ವ್ಯಕ್ತಿ-ವ್ಯಕ್ತಿತ್ವ: ಕಡಿಮೆ ಮಾತು, ಖಚಿತ ನಿಲುವು- ಇದು ಸುಪ್ರೀಂಕೋರ್ಟ್​ ನಿಯೋಜಿತ ಮುಖ್ಯ ನ್ಯಾಯಮೂರ್ತಿ ಎನ್​.ವಿ.ರಮಣ ಅವರ ಕಾರ್ಯಶೈಲಿ

Justice N.V.Ramana: ಭಾರತದ ಇತಿಹಾಸದಲ್ಲಿ ಮೈಲಿಗಲ್ಲಾಗುವ ಹಲವು ಮಹತ್ವ ತೀರ್ಪುಗಳನ್ನು ಕೊಟ್ಟವರು ನ್ಯಾಯಮೂರ್ತಿ ಎನ್​.ವಿ.ರಮಣ. ಸುಪ್ರೀಂಕೋರ್ಟ್​ ನಿಯೋಜಿತ ಮುಖ್ಯನ್ಯಾಯಮೂರ್ತಿ ರಮಣ ಬಗ್ಗೆ ನೀವು ತಿಳಿದಿರಬೇಕಾದ ಮಾಹಿತಿ, ರಮಣ ಅವರ ಬಹುಮುಖಿ ವ್ಯಕ್ತಿತ್ವದ ಪರಿಚಯ ಇಲ್ಲಿದೆ.

ವ್ಯಕ್ತಿ-ವ್ಯಕ್ತಿತ್ವ: ಕಡಿಮೆ ಮಾತು, ಖಚಿತ ನಿಲುವು- ಇದು ಸುಪ್ರೀಂಕೋರ್ಟ್​ ನಿಯೋಜಿತ ಮುಖ್ಯ ನ್ಯಾಯಮೂರ್ತಿ ಎನ್​.ವಿ.ರಮಣ ಅವರ ಕಾರ್ಯಶೈಲಿ
ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ ಎನ್​.ವಿ.ರಮಣ
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on:Apr 23, 2021 | 7:25 PM

ನ್ಯಾಯಮೂರ್ತಿ ನೂತಲಪತಿ ವೆಂಕಟ ರಮಣ (ಎನ್.ವಿ. ರಮಣ) ಶನಿವಾರ (ಏಪ್ರಿಲ್ 24) ಭಾರತದ ಮುಖ್ಯನ್ಯಾಯಮೂರ್ತಿಯಾಗಿ (Chief Justice of India – CJI) ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಆಗಸ್ಟ್​ 26, 2022ರವರೆಗೆ ಅವರ ಅಧಿಕಾರ ಅವಧಿ ಇರಲಿದೆ. ನ್ಯಾಯಮೂರ್ತಿ ರಮಣ ಅವರ ಬಗ್ಗೆ ನೀವು ತಿಳಿಯಬೇಕಾದ ಮುಖ್ಯ ಮಾಹಿತಿ ಇಲ್ಲಿದೆ. ಭಾರತದ ಮುಖ್ಯನ್ಯಾಯಮೂರ್ತಿ ಸ್ಥಾನಕ್ಕೆ ಏರುತ್ತಿರುವ ಆಂಧ್ರ ಪ್ರದೇಶ ಹೈಕೋರ್ಟ್​ನಲ್ಲಿ ಕಾರ್ಯನಿರ್ವಹಿಸಿದ ಮೊದಲ ನ್ಯಾಯಾಧೀಶರು ರಮಣ.

ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆ ಪೊನ್ನವರಮ್ ಗ್ರಾಮದಲ್ಲಿ ಜನಿಸಿದ ರಮಣ ಅವರಿಗೆ ಈಗ 63ರ ಹರೆಯ. ದೇಶದ ಮೇಲೆ ತುರ್ತುಪರಿಸ್ಥಿತಿ ಹೇರಿದ್ದನ್ನು ವಿರೋಧಿಸಿ ನಡೆದ ಹೋರಾಟಗಳಲ್ಲಿ ರಮಣ ಸಕ್ರಿಯರಾಗಿ ಪಾಲ್ಗೊಂಡಿದ್ದರು. ಇದೇ ಕಾರಣಕ್ಕೆ ಅವರ ಒಂದು ವರ್ಷದ ಓದು ಹಿಂದಕ್ಕೆ ಬಿತ್ತು. ಆಂಧ್ರ ಪ್ರದೇಶದ ಕರಾವಳಿ ಮತ್ತು ರಾಯಲಸೀಮಾ ಪ್ರದೇಶಗಳ ಜನರಿಗೆ ಆಗುತ್ತಿದ್ದ ಅನ್ಯಾಯ ವಿರೋಧಿಸಿ 1970ರ ದಶಕದಲ್ಲಿ ಮುನ್ನೆಲೆಗೆ ಬಂದ ‘ಜೈ ಆಂಧ್ರ’ ಚಳವಳಿಯಲ್ಲಿಯೂ ರಮಣ ಭಾಗವಹಿಸಿದ್ದರು. ಇದೀಗ ಉಪರಾಷ್ಟ್ರಪತಿ ಆಗಿರುವ ಎಂ.ವೆಂಕಯ್ಯನಾಯ್ಡು ಸಹ ಈ ಹೋರಾಟದಲ್ಲಿ ಭಾಗಿಯಾಗಿದ್ದರು.

‘ಈನಾಡು’ ದಿನಪತ್ರಿಕೆಯ ವರದಿಗಾರರಾಗಿ 1979-1980ರ ಅವಧಿಯಲ್ಲಿ ರಮಣ ಕೆಲಸ ಮಾಡಿದ್ದರು. ರಾಜಕೀಯ ಮತ್ತು ನ್ಯಾಯಾಲಯಗಳಿಗೆ ಸಂಬಂಧಿಸಿದ ವರದಿಗಳನ್ನು ಬರೆಯುತ್ತಿದ್ದರು. 1983ರಲ್ಲಿ ವಕೀಲರಾಗಿ ನೋಂದಾಯಿಸಿಕೊಂಡರು. ಸಂವಿಧಾನ, ಅಪರಾಧ ಪ್ರಕರಣಗಳು, ಸೇವಾ ಕ್ಷೇತ್ರ (ಸರ್ವೀಸ್​ ಸೆಕ್ಟರ್) ಮತ್ತು ಅಂತರರಾಜ್ಯ ನದಿ ಕಾನೂನುಗಳ ಬಗ್ಗೆ ಆಂಧ್ರ ಪ್ರದೇಶ ಹೈಕೋರ್ಟ್​ನಲ್ಲಿ ಹಲವು ಪ್ರಕರಣಗಳನ್ನು ಮುನ್ನಡೆಸಿದ್ದರು. 2000ನೇ ಇಸವಿಯಲ್ಲಿ ರಮಣ ಅವರನ್ನು ಆಂಧ್ರ ಹೈಕೋರ್ಟ್​ನ ಕಾಯಂ ನ್ಯಾಯಾಧೀಶರಾಗಿ ನೇಮಿಸಲಾಯಿತು. 2013ರಲ್ಲಿ ದೆಹಲಿ ಹೈಕೋರ್ಟ್​ನ ಮುಖ್ಯ ನ್ಯಾಯಮೂರ್ತಿಯಾಗಿ ಬಡ್ತಿ ಸಿಕ್ಕಿತು. 2014ರಲ್ಲಿ ರಮಣ ಸುಪ್ರೀಂಕೋರ್ಟ್​ ನ್ಯಾಯಮೂರ್ತಿಯಾದರು.

ವೈ.ಎಸ್.ಜಗನ್​ ಮೋಹನ್ ರೆಡ್ಡಿ VS ರಮಣ ಸುಪ್ರೀಂಕೋರ್ಟ್​ ನ್ಯಾಯಮೂರ್ತಿ ರಮಣ ಅವರು ಆಂಧ್ರ ಪ್ರದೇಶ ಹೈಕೋರ್ಟ್​ನ ನ್ಯಾಯಾಧೀಶರ ಮೇಲೆ ಪ್ರಭಾವ ಬೀರಿ ತಮ್ಮ ಸರ್ಕಾರದ ನಿರ್ಧಾರಗಳಿಗೆ ಅಡ್ಡಿಯುಂಟು ಮಾಡುತ್ತಿದ್ದಾರೆ ಎಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈ.ಎಸ್.ಜಗನ್​ಮೋಹನ್ ರೆಡ್ಡಿ ಗಂಭೀರ ಆರೋಪ ಮಾಡಿದ್ದರು. ಅಂಧ್ರ ಪ್ರದೇಶದ ರಾಜಧಾನಿಯಾಗಿ ಅಮರಾವತಿ ನಗರವನ್ನು ಅಭಿವೃದ್ಧಿಪಡಿಸುವ ಚಂದ್ರಬಾಬು ನಾಯ್ಡು ಅವರ ನಿರ್ಧಾರದ ವಿರುದ್ಧ ವೈ.ಎಸ್.ಜಗನ್ ತನಿಖೆಗೆ ಆದೇಶಿಸಿದ್ದರು. ಆದರೆ ರಮಣ ಅವರ ಇಬ್ಬರು ಪುತ್ರಿಯರು ಈ ಯೋಜನೆಯ ಭಾಗವಾಗಿರುವುದರಿಂದ ತನಿಖೆಗೆ ರಮಣ ಅಡ್ಡಿಪಡಿಸುತ್ತಿದ್ದಾರೆ ಎಂದು ಜಗನ್ ದೂರಿದ್ದರು. ನ್ಯಾಯಮೂರ್ತಿ ರಮಣ ತಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾರೆ ಎಂದು ಅಕ್ಟೋಬರ್ 2020ರಲ್ಲಿ ಜಗನ್​ ಮೋಹನ್ ರೆಡ್ಡಿ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಎಸ್.ಎ.ಬೊಬ್ಡೆ ಅವರಿಗೆ ಪತ್ರ ಬರೆದಿದ್ದರು.

ಜಗನ್ ದೂರು ನೀಡಿದ ಒಂದು ತಿಂಗಳ ನಂತರ ಈ ಕುರಿತು ಅಫಿಡವಿಟ್ ಸಲ್ಲಿಸುವಂತೆ ಜಗನ್​ಗೆ ಮುಖ್ಯನ್ಯಾಯಮೂರ್ತಿ ಬೊಬ್ಡೆ ಸೂಚಿಸಿದ್ದರು. ಅದರಂತೆ ಜಗನ್ ಅಫಿಡವಿಟ್ ಸಲ್ಲಿಸಿದ ನಂತರ ಗೌಪ್ಯ ತನಿಖೆಗೆ ಆದೇಶಿಸಲಾಯಿತು. ಜಗನ್ ಆರೋಪವನ್ನು ಈ ತನಿಖೆ ಅಲ್ಲಗಳೆಯಿತು. ಮಾರ್ಚ್ 24ರಂದು ಸುಪ್ರೀಂಕೋರ್ಟ್​ ವೆಬ್​ಸೈಟ್​ ಒಂದು ಪುಟದ ಟಿಪ್ಪಣಿಯನ್ನು ಪ್ರಕಟಿಸಿ, ತನಿಖೆ ಪೂರ್ಣಗೊಂಡಿರುವುದನ್ನೂ ಹಾಗೂ ರಮಣ ದೋಷಮುಕ್ತರು ಎಂಬುದನ್ನು ಘೋಷಿಸಿತು. ಅದೇ ದಿನ ಬೊಬ್ಡೆ ತಮ್ಮ ಉತ್ತರಾಧಿಕಾರಿಯಾಗಿ ರಮಣ ಅವರನ್ನು ಘೋಷಿಸಿದರು. ತಮ್ಮ ಶಿಫಾರಸನ್ನು ಕೇಂದ್ರ ಕಾನೂನು ಸಚಿವಾಲಯಕ್ಕೆ ಕಳಿಸಿಕೊಟ್ಟರು.

ಇದನ್ನೂ ಓದಿ: ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿಯಾಗಿ ಎನ್​.ವಿ.ರಮಣ ನೇಮಕ; ಏಪ್ರಿಲ್​ 24ಕ್ಕೆ ಪ್ರಮಾಣವಚನ ಸ್ವೀಕಾರ

Justice-NV-Ramana

ನ್ಯಾಯಮೂರ್ತಿ ರಮಣ

ಖಚಿತ ನಿಲುವಿನ ತೀರ್ಪುಗಳಿಗೆ ಹೆಸರುವಾಸಿ ರಮಣ ಶಿಷ್ಟಾಚಾರವನ್ನು ಕಟ್ಟುನಿಟ್ಟಾಗಿ ಪಾಲಿಸುವ ನ್ಯಾಯಾಧೀಶರು. ಬಹಿರಂಗವಾಗಿ ಮಾತನಾಡಿದ್ದು ಬಹಳ ಕಡಿಮೆ. ಇವರು ನೀಡುವ ತೀರ್ಪುಗಳೂ ಅಷ್ಟೇ, ಆಲೋಚನೆಗಳನ್ನು ಖಚಿತವಾಗಿ ವ್ಯಕ್ತಪಡಿಸಿರುತ್ತಾರೆ. ನ್ಯಾಯಾಂಗದ ಶಿಸ್ತು ಮತ್ತು ಹಿಂದಿನ ತೀರ್ಪುಗಳ ಆಶಯಕ್ಕೆ ಅನುಗುಣವಾಗಿ ನಿರ್ದೇಶನಗಳನ್ನು ನೀಡುವುದು ರಮಣ ಅವರ ಶೈಲಿ. ದೇಶದ ಇತಿಹಾಸದಲ್ಲಿ ಮೈಲಿಗಲ್ಲಾಗುವ ಹಲವು ತೀರ್ಪುಗಳನ್ನು ರಮಣ ನೀಡಿದ್ದಾರೆ. ಸಂವಿಧಾನಾತ್ಮಕ ಹಕ್ಕುಗಳು, ಪ್ರಜಾಸತ್ತಾತ್ಮಕ ಮೌಲ್ಯಗಳು, ಉತ್ತರದಾಯಿತ್ವದ ವಿಚಾರದಲ್ಲಿ ರಮಣ ಅವರು ನೀಡಿರುವ ಹಲವು ತೀರ್ಪುಗಳು ದೇಶವನ್ನು ಬಹುಕಾಲ ಪ್ರಭಾವಿಸಲಿದೆ.

ಅನುರಾಧಾ ಭಾಸಿನ್ ಮತ್ತು ಫೌಂಡೇಷನ್ ಫಾರ್ ಮೀಡಿಯಾ ಪ್ರೊಫೆಷನಲ್ಸ್​ ನಡುವಣ ಪ್ರಕರಣದಲ್ಲಿ ತೀರ್ಪು ನೀಡಿದ್ದ ರಮಣ, ಇಂಟರ್ನೆಟ್​ ಸೌಲಭ್ಯವು ಮೂಲಭೂತ ಹಕ್ಕಿನ ವಿಸ್ತರಣೆ. ಜಮ್ಮು ಮತ್ತು ಕಾಶ್ಮೀರಕ್ಕೆ ಇದ್ದ ಅರೆ-ಸ್ವಾಯುತ್ತ ರಾಜ್ಯದ ಮಾನ್ಯತೆಯನ್ನು ಹಿಂಪಡೆದ ನಂತರ ಹಲವು ಬಾರಿ ಇಂಟರ್ನೆಟ್ ನಿರ್ಬಂಧಿಸಿದ್ದ ಸರ್ಕಾರದ ಕ್ರಮವನ್ನು ಅವರು ಒಪ್ಪಿರಲಿಲ್ಲ. ಕರ್ಫ್ಯೂ ವಿಧಿಸಲು ಕೆಲ ಮಾನದಂಡಗಳನ್ನೂ ರಮಣ ನಿಗದಿಪಡಿಸಿದರು. ಸಿಆರ್​ಪಿಸಿ 144ನೇ ಸೆಕ್ಷನ್ ಅನ್ವಯ ಹೇರುವ ನಿಷೇಧಾಜ್ಞೆಯ ಅನ್ವಯ ಐದಕ್ಕಿಂತ ಹೆಚ್ಚು ಜನರು ಒಂದು ಸ್ಥಳದಲ್ಲಿ ಸೇರುವಂತಿಲ್ಲ ಎಂಬ ನಿಯಮವಿದೆ. ಆದರೆ ಈ ನಿಯಮವನ್ನು ಬಳಸಿ ಜನರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು, ಅಭಿಪ್ರಾಯಗಳನ್ನು ಸರಿಯಾದ ಕ್ರಮದಲ್ಲಿ ವ್ಯಕ್ತಪಡಿಸುವುದನ್ನು ತಡೆಯುವುದು ತಪ್ಪು ಎಂದು ರಮಣ ವಿಶ್ಲೇಷಿಸಿದ್ದರು. ಸುಭಾಷ್ ಚಂದ್ರ ಅಗರ್​ವಾಲ್​ ಪ್ರಕರಣದ ವಿಚಾರಣೆ ನಡೆಸಿದ ಐವರು ಸದಸ್ಯರ ನ್ಯಾಯಪೀಠದಲ್ಲಿದ್ದ ರಮಣ, ಮಾಹಿತಿ ಹಕ್ಕು ಮತ್ತು ಖಾಸಗಿತನದ ಹಕ್ಕನ್ನು ತೂಕದಲ್ಲಿ ಪರಿಗಣಿಸಿದ್ದರು. ಸ್ವರಾಜ್ ಅಭಿಯಾನ್ Vs ಭಾರತ ಸರ್ಕಾರದ ಪ್ರಕರಣದಲ್ಲಿ ತೀರ್ಪು ನೀಡುವಾಗ, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಅನುಷ್ಠಾನದ ವೇಳೆ ಒಕ್ಕೂಟ ಪದ್ಧತಿಯಲ್ಲಿ ಸಹಕಾರದ ಮಹತ್ವವವನ್ನು ಒತ್ತಿಹೇಳಿದ್ದರು.

ಪಕ್ಷಾಂತರ ನಿಷೇಧ ಕಾಯ್ದೆಯ ವ್ಯಾಖ್ಯಾನ 2019ರಲ್ಲಿ ಕರ್ನಾಟಕ ವಿಧಾನಸಭೆಯ ಬೆಳವಣಿಗೆ ಬಗ್ಗೆ ತೀರ್ಪು ನೀಡಿದ್ದವರು ನ್ಯಾಯಮೂರ್ತಿ ರಮಣ. ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಂಡ ಶಾಸಕರು ಮತ್ತೆ ಚುನಾವಣೆಗೆ ಸ್ಪರ್ಧಿಸುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಸ್ಪೀಕರ್​ಗಳು ಪಕ್ಷಾತೀತರಾಗಿ ಕೆಲಸ ಮಾಡಬೇಕು ಎಂಬ ಆಶಯಕ್ಕೆ ಅನುಗುಣವಾಗಿ ನಡೆದುಕೊಳ್ಳುತ್ತಿಲ್ಲ. ಕುದುರೆ ವ್ಯಾಪಾರ ತಡೆಯುವುದು, ಪಕ್ಷಾಂತರಕ್ಕೆ ಪ್ರಲೋಭನೆ ಒಡ್ಡುವುದು ಮತ್ತು ನಿಷ್ಠೆ ಬದಲಿಸಲು ಒತ್ತಡ ಹೇರುವುದನ್ನು ತಡೆಯಲು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಆಕ್ಷೇಪಿಸಿದ್ದರು.

ಶಿವಸೇನೆ Vs ಭಾರತ ಸರ್ಕಾರದ ಪ್ರಕರಣದಲ್ಲಿಯೂ ರಮಣ ಇದೇ ನಿಲುವಿನೊಂದಿಗೆ ನಡೆದುಕೊಂಡಿದ್ದರು. ಮಹಾರಾಷ್ಟ್ರದಲ್ಲಿ ಕುದುರೆ ವ್ಯಾಪಾರ ತಡೆಯುವ ಉದ್ದೇಶದಿಂದ, 2019ರ ವಿಧಾನಸಭೆ ಚುನಾವಣೆಯ ನಂತರ ತಕ್ಷಣ ವಿಶ್ವಾಸಮತ ಯಾಚನೆ ನಡೆಯಬೇಕು ಎಂದು ಸೂಚಿಸಿದ್ದರು. ಶಾಸಕರು ಪಾಲ್ಗೊಂಡಿರುವ ಅಪರಾಧ ಪ್ರಕರಣಗಳಲ್ಲಿ ತನಿಖೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಮತ್ತೊಂದು ಪ್ರಕರಣದ ಬಗ್ಗೆ ತೀರ್ಪು ನೀಡುವಾಗ ರಮಣ ನಿರ್ದೇಶನ ನೀಡಿದ್ದರು.

ಇದನ್ನೂ ಓದಿ: ನ್ಯಾಯಮೂರ್ತಿ ರಮಣ ವಿರುದ್ಧ ಆಂಧ್ರ ಸಿಎಂ ಸುಪ್ರೀಂಕೋರ್ಟ್​ಗೆ ನೀಡಿದ್ದ ದೂರಿನ ಅರ್ಜಿ ವಜಾ; ಗೌಪ್ಯ ವಿಚಾರಣೆ ಬಹಿರಂಗ ಪಡಿಸಲು ಸಾಧ್ಯವಿಲ್ಲವೆಂದ ಪೀಠ

Justice-NV-Ramana

ನ್ಯಾಯಮೂರ್ತಿ ಎನ್​.ವಿ.ರಮಣ

ಗೃಹಿಣಿಯರಿಗೆ ಘನತೆಯ ಬದುಕು ವಿಮೆ ದಾವೆಗಳನ್ನು ಇತ್ಯರ್ಥಪಡಿಸುವಾಗ ಗೃಹಿಣಿಯರ ಆದಾಯ ಲೆಕ್ಕ ಹಾಕುವ ವಿಚಾರವಾಗಿ ರಮಣ ನೀಡಿದ್ದ ತೀರ್ಪು ಮಹತ್ವ ಪಡೆದುಕೊಂಡಿತ್ತು. ಸಾಮಾಜಿಕ ಸಮಾನತೆ ಮತ್ತು ಎಲ್ಲರಿಗೂ ಘನತೆಯಿಂದ ಜೀವಿಸುವ ಹಕ್ಕಿನ ಆಶಯಗಳನ್ನು ಈಡೇರಿಸುವಲ್ಲಿ ಈ ಕ್ರಮ ಮುಖ್ಯವಾದುದಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದರು. ಗಲ್ಲುಗಂಬ ಏರಬೇಕಿದ್ದ ಮಾನಸಿಕ ಅಸ್ವಸ್ಥನ ಬಗ್ಗೆ ನೀಡಿದ್ದ ತೀರ್ಪಿನಲ್ಲಿ ರಮಣ ‘ಘನತೆಯಿಂದ ಜೀವಿಸುವ ಹಕ್ಕು ನ್ಯಾಯಾಧೀಶರು ಬರೆಯುವ ಇಂಕ್​ನೊಂದಿಗೆ ಒಣಗಿಹೋಗುವುದಿಲ್ಲ. ಜೈಲಿನ ಗೋಡೆಗಳ ಒಳಗೂ, ಕೊನೆಯ ಉಸಿರು ಇರುವವರೆಗೂ ಮನುಷ್ಯರಿಗೆ ಘನತೆಯಿಂದ ಬದುಕುವ ಹಕ್ಕು ಇದೆ’ ಎಂದು ಬರೆದಿದ್ದರು. ಫ್ಲಾಟ್​ಗಳನ್ನು ಪಡೆಯಲು ಕಾದಿದ್ದ ಮನೆ ಖರೀದಿದಾರರ ಪರವಾಗಿ ರಮಣ ಒಂದು ತೀರ್ಪು ನೀಡಿದ್ದರು. 2018ರಲ್ಲಿ ಈ ಸಂಬಂಧ ನೀಡಿದ್ದ ತೀರ್ಪಿನಲ್ಲಿ, ‘ಕಟ್ಟಡಗಳನ್ನು ನಿರ್ಮಿಸುವವರು ಸರಿಯಾದ ಸಮಯಕ್ಕೆ ಮನೆಗಳನ್ನು ಖರೀದಿದಾರರಿಗೆ ಬಿಟ್ಟುಕೊಡಬೇಕು. ಒಪ್ಪಂದದಲ್ಲಿ ಇಂಥ ಷರತ್ತು ಇಲ್ಲದಿದ್ದರೂ ಕ್ಲುಪ್ತಕಾಲದಲ್ಲಿ ಖರೀದಿದಾರರಿಗೆ ಮನೆಗಳನ್ನು ನೀಡುವುದು ಬಿಲ್ಡರ್​ಗಳ ಜವಾಬ್ದಾರಿ’ ಎಂದು ಹೇಳಿದ್ದರು.

ರಮಣ ಮುಂದೆ ಹಲವು ಸವಾಲುಗಳು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ (National Legal Services Authority – NLSA) ಕಾರ್ಯಕಾರಿ ಅಧ್ಯಕ್ಷರಾಗಿರುವ ರಮಣ ಹಲವು ಬಾರಿ ತಮ್ಮ ಆದ್ಯತೆಗಳ ಬಗ್ಗೆ ಮಾತನಾಡಿದ್ದಾರೆ. ಬಡತನ ಮತ್ತು ನ್ಯಾಯದಾನ ವ್ಯವಸ್ಥೆಯ ಲಭ್ಯತೆಯ ಸಮಸ್ಯೆಗಳನ್ನು ಭಾರತ ಕಡಿಮೆ ಮಾಡಬೇಕಿದೆ. ಮೂಲಭೂತ ಹಕ್ಕುಗಳನ್ನು ಖಾತ್ರಿಪಡಿಸುವ ವಿಚಾರದಲ್ಲಿ ನ್ಯಾಯಾಂಗಕ್ಕೆ ಮಹತ್ವದ ಜವಾಬ್ದಾರಿಯಿದೆ. ಬಡವರಿಗೆ, ಮುಖ್ಯವಾಗಿ ಮಹಿಳೆಯರು ಮತ್ತು ಮಕ್ಕಳಿಗೆ ಕಾನೂನು ನೆರವು ಒದಗಿಸುವುದು ಆದ್ಯತೆಯ ವಿಚಾರ. ನ್ಯಾಯಾಲಯಗಳಲ್ಲಿ ಮೊಕದ್ದಮೆ ಮುನ್ನಡೆಸಲು ಸಾಧ್ಯವಾಗದ ಇಂಥವರಿಗೆ ನೆರವಾಗುವಂತೆ ವಕೀಲರಿಗೆ ಹಲವು ಬಾರಿ ಮನವಿ ಮಾಡಿದ್ದರು. ದೇಶದಲ್ಲಿ ಬಾಕಿ ಉಳಿದಿರುವ ಕೋಟ್ಯಂತರ ಪ್ರಕರಣಗಳ ವಿಲೇವಾರಿಗೆ ನ್ಯಾಯಾಲಯಗಳ ಮೂಲಸೌಕರ್ಯ ಸುಧಾರಿಸುವುದು ಅತ್ಯಗತ್ಯ ಎಂದು ರಮಣ ಹೇಳಿದ್ದರು.

ಜಡ್ಜ್​ಗಳ ನೇಮಕಾತಿ ಜವಾಬ್ದಾರಿ ಹೊತ್ತಿರುವ ಸುಪ್ರೀಂಕೋರ್ಟ್​​ನ ಕೊಲಿಜಿಯಂನಲ್ಲಿ ಕಳೆದ ಒಂದು ವರ್ಷದಿಂದ ಸದಸ್ಯರಾಗಿದ್ದರೂ ನ್ಯಾಯಾಧೀಶರ ನೇಮಕಾತಿ ಅಥವಾ ಇತರ ವಿಚಾರಗಳ ಬಗ್ಗೆ ರಮಣ ಎಂದಿಗೂ ಬಹಿರಂಗವಾಗಿ ಮಾತನಾಡಿದವರಲ್ಲ. ಬೊಬ್ಡೆ ಅವರು ಮುಖ್ಯ ನ್ಯಾಯಮೂರ್ತಿ ಆಗಿದ್ದ 14 ತಿಂಗಳಲ್ಲಿ ಒಬ್ಬರೇ ಒಬ್ಬರ ನ್ಯಾಯಮೂರ್ತಿಯ ನೇಮಕವೂ ನಡೆದಿಲ್ಲ. ರಮಣ ಅವರ ಅಧಿಕಾರದ ಅವಧಿಯಲ್ಲಿ ನ್ಯಾಯಮೂರ್ತಿಗಳ ನೇಮಕಾತಿಗೆ ಆದ್ಯತೆ ಸಿಗಬೇಕಿದೆ.

ನ್ಯಾಯಮೂರ್ತಿಗಳಾದ ರೋಹಿಂಟನ್ ಎಫ್.ನಾರಿಮನ್, ಅಶೋಕ್ ಭೂಷಣ್ ಮತ್ತು ನವೀನ್ ಸಿನ್ಹಾ ಇದೇ ವರ್ಷಾಂತ್ಯಕ್ಕೆ ನಿವೃತ್ತರಾಗಲಿದ್ದಾರೆ. ಇತರ ನಾಲ್ವರು ನ್ಯಾಯಮೂರ್ತಿಗಳು ರಮಣ ಅವರ ಅಧಿಕಾರಾವಧಿ ಮುಗಿಯುವ ಮೊದಲೇ ನಿವೃತ್ತರಾಗುತ್ತಾರೆ. ರಮಣ ಅಧಿಕಾರ ಅವಧಿಯಲ್ಲಿ ಸುಪ್ರೀಂಕೋರ್ಟ್​ನಲ್ಲಿ 13 ನ್ಯಾಯಮೂರ್ತಿಗಳ ಹುದ್ದೆ ಖಾಲಿ ಉಳಿಯಲಿದೆ. ವಿವಿಧ ರಾಜ್ಯಗಳ ಒಟ್ಟು 1080 ಹೈಕೋರ್ಟ್​ ನ್ಯಾಯಾಧೀಶರ ಹುದ್ದೆಗಳ ಪೈಕಿ 411 ಹುದ್ದೆಗಳು ಖಾಲಿಯಿವೆ. ಹೈಕೋರ್ಟ್​ಗಳಲ್ಲಿ ಬಾಕಿಯಿರುವ ಪ್ರಕರಣಗಳ ಸಂಖ್ಯೆ 50 ಲಕ್ಷ ದಾಟಿರುವ ಹಿನ್ನೆಲೆಯಲ್ಲಿ ಹೈಕೋರ್ಟ್​ ನ್ಯಾಯಾಧೀಶರ ನೇಮಕಾತಿ ಪ್ರಕ್ರಿಯೆಗೂ ರಮಣ ಆದ್ಯತೆ ನೀಡಬೇಕಿದೆ.

(Justice NV Ramana Profile Chief Justice of India Designate All you need know about less spoken judge who has given many milestone judgements)

ಇದನ್ನೂ ಓದಿ: ಸುಪ್ರೀಂಕೋರ್ಟ್​ ನ್ಯಾಯಮೂರ್ತಿ ಸ್ಥಾನಕ್ಕೆ ಎನ್​.ವಿ.ರಮಣ ಹೆಸರನ್ನು ಶಿಫಾರಸು ಮಾಡಿದ ಸಿಜಿಐ ಬೋಬ್ಡೆ..; ಕೇಂದ್ರ ಸಚಿವರ ಪತ್ರಕ್ಕೆ ಉತ್ತರ

ಇದನ್ನೂ ಓದಿ: ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಮಾಜಿ ಕೇಂದ್ರ ಸಚಿವ ಎಂ.ಜೆ.ಅಕ್ಬರ್​ ಹೂಡಿದ್ದ ಮಾನನಷ್ಟ ಮೊಕದ್ದಮೆ ರದ್ದು

Published On - 6:13 pm, Fri, 23 April 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ