ಗೋಲ್ಡ್ ETFನಲ್ಲಿ ಹೂಡಿಕೆ ತುಂಬ ಸರಳ.. ಸಾವರಿನ್​ ಗೋಲ್ಡ್ ಬಾಂಡ್​ ಖರೀದಿ ಲಾಭದಾಯಕ

ಸಾವರಿನ್​ ಗೋಲ್ಡ್ ಬಾಂಡ್ ಮತ್ತು ಇಟಿಎಫ್​ ಹೂಡಿಕೆಗೆ ಡಿಮ್ಯಾಟ್​ ಖಾತೆ​ ಕಡ್ಡಾಯ. ಡಿಮ್ಯಾಟ್ ಅಕೌಂಟ್​ ಎಂದರೆ, ಎಲೆಕ್ಟ್ರಾನಿಕ್​ ಫಾರ್ಮೇಟ್(ವಿದ್ಯುನ್ಮಾನ ಸ್ವರೂಪ) ​ನಲ್ಲಿರುವ ನಮ್ಮ ಷೇರು, ಮ್ಯುಚ್ಯೂವಲ್​ ಫಂಡ್​ಗಳು, ಗೋಲ್ಡ್ ETF ಮತ್ತು ಸಾವರಿನ್​ ಗೋಲ್ಡ್ ಬಾಂಡ್​ಗಳನ್ನು ಇಡುವ ಖಾತೆ. ಇವೆಲ್ಲವುಗಳನ್ನೂ ಸೆಕ್ಯೂರಿಟಿಗಳು, ಫೈನಾನ್ಸಿಯಲ್​ ಅಸೆಟ್ಸ್​ ಎಂದು ಕರೆಯಲಾಗುತ್ತವೆ.

ಗೋಲ್ಡ್ ETFನಲ್ಲಿ ಹೂಡಿಕೆ ತುಂಬ ಸರಳ.. ಸಾವರಿನ್​ ಗೋಲ್ಡ್ ಬಾಂಡ್​ ಖರೀದಿ ಲಾಭದಾಯಕ
ಪ್ರಾತಿನಿಧಿಕ ಚಿತ್ರ
Follow us
Lakshmi Hegde
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jan 19, 2021 | 9:28 PM

ಭೌತಿಕ ಚಿನ್ನ ಖರೀದಿಗಿಂತ ಈ ವಿದ್ಯುನ್ಮಾನ ರೂಪದ ಹೂಡಿಕೆಗಳು ಏಕೆ ಉತ್ತಮ ಎಂಬುದನ್ನು ಸರಳವಾಗಿ ವಿವರಿಸಿದ್ದಾರೆ ಇನ್​ಸ್ಪೈರ್ ಇಂಡಿಯಾ ಫೈನಾನ್ಸಿಯಲ್ ಸಲ್ಯೂಶನ್ಸ್​ ಪ್ರವೇಟ್ ಲಿಮಿಟೆಡ್​ನ ಸಂಸ್ಥಾಪಕ ಮತ್ತು ಸಿಇಒ ಶರಣ್​ ಸಿ.ಪಾಟೀಲ್​.

ಚಿನ್ನದ ಬಗ್ಗೆ ಬರೀ ಒಲವಷ್ಟೇ ಬೆಳೆಸಿಕೊಂಡರೆ ಸಾಲದು. ಖರೀದಿಗೂ ಮೊದಲು ತುಸು ಯೋಚಿಸಬೇಕು. ನೀವು ನಿಮ್ಮ ಬಳಕೆಗಾಗಿ, ಅಂದರೆ ಅಲಂಕಾರಕ್ಕಾಗಿ ಖರೀದಿಸುತ್ತಿದ್ದೀರೋ, ಹೂಡಿಕೆಗಾಗೋ ಎಂಬುದನ್ನು ಸ್ಪಷ್ಟಪಡಿಸಿಕೊಳ್ಳಿ. ಹೂಡಿಕೆಗೆಂದು ಬಂಗಾರ ಖರೀದಿ ಮಾಡಲು ನಿರ್ಧರಿಸಿದ್ದರೆ ಸ್ವಲ್ಪ ತಡೆಯಿರಿ. ಭೌತಿಕ ಅಂದ್ರೆ ಗಟ್ಟಿ ಚಿನ್ನ ಬೇಡ. ಅದರ ಬದಲು ಗೋಲ್ಡ್ ETF (Exchange Traded Fund) ಅಥವಾ ಸಾವರಿನ್​​ ಗೋಲ್ಡ್ ಬಾಂಡ್​ನಲ್ಲಿ ಹೂಡಿಕೆ ಮಾಡಿ.

ನಾವು ಭಾರತೀಯರು ಚಿನ್ನದಲ್ಲಿ ಹೂಡಿಕೆಗೆ ಆಸಕ್ತಿ ತೋರಿಸುತ್ತೇವೆ. ಆದರೆ ಇನ್​ವೆಸ್ಟ್​ಮೆಂಟ್​ ಎಂದ ತಕ್ಷಣ ಭೌತಿಕ ಚಿನ್ನದ ಖರೀದಿಗೇ ಮುಂದಾಗುತ್ತೇವೆ. ಆದರೆ ಅನವಶ್ಯಕ ಚಿನ್ನ ಖರೀದಿ ಮಾಡಬೇಡಿ. ಯಾಕೆಂದರೆ ನಮ್ಮ ದೇಶದಲ್ಲಿ ಅಗತ್ಯಕ್ಕೆ ತಕ್ಕಷ್ಟು ಚಿನ್ನ ಉತ್ಪಾದನೆ ಆಗುತ್ತಿಲ್ಲ. ನಮ್ಮ ದೇಶ ಈಗಾಗಲೇ ದೊಡ್ಡಮೌಲ್ಯದ ಚಿನ್ನವನ್ನು ಆಮದು ಮಾಡಿಕೊಳ್ಳುತ್ತಿದೆ. ಇದು ನಮ್ಮ ದೇಶದ ಆರ್ಥಿಕತೆಗೆ ಹೊರೆಯಾಗುವ ಮೂಲಕ, ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.

ಆದರೆ ಚಿನ್ನ ಖರೀದಿ ಮಾಡಬೇಡಿ ಎಂದು ಹೇಳಲು ಸಾಧ್ಯವೇ ಇಲ್ಲ. ನಮ್ಮ ದೇಶದ ಜನರಿಗೆ ಮೊದಲೇ ಬಂಗಾರವೆಂದರೆ ಬಲುಪ್ರೀತಿ, ಆಸೆ. ಯಾವತ್ತೋ ಒಂದು ದಿನ ಚಿನ್ನದ ಬೆಲೆ ಸಿಕ್ಕಾಪಟೆ ಏರಿಕೆಯಾಗಬಹುದು. ಆಗ ನಾವು ಖರೀದಿಸಿಟ್ಟ ಚಿನ್ನವನ್ನು ಮಾರಬಹುದು ಎಂದು ಬಲವಾಗಿ ನಂಬಿಕೆ ಇಡುತ್ತಾರೆ. ಇದೇ ಕಾರಣಕ್ಕೆ ಚಿನ್ನದ ಬೆಲೆ ಏರಿದೆಯೋ, ಇಳಿದಿದೆಯೋ ನೋಡುವುದಿಲ್ಲ. ಒಂದಷ್ಟು ಕೊಂಡು ಕೂಡಿಟ್ಟುಬಿಡೋಣ ಎಂದು ಯೋಚಿಸುತ್ತಾರೆ. ಅದರಲ್ಲೂ ಅನೇಕರು ಬೆಲೆ ಏರಿಕೆಯಾದಾಗಲೇ ಚಿನ್ನ ಕೊಳ್ಳಲು ಮುಗಿಬೀಳುತ್ತಾರೆ. ನಾಳೆಯಿಂದ ಚಿನ್ನ ಸಿಗುವುದೇ ಇಲ್ಲವೇನೋ ಅನ್ನುವಷ್ಟರ ಮಟ್ಟಿಗೆ ಅವಸರ ಮಾಡುತ್ತಾರೆ ಅವರ ದೃಷ್ಟಿಯಲ್ಲಿ ಅದೇ ಹೂಡಿಕೆಯೂ ಆಗಿರುತ್ತದೆ.

ಆದರೆ ವಾಸ್ತವ ಅದಲ್ಲ! ಇನ್ನು ಮುಂದೆ ಚಿನ್ನ ಖರೀದಿಸುತ್ತಿದ್ದೀರಿ ಎಂದಾದರೆ ಬೆಲೆ ಕಡಿಮೆಯಾದಾಗ ಕೊಳ್ಳಿ. ಮುಂದೊಮ್ಮೆ ಮಾರುಕಟ್ಟೆಯಲ್ಲಿ ಚಿನ್ನಕ್ಕೆ ಅತ್ಯುತ್ತಮ ಬೆಲೆ ಬಂದಾಗ ಅದನ್ನು ಮಾರಿ. ಇಲ್ಲ. ಹೂಡಿಕೆಗಾಗಿ ಖರೀದಿಸಿದ ಚಿನ್ನದೊಂದಿಗೆ ಭಾವನೆಗಳನ್ನು ಬೆಳೆಸಿಕೊಂಡು, ಆ ಭಾವನೆಗಳ ಕಾರಣಕ್ಕೆ ಅದನ್ನು ನಿಮ್ಮೊಡನೆ ಇಟ್ಟುಕೊಳ್ಳಬೇಡಿ. ಬಂಗಾರವನ್ನು ವ್ಯವಹಾರದ ದೃಷ್ಟಿಕೋನದಲ್ಲಿ ನೋಡಿ.

ಆದರೆ ಖಚಿತವಾಗಿ ಹೇಳಬೇಕು ಎಂದರೆ, ಹೂಡಿಕೆಗಾಗಿ ಭೌತಿಕ ಚಿನ್ನದ ಖರೀದಿ ಬೇಡ. ಅದರ ಬದಲು ಸಾವರಿನ್​ ಗೋಲ್ಡ್​ ಬಾಂಡ್​, ಗೋಲ್ಡ್ ETFಗಳಂಥ ಒಳ್ಳೆ ಯೋಜನೆಗಳು ಇವೆ. ಇಂಥ ಸರಳ ಫಂಡಿಂಗ್​ನತ್ತ ಗಮನ ಕೊಡಿ. ಅದರಲ್ಲೂ ಗೋಲ್ಡ್ ETF ಸಣ್ಣ ಹೂಡಿಕೆದಾರರಿಗೂ ಉತ್ತಮ ಮಾರ್ಗ.

ಏನಿದು ಗೋಲ್ಡ್ ETF? ಚಿನ್ನದ ETF (Exchange Traded Fund) ಹೂಡಿಕೆಗೆ ಅತ್ಯುತ್ತಮ ಮಾರ್ಗ. ಇಲ್ಲಿ ನಿಮ್ಮ ಇನ್​​ವೆಸ್ಟ್​ಮೆಂಟ್​ಗೆ ಆ ದಿನದ ಚಿನ್ನದ ಬೆಲೆಯೇ ಆಧಾರ. ಒಂದು ಇಟಿಎಫ್​ ಎಂದರೆ ಒಂದು ಸಾಮಾನ್ಯವಾಗಿ ಒಂದು ಗ್ರಾಮ್ ಚಿನ್ನ ಎಂದು ಅರ್ಥ. ಬಂಗಾರದ ಬೆಲೆ ಏರಿದಾಗ ನಿಮ್ಮ ಇಟಿಎಫ್​ ಮೌಲ್ಯವೂ ಏರುತ್ತದೆ. ಇಳಿಕೆಯಾದಾಗ ಇದರ ಬೆಲೆಯೂ ಇಳಿಯುತ್ತದೆ. ಇಲ್ಲಿ ನಿಮ್ಮ ಹೆಸರಿನಲ್ಲಿ ಚಿನ್ನ ಖರೀದಿಯಾಗಿರುತ್ತೆ, ಆದರೆ ಅದು ಡಿಮ್ಯಾಟ್ ಖಾತೆಗೆ ಜಮೆಯಾಗಿರುತ್ತದೆ.

ಚಿನ್ನದ ಅವತ್ತಿನ ಬೆಲೆಯನ್ನು ಆಧಾರವಾಗಿಟ್ಟುಕೊಂಡು ಯೂನಿಟ್​ ರೂಪದಲ್ಲಿ ಕೊಡುತ್ತಾರೆ. ಎಸ್​ಬಿಐ, ಯುಟಿಐ, ಐಸಿಐಸಿಐ, ಆಕ್ಸಿಸ್.. ಸೇರಿದಂತೆ ಹಲವು AMCಗಳು (Asset Management Company) ಗೋಲ್ಡ್​ ಇಟಿಎಫ್​ ಹೊರತಂದಿವೆ. ಒಂದು ಇಟಿಎಫ್​ ಅಂದರೆ ಒಂದು ಗ್ರಾಂ ಚಿನ್ನದ ದರಕ್ಕಿಂತ ಕಡಿಮೆ ಹಣವನ್ನು ಚಿನ್ನದ ಇಟಿಎಫ್​ನಲ್ಲಿ SIP (Systematic Investment Plan) ರೂಪದಲ್ಲಿ ಹೂಡಿಕೆ ಮಾಡಲು ಗೋಲ್ಡ್​ ಫಂಡ್​ಗಳು ಉತ್ತಮ ಆಯ್ಕೆಯಾಗುತ್ತವೆ. ಗೋಲ್ಡ್​ಫಂಡ್​ಗಳಲ್ಲಿ ಕನಿಷ್ಠ ₹ 500ರಿಂದಲೂ ಹೂಡಿಕೆ ಆರಂಭಿಸಬಹುದು. ಶುದ್ಧ ಭೌತಿಕ ಚಿನ್ನವನ್ನು ಇಷ್ಟು ಕಡಿಮೆ ಮೊತ್ತಕ್ಕೆ ಖರೀದಿಸಲು ಸಾಧ್ಯವೇ?

ಇಟಿಎಫ್​ಗಳು ಷೇರುಗಳಂತೆಯೇ ಷೇರುಪೇಟೆಯಲ್ಲಿ ವಹಿವಾಟಾಗುತ್ತವೆ.  ನಮಗೆ ಅಗತ್ಯ ಬಿದ್ದಾಗ ಮಾರಾಟ ಮಾಡಬಹುದು.  ಅಂದರೆ ಲಿಕ್ವಿಡಿಟಿಗೆ ಯಾವುದೇ ಸಮಸ್ಯೆ, ಲಾಕ್​ಇನ್ ಅವಧಿಯ ನಿಬಂಧನೆ ಇರುವುದಿಲ್ಲ. ಗೋಲ್ಡ್​ಫಂಡ್​ಗಳನ್ನು ಆರಂಭಿಸಿರುವ ಎಎಂಸಿಗಳು ಮರುಖರೀದಿಗೆ ಖಾತ್ರಿ ಕೊಡುತ್ತವೆ. ಇಟಿಎಫ್ ಗೋಲ್ಡ್​ಫಂಡ್​ ಖರೀದಿಯ ಮೂರು ವರ್ಷಗಳ ನಂತರ ಮಾರಾಟ ಮಾಡಿದರೆ, ತೆರಿಗೆ ಲೆಕ್ಕ ಹಾಕುವಾಗ ಹಣದುಬ್ಬರ ಪ್ರಮಾಣ ಕಳೆಯಲು ಅಂದರೆ ಇಂಡೆಕ್ಷನ್ ಬೆನಿಫಿಟ್​ ಪಡೆದುಕೊಳ್ಳಲು ಅವಕಾಶ ಸಿಗುತ್ತದೆ.

ಮಗಳ ಮದುವೆ ಬಂತೆಂದು ಒಮ್ಮೆಲೇ ಸಾಲ ಮಾಡಿ, ಇದ್ದ ಹಣವನ್ನೆಲ್ಲ ಖಾಲಿ ಮಾಡಿಕೊಂಡು ಚಿನ್ನ ಖರೀದಿ ಮಾಡುವ ಬದಲು, ಹೀಗೆ ಸಣ್ಣ ಪ್ರಮಾಣದಲ್ಲಿ ETF ಅಥವಾ ಗೋಲ್ಡ್​ಫಂಡ್​​ನಲ್ಲಿ ಹೂಡಿಕೆ ಮಾಡುತ್ತಾ ಹೋದರೆ ಹೊರೆಯಾಗುವುದಿಲ್ಲ. ಮದುವೆ ಹೊತ್ತಿಗೆ ನಿಮ್ಮ ETF ಮಾರಿ, ಬಂದ ಹಣದಲ್ಲಿ ಚಿನ್ನವನ್ನು ಕೊಳ್ಳಬಹುದು. ಇದು ಸದಾ ಕಾಲಕ್ಕೂ ಅಂದಿನ ಮಾರುಕಟ್ಟೆ ಮೌಲ್ಯವನ್ನೇ ಪ್ರತಿನಿಧಿಸುತ್ತದೆ.

ಗೋಲ್ಡ್ ಸಾವರಿನ್ ಬಾಂಡ್​ ಚಿನ್ನದ ಹೂಡಿಕೆಗೆ ಇನ್ನೊಂದು ಸರಳ ಮಾರ್ಗವೆಂದರೆ ಸಾವರಿನ್ ಗೋಲ್ಡ್ ಬಾಂಡ್. ಸರ್ಕಾರ ತನ್ನಲ್ಲಿರುವ ಮೀಸಲು ಚಿನ್ನವನ್ನು ಆಧಾರವಾಗಿರಿಸಿಕೊಂಡು ಸಾವರಿನ್​ ಗೋಲ್ಡ್ ಬಾಂಡ್​ ಆರಂಭಿಸಿತು. ಅದರ ಅನ್ವಯ ಪ್ರತಿ ತಿಂಗಳಿಗೊಮ್ಮೆಯೋ, ಎರಡು ತಿಂಗಳಿಗೆ ಒಂದು ಬಾರಿಯೋ ಬಾಂಡ್ ಖರೀದಿ ದಿನಾಂಕವನ್ನು ನಿಗದಿ ಮಾಡುತ್ತಾರೆ. ಇದು ಜನರಿಗೆ ಚಿನ್ನದಲ್ಲಿ ಹೂಡಿಕೆಗಾಗಿ ಕೊಡುತ್ತಿರುವ ಸದವಕಾಶ.

ಸಾವರಿನ್​ ಗೋಲ್ಡ್​ ಬಾಂಡ್​ ನಿಯಮದಂತೆ 5-8 ವರ್ಷಗಳವರೆಗೆ ಹೂಡಿಕೆ ಮಾಡಬಹುದು. ಇಲ್ಲಿ ಚಿನ್ನದ ಬೆಲೆ ಜತೆಗೆ ವಾರ್ಷಿಕ ಶೇ 2.5ರಷ್ಟು ಬಡ್ಡಿ ಕೊಡಲಾಗುತ್ತದೆ. 5 ವರ್ಷಗಳಾದ ಮೇಲೆ ಯಾವುದೇ ಹೊತ್ತಲ್ಲಿ ನೀವು ನಿಮ್ಮ ಹಣವನ್ನು ವಿತ್​ಡ್ರಾ ಮಾಡಬಹುದು. ಆದರೆ 8 ವರ್ಷಗಳಾದ ಮೇಲೆ ತೆಗೆದರೆ ಹಲವು ಅನುಕೂಲಗಳು ಇರುತ್ತವೆ. ನಿಮಗೆ ತೆರಿಗೆ​ ಅನ್ವಯ ಆಗುವುದಿಲ್ಲ. ಅದೇ ನೀವು ಭೌತಿಕ ಚಿನ್ನವನ್ನು ಖರೀದಿಸಿ, ಎಂಟು ವರ್ಷಗಳ ಬಳಿಕ ಮಾರಾಟ ಮಾಡಲು ಹೋದರೆ ಅದಕ್ಕೆ ಸಂಪತ್ತು ತೆರಿಗೆ​ ಬೀಳುತ್ತದೆ. ಹಾಗೇ, ನೀವು ಖರೀದಿಸಿದ ಬೆಲೆಗೇ ಮಾರಾಟವಾಗುತ್ತದೆ ಎಂಬ ಭರವಸೆಯೂ ಇರುವುದಿಲ್ಲ. ಆದರೆ ಗೋಲ್ಡ್ ಬಾಂಡ್ ಹೂಡಿಕೆಯಲ್ಲಿ ಚಿನ್ನದ ಬೆಲೆಗಿಂತಲೂ ಹೆಚ್ಚಿನ ಮೌಲ್ಯ ಖಾತ್ರಿಯಾಗಿ  ಸಿಗುತ್ತದೆ. ಇನ್ನು ಅವಧಿಗೆ ಮುನ್ನ ಹಣ ಬೇಕು ಎಂದರೆ ಬಾಂಡ್ ಮಾರಾಟ ಮಾಡಿಕೊಳ್ಳಬಹುದು. ಆದರೆ ಅವಧಿಗೂ ಮುನ್ನ ಮಾರಿದರೆ, ನಿಮಗೆ ಚಿನ್ನದ ಬೆಲೆಯಷ್ಟೇ ಸಿಗುತ್ತದೆ. ಎಂಟು ವರ್ಷಗಳ ನಂತರ ತೆಗೆದರೆ ಎಲ್ಲ ರೀತಿಯ ಲಾಭವನ್ನೂ ಪಡೆಯಬಹುದು. ಭೌತಿಕ ಚಿನ್ನ ಖರೀದಿ ಮಾಡಿದರೆ ಅದನ್ನಿಡಲು ಲಾಕರ್ ಬೇಕು. ಅಷ್ಟೇ ಅಲ್ಲ, ನೀವು ಖರೀದಿಸುವ ಚಿನ್ನದ ಶುದ್ಧತೆಯ ಬಗ್ಗೆಯೂ ಅನುಮಾನ ಇದ್ದೇ ಇರುತ್ತದೆ. ಹೇಳುತ್ತಾರೆ ಪ್ಯೂರ್ ಗೋಲ್ಡ್ ಅಂತ. ಆದರೆ ಅದನ್ನೆಲ್ಲ ಕಣ್ಣುಮುಚ್ಚಿ ನಂಬಲಾಗದು. ಇದು ಮಧ್ಯಮವರ್ಗದವರಿಗೂ ಕೈಗೆಟುಕುತ್ತದೆ.

ಡಿಮ್ಯಾಟ್​ ಖಾತೆ ಕಡ್ಡಾಯ ಸಾವರಿನ್​ ಗೋಲ್ಡ್ ಬಾಂಡ್ ಮತ್ತು ಇಟಿಎಫ್​ ಹೂಡಿಕೆಗೆ ಡಿಮ್ಯಾಟ್​ ಖಾತೆ​ ಕಡ್ಡಾಯ. ಹಿಂದೆಲ್ಲಾ ಷೇರುಪತ್ರಗಳು ಕಾಗದದಲ್ಲಿರುತ್ತಿದ್ದವು. ಆದರೆ ಈಗ ಆನ್​ಲೈನ್​ ವಹಿವಾಟು ಆರಂಭವಾಗಿ ಡಿಮ್ಯಾಟ್ ಆಗಿವೆ. ಎಲೆಕ್ಟ್ರಾನಿಕ್​  ಫಾರ್ಮೆಟ್​ (ವಿದ್ಯುನ್ಮಾನ ಸ್ವರೂಪ) ​ನಲ್ಲಿರುವ ನಮ್ಮ ಷೇರು, ಮ್ಯುಚ್ಯೂವಲ್​ ಫಂಡ್​ಗಳು, ಗೋಲ್ಡ್ ETF ಮತ್ತು ಸಾವರಿನ್​ ಗೋಲ್ಡ್ ಬಾಂಡ್​ಗಳನ್ನು ಇಡುವ ಖಾತೆ. ನಾವು ನಮ್ಮ ಹಣವನ್ನು ಹೇಗೆ ಬ್ಯಾಂಕ್​ ಖಾತೆಯಲ್ಲಿ ಇಡುತ್ತೇವೆಯೋ, ಹಾಗೇ ಎಲೆಕ್ಟ್ರಾನಿಕ್​ ಸ್ವರೂಪದಲ್ಲಿರುವ ಸೆಕ್ಯೂರಿಟಿಗಳನ್ನು ಇಡಲು ಡಿಮ್ಯಾಟ್​ ಅಕೌಂಟ್​ ಕಡ್ಡಾಯವಾಗಿರುತ್ತದೆ. ಗೋಲ್ಡ್​ ಇಟಿಎಫ್ ಖರೀದಿಗೆ ಡಿಮ್ಯಾಟ್ ಖಾತೆ ಕಡ್ಡಾಯ. ಆದರೆ ಗೋಲ್ಡ್​ಫಂಡ್​ನಲ್ಲಿ ಹೂಡಿಕೆಗೆ ಡಿಮ್ಯಾಟ್​ ಬೇಕಿಲ್ಲ. ಆಧಾರ್ ಮತ್ತು ಪಾನ್​ಕಾರ್ಡ್ ಸಂಖ್ಯೆ, ಇವೆರೆಡೂ​ ಲಿಂಕ್ ಆಗಿರುವ ಬ್ಯಾಂಕ್ ಖಾತೆ ಇದ್ದರೆ ಸಾಕು.

ಡಿಮ್ಯಾಟ್​ ಅಕೌಂಟ್ ಓಪನ್​ ಮಾಡಲು ವಿಳಾಸ ಪುರಾವೆ, ಪಾನ್​ ಕಾರ್ಡ್, ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಅಕೌಂಟ್​ ಬೇಕಾಗುತ್ತದೆ. ಷೇರು ಬ್ರೋಕರ್​ಗಳ ಮೂಲಕ ಅಥವಾ ನೇರವಾಗಿ ಎಎಂಸಿಗಳ ಮೂಲಕ ಡಿಮ್ಯಾಟ್​ ಖಾತೆ ತೆಗೆಯಬಹುದು.

ಶೇ.10ರಷ್ಟಾದರೂ ಹೂಡಿಕೆ ಮಾಡಿ ಪ್ರಪಂಚದಲ್ಲಿ ಚಿನ್ನದ ಗಣಿಗಳು ಬರಿದಾಗುತ್ತಿವೆ. ಮುಂದಿನ 20-25ವರ್ಷಗಳಿಗೆ ಆಗುವಷ್ಟು ಚಿತ್ರ ಮಾತ್ರವೇ ಗಣಿಗಳಲ್ಲಿ ಉಳಿದಿದೆ ಎಂದು ಹೇಳುತ್ತಿದ್ದಾರೆ. ಅದಾದ ಮೇಲೆ ವಿನಿಮಯ ಮಾಡಿಕೊಳ್ಳುವುದು ಅನಿವಾರ್ಯ. ಹಾಗಾಗಿ ಹೂಡಿಕೆಗಾಗಿ ಭೌತಿಕ ಚಿನ್ನ ಖರೀದಿ ಮಾಡುವುದನ್ನು ಕಡಿಮೆ ಮಾಡಬೇಕು. ಹಾಗಂತ ಹೂಡಿಕೆ ಮಾಡುವುದು ಬೇಡವೆಂದಲ್ಲ. ಸಾವರಿನ್​ ಗೋಲ್ಡ್ ಬಾಂಡ,. ಇಟಿಎಫ್​ನಂತಹ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು.

ನಾವು ಹೂಡಿಕೆ ಮಾಡಬೇಕು ಎಂದುಕೊಳ್ಳುವ ಒಟ್ಟು ಹಣದ ಮೊತ್ತದಲ್ಲಿ ಶೇ 10 ಚಿನ್ನದಲ್ಲಿರುವುದು ಕ್ಷೇಮ. ಅಂದರೆ ಒಬ್ಬರ ಹೂಡಿಕೆ ಪೋರ್ಟ್​ಫೋಲಿಯೊದ ಶೇ 10 ಚಿನ್ನದ ಮೇಲಿರಬೇಕು. ಉಳಿದದ್ದನ್ನು ಷೇರುಪೇಟೆ, ರಿಯಲ್​ ಎಸ್ಟೇಟ್​,ಮ್ಯೂಚ್ಯುವಲ್​ ಫಂಡ್​ಗಳಲ್ಲಿ ಹೂಡಿಕೆ ಮಾಡಬಹುದು. ಬ್ಯಾಂಕ್​ಗಳಲ್ಲೂ ಠೇವಣಿ ಇಡಬಹುದು.

ಕೆಲವರು ಹೂಡಿಕೆಯ ಶೇ 70ರಷ್ಟನ್ನು ಚಿನ್ನಕ್ಕೇ ಹಾಕುತ್ತಾರೆ. ಕೆಲವರು ಚಿನ್ನದಿಂದ ದೂರವೇ ಉಳಿಯುತ್ತಾರೆ. ಇವೆರೆಡೂ ಒಳ್ಳೆಯದಲ್ಲ.

ಶರಣ್​ ಸಿ ಪಾಟೀಲ್​

ಶರಣ್​ ಸಿ ಪಾಟೀಲ್ ಪರಿಚಯ ಶರಣ್​ ಪಾಟೀಲ್​ ಅವರು ಮಾರ್ಕೆಟಿಂಗ್​ ಮತ್ತು ಫೈನಾನ್ಸ್​ನಲ್ಲಿ MBA ಮಾಡಿದ್ದಾರೆ. ಏರ್​ಕ್ರಾಫ್ ಮೆಂಟೇನೆನ್ಸ್​ ಇಂಜಿನಿಯರ್​ ಆಗಿದ್ದರು. ಮೂಲತಃ ಕಲಬುರಗಿಯವರು. ಆರ್ಥಿಕ ಸಲಹೆಗಾರರಾಗಿರುವ ಇವರು Inspire India Financial Solutions Pvt Ltd ಸ್ಥಾಪನೆ ಮಾಡಿದ್ದಾರೆ. ಮಧ್ಯಮವರ್ಗದವರನ್ನೂ ಕೋಟ್ಯಧಿಪತಿಗಳನ್ನಾಗಿ ಮಾಡುವುದು ನಮ್ಮ ಉದ್ದೇಶ ಎನ್ನುತ್ತಾರೆ ಶರಣ್​ ಪಾಟೀಲ್​. ತಮ್ಮ ಗ್ರಾಹಕರಿಗೆ ತ್ವರಿತವಾಗಿ ಆರ್ಥಿಕ ಸಲಹೆ ನೀಡುವುದರ ಜತೆಗೆ, ಅವರಿಗೆ ಆರ್ಥಿಕ ಭದ್ರತೆಯ ಬಗ್ಗೆ ಸ್ಪಷ್ಟವಾಗಿ ಅರ್ಥ ಮಾಡಿಸುವ ಕಾರ್ಯವನ್ನು Inspire India Financial Solutions Pvt Ltd ಮಾಡುತ್ತಿದೆ. ಹೂಡಿಕೆ, ಹಣಕಾಸು ಯೋಜನೆ, ವಿಮೆ, ರಿಯಲ್​ ಎಸ್ಟೇಟ್​, ಮ್ಯೂಚ್ಯುವಲ್​ ಫಂಡ್, ಬಂಡವಾಳ ಮಾರುಕಟ್ಟೆಗಳು ಮತ್ತು ನಿರ್ವಹಣೆಯ ಬಗ್ಗೆಯೂ ಶರಣ್​ ಪಾಟೀಲ್ ಸಲಹೆ ನೀಡುತ್ತಾರೆ.

(ನಿರೂಪಣೆ: ಲಕ್ಷ್ಮೀ ಹೆಗಡೆ)

ಸಿ.ಎಸ್.ಸುಧೀರ್ ಬರಹ | ಹೂಡಿಕೆಗೆ ಚಿನ್ನ ಸರಿಯಾದ ಆಯ್ಕೆಯಲ್ಲ, ನೀವು ಬಂಗಾರ ಖರೀದಿಗೆ ಮುಂದಾದಷ್ಟೂ ದೇಶಕ್ಕೆ ಆರ್ಥಿಕ ಸಂಕಷ್ಟ ಹೆಚ್ಚು

ನೀವು ಈಗಷ್ಟೇ ಕೆಲಸಕ್ಕೆ ಸೇರಿ ಹಣ ಉಳಿಸುವ ಕುರಿತು ಯೋಚಿಸುತ್ತಿದ್ದರೆ ಈ ಲೇಖನ ಓದಿ ಬಿಡಿ..

ಕಾಸಿದ್ರೆ ಕೈಲಾಸ | 15 ಸಾವಿರ ಸಂಬಳದಲ್ಲಿ 12 ಸಾವಿರದ ಮೊಬೈಲ್ ಕೊಳ್ಳೋದು ಹೇಗೆ?

Published On - 9:09 pm, Tue, 19 January 21

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್