ದೆಹಲಿ: ಬ್ರಿಟನ್ ಸಂಸತ್ತಿನಲ್ಲಿ ಭಾರತದ ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ಚಳವಳಿ ಬಗ್ಗೆ ಚರ್ಚೆ ನಡೆಸಿದ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಭಾರತ ಸರ್ಕಾರವು ಮಂಗಳವಾರ ಬ್ರಿಟನ್ ಹೈಕಮಿಷನರ್ ಮೂಲಕ ಅಧಿಕೃತವಾಗಿ ಆಕ್ಷೇಪ ದಾಖಲಿಸಿತು. ‘ಇದು ಮತ್ತೊಂದು ಸಾರ್ವಭೌಮ ಪ್ರಜಾಪ್ರಭುತ್ವದ ದೇಶದ ಆಂತರಿಕ ವಿಚಾರದಲ್ಲಿ ಹಸ್ತಕ್ಷೇಪ ಮತ್ತು ವೋಟ್ಬ್ಯಾಂಕ್ ರಾಜಕಾರಣ’ ಎಂದು ಭಾರತ ಸರ್ಕಾರ ಕಟು ಪದಗಳಲ್ಲಿ ತನ್ನ ಅಭಿಪ್ರಾಯ ತಿಳಿಸಿತು. ಭಾರತದ ರೈತರ ಚಳವಳಿಯ ಬಗ್ಗೆ ಮತ್ತೊಂದು ದೇಶದ ಸಂಸತ್ತು ಅಧಿಕೃತವಾಗಿ ಚರ್ಚೆ ನಡೆಸಿದ ವಿದ್ಯಮಾನ ದಾಖಲಾಗಿರುವುದು ಇದೇ ಮೊದಲು.
ಭಾರತದ ಕೃಷಿ ಕಾನೂನುಗಳ ವಿರುದ್ಧ ರೈತರು ನಡೆಸುತ್ತಿರುವ ಹೋರಾಟದ ಬಗ್ಗೆ ಬ್ರಿಟನ್ ಸಂಸತ್ತಿನಲ್ಲಿ ಸೋಮವಾರ 90 ನಿಮಿಷಗಳ ಚರ್ಚೆ ನಡೆಯಿತು. ಲೇಬರ್ ಪಕ್ಷ, ಲಿಬರಲ್ ಡೆಮಾಕ್ರಟ್ ಮತ್ತು ಸ್ಕಾಟಿಷ್ ನ್ಯಾಷನಲ್ ಪಾರ್ಟಿಯ ಕೆಲ ಸಂಸದರು ರೈತ ಚಳವಳಿಯನ್ನು ಭಾರತ ಸರ್ಕಾರ ನಿರ್ವಹಿಸುತ್ತಿರುವ ರೀತಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಭಾರತದ ಪ್ರಧಾನಿಯನ್ನು ಭೇಟಿಯಾದಾಗ ಬ್ರಿಟನ್ ಪ್ರಧಾನಿ ಈ ಕುರಿತು ಚರ್ಚಿಸಲಿದ್ದಾರೆ ಎಂದು ಬ್ರಿಟನ್ ಸರ್ಕಾರ ಚರ್ಚೆಗೆ ಪ್ರತಿಕ್ರಿಯಿಸಿತ್ತು.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಭಾರತದಲ್ಲಿರುವ ಬ್ರಿಟಿಷ್ ರಾಯಭಾರಿ ಅಲೆಕ್ಸ್ ಎಲ್ಲಿಸ್ ಅವರನ್ನು ಕಚೇರಿಗೆ ಕರೆಸಿಕೊಂಡ ವಿದೇಶಾಂಗ ಇಲಾಖೆ ಕಾರ್ಯದರ್ಶಿ ಹರ್ಷ ಶ್ರಿಂಗ್ಲಾ, ‘ಭಾರತದ ಕೃಷಿ ಸುಧಾರಣೆ ಕಾನೂನುಗಳಂಥ ಸೂಕ್ಷ್ಮ ವಿಷಯದ ಬಗ್ಗೆ ಅನಿರೀಕ್ಷಿತವಾಗಿ ಬ್ರಿಟನ್ ಸಂಸತ್ತಿನಲ್ಲಿ ಚರ್ಚೆ ನಡೆದ ಬಗ್ಗೆ ಕಟು ಶಬ್ದಗಳಲ್ಲಿ ಆಕ್ಷೇಪ ದಾಖಲಿಸಿದರು’ ಎಂದು ಪತ್ರಿಕಾ ಹೇಳಿಕೆ ತಿಳಿಸಿದೆ. ಮತ್ತೊಂದು ಸಾರ್ವಭೌಮ ಪ್ರಜಾಪ್ರಭುತ್ವ ದೇಶದ ಆಂತರಿಕ ರಾಜಕಾರಣದಲ್ಲಿ ಹೀಗೆ ಮೂಗು ತೂರಿಸುವುದು ತಪ್ಪು. ಬ್ರಿಟನ್ ಸಂಸದರು ಸತ್ಯವನ್ನು ತಪ್ಪಾಗಿ ಅರ್ಥೈಸುವ ಮೂಲಕ ವೋಟ್ಬ್ಯಾಂಕ್ ರಾಜಕಾರಣ ಮಾಡುವುದರಿಂದ ದೂರು ಇರಬೇಕು ಎಂದು ಸಲಹೆ ಮಾಡಿದರು.
ಬ್ರಿಟನ್ ಸಂಸತ್ತಿನಲ್ಲಿ ಚರ್ಚೆ ನಡೆದ ನಂತರ ಲಂಡನ್ನಲ್ಲಿರುವ ಭಾರತದ ರಾಜತಾಂತ್ರಿಕ ಕಚೇರಿಯೂ ಆಕ್ಷೇಪದ ಹೇಳಿಕೆ ಬಿಡುಗಡೆ ಮಾಡಿತ್ತು. ‘ತಪ್ಪು ಕಲ್ಪನೆಗಳು, ಸುಳ್ಳು ಮಾಹಿತಿಯನ್ನು ಆಧರಿಸಿಯೇ ಚರ್ಚೆ ನಡೆದಿದೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಮತ್ತು ಅದರ ಆಡಳಿತ ಸಂಸ್ಥೆಗಳಿಗೆ ಅಗೌರವ ತೋರಲಾಗಿದೆ’ ಎಂದು ಲಂಡನ್ನ ಭಾರತೀಯ ರಾಜತಾಂತ್ರಿಕ ಕಚೇರಿ ಆಕ್ಷೇಪಿಸಿತ್ತು.
‘ಬ್ರಿಟಿಷ್ ಪತ್ರಕರ್ತರೂ ಸೇರಿದಂತೆ ವಿಶ್ವದ ಹಲವು ದೇಶಗಳ ಪತ್ರಕರ್ತರು ಭಾರತದಲ್ಲಿದ್ದಾರೆ. ಸ್ವತಃ ತಮ್ಮ ಕಣ್ಣುಗಳಿಂದ ಭಾರತದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ನೋಡುತ್ತಿದ್ದಾರೆ. ಹೀಗಿರುವಾಗ ಮಾಧ್ಯಮಗಳ ಸ್ವಾತಂತ್ರ್ಯ ಕಿತ್ತುಕೊಳ್ಳುವ ಪ್ರಮೇಯವೇ ಉದ್ಭವಿಸುವುದಿಲ್ಲ’ ಎಂದು ರಾಜತಾಂತ್ರಿಕ ಕಚೇರಿಯ ಹೇಳಿಕೆ ತಿಳಿಸಿತ್ತು.
ಇದನ್ನೂ ಓದಿ: ದೆಹಲಿ ಗಡಿಭಾಗದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಮಹಿಳೆಯರ ಬೆಂಬಲ; ಕೃಷಿ ಕಾಯ್ದೆ ಹಿಂಪಡೆಯಲು ಒತ್ತಾಯ