ಕೇಂದ್ರದಿಂದ ಆರ್ಥಿಕ ಪ್ಯಾಕೇಜ್ ಘೋಷಣೆಗೆ ಸಿದ್ಧತೆ: ಪ್ರವಾಸೋದ್ಯಮ, ವಿಮಾನಯಾನ, ಎಂಎಸ್‌ಎಂಇ ಕ್ಷೇತ್ರಕ್ಕೆ ನೆರವು ಸಾಧ್ಯತೆ
ಈ ಬಾರಿ ಕೇಂದ್ರ ಸರ್ಕಾರವು ಯಾವುದೇ ಆರ್ಥಿಕ ರೀಲೀಫ್ ನೀಡುವ ಪ್ಯಾಕೇಜ್ ಘೋಷಿಸಲ್ಲ ಎನ್ನುವ ಮಾತುಗಳಿದ್ದವು. ಆದರೆ ಈ ಲೆಕ್ಕಾಚಾರ ಸುಳ್ಳಾಗಿಸುವಂತೆ ಇದೀಗ ಕೇಂದ್ರ ಸರ್ಕಾರವು ಆರ್ಥಿಕ ಪ್ಯಾಕೇಜ್ ಘೋಷಣೆಗೆ ಸಿದ್ದತೆ ನಡೆಸಿದೆ.
ದೆಹಲಿ: ಕೇಂದ್ರ ಸರ್ಕಾರವು ಈ ಬಾರಿ ದೇಶಾದ್ಯಂತ ಏಕರೂಪದ ಲಾಕ್ಡೌನ್ ಜಾರಿಗೊಳಿಸಿಲ್ಲ. ಆದರೆ, ಕಳೆದ ತಿಂಗಳಿನಿಂದ ರಾಜ್ಯ ಸರ್ಕಾರಗಳೇ ತಮ್ಮ ರಾಜ್ಯಗಳ ವ್ಯಾಪ್ತಿಯಲ್ಲಿ ಲಾಕ್ ಡೌನ್ ಘೋಷಿಸಿಕೊಂಡಿವೆ. ಹೀಗಾಗಿ ಈ ಬಾರಿ ಕೇಂದ್ರ ಸರ್ಕಾರವು ಯಾವುದೇ ಆರ್ಥಿಕ ರೀಲೀಫ್ ನೀಡುವ ಪ್ಯಾಕೇಜ್ ಘೋಷಿಸಲ್ಲ ಎನ್ನುವ ಮಾತುಗಳಿದ್ದವು. ಆದರೆ ಈ ಲೆಕ್ಕಾಚಾರ ಸುಳ್ಳಾಗಿಸುವಂತೆ ಇದೀಗ ಕೇಂದ್ರ ಸರ್ಕಾರವು ಆರ್ಥಿಕ ಪ್ಯಾಕೇಜ್ ಘೋಷಣೆಗೆ ಸಿದ್ದತೆ ನಡೆಸಿದೆ.
ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರೇ ದೇಶಾದ್ಯಂತ ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಲಾಕ್ಡೌನ್ ಘೋಷಿಸಿದ್ದರು. ದೀಢೀರನೇ ಎದುರಾದ ಲಾಕ್ಡೌನ್ನಿಂದ ಸಂಕಷ್ಟಕ್ಕೀಡಾದ ಕ್ಷೇತ್ರಗಳಿಗೆ ಕಳೆದ ವರ್ಷ ಕೇಂದ್ರ ಸರ್ಕಾರವೇ ಬರೋಬ್ಬರಿ ₹ 20 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿತ್ತು. ರೈತರು, ಕೈಗಾರಿಕೆ, ಕಾರ್ಮಿಕರು, ಸಣ್ಣ, ಮಧ್ಯಮ ಕೈಗಾರಿಕೆಗಳು, ಬ್ಯಾಂಕ್ಗಳು, ಮೀನುಗಾರರು, ಹೈನುಗಾರರು ಸೇರಿದಂತೆ ವಿವಿಧ ವಲಯಗಳಿಗೆ ಪ್ಯಾಕೇಜ್ ಘೋಷಿಸಲಾಗಿತ್ತು. ಆದರೆ, ಕಳೆದ ವರ್ಷದ ಆರ್ಥಿಕ ಪ್ಯಾಕೇಜ್ ನಲ್ಲಿ ಎಷ್ಟು ಹೊಸ ಯೋಜನೆಗಳು, ಎಷ್ಟು ಅದರ ಹಿಂದಿನ ಬಜೆಟ್ನಲ್ಲಿ ಘೋಷಿಸಿದ್ದ ಯೋಜನೆಗಳು ಎಂಬುದು ಬೇರೆ ಚರ್ಚೆಯ ವಿಷಯ.
ಈ ವರ್ಷ ಕೇಂದ್ರ ಸರ್ಕಾರವು ದೇಶಾದ್ಯಂತ ಏಕರೂಪದ ಲಾಕ್ಡೌನ್ ಘೋಷಿಸಿಲ್ಲ. ಈ ಬಾರಿ ರಾಜ್ಯ ಸರ್ಕಾರಗಳೇ ಕೊರೊನಾ ತಡೆಗೆ ಸ್ಥಳೀಯ ಕಾರ್ಯತಂತ್ರ ಜಾರಿಗೊಳಿಸಿ, ಕರ್ಪ್ಯೂ ಜಾರಿಗೊಳಿಸಿ ಎಂದು ಹೇಳಿ ಪ್ರಧಾನಿ ಮೋದಿ ಕೈ ತೊಳೆದುಕೊಂಡು ಬಿಟ್ಟರು. ತಮ್ಮ ರಾಜ್ಯಗಳಲ್ಲಿ ಕೊರೊನಾ ಹೆಚ್ಚಳ ತಡೆಯಲು ರಾಜ್ಯ ಸರ್ಕಾರಗಳೇ ಮುಂದಾಗಿ ಲಾಕ್ಡೌನ್ ಘೋಷಿಸಿದ್ದವು. ಕಳೆದ ತಿಂಗಳೇ ದೆಹಲಿ, ಮಹಾರಾಷ್ಟ್ರ ಲಾಕ್ಡೌನ್ ಘೋಷಿಸಿದ್ದವು. ಇದರ ಫಲವಾಗಿಯೇ ದೆಹಲಿ, ಮಹಾರಾಷ್ಟ್ರದಲ್ಲಿ ಈಗ ಕೊರೊನಾ ಪ್ರಕರಣಗಳು ನಿಯಂತ್ರಣಕ್ಕೆ ಬಂದಿವೆ. ದೆಹಲಿ, ಮಹಾರಾಷ್ಟ್ರದ ಬಳಿಕ ದೇಶದ ಎಲ್ಲ ರಾಜ್ಯ ಸರ್ಕಾರಗಳು ತಮ್ಮ ರಾಜ್ಯಗಳ ವ್ಯಾಪ್ತಿಯಲ್ಲಿ ಲಾಕ್ಡೌನ್ ಜಾರಿಗೆ ತಂದಿವೆ. ಹೀಗಾಗಿ ಈ ಬಾರಿ ಕೇಂದ್ರ ಸರ್ಕಾರ ಕಳೆದ ವರ್ಷದಂತೆ ಮತ್ತೊಂದು ಆರ್ಥಿಕ ಪ್ಯಾಕೇಜ್ ಘೋಷಿಸಲ್ಲ ಎಂದು ಹಲವರು ಅಭಿಪ್ರಾಯಪಟ್ಟಿದ್ದರು.
ಕೇಂದ್ರ ಸರ್ಕಾರ ಈ ಬಾರಿಯೂ ಆರ್ಥಿಕ ಪುನಶ್ಚೇತನ ಪ್ಯಾಕೇಜ್ ಘೋಷಿಸಲು ಸಿದ್ಧತೆ ನಡೆಸುತ್ತಿದೆ ಎಂಬ ಸುದ್ದಿ ಹೊರಬಿದ್ದಿದೆ. ಆರ್ಥಿಕ ಪ್ಯಾಕೇಜ್ ಘೋಷಿಸಲು ಕೇಂದ್ರ ಹಣಕಾಸು ಇಲಾಖೆಯು ಈಗಾಗಲೇ ಚರ್ಚೆ ಆರಂಭಿಸಿದೆ. ಈ ಸಂಬಂಧ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸದ್ಯದಲ್ಲೇ ಹಣಕಾಸು ತಜ್ಞರೊಂದಿಗೆ ಚರ್ಚೆ ನಡೆಸಲಿದ್ದಾರೆ. ಮುಖ್ಯವಾಗಿ ಪ್ರವಾಸೋದ್ಯಮ, ಟ್ರಾವೆಲ್ಸ್ ಮತ್ತು ವಿಮಾನಯಾನ ಕ್ಷೇತ್ರಗಳಿಗೆ ಆರ್ಥಿಕ ಪ್ಯಾಕೇಜ್ ಘೋಷಿಸುವ ಸಾಧ್ಯತೆ ಇದೆ. ಜೊತೆಗೆ ಲಾಕ್ಡೌನ್ನಿಂದ ಬಾಗಿಲು ಮುಚ್ಚಿರುವ ಸಣ್ಣ ಮತ್ತು ಅತಿಸಣ್ಣ ಉದ್ಯಮಗಳ ಕ್ಷೇತ್ರಕ್ಕೂ ಹಣಕಾಸಿನ ನೆರವು ಸಿಗುವ ಸಾಧ್ಯತೆ ಇದೆ. ಲಾಕ್ಡೌನ್ನಿಂದ ತೀವ್ರ ಸಂಕಷ್ಟಕ್ಕೀಡಾಗಿರುವ ಇತರ ಕ್ಷೇತ್ರಗಳು ಮತ್ತು ವಲಯಗಳಿಗೂ ನೆರವಿನ ಪ್ಯಾಕೇಜ್ ಸಿಗುವ ಸಾಧ್ಯತೆ ಇದೆ. ಕೇಂದ್ರದ ಹಣಕಾಸು ಇಲಾಖೆಯಲ್ಲಿ ಪ್ಯಾಕೇಜ್ ಘೋಷಣೆ ಬಗ್ಗೆ ಪ್ರಾಥಮಿಕ ಹಂತದ ಚರ್ಚೆಗಳು ನಡೆಯುತ್ತಿವೆ. ಹೀಗಾಗಿ ಯಾವಾಗ ಪ್ಯಾಕೇಜ್ ಘೋಷಿಸಲಾಗುತ್ತೆ ಎಂದು ನಿಖರವಾಗಿ ಹೇಳಲು ಆಗುವುದಿಲ್ಲ. ಈ ಬಾರಿಯ ಪ್ಯಾಕೇಜ್ ಗಾತ್ರ ಎಷ್ಟು ಎಂಬುದನ್ನು ಇನ್ನೂ ಕೇಂದ್ರ ಹಣಕಾಸು ಇಲಾಖೆ ಅಂತಿಮಗೊಳಿಸಿಲ್ಲ.
ನೆರವಿಗೆ ಕೈಗಾರಿಕಾ ವಲಯ ಆಗ್ರಹ ಈ ವರ್ಷವೂ ಆರ್ಥಿಕ ನೆರವಿನ ಪ್ಯಾಕೇಜ್ ಘೋಷಿಸಬೇಕೆಂದು ಕೈಗಾರಿಕಾ ವಲಯ ಆಗ್ರಹಿಸಿದೆ. ಎಂಎಸ್‌ಎಂಇಗಳಿಗೆ ಸಾಲದ ಮೊರಟೋರಿಯಂ (ಸಾಲ ಪಾವತಿ ಅವಧಿ ವಿಸ್ತರಣೆ) ನೀಡಿಕೆ, ಸಾಲದ ಬಡ್ಡಿ ಕಡಿತ ಸೇರಿದಂತೆ 17 ಶಿಫಾರಸ್ಸುಗಳನ್ನು ಪಿಎಚ್‌ಡಿ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ಸರ್ಕಾರಕ್ಕೆ ಮಾಡಿದೆ. ಕೊರೊನಾದ ಎರಡನೇ ಅಲೆಯು ಮೊದಲ ಅಲೆಗಿಂತ ವೇಗವಾಗಿ ಹರಡುತ್ತಿದೆ. ಭಾರತದ ಎಲ್ಲ ಮನೆಗಳಲ್ಲೂ ತೊಂದರೆಯನ್ನು ಉಂಟು ಮಾಡುತ್ತಿದೆ. ಇಂಥ ಸಂಕಷ್ಟ ಸಮಯದಲ್ಲಿ ಆರ್ಥಿಕತೆ, ವ್ಯಾಪಾರ, ಕೈಗಾರಿಕೆಯನ್ನು ಬೆಂಬಲಿಸಲು ಆರ್ಥಿಕ ನೆರವಿನ ಪ್ಯಾಕೇಜ್ ಘೋಷಣೆಗೆ ಶಿಫಾರಸ್ಸು ಮಾಡಿದ್ದೇವೆ ಎಂದು ಪಿಎಚ್‌ಡಿ ಚೇಂಬರ್ ಆಫ್ ಕಾಮರ್ಸ್ ಹೇಳಿದೆ.
ಕೊರೊನಾದ ಎರಡನೇ ಅಲೆಯ ಲಾಕ್ಡೌನ್ನಿಂದ ದೇಶದ ಜಿಡಿಪಿಯು 2021-22ರಲ್ಲಿ ಶೇ 10.5ರ ದರದಲ್ಲಿ ಬೆಳವಣಿಗೆ ಆಗಬಹುದು ಎಂದು ರಿಸರ್ವ್ ಬ್ಯಾಂಕ್ ಅಂದಾಜಿಸಿದೆ. ಆರ್ಥಿಕ ಬೆಳವಣಿಗೆಗೆ ವೇಗ ನೀಡಲು ಈಗ ಸಂಕಷ್ಟಕ್ಕೆ ಸಿಲುಕಿರುವ ಕ್ಷೇತ್ರಗಳಿಗೆ ಆರ್ಥಿಕ ನೆರವಿನ ಪ್ಯಾಕೇಜ್ ಅಗತ್ಯ ಇದೆ ಎಂದು ಆರ್ಥಿಕ ತಜ್ಞರು ಕೂಡ ಹೇಳುತ್ತಿದ್ದಾರೆ.
(Indian government preparing economic stimulus package aid to tourism aviation msme expected)
ಇದನ್ನೂ ಓದಿ: ಪ್ಯಾಕೇಜ್ ಘೋಷಣೆ ಮಾಡದ ಸರ್ಕಾರ, ಕಣ್ಣೀರಿಡುತ್ತಿರೋ ಕುಶಲಕರ್ಮಿಗಳು