ದೆಹಲಿ ಆಡಳಿತದ ಮೇಲೆ ಕೇಂದ್ರ ಸರ್ಕಾರಕ್ಕೆ ಹತೋಟಿ ಕೊಡುವ ಮಸೂದೆಗೆ ಲೋಕಸಭೆ ಅಸ್ತು
ಸಂವಿಧಾನದ ಆಶಯವನ್ನು ಸುಪ್ರೀಂಕೋರ್ಟ್ ವಿಶ್ಲೇಷಣೆಗೆ ಅನುಗುಣವಾಗಿ ಈ ಮಸೂದೆಯು ದೆಹಲಿ ಸರ್ಕಾರದಲ್ಲಿ ಲೆಫ್ಟಿನೆಂಟ್ ಗವರ್ನರ್ ಸ್ಥಾನಮಾನ ಮತ್ತು ಚುನಾಯಿತ ಸರ್ಕಾರದ ಜವಾಬ್ದಾರಿಗಳನ್ನು ಇನ್ನಷ್ಟು ಸ್ಪಷ್ಟವಾಗಿ ವಿವರಿಸುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿತ್ತು.
ದೆಹಲಿ: ಕೇಂದ್ರ ಸರ್ಕಾರಕ್ಕೆ ದೆಹಲಿ ಆಡಳಿತದಲ್ಲಿ ಹೆಚ್ಚು ಅಧಿಕಾರ ನೀಡುವ ಮಸೂದೆಯು ಕಾನೂನು ಆಗುವ ಕಾಲ ಹತ್ತಿರಕ್ಕೆ ಬಂದಿದೆ. ಭಾರೀ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ (ಆಪ್) ಸರ್ಕಾರಕ್ಕೆ ಇದು ದೊಡ್ಡ ಹಿನ್ನಡೆ ಎಂದೇ ವಿಶ್ಲೇಷಿಸಲಾಗುತ್ತಿದೆ. ದೆಹಲಿಯ ರಾಷ್ಟ್ರ ರಾಜಧಾನಿ ಭೂಪ್ರದೇಶ (ತಿದ್ದುಪಡಿ) ಕಾಯ್ದೆ 2021ಕ್ಕೆ (National Capital Territory of Delhi (Amendment) Bill – GNCTD) ಸೋಮವಾರ ಲೋಕಸಭೆಯಲ್ಲಿ ಅನುಮೋದನೆ ದೊರೆಯಿತು. ಈ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸುವ ಪ್ರಕ್ರಿಯೆ ಇನ್ನಷ್ಟೇ ಆರಂಭವಾಗಲಿದೆ.
ರಾಜ್ಯದ ಚುನಾಯಿತ ಸರ್ಕಾರಕ್ಕಿಂತಲೂ ದೆಹಲಿ ಆಡಳಿತದಲ್ಲಿ ಕೇಂದ್ರದ ಪ್ರತಿನಿಧಿಯಾಗಿರುವ ಲೆಫ್ಟಿನೆಂಟ್ ಜನರಲ್ಗೆ ಈ ಮಸೂದೆಯು ಹೆಚ್ಚು ಅಧಿಕಾರ ನೀಡುತ್ತದೆ. ದೆಹಲಿ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ ನಡುವಣ ಜಟಾಪಟಿ ಬಗ್ಗೆ ಸುಪ್ರೀಂಕೋರ್ಟ್ನ ಸಂವಿಧಾನ ಪೀಠ ತೀರ್ಪು ನೀಡಿದ ಮೂರು ವರ್ಷಗಳ ನಂತರ ಈ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗಿದೆ.
ಸಂವಿಧಾನದ ಆಶಯವನ್ನು ಸುಪ್ರೀಂಕೋರ್ಟ್ ವಿಶ್ಲೇಷಣೆಗೆ ಅನುಗುಣವಾಗಿ ಈ ಮಸೂದೆಯು ದೆಹಲಿ ಸರ್ಕಾರದಲ್ಲಿ ಲೆಫ್ಟಿನೆಂಟ್ ಗವರ್ನರ್ ಸ್ಥಾನಮಾನ ಮತ್ತು ಚುನಾಯಿತ ಸರ್ಕಾರದ ಜವಾಬ್ದಾರಿಗಳನ್ನು ಇನ್ನಷ್ಟು ಸ್ಪಷ್ಟವಾಗಿ ವಿವರಿಸುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿತ್ತು. ಆದರೆ ಅರವಿಂದ ಕೇಜ್ರಿವಾಲ್ ಈ ಬೆಳವಣಿಗೆಯನ್ನು ದೆಹಲಿ ನಾಗರಿಕರಿಗೆ ಮಾಡಿದ ಅವಮಾನ ಎಂದು ವಿಶ್ಲೇಷಿಸಿದ್ದಾರೆ.
‘ಲೋಕಸಭೆಯಲ್ಲಿ ಇಂದು ಅನುಮೋದನೆ ಪಡೆದ ಮಸೂದೆಯ ಸಾಲುಗಳು ದೆಹಲಿ ನಾಗರಿಕರಿಗೆ ಅವಮಾನವಾಗುವಂತಿವೆ. ದೆಹಲಿಯ ಜನರು ಮತ ಚಲಾಯಿಸಿ ಆಯ್ಕೆ ಮಾಡಿದವರಿಂದ ಅಧಿಕಾರವನ್ನು ಕಿತ್ತುಕೊಂಡು, ದೆಹಲಿಯಲ್ಲಿ ಸೋತವರಿಗೆ ಅಧಿಕಾರ ದಯಪಾಲಿಸುತ್ತದೆ. ಬಿಜೆಪಿಯು ಜನರಿಗೆ ಮೋಸ ಮಾಡಿದೆ’ ಎಂದು ಮುಖ್ಯಮಂತ್ರಿ ಹೇಳಿದರು.
70 ಸದಸ್ಯ ಬಲದ ದೆಹಲಿ ವಿಧಾನಸಭೆಯಲ್ಲಿ 2020ರ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ರ ಆಪ್ ಪಕ್ಷವು 62 ಸ್ಥಾನಗಳಲ್ಲಿ ಜಯಗಳಿಸಿತ್ತು. ಬಿಜೆಪಿ 3 ಸ್ಥಾನಗಳಲ್ಲಿ ಗೆದ್ದಿದ್ದರೆ, ಕಾಂಗ್ರೆಸ್ಗೆ ಒಂದೂ ಸ್ಥಾನ ಸಿಕ್ಕಿರಲಿಲ್ಲ. ದೆಹಲಿ ಆಡಳಿತದಲ್ಲಿ ಲೆಫ್ಟಿನೆಂಟ್ ಗವರ್ನರ್ ಮೂಲಕ ಹಿಡಿತ ಸಾಧಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಈ ಹಿಂದೆಯೂ ಹಲವು ಬಾರಿ ಆರೋಪಿಸಿತ್ತು.
ವಿಧಾನಸಭೆಯು ಜಾರಿಗೆ ತರುವ ಯಾವುದೇ ಕಾನೂನುಗಳಲ್ಲಿ ಪ್ರಸ್ತಾಪವಾಗುವ ‘ಸರ್ಕಾರ’ ಎಂದರೆ ಈ ಹೊಸ ಕಾಯ್ದೆಯ ಪ್ರಕಾರ ಲೆಫ್ಟಿನೆಂಟ್ ಗವರ್ನರ್ ಆಗಿರುತ್ತಾರೆ. ದೆಹಲಿ ಸರ್ಕಾರವು ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಲೆಫ್ಟಿನೆಂಟ್ ಗವರ್ನರ್ ಅಭಿಪ್ರಾಯ ಪಡೆದುಕೊಳ್ಳಲೇಬೇಕಾಗುತ್ತದೆ. ದೆಹಲಿ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ ಅಧಿಕಾರ ವ್ಯಾಪ್ತಿಯ ಬಗ್ಗೆ 2018ರಲ್ಲಿ ಸುಪ್ರೀಂಕೋರ್ಟ್ನ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ತೀರ್ಪು ನೀಡಿತ್ತು. ದೆಹಲಿ ಸರ್ಕಾರ ಸಚಿವ ಸಂಪುಟವು ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಲೆಫ್ಟಿನೆಂಟ್ ಗವರ್ನರ್ಗೆ ತಿಳಿಸಬೇಕು. ಆದರೆ ಪೊಲೀಸ್, ಸಾರ್ವಜನಿಕ ಸುವ್ಯವಸ್ಥೆ ಮತ್ತು ಭೂವ್ಯವಹಾರಗಳಲ್ಲಿ ಅವರ ಸಹಮತದ ಅಗತ್ಯವಿಲ್ಲ ಎಂದು ಹೇಳಿತ್ತು. ನ್ಯಾಯಾಲಯದ ಮೂಲಕ ದೆಹಲಿ ಸರ್ಕಾರಕ್ಕೆ ಸಿಕ್ಕಿದ್ದ ಈ ಸವಲತ್ತು ಹೊಸ ಕಾನೂನಿನ ಬಳಿಕ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕು.
ಮಸೂದೆ ಏನು ಹೇಳುತ್ತೆ? ದೆಹಲಿಯ ಚುನಾಯಿತ ಸರ್ಕಾರ ಮತ್ತು ಲೆಫ್ಟಿನೆಂಟ್ ಜನರಲ್ ಅಧಿಕಾರದ ಬಗ್ಗೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಸಮರ್ಪಕವಾಗಿ ವ್ಯಾಖ್ಯಾನಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರವು ಈ ಮಸೂದೆಯ ‘ಉದ್ದೇಶಗಳು ಮತ್ತು ಕಾರಣಗಳು’ ವಿಭಾಗದಲ್ಲಿ ಹೇಳಿದೆ. ‘ಶಾಸಕಾಂಗ ರೂಪಿಸುವ ಯಾವುದೇ ಕಾನೂನಿನ ಪ್ರಕಾರ ಸರ್ಕಾರ ಎಂದರೆ ಅದು ಲೆಫ್ಟಿನೆಂಟ್ ಜನರಲ್’ ಎಂದು ನೇರವಾಗಿ ತಿಳಿಸಿದೆ. 2015ರಲ್ಲಿ ಲೆಫ್ಟಿನೆಂಟ್ ಜನರಲ್ ನಜೀಬ್ ಜಂಗ್ ಸಹ ಇದೇ ಮಾತು ಹೇಳಿದ್ದರು. ‘ಸರ್ಕಾರ ಎಂದರೆ ದೆಹಲಿಯ ರಾಷ್ಟ್ರಪತಿಯ ಮೂಲಕ ಸಂವಿಧಾನದ 239ನೇ ಪರಿಚ್ಛೇದದ ಅನ್ವಯ ನೇಮಕಗೊಂಡ ಲೆಫ್ಟಿನೆಂಟ್ ಜನರಲ್’ ಎಂದು ನಜೀಬ್ ಜಂಗ್ ಹೇಳಿಕೊಂಡಿದ್ದರು. ದೆಹಲಿ ಚುನಾಯಿತ ಸರ್ಕಾರ, ಸಚಿವ ಸಂಪುಟವು ಯಾವುದೇ ನಿರ್ಧಾರಗಳನ್ನು ಅನುಷ್ಠಾನಕ್ಕೆ ತರುವ ಮೊದಲು ಲೆಫ್ಟಿನೆಂಟ್ ಜನರಲ್ ಅಭಿಪ್ರಾಯ ಪಡೆದುಕೊಳ್ಳಬೇಕು ಎಂದು ಈ ಮಸೂದೆಯೂ ಸ್ಪಷ್ಟಪಡಿಸುತ್ತದೆ.
1991ರ ಕಾಯ್ದೆಯನ್ನು ಯಾವ ಉದ್ದೇಶದಿಂದ ಜಾರಿಗೆ ತರಲಾಗಿತ್ತು? ದೆಹಲಿಯು ಪ್ರಸ್ತುತ ಶಾಸಕಾಂಗ ಸಹಿತ ಕೇಂದ್ರಾಡಳಿತ ಪ್ರದೇಶ ಸ್ಥಾನಮಾನ ಹೊಂದಿದೆ. ಸಂವಿಧಾನದ 239 ಎಎ ಮತ್ತು 239 ಬಿಬಿ ಪರಿಚ್ಛೇದಗಳಿಗೆ ತಿದ್ದುಪಡಿ ತರುವ ಮೂಲಕ ಈ ಸ್ಥಾನಮಾನ ನೀಡಲಾಗಿದೆ. ಜಿಎನ್ಸಿಟಿಡಿ (Government of National Capital Territory of Delhi – GNCTD) ಕಾಯ್ದೆಯು ವಿಧಾನಸಭೆಯ ಅಧಿಕಾರ ಮಿತಿ ಮತ್ತು ಲೆಫ್ಟಿನೆಂಟ್ ಜನರಲ್ಗೆ ಇರುವ ವಿವೇಚನಾಧಿಕಾರಗಳು ಮತ್ತು ಲೆಫ್ಟಿನೆಂಟ್ ಜನರಲ್ಗೆ ಮಾಹಿತಿ ನೀಡುವ ವಿಚಾರದಲ್ಲಿ ಮುಖ್ಯಮಂತ್ರಿ ನಿರ್ವಹಿಸಬೇಕಾದ ಕರ್ತವ್ಯದ ಬಗ್ಗೆಯೂ ಈ ಕಾಯ್ದೆ ವಿವರಣೆ ನೀಡುತ್ತದೆ.
2018ರಲ್ಲಿ ಸುಪ್ರೀಂಕೋರ್ಟ್ ಏನು ಹೇಳಿತ್ತು? 2018ರಲ್ಲಿ ಸುಪ್ರೀಂಕೋರ್ಟ್ನ ಐವರು ಸದಸ್ಯರ ನ್ಯಾಯಪೀಠವು ಪೊಲೀಸ್ ಆಡಳಿತ, ಕಾನೂನು ಸುವ್ಯವಸ್ಥೆ ಮತ್ತು ಭೂವ್ಯವಹಾರಗಳಿಗೆ ಹೊರತುಪಡಿಸಿದ ಇತರ ವಿಚಾರಗಳಿಗೆ ಸಂಬಂಧಿಸಿದಂತೆ ಸಚಿವ ಸಂಪುಟ ತೆಗೆದುಕೊಳ್ಳುವ ನಿರ್ಣಯಗಳನ್ನು ಮುಂಚಿತವಾಗಿ ಲೆಫ್ಟಿನೆಂಟ್ ಜನರಲ್ಗೆ ತಿಳಿಸಿ, ಒಪ್ಪಿಗೆ ಪಡೆಯಬೇಕಿಲ್ಲ ಎಂದು ಹೇಳಿತ್ತು. ಆದರೆ ಒಮ್ಮೆ ತೆಗೆದುಕೊಂಡ ನಿರ್ಣಯವನ್ನು ಲೆಫ್ಟಿನೆಂಟ್ ಜನರಲ್ಗೆ ತಿಳಿಸುವುದು ಕಡ್ಡಾಯ ಎಂದು ಸುಪ್ರೀಂಕೋರ್ಟ್ನ ಸಂವಿಧಾನ ಪೀಠ ಹೇಳಿತ್ತು.
ನ್ಯಾಯಪೀಠದಲ್ಲಿ ಅಂದಿನ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ನ್ಯಾಯಮೂರ್ತಿಗಳಾದ ಎ.ಕೆ.ಸಿಕ್ರಿ, ಎ.ಎಂ.ಖಾನ್ವಿಲ್ಕಾರ್, ಡಿ.ವೈ.ಚಂದ್ರಚೂಡ್ ಮತ್ತು ಅಶೋಕ್ ಭೂಷಣ್ ಇದ್ದರು. ಮೂರು ಪ್ರತ್ಯೇಕ ತೀರ್ಪು ನೀಡಿದ್ದ ನ್ಯಾಯಪೀಠವು ‘ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಸ್ಥಾನಮಾನವು ಇತರ ರಾಜ್ಯಗಳ ರಾಜ್ಯಪಾಲರಿಗೆ ಸರಿಸಮವಾದುದಲ್ಲ. ಒಂದು ಮಿತಿಯೊಳಗೆ ಅವರು ಆಡಳಿತಾಧಿಕಾರ ಹೊಂದಿರುತ್ತಾರೆ. ಚುನಾಯಿತ ಸರ್ಕಾರವೂ ದೆಹಲಿ ಒಂದು ಪೂರ್ಣ ಪ್ರಮಾಣದ ರಾಜ್ಯವಲ್ಲ (ಕೇಂದ್ರಾಡಳಿತ ಪ್ರದೇಶ) ಎಂಬ ವಿಚಾರವನ್ನು ಪ್ರಜ್ಞೆಯಲ್ಲಿ ಇರಿಸಿಕೊಳ್ಳಬೇಕು’ ಎಂದು ಹೇಳಿತ್ತು.
ಇದನ್ನೂ ಓದಿ: ಉತ್ತರಾಖಂಡ ಮುಖ್ಯಮಂತ್ರಿ ತೀರಥ್ ಸಿಂಗ್ ರಾವತ್ಗೆ ಕೊರೊನಾ ಸೋಂಕು; ದೆಹಲಿ ಭೇಟಿ ರದ್ದು
ಇದನ್ನೂ ಓದಿ: ಬೇಸಿಗೆಯಲ್ಲೂ ಚಳವಳಿ ಮುಂದುವರೆಸಲು ಮನೆ ನಿರ್ಮಿಸುತ್ತಿರುವ ದೆಹಲಿ ಚಲೋ ರೈತರು