ಏಕನಾಥ್ ಶಿಂಧೆ ಬಣದ 16 ಶಾಸಕರ ಅನರ್ಹತೆಗೆ ದೂರು- ಅನರ್ಹಗೊಂಡರೆ ಶಿಂಧೆ ಬಣದಿಂದ ಕಾನೂನು ಹೋರಾಟ
ಮಹಾರಾಷ್ಟ್ರದ ಶಿವಸೇನೆಯ ಬಂಡಾಯ ಶಾಸಕರ ಮೇಲೆ ಈಗ ಶಾಸಕ ಸ್ಥಾನದಿಂದ ಅನರ್ಹತೆಯ ತೂಗುಕತ್ತಿ ನೇತಾಡುತ್ತಿದೆ. ಬಂಡಾಯ ಎದ್ದಿರುವ ಏಕನಾಥ್ ಶಿಂಧೆ ಬಣದ 16 ಮಂದಿ ಶಾಸಕರನ್ನು ಶಾಸಕ ಸ್ಥಾನದಿಂದಲೇ ಅನರ್ಹಗೊಳಿಸಬೇಕೆಂದು ಶಿವಸೇನೆಯ ಉದ್ದವ್ ಠಾಕ್ರೆ ಬಣ ಡೆಪ್ಯುಟಿ ಸ್ಪೀಕರ್ ಗೆ ದೂರು ನೀಡಿದೆ. ಬಂಡಾಯ ಬಣದ ಶಾಸಕರನ್ನು ಅನರ್ಹಗೊಳಿಸಿದರೇ, ಏಕನಾಥ್ ಶಿಂಧೆ ಸುದೀರ್ಘ ಕಾನೂನುಹೋರಾಟ ನಡೆಸಬೇಕಾಗುತ್ತೆ. ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ಬೇಗನೇ ಅಂತ್ಯವಾಗಲ್ಲ.

ಮಹಾರಾಷ್ಟ್ರ ರಾಜಕೀಯದಲ್ಲಿ ಈಗ ಶಿವಸೇನೆ ಪಕ್ಷ ಇಬ್ಬಾಗವಾಗುವುದು ನಿಶ್ಚಿತವಾಗಿದೆ. 38 ಶಿವಸೇನೆಯ ಶಾಸಕರ ಬಲ ಹೊಂದಿರುವ ಏಕನಾಥ್ ಶಿಂಧೆ ಒಂದೆಡೆಯಾದರೇ, 15 ಶಾಸಕರ ಬಲ ಹೊಂದಿರುವ ಉದ್ದವ್ ಠಾಕ್ರೆ ಬಣ ಮತ್ತೊಂದೆಡೆ. ಎರಡು ಬಣಗಳು ಈಗ ತಮ್ಮದೇ ನಿಜವಾದ ಶಿವಸೇನೆ, ನಾವೇ ನಿಜವಾದ ಹಿಂದುತ್ವದ ಪ್ರತಿಪಾದಕರು. ಹಿಂದುತ್ವದ ವಾರಸುದಾರರು ಎಂದು ವಾದ ಮಂಡಿಸುತ್ತಿದ್ದಾರೆ. ಏಕನಾಥ್ ಶಿಂಧೆ ಶಿವಸೇನೆಯ 38 ಶಾಸಕರೊಂದಿಗೆ ಅಸ್ಸಾಂನ ಗುವಾಹಟಿಯಲ್ಲಿ ಠಿಕಾಣಿ ಹೂಡಿದ್ದಾರೆ. ಶಿವಸೇನೆ ನೀಡಿದ್ದ ಡೆಡ್ ಲೈನ್ ನೊಳಗೆ ಮುಂಬೈಗೆ ವಾಪಸ್ ಬಂದು ಸಿಎಂ ಉದ್ದವ್ ಠಾಕ್ರೆ ಜೊತೆಗೆ ಮಾತನಾಡುವ ಮೂಡ್ ನಲ್ಲಿ ಏಕನಾಥ್ ಶಿಂಧೆ ಇಲ್ಲ. ಹೀಗಾಗಿ ಏಕನಾಥ್ ಶಿಂಧೆ ಬಣದ ವಿರುದ್ದ ಈಗ ಉದ್ದವ್ ಠಾಕ್ರೆ ಶಾಸಕರ ಅನರ್ಹತೆಯ ಅಸ್ತ್ರ ಪ್ರಯೋಗಿಸಿದ್ದಾರೆ.
ಏಕನಾಥ್ ಶಿಂಧೆ ಸೇರಿದಂತೆ ಶಿಂಧೆ ಬಣದಲ್ಲಿರುವ 16 ಮಂದಿ ಶಿವಸೇನೆಯ ಶಾಸಕರು ಪಕ್ಷದ ಶಾಸಕಾಂಗ ಸಭೆಗೆ ಹಾಜರಾಗಿಲ್ಲ. ಪಕ್ಷದ ವಿಪ್ ಅನ್ನು ಉಲಂಘಿಸಿದ್ದಾರೆ. ಹೀಗಾಗಿ ಶಾಸಕ ಸ್ಥಾನದಿಂದಲೇ ಅನರ್ಹಗೊಳಿಸಬೇಕೆಂದು ಕೋರಿ ವಿಧಾನಸಭೆಯ ಡೆಪ್ಯುಟಿ ಸ್ಪೀಕರ್ ನರಹರಿ ಜೀರವಾಲೆಗೆ ಉದ್ದವ್ ಠಾಕ್ರೆ ಬಣ ದೂರು ನೀಡಿದೆ. ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್ ಆಗಿದ್ದ ನಾನಾ ಪಟೋಲೆ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಿ ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೇರಿದ್ದಾರೆ. ಬಳಿಕ ಸ್ಪೀಕರ್ ಹುದ್ದೆಗೆ ಯಾರನ್ನು ಆಯ್ಕೆ ಮಾಡಿಲ್ಲ. ಹೀಗಾಗಿ ಈಗ ಮಹಾರಾಷ್ಟ್ರ ಅಸೆಂಬ್ಲಿಯಲ್ಲಿ ಡೆಪ್ಯುಟಿ ಸ್ಪೀಕರ್ ನರಹರಿ ಜೀರವಾಲೆ ಮಾತ್ರ ಇದ್ದಾರೆ, ಸ್ಪೀಕರ್ ಅನುಪಸ್ಥಿತಿಯಲ್ಲಿ ಡೆಪ್ಯುಟಿ ಸ್ಪೀಕರ್ ತೀರ್ಮಾನ ಕೈಗೊಳ್ಳುತ್ತಿದ್ದಾರೆ.
ಈಗ ಡೆಪ್ಯುಟಿ ಸ್ಪೀಕರ್ ಮುಂದೆ ಶಾಸಕರ ಅನರ್ಹತೆಯ ದೂರು ಇದೆ. ಈ ದೂರಿನ ಬಗ್ಗೆ ತೀರ್ಮಾನ ಕೈಗೊಳ್ಳುವ ಮುನ್ನ ಸಹಜ ನ್ಯಾಯದ ಪ್ರಕಾರ, ಡೆಪ್ಯುಟಿ ಸ್ಪೀಕರ್ ನರಹರಿ ಜೀರವಾಲೆ, ಏಕನಾಥ್ ಶಿಂಧೆ ಬಣಕ್ಕೆ ನೋಟೀಸ್ ನೀಡಿ, ಅವರ ಪ್ರತ್ಯುತ್ತರವನ್ನು ಪಡೆಯಬೇಕು. ಆದಾದ ಬಳಿಕ ಶಾಸಕರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕೋ ಬೇಡವೋ ಎಂಬ ತೀರ್ಮಾನ ಕೈಗೊಳ್ಳಬೇಕು.
ಕಾನೂನು ತಜ್ಞರ ಅಭಿಪ್ರಾಯ ಪಡೆದು ಡೆಪ್ಯುಟಿ ಸ್ಪೀಕರ್ ತೀರ್ಮಾನ ಕೈಗೊಳ್ಳಬಹುದು. ಸದ್ಯ ಡೆಪ್ಯುಟಿ ಸ್ಪೀಕರ್ ನರಹರಿ ಜೀರವಾಲೆ ಅವರ ಕಳೆದ ಮೂರು ನಾಲ್ಕು ದಿನದ ತೀರ್ಮಾನಗಳನ್ನು ನೋಡಿದರೇ, ಏಕನಾಥ್ ಶಿಂಧೆ ಬಣದ ಶಾಸಕರನ್ನು ಅನರ್ಹಗೊಳಿಸುವ ಸಾಧ್ಯತೆಯೇ ಹೆಚ್ಚು. ಒಂದು ವೇಳೆ, ಏಕನಾಥ್ ಶಿಂಧೆ ಬಣದ 16 ಶಾಸಕರು ಶಾಸಕ ಸ್ಥಾನದಿಂದ ಅನರ್ಹಗೊಂಡರೇ, ತಮ್ಮ ಅನರ್ಹತೆಯ ತೀರ್ಮಾನ ಪ್ರಶ್ನಿಸಿ, ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಮೆಟ್ಟಿಲೇರಬಹುದು. ಹೈಕೋರ್ಟ್, ಸುಪ್ರೀಂಕೋರ್ಟ್ ನಲ್ಲಿ ಅನರ್ಹತೆಯ ಬಗ್ಗೆ ಏಕನಾಥ್ ಶಿಂಧೆ ಬಣ ಸುದೀರ್ಘ ಕಾನೂನು ಹೋರಾಟ ನಡೆಸಬೇಕಾಗುತ್ತೆ.
ಆದರೆ, ಈ ಅನರ್ಹತೆಯ ದೂರಿಗೆ ಪ್ರತಿಕ್ರಿಯಿಸಿರುವ ಏಕನಾಥ್ ಶಿಂಧೆ, ತಮ್ಮನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಸಾಧ್ಯವಿಲ್ಲ. ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗದೇ ಇದ್ದಿದ್ದೇ ಪಕ್ಷ ವಿರೋಧಿ ಚಟುವಟಿಕೆ ಆಗಲ್ಲ. ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗಲು ವಿಪ್ ಉಲಂಘನೆಯ ಕಾರಣದಿಂದ ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗಲ್ಲ. ಜೊತೆಗೆ ಉದ್ದವ್ ಠಾಕ್ರೆ ಬಣದ ಬಳಿ ಮೂರನೇ ಎರಡರಷ್ಟು ಶಾಸಕರ ಸಂಖ್ಯಾ ಬಲವೇ ಇಲ್ಲ. 37 ಶಿವಸೇನೆಯ ಶಾಸಕರೇ ಪ್ರತೇಕ ಬಣವಾಗಿ ಗುರುತಿಸಿಕೊಂಡಾಗ ಸಂವಿಧಾನದ 10ನೇ ಷೆಡ್ಯೂಲ್ ನಡಿ ನಮ್ಮನ್ನು ಅನರ್ಹಗೊಳಿಸಲು ಸಾಧ್ಯವಿಲ್ಲ, ನಮ್ಮದೇ ನಿಜವಾದ ಶಿವಸೇನೆ ಪಕ್ಷ ಎಂದು ಏಕನಾಥ್ ಶಿಂಧೆ ಹೇಳಿದ್ದಾರೆ.
ಅಜಯ್ ಚೌಧರಿ ಶಿವಸೇನೆ ಶಾಸಕಾಂಗ ನಾಯಕ ಎಂದ ನರಹರಿ
ಆದರೆ ಇದರ ಮಧ್ಯೆಯೇ ಶಿವಸೇನೆಯ ಶಾಸಕಾಂಗ ಪಕ್ಷದ ನಾಯಕರಾಗಿದ್ದ ಏಕನಾಥ್ ಶಿಂಧೆರನ್ನು ಆ ಸ್ಥಾನದಿಂದ ತೆಗೆದು ಹಾಕಿ ಶಾಸಕ ಅಜಯ್ ಚೌಧರಿ ಶಿವಸೇನೆಯ ಶಾಸಕಾಂಗ ಪಕ್ಷದ ನಾಯಕ ಎಂದು ಮಾನ್ಯತೆ ನೀಡಿ ಡೆಪ್ಯುಟಿ ಸ್ಪೀಕರ್ ಆದೇಶ ಹೊರಡಿಸಿದ್ದಾರೆ. ಇದರ ಪತ್ರವನ್ನು ಶಿವಸೇನಾ ಕಚೇರಿಗೆ ಕಳಿಸಿದ್ದಾರೆ. ಏಕನಾಥ್ ಶಿಂಧೆರನ್ನು ಶಿವಸೇನೆಯ ಶಾಸಕಾಂಗ ಪಕ್ಷದ ನಾಯಕ ಸ್ಥಾನದಿಂದಲೇ ತೆಗೆದು ಹಾಕಲಾಗಿದೆ.
ನಮ್ಮೊಂದಿಗೆ ರಾಷ್ಟ್ರೀಯ ಪಕ್ಷ ಇದೆ ಎಂದ ಶಿಂಧೆ -ಪಾಕಿಸ್ತಾನವನ್ನು ಸೋಲಿಸಿದ ಪಕ್ಷ ಇದೆ ಎಂದ ಏಕನಾಥ್
ಇನ್ನೂ ನೆನ್ನೆ ರಾತ್ರಿ ಗುವಾಹಟಿಯ ಹೋಟೇಲ್ ನಲ್ಲಿ ಶಾಸಕರೊಂದಿಗೆ ಮಾತನಾಡುತ್ತಾ ಬಂಡಾಯ ಬಣದ ನಾಯಕ ಏಕನಾಥ್ ಶಿಂಧೆ, ನಮ್ಮೊಂದಿಗೆ ರಾಷ್ಟ್ರೀಯ ಪಕ್ಷ ಇದೆ. ಪಾಕಿಸ್ತಾನವನ್ನು ಸೋಲಿಸಿದ ರಾಷ್ಟ್ರೀಯ ಪಕ್ಷ ಇದೆ. ನಮ್ಮ ಬಂಡಾಯವನ್ನು ಐತಿಹಾಸಿಕ ಎಂದು ಕರೆದಿದೆ ಎಂದು ಪರೋಕ್ಷವಾಗಿ ಬಿಜೆಪಿ ಬಗ್ಗೆ ಏಕನಾಥ್ ಶಿಂಧೆ ಹೇಳಿದ್ದಾರೆ.
ಆದರೆ, ಶಿವಸೇನೆಯ ಬೆಳವಣಿಗೆಗೂ ಮಹಾರಾಷ್ಟ್ರ ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ ಎಂದು ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಆದರೇ, ತೆರೆಯ ಹಿಂದೆ ಏಕನಾಥ್ ಶಿಂಧೆ ಬಣಕ್ಕೆ ಬಿಜೆಪಿ ಬೆಂಬಲವಾಗಿ ನಿಂತಿದೆ ಎಂಬುದು ಗುಟ್ಟಾಗಿಯೇನೂ ಉಳಿದಿಲ್ಲ. ಉದ್ದವ್ ಠಾಕ್ರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರೇ, ಬಿಜೆಪಿ ಹಾಗೂ ಶಿಂಧೆ ಬಣ ಹೊಸ ಸರ್ಕಾರ ರಚನೆಗೆ ಸಿದ್ದವಾಗಿದೆ. ಬಿಜೆಪಿಯ 106 ಶಾಸಕರ ಜೊತೆಗೆ ಏಕನಾಥ್ ಶಿಂಧೆ ಬಣದ 50 ಶಾಸಕರ ಬಲವೂ ಸೇರಿದರೇ, 156 ಶಾಸಕರ ಸಂಖ್ಯಾಬಲವಾಗುತ್ತೆ. ಸದ್ಯ ಮಹಾರಾಷ್ಟ್ರ ವಿಧಾನಸಭೆಯಲ್ಲಿ 143 ಬಹುಮತದ ಮ್ಯಾಜಿಕ್ ನಂಬರ್ ಆಗಿದೆ. ಬಹುಮತದ ಮ್ಯಾಜಿಕ್ ನಂಬರ್ ಗಿಂತ ಹೆಚ್ಚಿನ ಸಂಖ್ಯಾಬಲವೇ ಬಿಜೆಪಿ ಹಾಗೂ ಏಕನಾಥ್ ಶಿಂಧೆ ಬಣದ ಬಳಿ ಇದೆ.
ಸಿ.ಎಂ ಪುತ್ರ ಆದಿತ್ಯ ಠಾಕ್ರೆ ಬಹಿರಂಗವಾಗಿಯೇ ತಮ್ಮ ಸರ್ಕಾರಕ್ಕೆ ಬಹುಮತ ಸಂಖ್ಯಾಬಲ ಇಲ್ಲ ಎಂದು ಹೇಳಿದ್ದಾರೆ. ತಮಗೆ ಅಧಿಕಾರದ ಆಸೆ ಇಲ್ಲ ಎಂದಿದ್ದಾರೆ. ಆದರೆ, ಉದ್ದವ್ ಠಾಕ್ರೆ ಸುಲಭವಾಗಿ ಸಿಎಂ ಹುದ್ದೆಗೆ ರಾಜೀನಾಮೆ ನೀಡುವಂತೆ ಕಾಣುತ್ತಿಲ್ಲ. ವಿಧಾನ ಸಭೆಯಲ್ಲಿ ವಿಶ್ವಾಸ ಮತ ಯಾಚನೆಗೆ ಸಿದ್ದವಾಗಿದ್ದಾರೆ. ಸರ್ಕಾರಕ್ಕೆ ಬಹುಮತ ಇಲ್ಲ ಎಂಬುದು ಸದನದಲ್ಲೇ ಸಾಬೀತಾಗಲಿ ಎಂದು ಶರದ್ ಪವಾರ್ ಹೇಳಿದ್ದಾರೆ. ಹೀಗಾಗಿ ಆ ಸಲಹೆಯಂತೆ ಉದ್ದವ್ ಠಾಕ್ರೆ ನಡೆದುಕೊಳ್ಳುತ್ತಿದ್ದಾರೆ. ಸದ್ಯಕ್ಕೆ ಉದ್ದವ್ ಠಾಕ್ರೆ ಬೆಂಬಲಕ್ಕೆ ಮೈತ್ರಿಪಕ್ಷಗಳಾದ ಕಾಂಗ್ರೆಸ್, ಎನ್‌ಸಿಪಿ ನಿಂತಿವೆ.