NATO: ನ್ಯಾಟೊ ಜೊತೆಗೆ ಭಾರತದ ಗೌಪ್ಯ ಮಾತುಕತೆ; ಚೀನಾ, ಪಾಕಿಸ್ತಾನ ಉಪಟಳದ ಹಿನ್ನೆಲೆಯಲ್ಲಿ ಮಹತ್ವ ಪಡೆದ ವಿದ್ಯಮಾನ
ನ್ಯಾಟೊದಲ್ಲಿ ಭಾರತದ ಪ್ರಭಾವ ಹೆಚ್ಚಾದರೆ ಸಂಭಾವ್ಯ ಘರ್ಷಣೆಯಂಥ ಪರಿಸ್ಥಿತಿ ಉದ್ಭವಿಸಿದಾಗ ಅಮೆರಿಕ ಮತ್ತು ಯೂರೋಪ್ನ ಹಲವು ದೇಶಗಳ ಸಹಕಾರ ದಕ್ಕಿಸಿಕೊಳ್ಳಲು ಭಾರತಕ್ಕೆ ಸಾಧ್ಯವಾಗಬಹುದು.
ದೆಹಲಿ: ಅಮೆರಿಕದ ನೇತೃತ್ವದ ಜಾಗತಿಕವಾಗಿ ಬಲಾಢ್ಯವಾಗಿರುವ ‘ನ್ಯಾಟೊ’ (North Atlantic Treaty Organisation – NATO) ಸಂಸ್ಥೆಯೊಂದಿಗೆ ಭಾರತ ಗೌಪ್ಯವಾಗಿ ಮಾತುಕತೆ ನಡೆಸಿರುವ ಇದೀಗ ಬಹಿರಂಗವಾಗಿದೆ. 28 ಐರೋಪ್ಯ ದೇಶಗಳು ಹಾಗೂ ಎರಡು ಉತ್ತರ ಅಮೆರಿಕದ ದೇಶಗಳು (ಕೆನಡಾ ಮತ್ತು ಯುಎಸ್) ಇರುವ ನ್ಯಾಟೊ ಸದ್ಯದ ಮಟ್ಟಿನಲ್ಲಿ ರಷ್ಯಾ ಮತ್ತು ಚೀನಾಗಳಿಗೆ ಎದುರು ನಿಲ್ಲುವ ಬಲ ಇರುವ ರಕ್ಷಣಾ ಸಂಸ್ಥೆ ಎಂದು ವಿಶ್ಲೇಷಿಸಲಾಗುತ್ತಿದೆ.
ವಿದೇಶಾಂಗ ಮತ್ತು ರಕ್ಷಣಾ ಇಲಾಖೆಗಳು ಆಳವಾಗಿ ಪರಿಶೀಲಿಸಿದ ನಂತರ ನ್ಯಾಟೊದೊಂದಿಗೆ ಮಾತುಕತೆ ನಡೆಸಬೇಕಾದ ವಿಷಯಗಳನ್ನು ಅಂತಿಮಗೊಳಿಸಲಾಯಿತು. ಬೆಲ್ಜಿಯಂ ರಾಜಧಾನಿ ಬ್ರುಸೆಲ್ಸ್ ನಗರದಲ್ಲಿರುವ ನ್ಯಾಟೊ ಪ್ರಧಾನ ಕಚೇರಿಯಲ್ಲಿ ಡಿಸೆಂಬರ್ 12, 2019ರಂದು ಈ ಮಾತುಕತೆ ನಡೆಯಿತು ಎಂದು ‘ಇಂಡಿಯನ್ ಎಕ್ಸ್ಪ್ರೆಸ್’ ದಿನಪತ್ರಿಕೆ ಇಂದು (ಆಗಸ್ಟ್ 11) ವರದಿ ಮಾಡಿದೆ.
ಭಾರತವು ರಷ್ಯಾ ಮತ್ತು ಅಫ್ಘಾನಿಸ್ತಾನದ ಕುರಿತು ತಳೆದಿರುವ ನಿಲುವುಗಳಿಗೂ ‘ನ್ಯಾಟೊ’ ಹೊಂದಿರುವ ನಿಲುವುಗಳಿಗೂ ವ್ಯತ್ಯಾಸ ಇರುವುದು ಮೊದಲ ಸುತ್ತಿನ ಮಾತುಕತೆಯಲ್ಲಿ ಸ್ಪಷ್ಟವಾಗಿ ಎದ್ದುಕಂಡಿತು. ಚೀನಾ ವಿಚಾರದಲ್ಲಿಯೂ ‘ನ್ಯಾಟೊ’ ಸದಸ್ಯ ದೇಶಗಳ ಚಿಂತನೆಗೂ ಭಾರತದ ಚಿಂತನೆಗೂ ವ್ಯತ್ಯಾಸಗಳಿವೆ. ಚೀನಾದ ವಿಚಾರದಲ್ಲಿ ‘ಕ್ವಾಡ್’ ಒಪ್ಪಂದದ ಸದಸ್ಯ ದೇಶಗಳಾದ ಅಮೆರಿಕ, ಜಪಾನ್, ಆಸ್ಟ್ರೇಲಿಯಾ ಮತ್ತು ಭಾರತಗಳ ನಿಲುವು ಬಹುತೇಕ ಸಹಮತದಿಂದ ಕೂಡಿವೆ. ಆದರೆ ಚೀನಾದ ಪ್ರಭಾವ ಮತ್ತು ಅದರಿಂದ ಉಂಟಾಗುತ್ತಿರುವ ಭದ್ರತಾ ಆತಂಕಗಳ ಬಗ್ಗೆ ಹಲವು ‘ನ್ಯಾಟೊ’ ಸದಸ್ಯ ದೇಶಗಳ ಸ್ಪಷ್ಟ ನಿಲುವು ತಳೆದಿಲ್ಲ. ಅವು ರಷ್ಯಾ ದೇಶವನ್ನು ತಮ್ಮ ಭದ್ರತೆಗೆ ಇರುವ ಆತಂಕ ಎಂದು ಪರಿಗಣಿಸುತ್ತವೆ. ಭಾರತಕ್ಕೆ ಈ ವಿಚಾರದಲ್ಲಿ ಸಹಮತ ಇರಲಿಲ್ಲ.
ನ್ಯಾಟೊ ಜೊತೆಗಿನ ಮಾತುಕತೆಯಲ್ಲಿ ವಿದೇಶಾಂಗ ವ್ಯವಹಾರ ಹಾಗೂ ರಕ್ಷಣಾ ಇಲಾಖೆಗಳ ಇಲಾಖೆಯ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು. ಮಾತುಕತೆಯ ವೇಳೆ ರಾಜತಾಂತ್ರಿಕ ಸಹಕಾರದ ಬಗ್ಗೆ ಹೆಚ್ಚು ಚರ್ಚೆಯಾಯಿತು. ಮಿಲಿಟರಿ ಅಥವಾ ದ್ವಿಪಕ್ಷೀಯ ಒಪ್ಪಂದಗಳ ಯಾವುದೇ ಒಪ್ಪಂದಗಳು ಆಗಲಿಲ್ಲ. ಭಾರತ ಸರ್ಕಾರವು ಪ್ರಜ್ಞಾಪೂರ್ವಕವಾಗಿಯೇ ಇಂಥ ಒಪ್ಪಂದ ಮಾಡಿಕೊಳ್ಳುವುದನ್ನು ಹಿಂಜರಿಯಿತು. ಮೊದಲ ಮಾತುಕತೆ ವೇಳೆ ಚೀನಾದ ಇತ್ತೀಚಿನ ಬೆಳವಣಿಗೆಗಳು, ಭಯೋತ್ಪಾದನೆಗೆ ಪಾಕಿಸ್ತಾನವು ನೀಡುತ್ತಿರುವ ಕುಮ್ಮಕ್ಕು ಮತ್ತು ಅಫ್ಘಾನಿಸ್ತಾನದ ವಿದ್ಯಮಾನಗಳ ಬಗ್ಗೆ ಮಾತುಕತೆ ನಡೆಯಿತು.
ಬೆಲ್ಚಿಯಂನಲ್ಲಿರುವ ಚೀನಾದ ರಾಯಭಾರಿ ಜೊತೆಗೆ ನ್ಯಾಟೊದ ಉಪ ಪ್ರಧಾನ ಕಾರ್ಯದರ್ಶಿ ಈವರೆಗೆ 9 ಸುತ್ತುಗಳ ಮಾತುಕತೆ ನಡೆಸಿದ್ದಾರೆ. ಪಾಕಿಸ್ತಾನವು ನ್ಯಾಟೊದೊಂದಿಗೆ ನಿಯಮಿತ ಮಾತುಕತೆ ನಡೆಸುವ ಜೊತೆಗೆ ಹಲವು ಸಹಕಾರ ಒಪ್ಪಂದಗಳನ್ನೂ ಮಾಡಿಕೊಂಡಿದೆ. ಪಾಕಿಸ್ತಾನದ ಅಧಿಕಾರಿಗಳಿಗೆ ನ್ಯಾಟೊ ತರಬೇತಿ ನೀಡುತ್ತಿರುವ ಜೊತೆಗೆ ನಿಯಮತಿವಾಗಿ ಪಾಕಿಸ್ತಾನಕ್ಕೆ ನ್ಯಾಟೊ ನಿಯೋಗ ಭೇಟಿ ನೀಡಿ, ಅಲ್ಲಿನ ಸೇನಾಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದೆ.
ಚೀನಾ ಮತ್ತು ಪಾಕಿಸ್ತಾನದೊಂದಿಗೆ ‘ನ್ಯಾಟೊ’ ಹಲವು ವರ್ಷಗಳಿಂದ ಮಾತುಕತೆ ನಡೆಸುತ್ತಿದೆ. ಆದರೆ ಭಾರತದೊಂದಿಗೆ ಮಾತುಕತೆ ನಡೆದದ್ದು ಇದೇ ಮೊದಲು. ಭಾರತದ ಪಾಲಿಗೆ ಚೀನಾ ಮತ್ತು ಪಾಕಿಸ್ತಾನ ಇಂದಿಗೂ ಸವಾಲು ಒಡ್ಡುವ ಆತಂಕಗಗಳಾಗಿಯೇ ಉಳಿದಿವೆ. ನ್ಯಾಟೊದಲ್ಲಿ ಭಾರತದ ಪ್ರಭಾವ ಹೆಚ್ಚಾದರೆ ಸಂಭಾವ್ಯ ಘರ್ಷಣೆಯಂಥ ಪರಿಸ್ಥಿತಿ ಉದ್ಭವಿಸಿದಾಗ ಅಮೆರಿಕ ಮತ್ತು ಯೂರೋಪ್ನ ಹಲವು ದೇಶಗಳ ಸಹಕಾರ ದಕ್ಕಿಸಿಕೊಳ್ಳಲು ಭಾರತಕ್ಕೆ ಸಾಧ್ಯವಾಗಬಹುದು ಎಂದು ಹೇಳಲಾಗುತ್ತಿದೆ.
ನ್ಯಾಟೊದೊಂದಿಗೆ ಮಾತುಕತೆಗೆ ಮುಂದಾಗುವ ಮೂಲಕ ಭಾರತದ ಬಗೆಗಿನ ನ್ಯಾಟೊ ಸದಸ್ಯ ದೇಶಗಳ ದೃಷ್ಟಿಕೋನದಲ್ಲಿ ಬದಲಾವಣೆ ತರಲು ಭಾರತ ಸರ್ಕಾರ ಪ್ರಯತ್ನಿಸುತ್ತಿದೆ. ಇಲ್ಲದಿದ್ದರೆ ಪಾಕಿಸ್ತಾನ ಮತ್ತು ಚೀನಾದೊಂದಿಗೆ ನಿಯಮಿತ ಸಂಪರ್ಕದಲ್ಲಿರುವ ನ್ಯಾಟೊ ಪ್ರತಿನಿಧಿಗಳು ಭಾರತ ವಿರೋಧಿ ಚಿಂತನೆಗೆ ಪಕ್ಕಾಗುವ, ಭಾರತಕ್ಕೆ ಅಪಾಯಕಾರಿಯಾಗುವ ನಿಲುವಿಗೆ ಬರುವ ಅಪಾಯವಿದೆ ಎಂದು ವಿಶ್ಲೇಷಿಸಲಾಗಿತ್ತು.
Published On - 7:33 am, Thu, 11 August 22