ರಸಗೊಬ್ಬರ ಬೆಲೆ ಇಳಿಕೆಗೆ ಹಲವು ಕ್ರಮ: ರಷ್ಯಾದಿಂದ ರಸಗೊಬ್ಬರ ಆಮದು ಖಾತ್ರಿ, ಸಬ್ಸಿಡಿಯೂ ಹೆಚ್ಚಳ
ಜಾಗತಿಕ ರಸಗೊಬ್ಬರ ಉತ್ಪಾದನೆ ಮತ್ತು ಮಾರಾಟದಲ್ಲಿ ರಷ್ಯಾ ಶೇ 13ರಷ್ಟು ಪಾಲು ಹೊಂದಿದೆ.
ದೆಹಲಿ: ಭಾರತ ಸರ್ಕಾರವು ರಷ್ಯಾದಿಂದ ರಸಗೊಬ್ಬರ ಆಮದು (Fertiliser Import) ಮಾಡಿಕೊಳ್ಳುವ ಒಪ್ಪಂದ ಅಂತಿಮಗೊಳಿಸಿಕೊಂಡಿದೆ. ಹಲವು ವರ್ಷಗಳವರೆಗೆ ಭಾರತಕ್ಕೆ ರಸಗೊಬ್ಬರ ಪೂರೈಸಲು ರಷ್ಯಾ ಸಮ್ಮತಿಸಿದೆ. ಈ ಸಂಬಂಧ ಎರಡೂ ಸರ್ಕಾರಗಳು ಒಪ್ಪಂದ ಅಂತಿಮಗೊಳಿಸಿಕೊಂಡಿವೆ. ಇಂದಿಗೂ ಭಾರತದಲ್ಲಿ ಕೃಷಿಯೇ ಅತಿದೊಡ್ಡ ಉದ್ಯೋಗದಾತ ಕ್ಷೇತ್ರವಾಗಿದೆ (Agriculture Sector). ಕೃಷಿ ಚಟುವಟಿಕೆಗಳಿಗೆ ಅತ್ಯಗತ್ಯವಾಗಿ ಬೇಕಿರುವ ರಸಗೊಬ್ಬರಕ್ಕಾಗಿ ಭಾರತವು ಇತರ ದೇಶಗಳನ್ನೇ ಅವಲಂಬಿಸಿದೆ. ಕಪ್ಪು ಸಮುದ್ರ ಪ್ರದೇಶದಲ್ಲಿ ಸಂಘರ್ಷ ಹೆಚ್ಚಾಗಿರುವ ಕಾರಣ ಈ ವರ್ಷ ಭಾರತದ ರಸಗೊಬ್ಬರ ಬೇಡಿಕೆ ಪೂರೈಕೆ ಕಷ್ಟ ಎಂದು ವಿಶ್ಲೇಷಿಸಲಾಗಿತ್ತು. ಜೂನ್ನಿಂದ ಸೆಪ್ಟೆಂಬರ್ ಅವಧಿಯಲ್ಲಿ ಭಾರತದಲ್ಲಿ ಮುಂಗಾರು ಬೆಳೆಗಳ ಬಿತ್ತನೆಯಾಗಲಿದೆ. ಈ ಅವಧಿಯಲ್ಲಿ ರಸಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿರುತ್ತದೆ. ಭಾರತದ 2.7 ಲಕ್ಷ ಕೋಟಿ ಆರ್ಥಿಕತೆಯ ಭಾರತದಲ್ಲಿ ಶೇ 15ರಷ್ಟು ಪ್ರಮಾಣವು ಕೃಷಿಯನ್ನೇ ಅವಲಂಬಿಸಿದೆ.
ಜಾಗತಿಕ ಸಂಘರ್ಷ, ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಳ ಮತ್ತು ದೇಶೀಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ ಭಾರತವು ರಷ್ಯಾದೊಂದಿಗೆ ಸರ್ಕಾರದ ಮಟ್ಟದಲ್ಲಿ ಮಾತುಕತೆ ಆರಂಭಿಸಿ, ದೀರ್ಘಾವಧಿ ರಸಗೊಬ್ಬರ ಪೂರೈಕೆಗೆ ಒಪ್ಪಂದ ಮಾಡಿಕೊಂಡಿತು. ಭಾರತದಿಂದ ಸಾಟಿ ಪದ್ಧತಿಯಲ್ಲಿ (ವಸ್ತುಗಳ ವಿನಿಮಯ) ರಷ್ಯಾದಿಂದ ರಸಗೊಬ್ಬರ ಆಮದು ಮಾಡಿಕೊಳ್ಳುತ್ತಿದೆ. ಸತ್ಯಗಳಿಗೆ ಬೇಕಿರುವ ಪೋಷಕಾಂಶಗಳನ್ನು ಪೂರೈಸುವ ರಷ್ಯಾ, ಅದಕ್ಕೆ ಪ್ರತಿಯಾಗಿ ಭಾರತದಿಂದ ವಿವಿಧ ಉತ್ಪನ್ನಗಳನ್ನು ತರಿಸಿಕೊಳ್ಳುತ್ತಿದೆ. ರಸಗೊಬ್ಬರಕ್ಕೆ ಪ್ರತಿಯಾಗಿ ಭಾರತವು ಟೀ, ಕಚ್ಚಾ ವಸ್ತುಗಳು ಮತ್ತು ಆಟೊಮೊಬೈಲ್ಗೆ ಬಳಕೆಯಾಗುವ ಬಿಡಿಭಾಗಗಳನ್ನು ಕಳಿಸಿಕೊಡುತ್ತಿದೆ. ಡಾಲರ್ ವಹಿವಾಟಿನ ನಿರ್ಬಂಧ ಇರುವುದರಿಂದ ಸಾಟಿ ಪದ್ಧತಿಯಡಿ ವಹಿವಾಟು ನಡೆಸಲು ಎರಡೂ ದೇಶಗಳು ಮುಂದಾಗಿವೆ.
ರಷ್ಯಾದಿಂದ ಭಾರತವು ಪ್ರತಿವರ್ಷ 10 ಲಕ್ಷ ಟನ್ ಡಿ-ಅಮೋನಿಯಂ ಫಾಸ್ಪೇಟ್ (ಡಿಎಪಿ) ಮತ್ತು ಪೊಟ್ಯಾಷ್, 8 ಲಕ್ಷ ಟನ್ ನೈಟ್ರೊಜನ್, ಫಾಸ್ಪರಸ್, ಪೊಟ್ಯಾಷಿಯಂ (ಎನ್ಪಿಕೆ) ಆಮದು ಮಾಡಿಕೊಳ್ಳುತ್ತಿದೆ. ರಷ್ಯಾ-ಉಕ್ರೇನ್ ಸಂಘರ್ಷದ ಬೆನ್ನಲ್ಲಿ ರಷ್ಯಾ-ಭಾರತದ ವಹಿವಾಟಿನ ಬಗ್ಗೆ ಜಾಗತಿಕ ಮಟ್ಟದಲ್ಲಿ ಆಕ್ಷೇಪಗಳು ವ್ಯಕ್ತವಾಗಿವೆ. ಆದರೆ ಭಾರತ ಸರ್ಕಾರವು ತನ್ನ ಜನರ ಅಗತ್ಯಗಳನ್ನು ಪೂರೈಸುವುದು ಮೊದಲ ಆದ್ಯತೆ ಎಂಬ ನಿಲುವಿಗೆ ಅಂಟಿಕೊಂಟಿದೆ.
ಉಕ್ರೇನ್ ಯುದ್ಧದ ನಂತರ ಜಾಗತಿಕ ಮಟ್ಟದಲ್ಲಿ ರಸಗೊಬ್ಬರಗಳ ಬೆಲೆ ಹೆಚ್ಚಾಗುತ್ತಿದೆ. ದೇಶದಲ್ಲಿ ಬೆಲೆಯನ್ನು ಸ್ಥಿರವಾಗಿ ಇರಿಸುವ ದೃಷ್ಟಿಯಿಂದ ಸರ್ಕಾರವು ಈ ವರ್ಷ ಹೆಚ್ಚುವರಿಯಾಗಿ ₹ 1.10 ಲಕ್ಷ ಕೋಟಿಯಷ್ಟು ಸಬ್ಸಿಡಿ ಒದಗಿಸುವುದಾಗಿ ಮೋದಿ ಸರ್ಕಾರವು ಘೋಷಿಸಿತ್ತು. ಸಬ್ಸಿಡಿ ಹೆಚ್ಚಿಸುವ ನಿರ್ಧಾರದಿಂದ ಸರ್ಕಾರವು ರಸಗೊಬ್ಬರ ಮೀಸಲಿಗೆ ನಿಗದಿಪಡಿಸಿದ್ದ ಮೊತ್ತವನ್ನು ದುಪ್ಪಟ್ಟುಗೊಳಿಸಬೇಕಾಗಿದೆ. ಇದರೊಂದಿಗೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಸಬ್ಸಿಡಿಗೆ ಮೀಸಲಿಡುವ ಮೊತ್ತವು ₹ 2.15 ಲಕ್ಷ ಕೋಟಿಗೆ ಹೆಚ್ಚಾಗಲಿದೆ.
ಭಾರತದಲ್ಲಿ ರಸಬೊಬ್ಬರ ಉತ್ಪಾದನೆ ಮತ್ತು ಮಾರಾಟದಲ್ಲಿ ತೊಡಗಿಸಿಕೊಂಡಿರುವ ನ್ಯಾಷನಲ್ ಫರ್ಟಿಲೈಜರ್ಸ್, ಮದ್ರಾಸ್ ಫರ್ಟಿಲೈಜರ್ಸ್, ರಾಷ್ಟ್ರೀಯ ಕೆಮಿಕಲ್ಸ್ ಅಂಡ್ ಫರ್ಟಿಲೈಜರ್ಸ್, ಇಂಡಿಯಾ ಪೊಟ್ಯಾಷ್ ಸೇರಿದಂತೆ ಹಲವು ಕಂಪನಿಗಳು ರಷ್ಯಾದ ಫೊಸಾಗ್ರೊ ಮತ್ತು ಉರಾಲ್ಕಲಿ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಿವೆ. ವಿಶ್ವದಲ್ಲಿ ರಸಗೊಬ್ಬರ ಉತ್ಪಾದನೆ ಮತ್ತು ಮಾರಾಟದಲ್ಲಿ ವ್ಯತ್ಯಯಾದ ಹಿನ್ನೆಲೆಯಲ್ಲಿ ಭಾರತದಲ್ಲಿಯೂ ರಸಗೊಬ್ಬರ ದರಗಳು ಹೆಚ್ಚಾಗಿದ್ದವು. ಅನಿವಾರ್ಯವಾಗಿ ಮಧ್ಯಪ್ರವೇಶಿಸಿದ ಸರ್ಕಾರವು ರಸಗೊಬ್ಬರ ಸಬ್ಸಿಡಿ ಹೆಚ್ಚಿಸುವ ನಿರ್ಧಾರ ಪ್ರಕಟಿಸಬೇಕಾಯಿತು.
ಜಾಗತಿಕ ರಸಗೊಬ್ಬರ ಉತ್ಪಾದನೆ ಮತ್ತು ಮಾರಾಟದಲ್ಲಿ ರಷ್ಯಾ ಶೇ 13ರಷ್ಟು ಪಾಲು ಹೊಂದಿದೆ. ಭಾರತಕ್ಕೆ ಪ್ರಮುಖ ಪೂರೈಕೆದಾರ ದೇಶವಾಗಿದೆ. ಕಳೆದ ಮಾರ್ಚ್ ತಿಂಗಳಲ್ಲಿ ರಷ್ಯಾ ರಸಗೊಬ್ಬರ ಪೂರೈಕೆಯನ್ನು ನಿರ್ಬಂಧಿಸಿತ್ತು. ಈ ಬೆಳವಣಿಗೆಯ ನಂತರ ಕೃಷಿ ವಲಯದಲ್ಲಿ ಬಿಕ್ಕಟ್ಟಿನಂಥ ಪರಿಸ್ಥಿತಿ ನಿರ್ಮಾಣವಾಗಿತ್ತು.
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:04 pm, Mon, 30 May 22