ಗಣರಾಜ್ಯೋತ್ಸವ ವಿಶೇಷ | ಸಂವಿಧಾನ ಪ್ರತಿಯ ಮೆರುಗು ಹೆಚ್ಚಿಸಿದ ಶಾಂತಿನಿಕೇತನ ಕಲಾವಿದರ ಚಿತ್ರಕಲೆ

 ಸಂವಿಧಾನದ 22 ಅಧ್ಯಾಯಗಳಲ್ಲಿ ಇಲ್​ಸ್ಟ್ರೇಷನ್​ಗಳು ಮತ್ತು ಕೆಲವು ಪುಟಗಳ ಅಂಚುಗಳಲ್ಲಿ ಅಂದವಾದ ಚಿತ್ರಗಳು ವಿಶ್ವ ಭಾರತಿಯಲ್ಲಿ ಬೋಸ್ ಸ್ಥಾಪಿಸಿದ ಕಲಾ ಭವನದ ವಿದ್ಯಾರ್ಥಿಗಳ ಕೊಡುಗೆ.

ಗಣರಾಜ್ಯೋತ್ಸವ ವಿಶೇಷ | ಸಂವಿಧಾನ ಪ್ರತಿಯ ಮೆರುಗು ಹೆಚ್ಚಿಸಿದ ಶಾಂತಿನಿಕೇತನ ಕಲಾವಿದರ ಚಿತ್ರಕಲೆ
ಸಂವಿಧಾನದಲ್ಲಿರುವ ಚಿತ್ರಗಳು
Follow us
ರಶ್ಮಿ ಕಲ್ಲಕಟ್ಟ
|

Updated on:Jan 25, 2021 | 3:55 PM

ಭಾರತದ ಸಂವಿಧಾನದ ಪುಟಗಳನ್ನು ತಿರುವಿದರೆ ಅಲ್ಲಿ ಹಲವು ಚಿತ್ರಗಳನ್ನು ಕಾಣಬಹುದು. ಈ ಚಿತ್ರಗಳನ್ನು ಬಿಡಿಸಿದ್ದು ಪಶ್ಚಿಮ ಬಂಗಾಳದ ಕಲಾವಿದರು. ಶಾಂತಿನಿಕೇತನದ ಕಲಾವಿದರ ಅತಿಮುಖ್ಯ ಕ್ಯಾನ್ವಾಸ್ ಭಾರತದ ಸಂವಿಧಾನ ಎಂದರೆ ತಪ್ಪಾಗಲಾರದು.

1946ರ ಡಿಸೆಂಬರ್ ತಿಂಗಳಲ್ಲಿ ಭಾರತದಲ್ಲಿ ನೂತನವಾಗಿ ರಚನೆಯಾದ ಸಂವಿಧಾನ ಸಭೆಯು ಸಂವಿಧಾನಕ್ಕೊಂದು ರೂಪ ಕೊಡುವ ಬಗ್ಗೆ ವಿಚಾರ ಮಂಥನ ನಡೆಸಿದಾಗ ಪಶ್ಚಿಮ ಬಂಗಾಳದ ಶಾಂತಿನಿಕೇತನದಲ್ಲಿರುವ ವಿಶ್ವ ಭಾರತಿ ಕಲಾಶಾಲೆಯ ಕಲಾವಿದರಾದ ನಂದಲಾಲ್ ಬೋಸ್ , ರಾಮಮನೋಹರ್ ಸಿನ್ಹಾ, ಕೃಪಾಲ್ ಸಿಂಗ್ ಶೆಖಾವತ್ ಸಂವಿಧಾನಕ್ಕೆ ಕಲಾತ್ಮಕ ರೂಪ ಕೊಡುವ ಬಗ್ಗೆ ಸಲಹೆ ನೀಡಿದ್ದರು.

ಕೆಲವೇ ವರ್ಷಗಳಲ್ಲಿ ಈ ಕಲಾತ್ಮಕ ರೂಪವನ್ನು ಭಾರತೀಯ ಸಂವಿಧಾನದಲ್ಲಿ ಅಳವಡಿಸಿಕೊಳ್ಳಲು ಒಪ್ಪಿಕೊಂಡಾಗ ಕಾನೂನು ದಾಖಲೆಯೂ ಐತಿಹಾಸಿಕ ಮತ್ತು ಕಲಾತ್ಮಕ ಮೌಲ್ಯವನ್ನು ಪಡೆದುಕೊಂಡಿತು. ನಂದಲಾಲ್ ಬೋಸ್ ಅವರ ನೇತೃತ್ವದ ಕಲಾವಿದರ ಗುಂಪು ಸಂವಿಧಾನದ ಪುಟಗಳಲ್ಲಿ ಭಾರತದ ಇತಿಹಾಸವು ಮೂಡಿಬರಬೇಕು ಎಂದು ತೀರ್ಮಾನಿಸಿತು. ಇದರ ಫಲವಾಗಿ ಸಂವಿಧಾನದ ಪುಟಗಳಲ್ಲಿ ಹರಪ್ಪ ನಾಗರಿತೆಯನ್ನು ಬಿಂಬಿಸುವ ಚಿತ್ರಗಳನ್ನು ರಚಿಸಲಾಯಿತು. ಸಂವಿಧಾನದ ಮುನ್ನುಡಿ (ಪ್ರಿಯಾಂಬಲ್) ನ ಅಂಚುಗಳ ಸುತ್ತಲೂ ಸಿನ್ಹಾ ತಮ್ಮ ಊರಿನಲ್ಲಿರುವ ಸ್ಮಾರಕವೊಂದರ ಮೇಲಿರುವ ಚಿತ್ರಗಳನ್ನು ಬಿಡಿಸಿದ್ದರು.

ಸಂವಿಧಾನದ ಮೂಲಪ್ರತಿಯಲ್ಲಿರುವ ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಇಂಡಿಯನ್​ ನ್ಯಾಷನಲ್ ಆರ್ಮಿ ಚಿತ್ರ

ಕೃಪಾಲ್ ಸಿಂಗ್ ಶೆಖಾವತ್ ಅವರು ಜೈಪುರದ ನೀಲಿ ಬಣ್ಣದ ಕುಂಬಾರಿಕೆಯ ಚಿತ್ರವನ್ನು ಸಂವಿಧಾನದ ಪುಟಗಳಿಗೆ ತಂದರು. ಸಂವಿಧಾನ ಮುನ್ನುಡಿ ಮೇಲೆ ಚಿತ್ರಿಸಿರುವ ಹೂ ಬಳ್ಳಿಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಜೈಪುರದ ಮಡಿಕೆಗಳ ಕಂಠದ ಮೇಲಿರುವ ಚಿತ್ರಗಳನ್ನು ಅದು ಹೋಲುವುದು ಸ್ಪಷ್ಟವಾಗಿ ಕಾಣುತ್ತದೆ.

ಸಂವಿಧಾನದ 22 ಅಧ್ಯಾಯಗಳಲ್ಲಿ ಇಲ್​ಸ್ಟ್ರೇಷನ್​ಗಳನ್ನು ಮತ್ತು ಕೆಲವು ಪುಟಗಳ ಅಂಚುಗಳಲ್ಲಿ ಅಂದವಾದ ಚಿತ್ರಗಳು ವಿಶ್ವ ಭಾರತಿಯಲ್ಲಿ ನಂದಲಾಲ್ ಬೋಸ್‌ ಸ್ಥಾಪಿಸಿದ ಕಲಾ ಭವನದ ವಿದ್ಯಾರ್ಥಿಗಳ ಕೊಡುಗೆ. ಇವುಗಳಲ್ಲಿ ಖ್ಯಾತ ಹರಪ್ಪ- ಮೊಹೆಂಜೊದಾರೊ ಗೂಳಿ ಮುದ್ರೆ , ಗುರುಕುಲದ ದೃಶ್ಯ, ಧ್ಯಾನಸ್ಥ ಬುದ್ಧ, ಮಹಾವೀರ, ಅಶೋಕ ಚಕ್ರವರ್ತಿ, ಅಕ್ಬರ್ ಚಕ್ರವರ್ತಿ, ರಾಣಿ ಲಕ್ಷ್ಮೀಬಾಯಿ ಮತ್ತು ಟಿಪ್ಪು ಸುಲ್ತಾನನ ಚಿತ್ರ, ನೋಖಾಲಿಯಲ್ಲಿ ಮಹಾತ್ಮಾಗಾಂಧಿ ಶಾಂತಿ ಸ್ಥಾಪಿಸಲು ಶ್ರಮಿಸುತ್ತಿರುವುದು, ಸುಭಾಷ್ ಚಂದ್ರ ಬೋಸ್ ಮತ್ತು ಇಂಡಿಯನ್ ನ್ಯಾಷನಲ್ ಆರ್ಮಿ ಸದಸ್ಯರ ಚಿತ್ರವಿದೆ . ಸಂವಿಧಾನದ ಪುಟಗಳಲ್ಲಿರುವ  ಚಿತ್ರಗಳನ್ನು ನೋಡಿದರೆ ಅಲ್ಲಿ ಭಾರತದ ನವ್ಯ ಕಲೆ ಮತ್ತು ಹೊಸ ಭಾರತದ ಇತಿಹಾಸವನ್ನು ಚಿತ್ರಿಸಿರುವುದನ್ನು ಕಾಣಬಹುದು.

ನೋಖಾಲಿಯಲ್ಲಿ ಮಹಾತ್ಮಗಾಂಧಿ

1922ರಲ್ಲಿ ಈಗ ಉತ್ತರಪ್ರದೇಶದಲ್ಲಿರುವ ಚೌರಿಚೌರಾದ ಪೊಲೀಸ್ ಠಾಣೆಗೆ ಜನರ ಗುಂಪೊಂದು ಬೆಂಕಿ ಹಚ್ಚಿದ ಘಟನೆ ನಡೆದಾಗ ಮಹಾತ್ಮಗಾಂಧಿ ಆರಂಭಿಸಿದ್ದ ಅಸಹಕಾರ ಚಳುವಳಿ ಹಠಾತ್ತನೆ ಕೊನೆಗೊಂಡಿತು. ಗಾಂಧಿಯವರಿಗೆ, 1919 ರಲ್ಲಿ ಪ್ರಾರಂಭವಾದ ಖಿಲಾಫತ್ ಚಳುವಳಿ ಮತ್ತು ಒಂದು ವರ್ಷದ ನಂತರ ಅವರು ಕರೆದ ಅಹಿಂಸಾತ್ಮಕ ಅಸಹಕಾರ ಚಳುವಳಿ ಎರಡೂ ಮಹತ್ವದ್ದಾಗಿತ್ತು. ಇವೆರಡೂ ಭಾರತೀಯರ ರಾಜಕೀಯ ಪ್ರಜ್ಞೆಯನ್ನು ಸೂಚಿಸುತ್ತದೆ. ಆಗ 40 ವರ್ಷದ ಕಲಾವಿದನಾಗಿದ್ದ ನಂದಲಾಲ್ ಬೋಸ್‌ಗೆ ಶಾಂತಿನಿಕೇತನದಲ್ಲಿ ಕಲಾ ಭವನ ಸ್ಥಾಪಿಸಲು ಆಹ್ವಾನ ನೀಡಲಾಯಿತು. ಕೊಲ್ಕತ್ತಾದ ಆಗಿನ ಖ್ಯಾತ ಕಲಾವಿದರಾದ ಅಬನೀಂದ್ರನಾಥ ಟ್ಯಾಗೋರ್‌ರಿಂದ ಆಳವಾಗಿ ಪ್ರಭಾವಿತರಾಗಿದ್ದರು ಬೋಸ್.

ಸಂವಿಧಾನದಲ್ಲಿ ರಾಮನ ಚಿತ್ರ

ಸರಳವಾಗಿ ಹೇಳುವುದಾದರೆ, ಶಾಲೆಯ ಪ್ರತಿಪಾದಕರು ಪ್ರಾಚೀನ ಭಿತ್ತಿಚಿತ್ರಗಳು (ಅಜಂತ ಗುಹೆಗಳಲ್ಲಿರುವಂತವು), ದೇವಾಲಯದ ಶಿಲ್ಪಗಳು ಮತ್ತು ಮೊಘಲ್ ಮಿನಿಯೇಚರ್​ಗಳನ್ನು ಕಲಾತ್ಮಕ ಭಾಷಾವೈಶಿಷ್ಟ್ಯವನ್ನು ಅಭಿವೃದ್ಧಿಪಡಿಸಲು, ಪಾಶ್ಚಾತ್ಯ ಮತ್ತು ಯುರೋಪಿಯನ್ ಪ್ರಭಾವಗಳಿಂದ (ರಾಜಾ ರವಿವರ್ಮ ಚಿತ್ರ ಅಥವಾ ಕಂಪನಿ ಪೇಂಟರ್‌ಗಳು ಬಿಡಿಸಿದ ಚಿತ್ರ) ಪ್ರಭಾವಿತವಾದ ಶಾಸ್ತ್ರೀಯ ಕಲೆಗೆ ಅತೀತವಾದುದನ್ನು ಚಿಂತಿಸುತ್ತಿದ್ದರು. ಆದಾಗ್ಯೂ, ರಾಷ್ಟ್ರೀಯತೆಗೆ ಉತ್ತೇಜನ ನೀಡುವ ವಿಷಯವಾಗಿದ್ದರಿಂದ , ಬಂಗಾಳದ ವಿದ್ಯಾಲಯವು ತನ್ನದೇ ಆದ ಹರವನ್ನು ವಿಸ್ತರಿಸಲು ಜಪಾನೀಸ್ ವಾಶ್ ಟೆಕ್ನಿಕ್ಸ್ ಮೊದಲಾದ ಕಲೆಗಳನ್ನು ಬಳಸಿಕೊಂಡಿತು. ಇದರಲ್ಲಿ ಬೋಸ್ ಸೇರಿದಂತೆ ಅನೇಕರು ಪರಿಣಿತರಾದರು. ಇದು ಸಂಕುಚಿತ ರಾಷ್ಟ್ರೀಯತಾವಾದಿ ಕಲೆ ಅಲ್ಲ, ಆದರೆ ವಿಸ್ತಾರವಾದ, ಕ್ಯಾಥೋಲಿಕ್ ಶೈಲಿಯಾಗಿದ್ದು, ಇದು ಸಂವಿಧಾನದ ಪುಟಗಳಲ್ಲಿ ಬಿಡಿಸಿದ ಚಿತ್ತಾರಗಳಲ್ಲಿಯೂ ಪ್ರತಿಫಲಿಸುತ್ತದೆ.

ಸಂವಿಧಾನದ ಮೊದಲ ಭಾಗದಲ್ಲಿ ಗೂಳಿ ಮುದ್ರೆ

ಭಾರತದ ಸಂವಿಧಾನದ ಪುಟಗಳಲ್ಲಿ ಯಾವ ರೀತಿಯ ಚಿತ್ರಗಳಿವೆ? ಮೊದಲ ಭಾಗ ‘ದಿ ಯೂನಿಯನ್ ಆ್ಯಂಡ್ ಇಟ್ಸ್ ಟೆರಿಟರಿ’ ಪುಟದಲ್ಲಿ ಸಿಂಧೂ ನಾಗರಿಕತೆಯ ಗೂಳಿ ಮುದ್ರೆಯನ್ನು ಕಾಣಬಹುದು. ಎರಡನೇ ಭಾಗ ಸಿಟಿಜನ್ ಶಿಪ್​ನಲ್ಲಿ ಭಾರತದ ವೈದಿಕ ಯುಗದ ಚಿತ್ರಣವಿದೆ. ಅಗ್ನಿ, ಇಂದ್ರ, ಸೂರ್ಯ ಮುಂತಾದ ದೇವತೆಗಳನ್ನು ಪೂಜಿಸುವ ಸಂಪ್ರದಾಯವನ್ನು ಇಲ್ಲಿ ಬಿಂಬಿಸಲಾಗಿದೆ. ಮೂರನೇ ಅಧ್ಯಾಯದಲ್ಲಿ (ಮೂಲಭೂತ ಹಕ್ಕು – Fundamental Rights) ರಾಮ, ಲಕ್ಷಣ ಮತ್ತು ಸೀತೆಯ ಇಲ್​ಸ್ಟ್ರೇಷನ್ ಇದೆ. ರಾಜ್ಯನೀತಿಯ ವಿಭಾಗವು ಮಹಾಭಾರತ ಯುದ್ಧಕ್ಕೆ ಮುಂಚೆ ಯುದ್ಧಭೂಮಿಯಲ್ಲಿ ಅರ್ಜುನ ಮತ್ತು ಕೃಷ್ಣ ನಡುವಿನ ಸಂಭಾಷಣೆಯ ಚಿತ್ರಣವನ್ನು ಹೊಂದಿದೆ.

ಮಹಾವೀರ

ಐದನೇ ಭಾಗವಾದ ‘ದಿ ಯೂನಿಯನ್’ನ ಮೊದಲ ಅಧ್ಯಾಯದಲ್ಲಿ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಗೆ ಸಂಬಂಧಿಸಿದ ನಿಯಮಗಳಿವೆ. ಈ ಪುಟದಲ್ಲಿ ಬುದ್ಧನ ಜ್ಞಾನೋದಯದ ಚಿತ್ರವಿದೆ. 6ನೇ ಭಾಗದಲ್ಲಿ ಮಹಾವೀರ ಮತ್ತು ನವಿಲಿನ ಚಿತ್ರವಿದೆ. ಭಾರತದ ಸುವರ್ಣಯುಗವೆಂದೇ ಕರೆಯಲ್ಪಡುವ ಗುಪ್ತರ ಕಾಲದಲ್ಲಿ ಭಾರತದಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳೂ ಇಲ್ಲಿ ಬಿಂಬಿತವಾಗಿದೆ. ಅಜಂತಾದ ಪೇಟಿಂಗ್, ಕಾಳಿದಾಸ ಕಾವ್ಯ, ಆರ್ಯಭಟನ ಗಣಿತ ಎಲ್ಲವೂ ಈ ಕಾಲದ ಕೊಡುಗೆಗಳು. ಇವುಗಳನ್ನು ಬಿಂಬಿಸಲು ನಲಂದಾ ವಿಶ್ವವಿದ್ಯಾಲಯದ ಚಿತ್ರಣವನ್ನು ಇಲ್ಲಿ ನೀಡಲಾಗಿದೆ.

ಗೌತಮ ಬುದ್ಧ

ಪುರಾತನ ಕಾಲದಿಂದ ಮಧ್ಯಕಾಲೀನ ಯುಗದಲ್ಲಿ ದಕ್ಷಿಣ ಭಾರತದಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ಸೂಚಿಸಲು ಮಹಾಬಲಿಪುರಂನಲ್ಲಿರುವ ಅರ್ಜುನನ ತಪಸ್ಸು ಮತ್ತು ಚೋಳ ಸಾಮ್ರಾಜ್ಯ ಕಾಲದಲ್ಲಿನ ಕಂಚಿನ ನಟರಾಜನ ಚಿತ್ರಣವು ಕ್ರಮವಾಗಿ 12 ಮತ್ತು 13ನೇ ಭಾಗದಲ್ಲಿದೆ.  14ನೇ ಭಾಗದಲ್ಲಿ ಅಕ್ಬರನ ಆಸ್ಥಾನ, 15ನೇ ಭಾಗದಲ್ಲಿ ಶಿವಾಜಿ ಮತ್ತು 16ನೇ ಭಾಗದಲ್ಲಿ ಗುರು ಗೋಬಿಂದ್ ಸಿಂಗ್ ಚಿತ್ರವಿದೆ. ಇವೆರಡು ಚಿತ್ರಗಳು ಮರಾಠ ಮತ್ತು ಸಿಖ್ ಸಮುದಾಯವನ್ನುಪ್ರತಿನಿಧಿಕರಿಸುತ್ತಿದೆ. 17ನೇ ಭಾಗದಲ್ಲಿ ಮಹಾತ್ಮ ಗಾಂಧಿ, 18ನೇ ಭಾಗದಲ್ಲಿ ಮಹಾತ್ಮ ಗಾಂಧಿ ನೋಖಾಲಿ ಭೇಟಿ ಮಾಡಿರುವ ಚಿತ್ರವಿದೆ.  ಈ ಎಲ್ಲ ಇಲ್​ಸ್ಟ್ರೇಷನ್​ಗಳನ್ನು ಬಿಡಿಸಲು ಕಲಾವಿದರಿಗೆ ಬರೋಬ್ಬರಿ 5 ವರ್ಷಗಳು ಬೇಕಾದುವು.

ನಟರಾಜ ವಿಗ್ರಹದ ಚಿತ್ರ

ಸಂವಿಧಾನದ ಪ್ರತಿಗಳನ್ನು ಸಿದ್ಧಪಡಿಸುವುದು ಪ್ರಯಾಸಕರ ವಿಷಯ ಆಗಿತ್ತು. ಇಲ್ಯುಸ್ಟ್ರೇಷನ್ ಇರುವ ಪುಟಗಳನ್ನು ಪೇಂಟ್ ಮಾಡಿ ಆಮೇಲೆ ಕ್ಯಾಲಿಗ್ರಾಫರ್ ಗೆ ಕೊಡಬೇಕಿತ್ತು ಅಂತಾರೆ ಕ್ಯುರೇಟರ್ ನಮನ್ ಅಹುಜಾ. ಮೊಘಲ್ ಮತ್ತು ಸುಲ್ತಾನ್ ಹಸ್ತಪ್ರತಿಗಳಂತೆಯೇ ಸಾಂಪ್ರದಾಯಿಕ ರೀತಿಯಲ್ಲಿ ಹಾಷಿಯಾ ಶೈಲಿಯಲ್ಲಿ ಪುಟದ ಅಂಚುಗಳನ್ನು ಸಿಂಗರಿಸಿ ಆ ಪುಟಗಳಲ್ಲಿ ಕ್ಯಾಲಿಗ್ರಫಿಯನ್ನು ಮಾಡಲಾಯಿತು. ಕ್ಯಾಲಿಗ್ರಾಫರ್‌ನಿಂದ ಫ್ರೇಮರ್‌ಗೆ ಹೋಗುವ ಈ ಕೆಲಸದ ವಿಭಾಗವು ಸ್ವತಂತ್ರವಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿತು. ಅದೇ ವೇಳೆ ಕ್ಯಾಲಿಗ್ರಫಿಯಲ್ಲಿ ತಪ್ಪು ಕಂಡುಬಂದರೆ ಇಡೀ ಪುಟವನ್ನು ಮತ್ತೆ ತಿದ್ದಬೇಕಾದ ಅಗತ್ಯವಿಲ್ಲ ಎಂಬ ವ್ಯವಸ್ಥೆಯನ್ನೂ ಮಾಡಲಾಯಿತು.

ಸಂವಿಧಾನದಲ್ಲಿ ಕುರುಕ್ಷೇತ್ರ ಯುದ್ಧದ ಚಿತ್ರ

ಕೈ ಬರಹದಲ್ಲಿ ಬರೆದ ಎರಡು ಮೂಲ ಪ್ರತಿಗಳನ್ನು 1955ರಲ್ಲಿ ಡೆಹ್ರಾಡೂನ್ ನಲ್ಲಿರುವ ಸರ್ವೇ ಆಫ್ ಇಂಡಿಯಾದ ಮುದ್ರಣಾಲಯದಲ್ಲಿ 1000 ಪ್ರತಿಗಳನ್ನು ಮುದ್ರಿಸಲಾಯಿತು. ಮೂಲ ಪ್ರತಿಗಳನ್ನು ಈಗಲೂ ಸಂಸತ್ ಭವನದಲ್ಲಿ ಸಂರಕ್ಷಿಸಿಡಲಾಗಿದೆ. ಭಾರತೀಯ ಸಂವಿಧಾನವು ಕೇವಲ ಐತಿಹಾಸಿಕ ದಾಖಲೆಗಳು ಮಾತ್ರವಲ್ಲ ಕಲಾತ್ಮಕತೆಯಿಂದ ಕೂಡಿದ ಪ್ರಮುಖ ದಾಖಲೆಯೂ ಹೌದು.

ಗಣರಾಜ್ಯೋತ್ಸವ ವಿಶೇಷ | ಸಂವಿಧಾನದ ಮೊದಲ ಪ್ರತಿ ಮುದ್ರಿಸಿದ್ದ ಮೆಷಿನ್​ಗಳು ಗುಜರಿ ಪಾಲು

Published On - 3:51 pm, Mon, 25 January 21

ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ