Balakot Lessons: ಅಂದು ಪಾಕ್ ಯುದ್ಧವಿಮಾನಗಳು ಭಾರತದತ್ತ ಬಾರದಿದ್ದರೆ ಈಗ ಲಡಾಖ್ ಸಂಘರ್ಷ ಇಷ್ಟು ಬೇಗ ಕೊನೆಯಾಗುತ್ತಿತ್ತೇ?

Balakot Lessons: ಅಂದು ಪಾಕ್ ಯುದ್ಧವಿಮಾನಗಳು ಭಾರತದತ್ತ ಬಾರದಿದ್ದರೆ ಈಗ ಲಡಾಖ್ ಸಂಘರ್ಷ ಇಷ್ಟು ಬೇಗ ಕೊನೆಯಾಗುತ್ತಿತ್ತೇ?
ರಫೇಲ್ ಯುದ್ಧವಿಮಾನ

‘ನಮ್ಮ ಬೆನ್ನು ನಮಗೆ ಕಾಣದು’ ಎಂಬ ಕನ್ನಡ ಗಾದೆಯೊಂದಿದೆಯಲ್ಲವೇ? ‘ಬಾಲಾಕೋಟ್​ ನಂತರ ನಮ್ಮ ವಾಯುಪಡೆಯಲ್ಲಿ ತುರ್ತಾಗಿ ಆಗಲೇಬೇಕಾದ ಸುಧಾರಣೆಗಳೇನು ಎಂಬುದು ನಮಗೆ ಮನವರಿಕೆಯಾಯಿತು’ ಎಂಬ ಮಾತನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದರೆ ಇದೇ ಕನ್ನಡಗಾದೆ ಅನ್ವರ್ಥವಾಗುತ್ತದೆ.

Ghanashyam D M | ಡಿ.ಎಂ.ಘನಶ್ಯಾಮ

|

Feb 26, 2021 | 7:11 PM

‘ಬಾಲಾಕೋಟ್​ ಕಾರ್ಯಾಚರಣೆಯಿಂದ ನಮ್ಮ ವಾಯುಪಡೆಯ ಸಾಮರ್ಥ್ಯ ಹೊರ ಜಗತ್ತಿಗೆ ತಿಳಿಯಿತು. ಶತ್ರುರಾಷ್ಟ್ರಗಳಿಂದ ಎದುರಾಗಬಹುದಾದ ನಿಜವಾದ ಸವಾಲುಗಳೇನು? ಅದನ್ನು ಎದುರಿಸಲು ನಾವು ಮಾಡಿಕೊಳ್ಳಬೇಕಾದ ಸಿದ್ಧತೆಗಳೇನು ಎಂಬುದು ನಮಗೆ ಮನವರಿಕೆಯಾಯಿತು’ ಎಂಬ ಮಾತನ್ನು ಆಗಾಗ ವಾಯುಪಡೆಯ ಹಿರಿಯ ಅಧಿಕಾರಿಗಳು ಹೇಳುತ್ತಿರುತ್ತಾರೆ. ಬಾಲಾಕೋಟ್​ ದಾಳಿಯ ಪರಿಣಾಮಗಳ ಬಗ್ಗೆ ನಡೆಯುವ ಚರ್ಚೆಗಳಲ್ಲಿಯೂ ಇಂಥದ್ದೇ ವಿಚಾರಗಳು ಪ್ರಸ್ತಾಪವಾಗುತ್ತವೆ. ‘ನಮ್ಮ ಬೆನ್ನು ನಮಗೆ ಕಾಣದು’ ಎಂಬ ಕನ್ನಡ ಗಾದೆಯೊಂದಿದೆಯಲ್ಲವೇ? ‘ಬಾಲಾಕೋಟ್​ ನಂತರ ನಮ್ಮ ವಾಯುಪಡೆಯಲ್ಲಿ ತುರ್ತಾಗಿ ಆಗಲೇಬೇಕಾದ ಸುಧಾರಣೆಗಳೇನು ಎಂಬುದು ನಮಗೆ ಮನವರಿಕೆಯಾಯಿತು’ ಎಂಬ ಮಾತನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದರೆ ಇದೇ ಕನ್ನಡಗಾದೆ ಅನ್ವರ್ಥವಾಗುತ್ತದೆ.

ಇವತ್ತಿಗೆ ಸರಿಯಾಗಿ 2 ವರ್ಷಗಳ ಹಿಂದೆ ಪಾಕಿಸ್ತಾನದ ಬಾಲಾಕೋಟ್​ನಲ್ಲಿ ಜೈಷ್-ಎ-ಮೊಹಮದ್ ಉಗ್ರಗಾಮಿ ಸಂಘಟನೆ ನಡೆಸುತ್ತಿದ್ದ ಉಗ್ರರ ತರಬೇತಿ ಶಿಬಿರಗಳ ಮೇಲೆ ಭಾರತೀಯ ವಾಯುಪಡೆಯ ಜಾಗ್ವಾರ್ ಯುದ್ಧವಿಮಾನಗಳು ದಾಳಿ ನಡೆಸಿದ್ದವು. ಕಟ್ಟಡಗಳ ಮೇಲೆ ಅಳಕ್ಕಿಳಿದು ಸ್ಫೋಟಿಸುವ ಅತ್ಯಾಧುನಿಕ ಬಾಂಬ್​ಗಳನ್ನು ಹಾಕಿ ಸುರಕ್ಷಿತವಾಗಿ ವಾಪಸ್ ಬಂದಿದ್ದವು.

ಪಾಕಿಸ್ತಾನದ ವಾಯುರಕ್ಷಣಾ ವ್ಯವಸ್ಥೆಯಲ್ಲಿದ್ದ ದುರ್ಬಲ ರಾಡಾರ್ ಪ್ಯಾಸೇಜ್​ಗಳನ್ನು ಭಾರತ ನಿಖರವಾಗಿ ಅಂದಾಜಿಸಿತ್ತು. ಶತ್ರುರಾಷ್ಟ್ರದ ವಾಯುದಾಳಿ ನಿಪುಣರ ದಾರಿ ತಪ್ಪಿಸಲು ಮತ್ತೊಂದು ಕಡೆ ಭಾರತದ ಯುದ್ಧವಿಮಾನಗಳ ಚಟುವಟಿಕೆ ಹೆಚ್ಚಿಸಿದ್ದು ಪ್ರಯೋಜನಕ್ಕೆ ಬಂತು. ಬಾಲಾಕೋಟ್ ಕಾರ್ಯಾಚರಣೆಯ ಹಲವು ಅಂಶಗಳು ಅತ್ಯಂತ ಕರಾರುವಾಕ್ಕಾಗಿ ಯೋಜಿತ ರೀತಿಯಲ್ಲಿಯೇ ಜಾರಿಯಾದವು. ಭಾರತದ ವಾಯುದಾಳಿ ಸಾಮರ್ಥ್ಯವನ್ನು ಜಗತ್ತು ನಿಬ್ಬೆರಗಾಗಿ ನೋಡಿತ್ತು. ತನ್ನ ವಾಯುಗಡಿಯೊಳಗೆ ಇಷ್ಟು ದೂರ ಬಂದರೂ ಅದನ್ನು ಗುರುತಿಸದ ಪಾಕ್​ ವಾಯುರಕ್ಷಣಾ ವ್ಯವಸ್ಥೆ ಟೀಕೆಗೆ ಗುರಿಯಾಗಿತ್ತು.

ಇದನ್ನೂ ಓದಿ: ಬಾಲಾಕೋಟ್​ ದಾಳಿಗೆ 2 ವರ್ಷ: ವೈರಿ ನೆಲದಲ್ಲೂ ಮುಗುಳ್ನಗುತ್ತಿದ್ದ ಧೀರ ಅಭಿನಂದನ್​ ವರ್ಧಮಾನ್

BALAKOT AIRSTRIKE INDIAN AIRFORCE

ಭಾರತೀಯ ವಾಯುಸೇನೆ ಪೈಲಟ್​ಗಳು

ಅಸಮಬಲ ಹೋರಾಟ ಕಲಿಸಿದ ಪಾಠಗಳು ಇಷ್ಟೇ ಆಗಿದ್ದರೆ ಸೆಪ್ಟೆಂಬರ್ 2016ರಲ್ಲಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆದಿದ್ದ ಮೊದಲ ಸರ್ಜಿಕಲ್ ಸ್ಟ್ರೈಕ್​ ಮಾದರಿಯಲ್ಲಿಯೇ ಇದು ಸಹ ಭಾರತೀಯ ಸಶಸ್ತ್ರಪಡೆಗಳ ಮೇಲ್ಮೆ ಸಾರಿಹೇಳುವ ಒಂದು ಕಾರ್ಯಾಚರಣೆಯಾಗಿ ಉಳಿದುಕೊಂಡುಬಿಡುತ್ತಿತ್ತು. ಆದರೆ 2019ರಲ್ಲಿ ಪಾಕಿಸ್ತಾನದ ನೆಲದಲ್ಲಿಯೇ ಭಾರತೀಯ ಯುದ್ಧವಿಮಾನಗಳು ವಾಯುದಾಳಿ ನಡೆಸಿದವು. ಇಲ್ಲೆರೆಡು ಸೂಕ್ಷ್ಮಗಳಿವೆ ಗಮನಿಸಿ, ಪಾಕ್ ಆಕ್ರಮಿತ ಕಾಶ್ಮೀರ ಬೇರೆ, ಪಾಕಿಸ್ತಾನ ಸರ್ಕಾರದ ನೇರ ಸುಪರ್ದಿಯಲ್ಲಿರುವ ಪಾಕಿಸ್ತಾನದ ತಾಯ್ನೆಲ ಬೇರೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ದಾಳಿ ನಡೆಸಿದ್ದು ಭಾರತದ ಭೂಸೇನೆ, ಪಾಕಿಸ್ತಾನದ ತಾಯ್ನೆಲದಲ್ಲಿ ದಾಳಿ ನಡೆಸಿದ್ದ ಭಾರತದ ವಾಯುಪಡೆ.

ಬಾಲಾಕೋಟ್ ಸೋಲನ್ನು ಸಹಜವಾಗಿಯೇ ಪ್ರತಿಷ್ಠೆಯ ವಿಷಯವಾಗಿಸಿಕೊಂಡ ಪಾಕಿಸ್ತಾನದ ವಾಯುಪಡೆ ವ್ಯೂಹ ರಚಿಸಿಕೊಂಡು ಭಾರತದ ಭೂಸೇನಾ ನೆಲೆಗಳತ್ತ ನುಗ್ಗಿಬಂದವು. ಇಂಥದ್ದೇನಾದರೂ ಆಗಬಹುದು ಎಂಬ ನಿರೀಕ್ಷೆಯಲ್ಲಿ ಸನ್ನದ್ಧಸ್ಥಿತಿಯಲ್ಲಿದ್ದ ಭಾರತೀಯ ವಾಯುಪಡೆ ಗಸ್ತು ಹೆಚ್ಚಿಸಿತ್ತು. ಆದರೆ ಪಾಕ್​ ಯುದ್ಧವಿಮಾನಗಳೊಂದಿಗೆ ‘ಡಾಗ್​ ಫೈಟ್’ (ಹೊರಾಟ) ಎದುರಾದಾಗ ಮಾತ್ರ ‘ಅಸಮಬಲ ಹೋರಾಟ’ದ ಅಪಾಯಗಳು ಭಾರತಕ್ಕೆ ಸ್ಪಷ್ಟವಾಗಿ ಅರಿವಾಯಿತು. ಸೇನಾ ಕಾರ್ಯಾಚರಣೆಗಳಲ್ಲಿ ಅಸಮಬಲ ಹೋರಾಟಗಳು ಹಲವು ಬಾರಿ ಆತ್ಮಹತ್ಯಾ ದಾಳಿಗೆ ಸಮನಾಗಿರುತ್ತವೆ.

2019ರಲ್ಲಿ ಪಾಕಿಸ್ತಾನದ ಬಳಿಯಿದ್ದ ಬಿಯಾಂಡ್​ ದಿ ರೇಂಜ್ ಕ್ಷಿಪಣಿ ಹಾರಿಬಿಡುವ ಸಾಮರ್ಥ್ಯದ ಅತ್ಯಾಧುನಿಕ ಎಫ್​-16 ಯುದ್ಧವಿಮಾನಗಳನ್ನು ತಾಂತ್ರಿಕವಾಗಿ ಸರಿಗಟ್ಟುವ ಒಂದೇ ಒಂದು ವಿಮಾನ ಭಾರತದ ಬಳಿಯಿರಲಿಲ್ಲ. ಭಾರತೀಯ ವಾಯುಪಡೆಯ ಪೈಲಟ್​ನ ಚಾಕಚಕ್ಯತೆ ಮತ್ತು ಪ್ರತಿಭೆಯಿಂದ ಭಾರತದ ಮಿಗ್-21 ಬೈಸನ್ ಯುದ್ಧವಿಮಾನ ತನಗಿಂತ ಎಷ್ಟೋಪಟ್ಟು ಸುಧಾರಿತ ಆವೃತ್ತಿಯಾದ ಎಫ್-16 ಹೊಡೆದುರುಳಿಸಲು ಸಾಧ್ಯವಾಯಿತು. ಪಾಕ್ ಫೈಟರ್ ಪೈಲಟ್ ಮಾಡಿದ್ದ ತಪ್ಪೂ ಇದಕ್ಕೆ ಕಾರಣ ಎಂದು ನಂತರ ವಿಶ್ಲೇಷಿಸಲಾಯಿತು.

ಈ ಡಾಗ್​ ಫೈಟ್ ನಂತರ ಪಾಕ್​ ಸೇನೆಗೆ ಭಾರತದ ಪೈಲಟ್ ಅಭಿನಂದನ್ ವರ್ಧಮಾನ್ ಸೆರೆಸಿಕ್ಕರು. ನಂತರ ಏನೆಲ್ಲಾ ಆಯಿತು ಎಂಬುದು ಬೇರೆಯೇ ಕಥೆ. ಆದರೆ ನಾನಿಲ್ಲಿ ಮುಖ್ಯವಾಗಿ ಪ್ರಸ್ತಾಪಿಸಲು ಬಯಸುವುದು ಈ ನೆರೆಯ ಉಪದ್ರಕಾರಿ ರಾಷ್ಟ್ರ ಪಾಕಿಸ್ತಾನದ ವಾಯುಪಡೆಯೊಂದಿಗಿನ ‘ಅಸಮಬಲ’ ನಿವಾರಿಸಲು ಭಾರತ ಏನು ಮಾಡಿತು ಎಂಬ ಬಗ್ಗೆ.

ಬಾಲಾಕೋಟ್ ದಾಳಿಯ ನಂತರ ಭಾರತೀಯ ವಾಯುಪಡೆಗೆ ರಫೇಲ್ ಫೈಟರ್​ ಜೆಟ್​ಗಳು, ಅತ್ಯಾಧುನಿಕ ಏರ್​ ಟು ಏರ್​ ಮತ್ತು ಏರ್​ ಟು ಲ್ಯಾಂಡ್ ಕ್ಷಿಪಣಿಗಳು, ಗನ್​ ಮಿಷನ್​ಗಳು, ಎಎಚ್-64ಇ ಅಪಾಚೆ ದಾಳಿ ಹೆಲಿಕಾಪ್ಟರ್​ಗಳು, ಹಲವು ಉದ್ದೇಶಗಳಿಗೆ ಬಳಕೆಯಾಗುವ ಸಿಎಚ್​-47ಎಫ್​ (ಐ) ಚಿಕ್ನೂಕ್ ಹೆಲಿಕಾಪ್ಟರ್​ಗಳು ಸೇರ್ಪಡೆಯಾದವು. ಈ ಯುದ್ಧವಿಮಾನ ಮತ್ತು ಹೆಲಿಕಾಪ್ಟರ್​ಗಳನ್ನು ವಾಯುಪಡೆಗೆ ಸೇರ್ಪಡೆ ಮಾಡಿಕೊಳ್ಳುವ ಪ್ರಕ್ರಿಯೆ ಬಹಳ ಹಿಂದೆಯೇ ಆರಂಭವಾಗಿತ್ತು. ಆದರೆ ಸರ್ಕಾರಿ ವ್ಯವಸ್ಥೆಯಲ್ಲಿ ನಿಧಾನಗತಿಯ ಖರೀದಿ ಮತ್ತು ಸೇರ್ಪಡೆ ಪ್ರಕ್ರಿಯೆ ಕುಂಟುತ್ತಾ ಸಾಗಿತ್ತು. ಆದರೆ ಬಾಲಾಕೋಟ್​ ದಾಳಿಯ ನಂತರ ನಡೆದ ‘ಅಸಮಬಲದ ಹೋರಾಟ’ ವಾಯುಪಡೆಯ ಶಕ್ತಿವರ್ಧನೆಗೆ ಹೊಸ ವೇಗ ನೀಡಲೇಬೇಕಾದ ಅನಿವಾರ್ಯತೆಯನ್ನು ಉಂಟು ಮಾಡಿತ್ತು.

ಇದನ್ನು ಓದಿ: ಆ 12 ದಿನಗಳು.. ಪುಲ್ವಾಮಾ ಸ್ಫೋಟದಿಂದ ಬಾಲಾಕೋಟ್​ ವಾಯುದಾಳಿಯವರೆಗೆ

Abhinandan Varthaman

ದೇಶದ ಹೆಮ್ಮೆಯ ಪ್ರತೀಕ ಎನಿಸಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್

ಚೀನಾ ಸಂಘರ್ಷದಲ್ಲಿ ಉಪಯೋಗಕ್ಕೆ ಬಂತು ಬಾಲಾಕೋಟ್ ಸಂಘರ್ಷದ ನಂತರ ಆದ ಬೆಳವಣಿಗೆಗಳು ಮತ್ತು ವಾಯುಪಡೆಯ ಬಲವರ್ಧನೆಯ ಪರಿಣಾಮ ಚೀನಾ ಗಡಿ ಸಂಘರ್ಷದ ವೇಳೆ ಸ್ಪಷ್ಟವಾಗಿ ಗೋಚರಿಸಿತು. ಚೀನಾ ಸೇನೆಗೆ ಅಚ್ಚರಿಯುಂಟು ಮಾಡುವಷ್ಟು ವೇಗದಲ್ಲಿ ಭಾರತವು ಲಡಾಖ್​ ಗಡಿಯಲ್ಲಿ ಸೇನಾ ನಿಯೋಜನೆ ಮಾಡಿತ್ತು. ಈ ವೇಗದ ನಿಯೋಜನೆಗೆ ಹೊಸ ಹೆಲಿಕಾಪ್ಟರ್​ಗಳು, ಸರಕುಸಾಗಣೆ ವಿಮಾನಗಳನ್ನು ವಾಯುಪಡೆ ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದು ಮುಖ್ಯ ಕಾರಣ.

ರಫೇಲ್​ ಜೆಟ್​ಗಳನ್ನೂ ಕೆಲ ಸಂದರ್ಭಗಳಲ್ಲಿ ಭಾರತೀಯ ವಾಯುಪಡೆ ಚೀನಾ ಗಡಿಯಲ್ಲಿ ಗಸ್ತಿಗಾಗಿ ಬಳಸಿತ್ತು. ರಫೇಲ್ ಬಳಕೆಯನ್ನು ಉದ್ದೇಶಪೂರ್ವಕವಾಗಿಯೇ ದೊಡ್ಡ ಸುದ್ದಿಯಾಗುವಂತೆ ರಕ್ಷಣಾ ಇಲಾಖೆ ನೋಡಿಕೊಂಡಿತು. ಲಡಾಖ್ ವಾಯುನೆಲೆಯಲ್ಲಿ ವಾಯುಪಡೆದ ಆಯೋಜಿಸಿದ್ದ ಮಾಧ್ಯಮಗೋಷ್ಠಿಯಲ್ಲಿ ಅಪಾಚೆ ದಾಳಿ ಹೆಲಿಕಾಪ್ಟರ್​ಗಳು ಎದ್ದು ಕಂಡವು. ಗಡಿಯಿಂದ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವ ಚೀನಾದ ನಿರ್ಧಾರದ ಹಿಂದೆ ಈ ಅಂಶವೂ ಕೆಲಸ ಮಾಡಿದೆ ಎನ್ನುತ್ತಾರೆ ಏರ್​ ಪವರ್​ ಸ್ಟಡೀಸ್ ಕೇಂದ್ರದ ನಿವೃತ್ತ ಏರ್ ವೈಸ್ ಮಾರ್ಷಲ್ ಮನಮೋಹನ್ ಬಹದ್ದೂರ್.

ಮನಮೋಹನ್ ಬಹದ್ದೂರ್​ ಅವರ ಮಾತು ಕೇಳುವಾಗ ‘ಅಂದು ಭಾರತದ ಬಳಿ ರಫೇಲ್ ಇದ್ದಿದ್ದರೆ’ ಎಂಬ ಮತ್ತೊಂದು ಉದ್ಗಾರ ನೆನಪಾಗುತ್ತದೆ. ಸೇನಾ ಕಾರ್ಯತಂತ್ರ ನಿಪುಣರು, ರಕ್ಷಣಾ ಸಚಿವರು ಸೇರಿದಂತೆ ಹಲವರು ಅಭಿನಂದನ್ ಸೆರೆಸಿಕ್ಕ ಫೆ.27ರ ನಂತರ ಹಲವರು ಬಾರಿ ಹೀಗೆ ಉದ್ಗರಿಸಿದ್ದರು. ಭಾರತದತ್ತ ಮುಂದೊತ್ತಿ ಬಂದ ಅತ್ಯಾಧುನಿಕ ಪಾಕ್ ಯುದ್ಧವಿಮಾನಗಳನ್ನು ಹಿಮ್ಮೆಟ್ಟಿಸಲು ಮಿಗ್​-21 ಬೈಸನ್​ಗಳೊಂದಿಗೆ ಭಾರತೀಯ ವಾಯುಪಡೆ ಪ್ರಯತ್ನಿಸುವಾಗ ಅನಿವಾರ್ಯವಾಗಿ ಸುಖೋಯ್​ ವಿಮಾನಗಳನ್ನು ಹಿಂದಕ್ಕೆ ಕರೆಸಿಕೊಳ್ಳಬೇಕಾಯಿತು. ನಿಜಕ್ಕೂ ನಮ್ಮ ರಕ್ಷಣಾ ವ್ಯವಸ್ಥೆಯ ದೌರ್ಬಲ್ಯ ಮನವರಿಕೆಯಾದ ಸಂದರ್ಭ ಅದು.

ನಮ್ಮ ಸಾಮರ್ಥ್ಯ ಜಗತ್ತಿಗೆ ತಿಳಿಯುವುದು ಎಷ್ಟು ಮುಖ್ಯವೋ, ನಮ್ಮ ದೌಬ್ಯಲ್ಯ ನಮಗೇ ಅರಿವಾಗುವುದೂ ಅಷ್ಟೇ ಮುಖ್ಯ. ಒಂದು ವೇಳೆ ಬಾಲಾಕೋಟ್ ನಂತರ ಪಾಕಿಸ್ತಾನದ ಯುದ್ಧವಿಮಾನಗಳು ಭಾರತದತ್ತ ಹಾರಿಬರದಿದ್ದರೆ ಇಷ್ಟು ಬೇಗ ಲಡಾಖ್ ಸಂಘರ್ಷ ಕೊನೆಗಾಣುತ್ತಿತ್ತೇ? ಉತ್ತರ ನಿಮಗೂ ಗೊತ್ತು.

ಇನ್ನಷ್ಟು…

1) Balakot Air Strike | ಬಾಲಾಕೋಟ್ ದಾಳಿಗೆ 2 ವರ್ಷ; ಕೆಚ್ಚೆದೆಯ ಯೋಧರಿಗೆ ಸಲಾಂ ಹೇಳಿದ ನೆಟ್ಟಿಗರು

2) ಬಾಲಾಕೋಟ್ ದಾಳಿಗೆ 2 ವರ್ಷ: ಭಾರತ-ಪಾಕ್ ನಡುವೆ ಹೊಸ ಕದನವಿರಾಮ ಒಪ್ಪಂದ; ಬದ್ಧವಾಗಿರುವುದೇ ಪಾಕ್?

Follow us on

Most Read Stories

Click on your DTH Provider to Add TV9 Kannada