ನೌಕಾಪಡೆಗೆ ಶಕ್ತಿ ತುಂಬಲಿದೆ ಭಾರತದಲ್ಲೇ ನಿರ್ಮಿಸಿದ ಈ ಹೊಸ ಕ್ಷಿಪಣಿ: ಪರೀಕ್ಷೆ ಯಶಸ್ವಿ

ನೌಕಾಪಡೆಗೆ ಶಕ್ತಿ ತುಂಬಲಿದೆ ಭಾರತದಲ್ಲೇ ನಿರ್ಮಿಸಿದ ಈ ಹೊಸ ಕ್ಷಿಪಣಿ: ಪರೀಕ್ಷೆ ಯಶಸ್ವಿ
ಒಡಿಶಾದ ಬಾಲಸೋರ್​ನಿಂದ ಡಿಆರ್​ಡಿಒ ಪರೀಕ್ಷಾರ್ಥ ಉಡಾವಣೆ ಮಾಡಿದ ಕ್ಷಿಪಣಿ

ನೌಕಾಪಡೆಯ ಹಡಗುಗಳಲ್ಲಿ ಮುಂದಿನ ದಿನಗಳಲ್ಲಿ ಅಳವಡಿಸಲು ಉದ್ದೇಶಿಸಿರುವ ಶಸ್ತ್ರಾಸ್ತ್ರ ನಿಯಂತ್ರಣ ವ್ಯವಸ್ಥೆ ಮತ್ತು ಕ್ಷಿಪಣಿ ಉಡಾವಣಾ ವ್ಯವಸ್ಥೆಗಳನ್ನು ಗಮನದಲ್ಲಿರಿಸಿಕೊಂಡೇ ಈ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಲಾಗಿದೆ.

TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Dec 07, 2021 | 10:38 PM

ಬಾಲಸೋರ್: ಭಾರತವು ಮಂಗಳವಾರ ನಡೆಸಿದ ಸ್ವದೇಶದಲ್ಲಿ ನಿರ್ಮಿಸಿದ ನೆಲದಿಂದ ನಭಕ್ಕೆ ಚಿಮ್ಮುವ (Vertical Launch Short Range Surface-to-Air Missile – VLSRSAM) ಕ್ಷಿಪಣಿಯ ಪರೀಕ್ಷೆ ಯಶಸ್ವಿಯಾಗಿದೆ. ಬಾಲಸೋರ್​ನ ಸಮುದ್ರ ತೀರದಲ್ಲಿ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯು (Defence Research and Development Organisation – DRDO) ಚಾಂಡಿಪುರದಿಂದ ಮಧ್ಯಾಹ್ನ 3.08 ಗಂಟೆಗೆ ಆಗಸದಲ್ಲಿ ಹಾರಿಬಿಟ್ಟ ವಸ್ತುವೊಂದಕ್ಕೆ ಗುರಿಯಾಗಿಸಿ ಹಾರಿಬಿಡಲಾಯಿತು.

ಡಿಆರ್​ಡಿಒ ವಿಜ್ಞಾನಿಗಳ ಲೆಕ್ಕಾಚಾರದಂತೆಯೇ ಕ್ಷಿಪಣಿಯು ಉದ್ದೇಶಿತ ಮಾರ್ಗದಲ್ಲಿ ಕ್ರಮಿಸಿತು. ಹಲವು ಉಪಕರಣಗಳ ಮೂಲಕ ಕ್ಷಿಪಣಿಯ ಕಾರ್ಯನಿರ್ವಹಣೆಯನ್ನು ಪರಿಶೀಲಿಸಲಾಯಿತು. ನೌಕಾಪಡೆಯ ಅಧಿಕಾರಿಗಳು ಸಹ ಕ್ಷಿಪಣಿಯ ಕಾರ್ಯಕ್ಷಮತೆಯನ್ನು ದಾಖಲಿಸಿದರು. ಈ ಕ್ಷಿಪಣಿಯು 50ರಿಂದ 60 ಕಿಮೀ ಕಾರ್ಯಾಚರಣೆ ವ್ಯಾಪ್ತಿಯನ್ನು ಹೊಂದಿದೆ. ಒಮ್ಮೆ ಕ್ಷಿಪಣಿಯನ್ನು ಹಾರಿಬಿಟ್ಟ ನಂತರ ಅದರ ಮಾರ್ಗ ಬದಲಿಸಲೂ ಅವಕಾಶವಿದೆ. ಭಾರತೀಯ ನೌಕಾಪಡೆಯ ಹಡಗುಗಳಲ್ಲಿ ಮುಂದಿನ ದಿನಗಳಲ್ಲಿ ಅಳವಡಿಸಲು ಉದ್ದೇಶಿಸಿರುವ ಶಸ್ತ್ರಾಸ್ತ್ರ ನಿಯಂತ್ರಣ ವ್ಯವಸ್ಥೆ ಮತ್ತು ಕ್ಷಿಪಣಿ ಉಡಾವಣಾ ವ್ಯವಸ್ಥೆಗಳನ್ನು ಗಮನದಲ್ಲಿರಿಸಿಕೊಂಡೇ ಈ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಲಾಗಿದೆ.

ಈ ಕ್ಷಿಪಣಿಯನ್ನು ಮೊದಲ ಬಾರಿಗೆ ಫೆಬ್ರುವರಿ 22, 2021ರಂದು ಪರೀಕ್ಷಾರ್ಥ ಉಡಾವಣೆ ಮಾಡಲಾಗಿತ್ತು. ಕ್ಷಿಪಣಿಯ ಕಾರ್ಯಕ್ಷಮತೆ ಸರಿಯಿದೆ ಎಂದು ದೃಢೀಕರಿಸುವ ಉದ್ದೇಶದಿಂದ ಮಂಗಳವಾರ (ಡಿ.7) ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಲಾಯಿತು ಎಂದು ಪ್ರಕಟಣೆ ತಿಳಿಸಿದೆ. ಕ್ಷಿಪಣಿಯ ಪರೀಕ್ಷೆ ಯಶಸ್ವಿಯಾದ ಹಿನ್ನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಡಿಆರ್​ಡಿಒ, ಭಾರತೀಯ ನೌಕಾಪಡೆ ಮತ್ತು ಕ್ಷಿಪಣಿ ಅಭಿವೃದ್ಧಿಗಾಗಿ ಶ್ರಮಿಸಿದ್ದ ಕೈಗಾರಿಕೆಗಳು ಹಾಗೂ ತಂತ್ರಜ್ಞರನ್ನು ಅಭಿನಂದಿಸಿದ್ದಾರೆ. ವಾಯುದಾಳಿಗಳನ್ನು ಎದುರಿಸಲು ಭಾರತೀಯ ನೌಕಾಪಡೆಯ ಯುದ್ಧನೌಕೆಗಳಿಗೆ ಈ ಕ್ಷಿಪಣಿಗಳು ಮತ್ತಷ್ಟು ಬಲ ತುಂಬಲಿವೆ ಎಂದು ಅವರು ಹೇಳಿದ್ದಾರೆ.

ಕ್ಷಿಪಣಿಯನ್ನು ಯುದ್ಧನೌಕೆಗಳಿಗೆ ಅಳವಡಿಸುವ ಮಹತ್ವದ ಘಟ್ಟವನ್ನು ಇಂದಿನ ಪರೀಕ್ಷಾರ್ಥ ಉಡಾವಣೆಯಿಂದ ತಲುಪಲಾಗಿದೆ ಎಂದು ಡಿಆರ್​ಡಿಒ ಅಧ್ಯಕ್ಷ ಜಿ.ಸತೀಶ್ ರೆಡ್ಡಿ ಈ ಯೋಜನೆಯಲ್ಲಿ ಪಾಲ್ಗೊಂಡಿದ್ದವರನ್ನು ಅಭಿನಂದಿಸಿದ್ದಾರೆ. ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸಹ ತಂತ್ರಜ್ಞರ ಸಾಧನೆಗೆ ಮೆಚ್ಚುಗೆ ಸೂಚಿಸಿದ್ದಾರೆ. ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ನಿಗದಿಯಾಗಿದ್ದ ಹಿನ್ನೆಲೆಯಲ್ಲಿ ಬಾಲಸೋರ್ ಜಿಲ್ಲಾಡಳಿತವು ಮಂಗಳವಾರ 4500ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿತ್ತು. ಜನರನ್ನು ಸ್ಥಳಾಂತರಿಸಿದ ನಂತರವೇ ಡಮ್ಮಿ ಸ್ಫೋಟಕಗಳೊಂದಿಗೆ ಕ್ಷಿಪಣಿಯನ್ನು ಉಡಾವಣೆ ಮಾಡಲಾಯಿತು.

ಇದನ್ನೂ ಓದಿ: ಪೂರ್ವ ಲಡಾಖ್​ ಗಡಿ ಸಮೀಪ ಹೆದ್ದಾರಿ ನಿರ್ಮಾಣ ಮಾಡಿದ ಚೀನಾ; ಕ್ಷಿಪಣಿ, ರಾಕೆಟ್​ ರೆಜಿಮೆಂಟ್​ ನಿಯೋಜನೆ ಇದನ್ನೂ ಓದಿ: National Defence: ಕ್ಷಿಪಣಿ ನಿರೋಧಕ ವ್ಯವಸ್ಥೆ: ರಷ್ಯಾದ ಎಸ್-400 vs ಅಮೆರಿಕದ ಥಾಡ್- ಭಾರತಕ್ಕೆ ಯಾವುದು ಹಿತ?

Follow us on

Most Read Stories

Click on your DTH Provider to Add TV9 Kannada