈ ಎಲ್ಲವನ್ನು ಉಲ್ಲೇಖಿಸಲು ಕಾರಣವೇನೆಂದರೆ, ಅರ್ಜಿದಾರರು ಸಂಪೂರ್ಣವಾಗಿ ನಿಷ್ಪಕ್ಷಪಾತ ವರದಿಯನ್ನು ಸಲ್ಲಿಸಲಾಗಿದೆ ಎಂದು ಚಿತ್ರಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅದು ಅದರಿಂದ ದೂರವಿದೆ ಎಂದು ಹೇಳಿದ್ದಾರೆ.
ಮಣಿಪುರ ಸರ್ಕಾರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ನ್ಯಾಯಾಲಯವು ಪತ್ರಕರ್ತರಿಗೆ ಮಧ್ಯಂತರ ರಕ್ಷಣೆಯನ್ನು ವಿಸ್ತರಿಸಬಹು ಪೀಠವು ಹಾಗೆ ಮಾಡಲು ಬಯಸಿದರೆ ಅರ್ಜಿಯನ್ನು ದೆಹಲಿ ಹೈಕೋರ್ಟ್‌ಗೆ ವರ್ಗಾಯಿಸಬಹುದು ಎಂದು ಹೇಳಿದರು.
ಎಡಿಟರ್ಸ್ ಗಿಲ್ಡ್ ಅಧ್ಯಕ್ಷೆ ಸೀಮಾ ಮುಸ್ತಫಾ ಮತ್ತು ಹಿರಿಯ ಪತ್ರಕರ್ತರಾದ ಸೀಮಾ ಗುಹಾ, ಭರತ್ ಭೂಷಣ್ ಮತ್ತು ಸಂಜಯ್ ಕಪೂರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಸೆಪ್ಟೆಂಬರ್ 4 ರಂದು ಹೇಳಿದ್ದರು. ಕೆಲವು ದಿನಗಳ ನಂತರ ಮತ್ತೊಂದು ಎಫ್‌ಐಆರ್ ದಾಖಲಾದ ನಂತರ ಮಾನನಷ್ಟಕ್ಕೆ ಸಂಬಂಧಿಸಿದ ವಿಭಾಗವನ್ನು ಸೇರಿಸಲಾಗಿದೆ.
ಮೊದಲ ಎಫ್‌ಐಆರ್ ಅನ್ನು ಸಾಮಾಜಿಕ ಕಾರ್ಯಕರ್ತ ಎನ್ ಶರತ್ ಸಿಂಗ್ ಮತ್ತು ಎರಡನೆಯದನ್ನು ಇಂಫಾಲ್ ನಿವಾಸಿ ಸೊರೊಖೈಬಾಮ್ ಥೌಡಮ್ ಸಂಗೀತಾ ದಾಖಲಿಸಿದ್ದಾರೆ. ಎಫ್‌ಐಆರ್‌ಗಳನ್ನು ರದ್ದುಗೊಳಿಸುವಂತೆ ಕೋರಿ ಪತ್ರಕರ್ತರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸುತ್ತಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ