ರಷ್ಯಾ-ಉಕ್ರೇನ್ ಕದನ ವಿರಾಮಕ್ಕೆ ಭಾರತ ಮಧ್ಯಸ್ಥಿಕೆ ವಹಿಸುವ ಸಾಧ್ಯತೆ

ಕ್ರೆಮ್ಲಿನ್ ಸಭೆಯನ್ನು ಆಯೋಜಿಸಲು ಸಂಭಾವ್ಯ ದೇಶಗಳ ಪಟ್ಟಿಯನ್ನು ಸಂಗ್ರಹಿಸುತ್ತಿದೆ. ಅದರಲ್ಲಿ ಭಾರತ ದೇಶ ಪ್ರಮುಖ ಸ್ಪರ್ಧಿಯಾಗಿ ಹೊರಹೊಮ್ಮುತ್ತಿದೆ. ರಷ್ಯಾ-ಉಕ್ರೇನ್ ಯುದ್ಧದ ಬಗ್ಗೆ ಭಾರತದ ತಟಸ್ಥ ನಿಲುವು ಯಶಸ್ವಿ ಸಂವಾದಕ್ಕೆ ಪರಿಸ್ಥಿತಿಯನ್ನು ಸೃಷ್ಟಿಸಬಹುದು ಎನ್ನಲಾಗಿದೆ.ಭಾರತವು ಕ್ವಾಡ್ ಮೈತ್ರಿಕೂಟದ ಸದಸ್ಯ ರಾಷ್ಟ್ರವಾಗಿದೆ ಮತ್ತು 2025ರಲ್ಲಿ ಕ್ವಾಡ್ ಶೃಂಗಸಭೆಯ ಅಧ್ಯಕ್ಷತೆ ವಹಿಸುತ್ತದೆ. ಇದರಲ್ಲಿ ಟ್ರಂಪ್ ಭಾಗವಹಿಸುವ ನಿರೀಕ್ಷೆಯಿದೆ.

ರಷ್ಯಾ-ಉಕ್ರೇನ್ ಕದನ ವಿರಾಮಕ್ಕೆ ಭಾರತ ಮಧ್ಯಸ್ಥಿಕೆ ವಹಿಸುವ ಸಾಧ್ಯತೆ
Trump Modi Putin
Follow us
ಸುಷ್ಮಾ ಚಕ್ರೆ
|

Updated on: Jan 03, 2025 | 4:45 PM

ನವದೆಹಲಿ: ರಷ್ಯಾ-ಉಕ್ರೇನ್ ನಡುವಿನ ಸಂಘರ್ಷವನ್ನು ಕೊನೆಗೊಳಿಸುವಲ್ಲಿ ಭಾರತದ ಪಾತ್ರ ಹೆಚ್ಚು ಮಹತ್ವದ್ದಾಗಿದೆ. ಯುನೈಟೆಡ್ ಸ್ಟೇಟ್​ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಡೊನಾಲ್ಡ್ ಟ್ರಂಪ್ ರಷ್ಯಾ- ಉಕ್ರೇನ್ ನಡುವಿನ ಸಂಘರ್ಷಕ್ಕೆ ಅಂತ್ಯ ಹಾಡಲು ಪ್ರತಿಜ್ಞೆ ಮಾಡಿದ್ದಾರೆ. ಇದಕ್ಕಾಗಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿ ಮಾಡಲು ಉತ್ಸುಕರಾಗಿದ್ದಾರೆ. ಹಾಗೇ, ಪುಟಿನ್ ಕೂಡ ಈ ಸಭೆಯಲ್ಲಿ ಪಾಲ್ಗೊಳ್ಳಲು ಇಚ್ಛೆ ವ್ಯಕ್ತಪಡಿಸಿದ್ದಾರೆ. ಹಾಗಾದರೆ, ಈ ಸಭೆ ಎಲ್ಲಿ ನಡೆಯಲಿದೆ ಎಂಬ ಕುತೂಹಲ ಮೂಡುವುದು ಸಹಜ. ಮೂಲಗಳ ಪ್ರಕಾರ, ಈ ಸಭೆಗೆ ಭಾರತವನ್ನು ಸೂಕ್ತ ಆಯ್ಕೆಯೆಂದು ಪರಿಗಣಿಸಲಾಗಿದೆ.

ಮೂಲಗಳ ಪ್ರಕಾರ, ಕ್ರೆಮ್ಲಿನ್ ಈ ಸಭೆಯನ್ನು ಆಯೋಜಿಸಲು ಸಂಭಾವ್ಯ ದೇಶಗಳ ಪಟ್ಟಿಯನ್ನು ಸಿದ್ಧಪಡಿಸುತ್ತಿದೆ. ಭಾರತವು ಈ ಪಟ್ಟಿಯಲ್ಲಿ ಅಗ್ರ ಸ್ಪರ್ಧಿಯಾಗಿ ಹೊರಹೊಮ್ಮಿದೆ. ಕ್ರೆಮ್ಲಿನ್‌ಗೆ ಹತ್ತಿರವಿರುವ ಅನೇಕರು ಭಾರತದ ತಟಸ್ಥ ನೀತಿ ಈ ಯಶಸ್ವಿ ಸಭೆಗೆ ದಾರಿ ಮಾಡಿಕೊಡಬಹುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಉಕ್ರೇನ್​ನಿಂದ ಇಟಲಿವರೆಗೆ 2024ರಲ್ಲಿ ಪ್ರಧಾನಿ ಮೋದಿ ಭೇಟಿಯಾದ ಪ್ರಮುಖ ವ್ಯಕ್ತಿಗಳು

ರಷ್ಯಾ-ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಭಾರತದ ನಿಷ್ಪಕ್ಷಪಾತ ಮತ್ತು ಸ್ವತಂತ್ರ ನಿಲುವು ಅಂತಾರಾಷ್ಟ್ರೀಯ ಮನ್ನಣೆ ಗಳಿಸಿದೆ. ಇದಲ್ಲದೆ, ರಷ್ಯಾ ಅಧ್ಯಕ್ಷ ಪುಟಿನ್ ಈ ವರ್ಷ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಮತ್ತೊಂದೆಡೆ, ಡೊನಾಲ್ಡ್ ಟ್ರಂಪ್ ಕೂಡ ಈ ಹಿಂದೆ ತಮ್ಮ ಅಧಿಕಾರದ ಅವಧಿಯಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು.

ಭಾರತವು ಕ್ವಾಡ್ ಮೈತ್ರಿಕೂಟದ ಸದಸ್ಯ ರಾಷ್ಟ್ರವಾಗಿದೆ ಮತ್ತು 2025ರಲ್ಲಿ ಕ್ವಾಡ್ ಶೃಂಗಸಭೆಯ ಅಧ್ಯಕ್ಷತೆ ವಹಿಸುತ್ತದೆ. ಇದರಲ್ಲಿ ಟ್ರಂಪ್ ಭಾಗವಹಿಸುವ ನಿರೀಕ್ಷೆಯಿದೆ. ರಷ್ಯಾ ಮತ್ತು ಯುಎಸ್ ಅಧ್ಯಕ್ಷರು ಈ ವರ್ಷ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಇದು ಶಾಂತಿಯನ್ನು ಪ್ರೇರೇಪಿಸಲು ಮಹತ್ವದ ಅವಕಾಶ ಕಲ್ಪಿಸಲಿದೆ ಎನ್ನಲಾಗಿದೆ. ಟಿವಿ9 ಈ ಸಾಧ್ಯತೆಯ ಬಗ್ಗೆ ಅಧಿಕೃತ ದೃಢೀಕರಣಕ್ಕಾಗಿ ಕ್ರೆಮ್ಲಿನ್ ಅನ್ನು ಸಂಪರ್ಕಿಸಿದ್ದು, ಪ್ರತಿಕ್ರಿಯೆಯನ್ನು ನಿರೀಕ್ಷಿಸಲಾಗುತ್ತಿದೆ.

ಡಿಸೆಂಬರ್ 23ರಂದು ಸ್ಲೋವಾಕಿಯಾದ ಪ್ರಧಾನಿ ರಾಬರ್ಟ್ ಫಿಕೊ ಕೂಡ ರಷ್ಯಾಕ್ಕೆ ಭೇಟಿ ನೀಡಿದ್ದರು. ಸ್ಲೋವಾಕಿಯಾದಲ್ಲಿ ಸಭೆ ನಡೆಸಲು ರಷ್ಯಾ ಅಧ್ಯಕ್ಷ ಪುಟಿನ್ ಅವರನ್ನು ಆಹ್ವಾನಿಸಿದ್ದರು. ಆದರೆ, ಕ್ರೆಮ್ಲಿನ್ ಅಧಿಕಾರಿಗಳು ರಷ್ಯಾ ಸಂಧಾನಕ್ಕಾಗಿ ಸ್ನೇಹಪರ ರಾಷ್ಟ್ರವನ್ನು ಬಯಸುತ್ತಿದೆ ಎಂದು ಹೇಳಿದ್ದರು.

ಇದನ್ನೂ ಓದಿ: ಮಾಸ್ಕೋ ಬಾಂಬ್‌ ಸ್ಫೋಟದಲ್ಲಿ ರಷ್ಯಾದ ಪರಮಾಣು ರಕ್ಷಣಾ ಪಡೆ ಮುಖ್ಯಸ್ಥ ಸಾವು

ರಷ್ಯಾ- ಉಕ್ರೇನ್ ಯುದ್ಧ ಪ್ರಾರಂಭವಾದಾಗಿನಿಂದ ರಷ್ಯಾ ಅಧ್ಯಕ್ಷ ಪುಟಿನ್ ಅವರು ಚೀನಾ, ಮಂಗೋಲಿಯಾ, ವಿಯೆಟ್ನಾಂ, ಬೆಲಾರಸ್, ಕಜಕಿಸ್ತಾನ್ ಮತ್ತು ಉತ್ತರ ಕೊರಿಯಾ ಸೇರಿದಂತೆ ರಷ್ಯಾದ ಮಿತ್ರರಾಷ್ಟ್ರಗಳೆಂದು ಪರಿಗಣಿಸಲ್ಪಟ್ಟ ದೇಶಗಳಿಗೆ ಮಾತ್ರ ಭೇಟಿ ನೀಡಿದ್ದಾರೆ. ಐಸಿಸಿ ಅವರ ವಿರುದ್ಧ ಬಂಧನ ವಾರಂಟ್ ಹೊರಡಿಸಿದ ನಂತರ ಅವರು ತಮ್ಮ ದಕ್ಷಿಣ ಆಫ್ರಿಕಾ ಭೇಟಿಯನ್ನು ರದ್ದುಗೊಳಿಸಿದ್ದರು.

ಇದುವರೆಗೂ ಅಮೇರಿಕನ್ ಮತ್ತು ರಷ್ಯಾದ ಅಧ್ಯಕ್ಷರ ನಡುವಿನ ಸಭೆಗಳು ಯುರೋಪ್ನಲ್ಲಿ ಹೆಚ್ಚಾಗಿ ನಡೆದಿವೆ. 2021ರಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ರಷ್ಯಾ ಅಧ್ಯಕ್ಷ ಪುಟಿನ್ ಸ್ವಿಜರ್ಲೆಂಡ್‌ನ ಜಿನೀವಾದಲ್ಲಿ ಭೇಟಿಯಾದರು. ಆದರೆ, ಪ್ರಸ್ತುತ ಪರಿಸ್ಥಿತಿಗಳನ್ನು ಗಮನಿಸಿದರೆ ಡೊನಾಲ್ಡ್ ಟ್ರಂಪ್ ಕೆಲವು ಯುರೋಪಿಯನ್ ರಾಷ್ಟ್ರಗಳಿಗೆ ಭೇಟಿ ನೀಡುವುದನ್ನು ತಪ್ಪಿಸುವ ಸಾಧ್ಯತೆಯಿದೆ.

ಒಂದುವೇಳೆ ಈ ಸಭೆಯು ಭಾರತದಲ್ಲಿ ನಡೆದರೆ, ಇದು ರಷ್ಯಾ-ಉಕ್ರೇನ್ ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನು ಗುರುತಿಸಬಹುದು. ಇದು ಭಾರತದ ರಾಜತಾಂತ್ರಿಕ ಸ್ಥಾನವನ್ನು ಹೊಸ ಎತ್ತರಕ್ಕೆ ಏರಿಸಬಹುದು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ