ತಿಹಾರ್ ಜೈಲು ಸಂಖ್ಯೆ 7ರಲ್ಲಿ ಯಾಸಿನ್ ಮಲಿಕ್; ಪಿ ಚಿದಂಬರಂ, ಡಿಕೆ ಶಿವಕುಮಾರ್ ಕೂಡಾ ಇದೇ ಜೈಲು ಸಂಖ್ಯೆ 7ರಲ್ಲಿ ಶಿಕ್ಷೆ ಅನುಭವಿಸಿದ್ದರು

| Updated By: ರಶ್ಮಿ ಕಲ್ಲಕಟ್ಟ

Updated on: May 26, 2022 | 1:54 PM

ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಮಲಿಕ್ ಈಗ ಜೈಲಿನಲ್ಲಿರುವ ಉಳಿದ 35,000ದಷ್ಟು ಕೈದಿಗಳಿಂದ ದೂರವಿರುವ  ತಿಹಾರ್ ಜೈಲಿನ ಜೈಲು ಸಂಖ್ಯೆ 7 ರಲ್ಲಿ ಜೀವಾವಧಿ ಶಿಕ್ಷೆ ಅನುಭವಿಸಲಿದ್ದಾನೆ.

ತಿಹಾರ್ ಜೈಲು ಸಂಖ್ಯೆ 7ರಲ್ಲಿ ಯಾಸಿನ್ ಮಲಿಕ್; ಪಿ ಚಿದಂಬರಂ, ಡಿಕೆ ಶಿವಕುಮಾರ್ ಕೂಡಾ ಇದೇ ಜೈಲು ಸಂಖ್ಯೆ 7ರಲ್ಲಿ ಶಿಕ್ಷೆ ಅನುಭವಿಸಿದ್ದರು
ಯಾಸಿನ್ ಮಲಿಕ್
Follow us on

ದೆಹಲಿ: 2016-17ರಲ್ಲಿ ಭಯೋತ್ಪಾದನೆ (terrorism)ಮತ್ತು ಪ್ರತ್ಯೇಕತಾವಾದಿ ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ (JKLF) ನಾಯಕ ಯಾಸಿನ್ ಮಲಿಕ್‌ಗೆ (Yasin Malik)ದೆಹಲಿ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದ ನಂತರ ಬುಧವಾರ ದೆಹಲಿಯ ತಿಹಾರ್ ಜೈಲಿನಲ್ಲಿ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ. ವಿಶೇಷ ನ್ಯಾಯಾಧೀಶ ಪ್ರವೀಣ್ ಸಿಂಗ್ ಬುಧವಾರ ಮಲಿಕ್‌ಗೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದ್ದರು. ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಮಲಿಕ್ ಈಗ ಜೈಲಿನಲ್ಲಿರುವ ಉಳಿದ 35,000ದಷ್ಟು ಕೈದಿಗಳಿಂದ ದೂರವಿರುವ  ತಿಹಾರ್ ಜೈಲಿನ ಜೈಲು ಸಂಖ್ಯೆ 7 ರಲ್ಲಿ ಜೀವಾವಧಿ ಶಿಕ್ಷೆ ಅನುಭವಿಸಲಿದ್ದಾನೆ. ಭದ್ರತಾ ಕಾರಣ ಗಳಿಂದ ಈವರೆಗೆ ಮಲಿಕ್‌ಗೆ ಜೈಲಿನಲ್ಲಿ ಯಾವುದೇ ಕೆಲಸಗಳನ್ನು ಕೊಟ್ಟಿಲ್ಲ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಸಾಮಾನ್ಯವಾಗಿ ಅಪರಾಧಿಗಳಿಗೆ ವಿವಿಧ ಕೆಲಸಗಳನ್ನು ನೀಡಲಾಗುತ್ತದೆ. ಜೈಲಿನಲ್ಲಿ ಬಡಗಿ ಕೆಲಸವೋ, ಬೇಕರಿ ಅಥವಾ ಲೈಬ್ರರಿ, ಅಡುಗೆ ಮನೆಯನ್ನು ನೋಡಿಕೊಳ್ಳುವ ಕೆಲಸಗಳನ್ನು ನೀಡಲಾಗುತ್ತದೆ. ಹೆಚ್ಚಿನ ಅಪರಾಧಿಗಳನ್ನು ಸಾಮಾನ್ಯವಾಗಿ ಜೈಲು ಸಂಖ್ಯೆ 2ರಲ್ಲಿ ಇರಿಸಲಾಗುತ್ತಿತ್ತು. ಕೌಶಲ್ಯಕ್ಕೆ ತಕ್ಕ ಕೆಲಸಗಳನ್ನು ಅವರಿಗೆ ನೀಡಲಾಗುತ್ತದೆ. ಆದರೆ ಭದ್ರತಾ ಕಾರಣಗಳಿಂದಾಗಿ ಜೈಲು ಸಂಖ್ಯೆ 7ರಲ್ಲಿ ಆತನೊಬ್ಬನನ್ನೇ ಇರಿಸಲಾಗುವುದು ಎಂದು ಜೈಲಧಿಕಾರಿ ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಭಯೋತ್ಪಾದನೆಗೆ ಆರ್ಥಿಕ ನೆರವು ನೀಡಿದ ಆರೋಪದಲ್ಲಿ ಅಪರಾಧಿ ಆಗಿರುವುದರಿಂದ ಆತನಿಗೆ ಪರೋಲ್ ಕೂಡಾ ಲಭಿಸುವುದಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ. ಅಂದಹಾಗೆ ತಿಹಾರ್ ಜೈಲು ಸಂಖ್ಯೆ 7ಕ್ಕೆ ಒಂದು ವಿಶೇಷತೆ ಇದೆ. ಅದೇನೆಂದರೆ 2019 ಸೆಪ್ಟೆಂಬರ್ ತಿಂಗಳಲ್ಲಿ ಕಾಂಗ್ರೆಸ್ ನಾಯಕರಾದ ಪಿ ಚಿದಂಬರಂ ಮತ್ತು ಡಿಕೆ ಶಿವಕುಮಾರ್ ಇದೇ ಜೈಲಿನಲ್ಲಿದ್ದರು. ಐಎನ್ಎಕ್ಸ್ ಮೀಡಿಯಾ ಹಣ ಅವ್ಯವಹಾರ ಪ್ರಕರಣದ ಆರೋಪದಲ್ಲಿ 76ರ ಹರೆಯದ ಚಿದಂಬರಂ 106 ದಿನಗಳ ಕಾಲ ಜೈಲು ಸಂಖ್ಯೆ 7ರಲ್ಲಿ ಇದ್ದರು.

2007ರಲ್ಲಿ ಪಿ.ಚಿದಂಬರಂ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್ (ಯುಪಿಎ) ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದಾಗ ಐಎನ್‌ಎಕ್ಸ್ ಮೀಡಿಯಾಗೆ 307 ಕೋಟಿ ರೂ.ಗಳ ಸಾಗರೋತ್ತರ ನಿಧಿಯನ್ನು ಸ್ವೀಕರಿಸಲು ಎಫ್‌ಐಪಿಬಿ ಅನುಮತಿ ನೀಡುವಲ್ಲಿ ಅಕ್ರಮ ಎಸಗಿದ್ದಾರೆ ಎಂಬ ಆರೋಪದ ಮೇಲೆ ರಾಜ್ಯಸಭಾ ಸದಸ್ಯನನ್ನು 21 ಆಗಸ್ಟ್ 2019 ರಂದು ಸಿಬಿಐ ಬಂಧಿಸಿತ್ತು. ತಿಹಾರ್ ಜೈಲಿನಲ್ಲಿದ್ದಾಗ ಚಿದಂಬರಂ ಅವರು ತಮ್ಮ ಜೈಲಿನಲ್ಲಿ ಕುರ್ಚಿ ಅಥವಾ ದಿಂಬು ಇಲ್ಲದ ಕಾರಣ ಬೆನ್ನು ನೋವು ಜಾಸ್ತಿ ಆಗಿದೆ ಎಂದು ದೂರಿದ್ದರು.

ಇದನ್ನೂ ಓದಿ
ಯಾಸಿನ್ ಮಲಿಕ್ ಪರವಾಗಿ ಟ್ವೀಟ್ ಮಾಡಿದ ಶಾಹಿದ್ ಅಫ್ರಿದಿಗೆ ತಕ್ಕ ಉತ್ತರ ನೀಡಿ ಬಾಯ್ಮುಚ್ಚಿಸಿದ ಅಮಿತ್ ಮಿಶ್ರಾ
Breaking Yasin Malik ಭಯೋತ್ಪಾದನೆಗೆ ನಿಧಿ ಪ್ರಕರಣ: ಕಾಶ್ಮೀರಿ ಪ್ರತ್ಯೇಕತಾವಾದಿ ಯಾಸಿನ್ ಮಲಿಕ್​​ಗೆ ಜೀವಾವಧಿ ಶಿಕ್ಷೆ
Yasin Malik: ಭಯೋತ್ಪಾದನೆಗೆ ಫಂಡಿಂಗ್ ಪ್ರಕರಣ; ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್ ಅಪರಾಧಿ ಎಂದು ಘೋಷಿಸಿದ ಕೋರ್ಟ್​
2017ರ ಭಯೋತ್ಪಾದನೆ ಪ್ರಕರಣ: ದೆಹಲಿ ನ್ಯಾಯಾಲಯದ ಮುಂದೆ ತಪ್ಪೊಪ್ಪಿಕೊಂಡ ಯಾಸಿನ್ ಮಲಿಕ್

ಕರ್ನಾಟಕ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಅವರ ಪ್ರಕರಣದಲ್ಲಿ ಜಾಮೀನು ಪಡೆಯುವ ಮೊದಲು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ 50 ದಿನಗಳ ಕಾಲ ಅವರು ಇದೇ ಜೈಲು ಸಂಖ್ಯೆ 7 ನಲ್ಲಿದ್ದರು. ಶಿವಕುಮಾರ್ ವಿರುದ್ಧ 2018 ರಲ್ಲಿ ಕೇಂದ್ರ ಸಂಸ್ಥೆ ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಿದೆ. ಬೆಂಗಳೂರಿನ ನ್ಯಾಯಾಲಯದಲ್ಲಿ ಶಿವಕುಮಾರ್ ಮತ್ತು ಇತರರ ವಿರುದ್ಧ ಆದಾಯ ತೆರಿಗೆ ಇಲಾಖೆ ಸಲ್ಲಿಸಿದ ಆರೋಪಪಟ್ಟಿ ಆಧಾರದ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ. ಶಿವಕುಮಾರ್ ಅವರು ‘ಹವಾಲಾ’ ಮಾರ್ಗಗಳ ಮೂಲಕ ಹೆಚ್ಚಿನ ಪ್ರಮಾಣದ ಲೆಕ್ಕಕ್ಕೆ ಸಿಗದ ತೆರಿಗೆಯನ್ನು ಸಾಗಿಸುತ್ತಿದ್ದಾರೆ ಎಂದು ಐಟಿ ಇಲಾಖೆ ಆರೋಪಿಸಿತ್ತು.

ಇದಕ್ಕೂ ಮೊದಲು ಮಾಜಿ ಕೇಂದ್ರ ಸಚಿವ ಎ ರಾಜಾ, ಸಹಾರಾ ಮುಖ್ಯಸ್ಥ ಸುಬ್ರತಾ ರಾಯ್ ಮತ್ತು ಆಗಸ್ಟಾವೆಸ್ಟ್‌ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಹಗರಣದ ಮಧ್ಯವರ್ತಿ ಕ್ರಿಶ್ಚಿಯನ್ ಮೈಕೆಲ್ ಕೂಡ ತಿಹಾರ್ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ್ದರು. ವರದಿಗಳ ಪ್ರಕಾರ ತಿಹಾರ್‌ನ ಜೈಲು ಸಂಖ್ಯೆ 7 ಆರ್ಥಿಕ ಅಪರಾಧಿಗಳಿಗೆ ಮೀಸಲಾಗಿದೆ. ಸೆರೆಮನೆಯ ಈ ಭಾಗವು ಚಿಕ್ಕದಾದ ವಾರ್ಡ್‌ಗಳನ್ನು ಮತ್ತು ಗಾತ್ರದಲ್ಲಿ ಚಿಕ್ಕದಾದ ಒಂದೆರಡು ಸೆಲ್ ಗಳನ್ನು ಹೊಂದಿದೆ. ಜೈಲಿನ ಕೈಪಿಡಿಯಂತೆ ಕೈದಿಗಳು ನೆಲದ ಮೇಲೆ ಮಲಗುತ್ತಾರೆ. ಆದರೆ ಹಿರಿಯ ನಾಗರಿಕರಿಗೆ ಹಾಸಿಗೆ ಮರದ ಮಂಚ ನೀಡಲಾಗಿದೆ. ಆರ್ಥಿಕ ಅಪರಾಧಿಗಳಲ್ಲದೆ, ದೌರ್ಜನ್ಯ ಪ್ರಕರಣಗಳು ಸೇರಿದಂತೆ ಮಹಿಳೆಯರ ಮೇಲಿನ ಅಪರಾಧಗಳಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಸಹ ಜೈಲು ಸಂಖ್ಯೆ 7 ರಲ್ಲಿ ಇರಿಸಲಾಗುತ್ತದೆ.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 1:51 pm, Thu, 26 May 22