ಕೊವಿಡ್ ಲಸಿಕೆ ಅಭಿಯಾನಕ್ಕೆ ಮುಂದಿನ ತಿಂಗಳೇ ಜಾನ್ಸನ್ ಅಂಡ್ ಜಾನ್ಸನ್ ಲಸಿಕೆಯೂ ಸೇರ್ಪಡೆಯಾಗುವ ಸಾಧ್ಯತೆ
ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯ ಸಿಂಗಲ್ ಡೋಸ್ ಲಸಿಕೆಯನ್ನು ಭಾರತದಲ್ಲಿ ಉತ್ಪಾದಿಸಲು ಹೈದರಾಬಾದ್‌ನ ಬಯೋಲಾಜಿಕಲ್ ಇ ಕಂಪನಿಯು ಒಪ್ಪಂದ ಮಾಡಿಕೊಂಡಿದೆ. ಈಗಾಗಲೇ ಬಯೋಲಾಜಿಕಲ್ ಇ ಕಂಪನಿಯು ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯ ಸಿಂಗಲ್ ಡೋಸ್ ಲಸಿಕೆಯನ್ನು ಉತ್ಪಾದಿಸಿದೆ.
ದೆಹಲಿ: ಭಾರತದಲ್ಲಿ ಈಗ ಕೊರೊನಾ ಲಸಿಕೆ ನೀಡಿಕೆ ಅಭಿಯಾನಕ್ಕೆ ವೇಗ ಸಿಕ್ಕಿದೆ. ಈಗ ನಿತ್ಯ 70 ಲಕ್ಷ ಡೋಸ್ ಸರಾಸರಿಯಲ್ಲಿ ಲಸಿಕೆ ನೀಡಲಾಗುತ್ತಿದೆ. ಮುಂದಿನ ತಿಂಗಳಿನಿಂದ ಲಸಿಕೆ ಅಭಿಯಾನಕ್ಕೆ ಮತ್ತಷ್ಟು ವೇಗ ಸಿಗಲಿದೆ. ಮುಂದಿನ ತಿಂಗಳು ಲಸಿಕಾ ಅಭಿಯಾನಕ್ಕೆ ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯ ಲಸಿಕೆಯು ಸೇರ್ಪಡೆಯಾಗುವ ನಿರೀಕ್ಷೆ ಇದೆ. ಈಗಾಗಲೇ ಜಾನ್ಸನ್ ಕಂಪನಿಯ ಕೊರೊನಾ ಲಸಿಕೆಗೆ ಡಿಸಿಜಿಐ ತುರ್ತು ಬಳಕೆಗೆ ಒಪ್ಪಿಗೆ ನೀಡಿದೆ. ಭಾರತದಲ್ಲಿ ಕೋವಾವ್ಯಾಕ್ಸ್ ಲಸಿಕೆ ನೀಡಿಕೆ ವಿಳಂಬವಾಗಲು ಕಾರಣವೇನು ಎನ್ನುವುದರ ವರದಿ ಇಲ್ಲಿದೆ.
ಮುಂದಿನ ತಿಂಗಳು ಜಾನ್ಸನ್ ಅಂಡ್ ಜಾನ್ಸನ್ ಲಸಿಕೆ ಲಭ್ಯ ಭಾರತದಲ್ಲಿ ಈಗಾಗಲೇ 71 ಕೋಟಿ ಡೋಸ್ ಲಸಿಕೆಗಿಂತ ಹೆಚ್ಚಿನ ಡೋಸ್ ಕೊರೊನಾ ಲಸಿಕೆಯನ್ನು ಜನರಿಗೆ ನೀಡಲಾಗಿದೆ. ಆದರೇ, ಎರಡು ಡೋಸ್ ಲಸಿಕೆ ಪಡೆದಿರುವವರ ಸಂಖ್ಯೆ ಶೇ.18ಕ್ಕಿಂತ ಕಡಿಮೆಯೇ ಇದೆ. ಕರ್ನಾಟಕದಲ್ಲಿ 18 ವರ್ಷ ಮೇಲ್ಪಟ್ಟವರ ಪೈಕಿ ಶೇ.25 ರಷ್ಟು ಮಂದಿ ಎರಡು ಡೋಸ್ ಲಸಿಕೆ ಪಡೆದಿದ್ದಾರೆ. ಉತ್ತರ ಪ್ರದೇಶ ರಾಜ್ಯದಲ್ಲಿ ಶೇ.9 ರಷ್ಟು ಜನರು ಮಾತ್ರ 2 ಡೋಸ್ ಲಸಿಕೆ ಪಡೆದಿದ್ದಾರೆ.
ಆಗಸ್ಟ್ ತಿಂಗಳಿನಿಂದ ಭಾರತದ ಕೊರೊನಾ ಲಸಿಕಾ ಅಭಿಯಾನಕ್ಕೆ ವೇಗ ಸಿಕ್ಕಿದೆ. ಆದರೇ, ಭಾರತ ಈಗಲೂ ಕೊವಿಶೀಲ್ಡ್ , ಕೊವ್ಯಾಕ್ಸಿನ್ ಲಸಿಕೆಗಳ ಮೇಲೆಯೇ ಹೆಚ್ಚು ಅವಲಂಬಿತವಾಗಿದೆ. ಭಾರತದಲ್ಲಿ ಈಗಾಗಲೇ ಡಿಸಿಜಿಐ ಆರು ಕಂಪನಿಗಳ ಲಸಿಕೆಯ ತುರ್ತು ಬಳಕೆಗೆ ಒಪ್ಪಿಗೆ ನೀಡಿದೆ. ಕೊವಿಶೀಲ್ಡ್ , ಕೊವ್ಯಾಕ್ಸಿನ್, ಸ್ಪುಟ್ನಿಕ್, ಮಾಡೆರ್ನಾ, ಜಾನ್ಸನ್ ಅಂಡ್ ಜಾನ್ಸನ್ ಹಾಗೂ ಜೈಡಸ್ ಕ್ಯಾಡಿಲಾ ಕಂಪನಿಯ ಲಸಿಕೆಯ ತುರ್ತು ಬಳಕೆಗೆ ಒಪ್ಪಿಗೆ ನೀಡಲಾಗಿದೆ.
ರಷ್ಯಾದ ಸ್ಪುಟ್ನಿಕ್ ಲಸಿಕೆಯಲ್ಲಿ ಎರಡನೇ ಡೋಸ್ ಲಸಿಕೆಯ ಉತ್ಪಾದನೆಯಲ್ಲಿ ಹೆಚ್ಚಿನ ಸವಾಲುಗಳಿವೆ. ಹೀಗಾಗಿ ಮೊದಲನೇ ಡೋಸ್ನಷ್ಟೇ ಪ್ರಮಾಣದ ಎರಡನೇ ಡೋಸ್ ಲಸಿಕೆಯೂ ಲಭ್ಯವಿಲ್ಲದೇ, ಸ್ಪುಟ್ನಿಕ್ ಲಸಿಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡಲು ಸಾಧ್ಯವಾಗಿಲ್ಲ. ಸೆಪ್ಟೆಂಬರ್ನಿಂದ ರಷ್ಯಾದ ಸ್ಪುಟ್ನಿಕ್ ಲಸಿಕೆಯ ಪೂರೈಕೆಯು ಹೆಚ್ಚಳವಾಗುತ್ತದೆ ಎಂದು ರಷ್ಯಾ ಕೂಡ ಹೇಳಿದೆ.
ಸ್ಪುಟ್ನಿಕ್ ಲಸಿಕೆಯಲ್ಲಿ ಮೊದಲ ಹಾಗೂ ಎರಡನೇ ಡೋಸ್ ಲಸಿಕೆಯನ್ನು ಎರಡೂ ಬೇರೆ ಬೇರೆ ವೆಕ್ಟರ್ಗಳನ್ನು ಬಳಸಿ ಉತ್ಪಾದಿಸಲಾಗುತ್ತೆ. ಸ್ಪುಟ್ನಿಕ್ ಲಸಿಕೆಯಲ್ಲಿ ಎರಡನೇ ಡೋಸ್ ಲಸಿಕೆಯ ಉತ್ಪಾದಿಸಲು ಹೆಚ್ಚಿನ ಸಮಯ ಬೇಕು. ಲಸಿಕೆಯ ಉತ್ಪಾದನೆ ಬಹಳ ಕಷ್ಟ. ಹೀಗಾಗಿ ಸ್ಪುಟ್ನಿಕ್ 2ನೇ ಡೋಸ್ ಲಸಿಕೆಯು ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಿಲ್ಲ.ಇನ್ನೂ ಆಮೆರಿಕಾದ ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯ ಕೊರೊನಾ ಲಸಿಕೆಯನ್ನು ಭಾರತದಲ್ಲಿ ತುರ್ತು ಬಳಕೆ ಮಾಡಲು ಡಿಸಿಜಿಐ ಆಗಸ್ಟ್ 7ರಂದೇ ಒಪ್ಪಿಗೆ ನೀಡಿದೆ.
ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯ ಸಿಂಗಲ್ ಡೋಸ್ ಲಸಿಕೆಯನ್ನು ಭಾರತದಲ್ಲಿ ಉತ್ಪಾದಿಸಲು ಹೈದರಾಬಾದ್‌ನ ಬಯೋಲಾಜಿಕಲ್ ಇ ಕಂಪನಿಯು ಒಪ್ಪಂದ ಮಾಡಿಕೊಂಡಿದೆ. ಈಗಾಗಲೇ ಬಯೋಲಾಜಿಕಲ್ ಇ ಕಂಪನಿಯು ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯ ಸಿಂಗಲ್ ಡೋಸ್ ಲಸಿಕೆಯನ್ನು ಉತ್ಪಾದಿಸಿದೆ. ಈ ಲಸಿಕೆಯ ಡೋಸ್ಗಳನ್ನು ಪರೀಕ್ಷೆಗಾಗಿ ಹಿಮಾಚಲ ಪ್ರದೇಶದ ಕಸೂಲಿ ಸೆಂಟ್ರಲ್ ಲ್ಯಾಬ್ ಮತ್ತು ಪುಣೆಯ ಲ್ಯಾಬ್ಗೆ ಕಳಿಸಲಾಗಿದೆ.
ಈ ಟೆಸ್ಟಿಂಗ್ ಮುಗಿದು ಮುಂದಿನ ತಿಂಗಳಿನಿಂದಲೇ ಭಾರತದಲ್ಲಿ ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯ ಸಿಂಗಲ್ ಡೋಸ್ ಲಸಿಕೆಯು ಜನರ ಬಳಕೆಗೆ ಲಭ್ಯವಾಗುವ ನಿರೀಕ್ಷೆ ಇದೆ ಎಂದು ಕೇಂದ್ರದ ಆರೋಗ್ಯ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ. ಈಗ ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯ ಲಸಿಕೆಯ ಸುರಕ್ಷತೆ, ಗುಣಮಟ್ಟದ ಪರೀಕ್ಷೆ ನಡೆಯಬೇಕಾಗಿದೆ. ಇದು ನಡೆದ ಬಳಿಕ ಜನರ ಬಳಕೆಗೆ ಲಸಿಕೆಯನ್ನು ರೀಲೀಸ್ ಮಾಡಲಾಗುತ್ತೆ.
ಈಗ ನಾವು ಡಿಸಿಜಿಐನಿಂದ ಕೆಲ ಒಪ್ಪಿಗೆಗಳನ್ನು ನಿರೀಕ್ಷಿಸುತ್ತಿದ್ದೇವೆ. ಡಿಸಿಜಿಐನಿಂದ ಒಪ್ಪಿಗೆ ಸಿಕ್ಕ ಬಳಿಕ ಒಂದು ತಿಂಗಳೊಳಗಾಗಿ ಜಾನ್ಸನ್ ಅಂಡ್ ಜಾನ್ಸನ್ ಲಸಿಕೆಯು ಮಾರುಕಟ್ಟೆಗೆ ಬರಲಿದೆ ಎಂದು ಕೇಂದ್ರದ ಆರೋಗ್ಯ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.
ನಾವು ಬಯೋಲಾಜಿಕಲ್ ಇ ಕಂಪನಿಯೊಂದಿಗೆ ಲಸಿಕೆಯ ಉತ್ಪಾದನೆಗೆ ಒಪ್ಪಂದ ಮಾಡಿಕೊಂಡಿದ್ದೇವೆ. ನಾವು ಲಸಿಕೆಯನ್ನು ಅಭಿವೃದ್ದಿಪಡಿಸಿ, ಬಿಡುಗಡೆ ಮಾಡಲು ಹಗಲು-ರಾತ್ರಿ ದುಡಿಯುತ್ತಿದ್ದೇವೆ. ಬಯೋಲಾಜಿಕಲ್ ಇ ಕಂಪನಿಯೊಂದಿಗಿನ ಉತ್ಪಾದನಾ ಒಪ್ಪಂದ ಮುಖ್ಯವಾದುದ್ದು. ಲಸಿಕೆಯ ನೀಡುವ ಬದ್ಧತೆಯನ್ನು ಈಡೇರಿಸುವುದನ್ನು ಎದುರು ನೋಡುತ್ತಿದ್ದೇವೆ. ಆದರೆ, ಜಾನ್ಸನ್ ಕಂಪನಿಯ ಲಸಿಕೆ ಯಾವಾಗ ಮಾರುಕಟ್ಟೆಗೆ ಬರುತ್ತೆ ಎಂದು ಈಗಲೇ ಹೇಳುವುದು ಸಾಧ್ಯವಾಗಲ್ಲ ಎಂದು ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯ ವಕ್ತಾರರು ಹೇಳಿದ್ದಾರೆ.
ಆದರೆ, ಮೊದಲ ಬ್ಯಾಚ್ನಲ್ಲಿ ಎಷ್ಟು ಪ್ರಮಾಣದ ಡೋಸ್ ಲಸಿಕೆಯನ್ನು ನೀಡಲಾಗುತ್ತದೆ ಎಂದು ಹೇಳಲು ಕೇಂದ್ರದ ಆರೋಗ್ಯ ಇಲಾಖೆಯ ಅಧಿಕಾರಿಗಳು ಸಿದ್ದರಿಲ್ಲ. ಜೊತೆಗೆ ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯು ಸಿದ್ದರಿಲ್ಲ. ಆದರೇ, ಮೊದಲ ಬ್ಯಾಚ್ನಲ್ಲಿ ಹೆಚ್ಚಿನ ಪ್ರಮಾಣದ ಲಸಿಕೆ ನೀಡಿಕೆ ಸಾಧ್ಯವಿಲ್ಲ. ಲಸಿಕೆಯ ಉತ್ಪಾದನೆಯು ಕಚ್ಚಾ ವಸ್ತುಗಳ ಲಭ್ಯತೆಯನ್ನು ಅವಲಂಬಿಸಿದೆ. ಆದರೆ, ಇದು ಸಿಂಗಲ್ ಡೋಸ್ ಲಸಿಕೆ ಎನ್ನುವುದನ್ನು ನಾವು ಮರೆಯಬಾರದು. ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯ ಸಿಂಗಲ್ ಡೋಸ್ ಲಸಿಕೆಯು ಕೊರೊನಾ ವೈರಸ್ ವಿರುದ್ಧ ಶೇ.85 ರಷ್ಟು ಪರಿಣಾಮಕಾರಿಯಾಗಿದೆ. ಲಸಿಕೆಯನ್ನು ಪಡೆದ 28 ದಿನದ ಬಳಿಕ ಕೊರೊನಾದಿಂದ ಆಸ್ಪತ್ರೆಗೆ ದಾಖಲಾಗುವುದನ್ನು ಹಾಗೂ ಸಾವನ್ನು ಲಸಿಕೆಯು ತಡೆದು ರಕ್ಷಣೆ ನೀಡುತ್ತದೆ ಎಂದು ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯು ಹೇಳಿದೆ.
ನವಂಬರ್ ವರೆಗೂ ಕೊವಾವ್ಯಾಕ್ಸ್ ಲಸಿಕೆ ಸಿಗಲ್ಲ ಇನ್ನೂ ಆಮೆರಿಕಾದ ನೋವಾವ್ಯಾಕ್ಸ್ ಲಸಿಕೆಯನ್ನು ಭಾರತದಲ್ಲಿ ಸೆರಮ್ ಇನ್ಸ್ಟ್ಯೂಟ್ ಆಫ್ ಇಂಡಿಯಾ ಕಂಪನಿಯು ಕೊವಾವ್ಯಾಕ್ಸ್ ಹೆಸರಿನಲ್ಲಿ ಉತ್ಪಾದಿಸಲು ವೈದ್ಯಕೀಯ ಪ್ರಯೋಗ ನಡೆಸುತ್ತಿದೆ. ಆಮೆರಿಕಾದಲ್ಲಿ ನೋವಾವ್ಯಾಕ್ಸ್ ಲಸಿಕೆಯ ಮೂರನೇ ಹಂತದ ಪ್ರಯೋಗ ಮುಕ್ತಾಯವಾಗಿದೆ. ನೋವಾವ್ಯಾಕ್ಸ್ ಲಸಿಕೆಯು ಶೇ.90 ಕ್ಕಿಂತ ಹೆಚ್ಚಿನ ಪರಿಣಾಮಕಾರಿ ಎಂದು ಕಂಪನಿಯು ಹೇಳಿದೆ.
ಭಾರತದಲ್ಲಿ ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಕಂಪನಿಯು ಇದರ ವೈದ್ಯಕೀಯ ಪ್ರಯೋಗ ನಡೆಸುತ್ತಿದ್ದು, ಸದ್ಯಕ್ಕೆ ತುರ್ತು ಬಳಕೆಗೆ ಅನುಮತಿ ಸಿಗಲ್ಲ. ಏಕೆಂದರೇ, ನೋವಾವ್ಯಾಕ್ಸ್ ಲಸಿಕೆಗೆ ಆಮೆರಿಕಾದ ಎಫ್ಡಿಐ ತುರ್ತು ಬಳಕೆಗೆ ಒಪ್ಪಿಗೆ ನೀಡಿಲ್ಲ. ಎಫ್ಡಿಐ ತುರ್ತು ಬಳಕೆಗೆ ಒಪ್ಪಿಗೆ ನೀಡದೇ ಇದ್ದರೇ, ಅಂಥ ಲಸಿಕೆಗಳು ಭಾರತದಲ್ಲಿ ಮೂರನೇ ಹಂತದ ವೈದ್ಯಕೀಯ ಪ್ರಯೋಗವನ್ನು ಪೂರೈಸಲೇಬೇಕು. ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಕಂಪನಿಯು ಆಗಸ್ಟ್ ತಿಂಗಳಲ್ಲೇ ಕೊವಾವ್ಯಾಕ್ಸ್ ಲಸಿಕೆಯ ತುರ್ತು ಬಳಕೆಗೆ ಅನುಮತಿಯನ್ನು ಡಿಸಿಜಿಐನಿಂದ ಕೇಳಿತ್ತು. ಆದರೆ, ಡಿಸಿಜಿಐ ತುರ್ತು ಬಳಕೆಗೆ ಅನುಮತಿ ನೀಡಿಲ್ಲ.
ಈಗ ಸೆರಮ್ ಇನ್ಸ್ಟ್ಯೂಟ್ ಆಫ್ ಇಂಡಿಯಾ ಕಂಪನಿಯು 3ನೇ ಹಂತದ ಕೊವಾವ್ಯಾಕ್ಸ್ ಲಸಿಕೆಯ ಪ್ರಯೋಗವು ಮುಂದಿನ ತಿಂಗಳು ಮುಗಿಯಲಿದೆ. ಬಳಿಕ ಡಾಟಾವನ್ನು ಮುಂದಿನ ತಿಂಗಳು ಡಿಸಿಜಿಐಗೆ ಸಲ್ಲಿಸುವ ನಿರೀಕ್ಷೆ ಇದೆ. ಹೀಗಾಗಿ ನವೆಂಬರ್ ಅಥವಾ ಡಿಸೆಂಬರ್ ವೇಳೆಗೆ ಕೊವಾವ್ಯಾಕ್ಸ್ ಲಸಿಕೆಯು ಭಾರತದ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆ ಇದೆ. ಕೊವಾವ್ಯಾಕ್ಸ್ ಲಸಿಕೆಯನ್ನು 2022ರ ಮೊದಲ ತ್ರೈಮಾಸಿಕದಲ್ಲಿ ಮಕ್ಕಳಿಗೆ ನೀಡಲಾಗುತ್ತದೆ ಎಂದು ಆಧಾರ್ ಪೂನಾವಾಲಾ ಹೇಳಿದ್ದಾರೆ. ಕೊವಾವ್ಯಾಕ್ಸ್ ಲಸಿಕೆಯನ್ನು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೂ ನೀಡಬಹುದು. ಈಗಾಗಲೇ ಸೆರಮ್ ಇನ್ಸ್ಟ್ಯೂಟ್ ಆಫ್ ಇಂಡಿಯಾ ಕಂಪನಿಯು ಮೊದಲ ಬ್ಯಾಚ್‌ನ ಕೊವಾವ್ಯಾಕ್ಸ್ ಲಸಿಕೆಯನ್ನು ಉತ್ಪಾದಿಸಲಿದೆ.
ಭಾರತದಲ್ಲಿ 12-17 ವಯಸ್ಸಿನವರಿಗೆ ಕೊವಿಡ್ ಲಸಿಕೆ ಪ್ರಯೋಗದ ಅನುಮತಿ ಬಯಸಿದ ಜಾನ್ಸನ್ ಅಂಡ್ ಜಾನ್ಸನ್
Published On - 1:20 pm, Fri, 10 September 21