Wild Boar menace: ಕಾಡು ಹಂದಿ ಬೇಟೆಗೆ ಹೈಕೋರ್ಟ್ ಅನುಮತಿ; ಆದರೆ ವನ್ಯಜೀವಿ ಪ್ರಿಯರು ಎತ್ತಿದ್ದಾರೆ ಆಕ್ಷೇಪ!
ವನ್ಯಜೀವಿ ಕಾಯಿದೆಯ ಪ್ರಕಾರ, ಕಾಡುಹಂದಿಗಳನ್ನು ಬೇಟೆಯಾಡುವುದು ಕೂಡ ಅಪರಾಧ. ಆದರೆ, ಈಗ ಕೇರಳ ಹೈಕೋರ್ಟ್ ಕೇರಳ ರಾಜ್ಯದಲ್ಲಿ ಕಾಡುಹಂದಿಗಳನ್ನು ಬೇಟೆಯಾಡಲು ರೈತರಿಗೆ ಅನುಮತಿ ನೀಡುವಂತೆ ಕೇರಳ ರಾಜ್ಯ ಸರ್ಕಾರಕ್ಕೆ ಮಧ್ಯಂತರ ಆದೇಶ ನೀಡಿದೆ. ಆದರೆ, ಇದಕ್ಕೆ ವನ್ಯಜೀವಿ ಪ್ರಿಯರಿಂದ ಆಕ್ಷೇಪ ವ್ಯಕ್ತವಾಗಿದೆ.
ವನ್ಯಜೀವಿ ಕಾಯಿದೆಯ ಪ್ರಕಾರ, ಕಾಡುಹಂದಿಗಳನ್ನು ಬೇಟೆಯಾಡುವುದು ಕೂಡ ಅಪರಾಧ. ಆದರೆ, ಈಗ ಕೇರಳ ಹೈಕೋರ್ಟ್ ಕೇರಳ ರಾಜ್ಯದಲ್ಲಿ ಕಾಡುಹಂದಿಗಳನ್ನು ಬೇಟೆಯಾಡಲು ರೈತರಿಗೆ ಅನುಮತಿ ನೀಡುವಂತೆ ಕೇರಳ ರಾಜ್ಯ ಸರ್ಕಾರಕ್ಕೆ ಮಧ್ಯಂತರ ಆದೇಶ ನೀಡಿದೆ. ರೈತರ ಬೆಳೆಗಳನ್ನು ಕಾಡುಹಂದಿಗಳು ಹಾಳು ಮಾಡದಂತೆ ತಡೆಯುವ ರಾಜ್ಯ ಸರ್ಕಾರದ ಪ್ರಯತ್ನಗಳು ಫಲ ನೀಡದೇ ಇರುವುದರಿಂದ ಕಾಡುಹಂದಿಗಳನ್ನೇ ಕೊಲ್ಲಲು ಅನುಮತಿ ನೀಡುವಂತೆ ಹೈಕೋರ್ಟ್ ಆದೇಶಿಸಿದೆ. ಆದರೆ, ಇದಕ್ಕೆ ವನ್ಯಜೀವಿ ಪ್ರಿಯರಿಂದ ಆಕ್ಷೇಪ ವ್ಯಕ್ತವಾಗಿದೆ.
ಕೇರಳದಲ್ಲಿ ಕಾಡು ಹಂದಿ ಬೇಟೆಗೆ ಹೈಕೋರ್ಟ್ ಅನುಮತಿ ಕಾಡುಹಂದಿ ಸೇರಿದಂತೆ ವನ್ಯಜೀವಿಗಳನ್ನ ಬೇಟೆಯಾಡುವುದು, ಕೊಲ್ಲುವುದು ಕಾನೂನು ಪ್ರಕಾರ ಅಪರಾಧ. ವನ್ಯಜೀವಿಗಳನ್ನು ಮನೆಯಲ್ಲಿ ಸಾಕುವಂತೆಯೂ ಇಲ್ಲ. ಆದರೆ, ಈಗ ನಮ್ಮ ಕರ್ನಾಟಕದ ನೆರೆಯ ಕೇರಳದಲ್ಲಿ ಕಾಡುಹಂದಿಗಳನ್ನ ಬೇಟೆಯಾಡಲು, ಕೊಲ್ಲಲು ರೈತರಿಗೆ ಅನುಮತಿ ನೀಡುವಂತೆ ಕೇರಳ ಹೈಕೋರ್ಟ್ ಶುಕ್ರವಾರ ಕೇರಳ ರಾಜ್ಯ ಸರ್ಕಾರಕ್ಕೆ ಮಧ್ಯಂತರ ಆದೇಶ ನೀಡಿದೆ. ಕಾಡುಹಂದಿಗಳು ರೈತರ ಬೆಳೆಗಳನ್ನು ಹಾಳು ಮಾಡುತ್ತಿದ್ದವು. ಇದನ್ನು ತಡೆಗಟ್ಟಲು ರಾಜ್ಯ ಸರ್ಕಾರ, ಅರಣ್ಯ ಇಲಾಖೆ ಕೆಲವೊಂದು ಕ್ರಮಗಳನ್ನು ಕೈಗೊಂಡಿದ್ದವು. ಆದರೆ, ಆ ಯಾವುದೇ ಕ್ರಮಗಳು ಫಲ ನೀಡಿಲ್ಲ. ಹೀಗಾಗಿ ಅಂತಿಮವಾಗಿ ರೈತರ ಬೆಳೆ ರಕ್ಷಣೆಗೆ ಕಾಡುಹಂದಿಗಳನ್ನು ಬೇಟೆಯಾಡಲು, ಕೊಲ್ಲಲು ರೈತರಿಗೆ ಅನುಮತಿ ನೀಡುವಂತೆ ಚೀಫ್ ವೈಡ್ ಲೈಫ್ ವಾರ್ಡನ್ ಗೆ ಆದೇಶ ನೀಡಿದೆ.
ಈ ಆದೇಶವು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ ಅರ್ಜಿದಾರ ರೈತರಿಗೆ ಅನ್ವಯಿಸುತ್ತೆ. ಮುಖ್ಯವಾಗಿ ಕೇರಳದ ಮಲಪ್ಪುರಂ, ಪಟ್ಟಣಂತಿಟ್ಟ, ಕೋಯಿಕ್ಕೋಡ್ ಜಿಲ್ಲೆಗಳ ರೈತರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿ, ತಮ್ಮ ಕೃಷಿ ಜಮೀನು ಕಾಡು ಹಂದಿ ದಾಳಿಯಿಂದ ಹಾಳಾಗುತ್ತಿದೆ ಎಂದು ದೂರಿದ್ದರು. ಕೃಷಿ ಜಮೀನಿಗೆ ಹತ್ತಿರದಲ್ಲೇ ಇರುವ ಕಾಡಿನಿಂದ ಬರುವ ಕಾಡು ಹಂದಿಗಳು ತಮ್ಮ ಬೆಳೆಗಳನ್ನು ಹಾಳು ಮಾಡುತ್ತಿವೆ. ಇದರಿಂದಾಗಿ ಆರ್ಥಿಕವಾಗಿ ನಮಗೆ ಬಾರಿ ನಷ್ಟವಾಗುತ್ತಿದೆ.
ಹೀಗಾಗಿ ಕಾಡುಹಂದಿಗಳನ್ನು ಉಪದ್ರವಕಾರಿ ವನ್ಯಜೀವಿಗಳು ಎಂದು ಘೋಷಿಸಬೇಕೆಂದು ರೈತರು ಕೋರಿದ್ದರು. ಈ ಬಗ್ಗೆ ವನ್ಯಜೀವಿ ರಕ್ಷಣಾ ಕಾಯಿದೆ ಸೆಕ್ಷನ್ 62ರಡಿ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ರೈತರು ಹೈಕೋರ್ಟ್ ಗೆ ಮನವಿ ಮಾಡಿದ್ದರು. 2020ರ ನವಂಬರ್ ನಲ್ಲಿ ಕೇರಳ ರಾಜ್ಯ ಸರ್ಕಾರವು ಕಾಡು ಹಂದಿಗಳನ್ನು ಉಪದ್ರವಕಾರಿ ವನ್ಯಜೀವಿಗಳು ಎಂದು ಘೋಷಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತ್ತು. ಆದರೆ, ಕೇಂದ್ರ ಸರ್ಕಾರ ಈ ಮನವಿಯನ್ನು ತಿರಸ್ಕರಿಸಿದೆ. ಆದರೆ, ಬಳಿಕ ಜೂನ್ 17ರಂದು ಕೇರಳ ಸರ್ಕಾರ ಹೊಸದಾಗಿ ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ಮನವಿ ಮಾಡಿದೆ.
ವನ್ಯಜೀವಿ ರಕ್ಷಣಾ ಕಾಯಿದೆಯ ಷೆಡ್ಯೂಲ್ 2, ಷೆಡ್ಯೂಲ್ 3, ಷೆಡ್ಯೂಲ್ 4ರಡಿ ನಿರ್ದಿಷ್ಟ ಪ್ರದೇಶದಲ್ಲಿ ಮನುಷ್ಯರಿಗೆ ಅಥವಾ ಬೆಳೆದು ನಿಂತ ಬೆಳೆ, ಭೂಮಿ ಸೇರಿದಂತೆ ಆಸ್ತಿಪಾಸ್ತಿಗಳಿಗೆ ಅಪಾಯಕಾರಿಯಾಗುವ ವನ್ಯಜೀವಿ ಅಥವಾ ವನ್ಯಜೀವಿಗಳ ತಂಡವನ್ನು ಕೊಲ್ಲಲು ಅಥವಾ ಬೇಟೆಯಾಡಲು ಅನುಮತಿ ನೀಡುವ ಅಧಿಕಾರ ಚೀಫ್ ವೈಲ್ಡ್ ಲೈಫ್ ವಾರ್ಡನ್ ಗೆ ಇದೆ ಎಂದು ಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ. ಈ ಅಧಿಕಾರವನ್ನು ಬಳಸಿಕೊಂಡು ಈಗ ಚೀಫ್ ವೈಲ್ಡ್ ಲೈಫ್ ವಾರ್ಡನ್, ಕಾಡು ಹಂದಿಗಳು ಬೆಳೆ ಹಾಳು ಮಾಡುವ ಪ್ರದೇಶದಲ್ಲಿ ಕಾಡು ಹಂದಿಗಳನ್ನ ಬೇಟೆಯಾಡಲು ಅಥವಾ ಕೊಲ್ಲಲು ರೈತರಿಗೆ ಅನುಮತಿ ನೀಡುವಂತೆ ಕೇರಳ ಹೈಕೋರ್ಟ್ ನ ಜಸ್ಟೀಸ್ ಪಿ.ಬಿ. ಸುರೇಶ್ ಕುಮಾರ್ ಮಧ್ಯಂತರ ಆದೇಶ ನೀಡಿದೆ.
ವನ್ಯಜೀವಿ ಸಂರಕ್ಷಣಾ ಕಾಯಿದೆಯ ಸೆಕ್ಷನ್ 11(1)ಬಿ ಅಡಿ ಕಾಡುಹಂದಿ ಕೊಲ್ಲಲು ಅನುಮತಿ ನೀಡಬೇಕು. ಈ ಆದೇಶವನ್ನು ಪಾಲಿಸಿ, ಅದರ ಬಗ್ಗೆ ಹೈಕೋರ್ಟ್ ಗೆ ಒಂದು ತಿಂಗಳಲ್ಲಿ ವರದಿ ನೀಡಬೇಕೆಂದು ನಿರ್ದೇಶನ ನೀಡಿದೆ. ವನ್ಯಜೀವಿಗಳನ್ನು ಉಪದ್ರವಕಾರಿ ಪ್ರಾಣಿಗಳೆಂದು ಘೋಷಣೆ ಮಾಡಿದರೇ, ಆಗ ಯಾರು ಬೇಕಾದರೂ ಅಂಥ ಪ್ರಾಣಿಗಳನ್ನು ಕ್ರಿಮಿನಲ್ ಕೇಸ್ ದಾಖಲಾಗುವ ಭಯ ಇಲ್ಲದೇ ಕೊಲ್ಲಬಹುದು. ಹೀಗಾಗಿಯೇ ಇಂಥ ಪ್ರಸ್ತಾವವನ್ನು ಕೇಂದ್ರ ಸರ್ಕಾರ ಒಪ್ಪುತ್ತಿಲ್ಲ. ಕೇರಳದ ಆರು ಮಂದಿ ರೈತರು ಕಾಡುಹಂದಿಗಳನ್ನು ಉಪದ್ರವಕಾರಿ ವನ್ಯಜೀವಿಗಳೆಂದು ಘೋಷಿಸಬೇಕೆಂದು ಹೈಕೋರ್ಟ್ ಮೆಟ್ಟಿಲೇರಿದ್ದರು.
ರೈತರ ಪರವಾಗಿ ವಕೀಲರಾದ ಅಲೆಕ್ಸ್ ಸರ್ಕಾರಿಯಾ, ಅಮಲ್ ದರ್ಶನ್ ವಾದ ಮಂಡಿಸಿದ್ದರು. ರೈತರು ಈಗ ಅಸಹಾಯಕರಾಗಿದ್ದಾರೆ. ಕಾಡುಹಂದಿಗಳನ್ನ ರೈತರೇ ಕೊಂದರೇ, ಕ್ರಿಮಿನಲ್ ಕೇಸ್ ಎದುರಿಸಬೇಕಾಗುತ್ತೆ. ಹೀಗಾಗಿ ಕಾಡುಹಂದಿಗಳು ಬೆಳೆಗಳನ್ನು ನಾಶಪಡಿಸುತ್ತಿರುವುದರಿಂದ ಇವುಗಳನ್ನು ಉಪದ್ರವಕಾರಿ ವನ್ಯಜೀವಿಗಳು ಎಂದು ಘೋಷಿಸಬೇಕೆಂದು ಹೈಕೋರ್ಟ್ ಗೆ ಮನವಿ ಮಾಡಿದ್ದರು.ಕೇರಳ ಹೈಕೋರ್ಟ್ ನೀಡಿರುವ ಆದೇಶ ರೈತರಿಗೆ ರಿಲೀಫ್ ನೀಡಿದೆ. ಆದರೇ, ವನ್ಯಜೀವಿ ಪ್ರಿಯರ ಆಕ್ಷೇಪಕ್ಕೂ ಕಾರಣವಾಗಿದೆ.
ಕರ್ನಾಟಕದಲ್ಲೂ ಕೆಲವು ಜಿಲ್ಲೆಗಳಲ್ಲಿ ವನ್ಯಜೀವಿಗಳಿಂದ ರೈತರ ಬೆಳೆ, ಆಸ್ತಿಪಾಸ್ತಿಗೆ ಹಾನಿಯಾಗುತ್ತೆ. ಹೀಗಾಗಿ ಕರ್ನಾಟಕದ ರೈತರು ಕೂಡ ಕೇರಳ ರಾಜ್ಯದ ರೈತರ ಹಾದಿ ಹಿಡಿದು ಹೈಕೋರ್ಟ್ ಮೆಟ್ಟಿಲೇರಬಹುದು. ಆದರೆ, ಕರ್ನಾಟಕದಲ್ಲಿ ಸದ್ದಿಲ್ಲದೇ, ಕಾಡುಹಂದಿಗಳನ್ನು ಬೇಟೆಯಾಡುವುದು ಕೆಲವು ಜಿಲ್ಲೆಗಳಲ್ಲಿ ನಡೆಯುತ್ತಲೇ ಇದೆ.
(kerala high court gives green signal to wild boar hunting in agricultural lands)