ಸಿಜೆಐ ಎನ್‌ವಿ ರಮಣ ನಿವೃತ್ತಿ ಹಿನ್ನೆಲೆ; ಸುಪ್ರೀಂ ಕೋರ್ಟ್ ಇತಿಹಾಸದಲ್ಲೇ ಮೊದಲ ಬಾರಿಗೆ ಕಲಾಪದ ನೇರ ಪ್ರಸಾರ
ಶನಿವಾರ (ಆ. 27) ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಯುಯು ಲಲಿತ್ ಅಧಿಕಾರ ಸ್ವೀಕರಿಸಲಿದ್ದಾರೆ.

ನವದೆಹಲಿ: ಭಾರತದ ಸುಪ್ರೀಂ ಕೋರ್ಟ್ನ (Supreme Court) ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಅವರ ನ್ಯಾಯಪೀಠದ ಕಲಾಪಗಳನ್ನು ನೇರ ಪ್ರಸಾರ ಮಾಡಲಾಗುತ್ತದೆ. ನ್ಯಾಯಮೂರ್ತಿ ಎನ್‌ವಿ ರಮಣ (NV Ramana) ಅವರು ನಿವೃತ್ತಿಯ ವಯಸ್ಸನ್ನು ತಲುಪಿದ ಹಿನ್ನೆಲೆಯಲ್ಲಿ ಇಂದು (ಶುಕ್ರವಾರ) ನಿವೃತ್ತರಾಗಲಿದ್ದಾರೆ. ಇಂದು ಅವರು ನಿಯೋಜಿತ ಮುಖ್ಯ ನ್ಯಾಯಮೂರ್ತಿ ಯುಯು ಲಲಿತ್ ಮತ್ತು ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರೊಂದಿಗೆ ಪೀಠವನ್ನು ಹಂಚಿಕೊಳ್ಳಲಿದ್ದಾರೆ.
ಶನಿವಾರ (ಆ. 27) ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಯುಯು ಲಲಿತ್ ಅಧಿಕಾರ ಸ್ವೀಕರಿಸಲಿದ್ದಾರೆ. ನಿವೃತ್ತಿಯ ಹಿನ್ನೆಲೆಯಲ್ಲಿ ಏರ್ಪಡಿಸಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ್ದ ನ್ಯಾ. ಎನ್‌ವಿ ರಮಣ, ನಾನು ಎಲ್ಲ ರೀತಿಯಲ್ಲಿ ಮುಖ್ಯ ನ್ಯಾಯಮೂರ್ತಿಯಾಗಿ ನನ್ನ ಕರ್ತವ್ಯಗಳನ್ನು ನಿರ್ವಹಿಸಿದ್ದೇನೆ. ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಗಳ ನೇಮಕಾತಿಗೆ ಬಹುತೇಕ ಎಲ್ಲ ಹೆಸರನ್ನು ತೆರವುಗೊಳಿಸಲಾಗಿದೆ ಎಂದು ಹೇಳಿದ್ದರು. ನಾನು ಮುಖ್ಯ ನ್ಯಾಯಮೂರ್ತಿಯಾಗಿ ನನ್ನ ಕರ್ತವ್ಯವನ್ನು ಸಾಧ್ಯವಿರುವ ರೀತಿಯಲ್ಲಿ ನಿರ್ವಹಿಸಿದ್ದೇನೆ. ಬಾರ್‌ನ ಪ್ರತಿಯೊಬ್ಬ ಸದಸ್ಯರು, ವಿಶೇಷವಾಗಿ ದೆಹಲಿಯಲ್ಲಿ ಒಗ್ಗಟ್ಟಿನಿಂದ ನಿಂತು ನನ್ನನ್ನು ಬೆಂಬಲಿಸುವ ನಿರ್ಣಯವನ್ನು ಅಂಗೀಕರಿಸಿದ್ದಾರೆ. ಇಂತಹ ಬೆಂಬಲವನ್ನು ಪಡೆಯಲು ನನಗೆ ತುಂಬಾ ಹೆಮ್ಮೆ ಮತ್ತು ಸಂತೋಷವಾಗುತ್ತದೆ ಎಂದು ಹೇಳಿದ್ದರು.
ಇದನ್ನೂ ಓದಿ: ಸಿಜೆಐ ಎನ್‌ವಿ ರಮಣ ಇಂದು ನಿವೃತ್ತಿ; ಹಲವು ಐತಿಹಾಸಿಕ ತೀರ್ಪು, ಇನ್ನೂ ಹಲವು ಮುಖ್ಯ ಪ್ರಕರಣಗಳು ಬಾಕಿ
ಸುಪ್ರೀಂ ಕೋರ್ಟ್ ಮತ್ತು ಕೊಲಿಜಿಯಂನಲ್ಲಿ ನನ್ನ ಸಹೋದರ ಮತ್ತು ಸಹೋದರಿ ನ್ಯಾಯಾಧೀಶರು ನೀಡಿದ ಬೆಂಬಲಕ್ಕೆ ಧನ್ಯವಾದಗಳು. ನಾವು ಹೈಕೋರ್ಟ್‌ಗಳಲ್ಲಿ ಸುಮಾರು 224 ನ್ಯಾಯಮೂರ್ತಿಗಳನ್ನು ನೇಮಕ ಮಾಡಿದ್ದೇವೆ ಎಂದು ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಹೇಳಿದ್ದರು.
ಈ ಸಮಾರಂಭದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಕೌಲ್, ಇಂದಿರಾ ಬ್ಯಾನರ್ಜಿ, ಸಂಜೀವ್ ಖನ್ನಾ, ಎಸ್ ರವೀಂದ್ರ ಭಟ್ ಮತ್ತು ಹಿಮಾ ಕೊಹ್ಲಿ, ದೆಹಲಿ ಹೈಕೋರ್ಟ್‌ನ ಎಲ್ಲಾ ಮಾಜಿ ನ್ಯಾಯಾಧೀಶರು ಮತ್ತು ಹೈಕೋರ್ಟ್‌ನ ನ್ಯಾಯಾಧೀಶರು ಮತ್ತು ಬಾರ್‌ನ ಸದಸ್ಯರು ಭಾಗವಹಿಸಿದ್ದರು. ನಾವು ಸುಪ್ರೀಂ ಕೋರ್ಟ್‌ನಲ್ಲಿ ದೆಹಲಿಯನ್ನು ಪ್ರತಿನಿಧಿಸುವ ಆರು ಜನರಿದ್ದೇವೆ. ನಾನು ನಿವೃತ್ತಿಯಾಗುತ್ತಿದ್ದರೂ ದೆಹಲಿಯಿಂದ ಇನ್ನೂ ಐವರು ಪ್ರತಿನಿಧಿಗಳಿದ್ದಾರೆ. ಶೀಘ್ರದಲ್ಲೇ ಇನ್ನೂ ಕೆಲವು ಪ್ರತಿನಿಧಿಗಳು ಸೇರುತ್ತಾರೆ ಎಂದು ನನಗೆ ಭರವಸೆಯಿದೆ ಎಂದು ಸಿಜೆಐ ಎನ್‌ವಿ ರಮಣ ಹೇಳಿದ್ದರು.
ದೆಹಲಿ ಹೈಕೋರ್ಟ್‌ನ ವಿಶಿಷ್ಟ ಲಕ್ಷಣಗಳು ಮತ್ತು ವಿಶೇಷತೆಗಳು ಮತ್ತು ಅದರ ವ್ಯಾಜ್ಯಗಳ ಪ್ರಮಾಣವನ್ನು ಬೇರೆ ಯಾವುದೇ ಹೈಕೋರ್ಟ್‌ನೊಂದಿಗೆ ಹೋಲಿಸಲಾಗುವುದಿಲ್ಲ. ದೆಹಲಿ ಹೈಕೋರ್ಟ್ ನ್ಯಾಯಾಧೀಶರು ರಾತ್ರಿ 7-8 ಗಂಟೆಯವರೆಗೆ ಚೇಂಬರ್‌ನಲ್ಲಿ ಶ್ರಮಿಸುತ್ತಿದ್ದರು. ಅವರು ಬೆಳಿಗ್ಗೆ ಬರುತ್ತಾರೆ, ಕೆಲವೊಮ್ಮೆ ರಾತ್ರಿ 8ರಿಂದ 9 ಗಂಟೆಯವರೆಗೆ ಕೆಲಸ ಮಾಡುತ್ತಾರೆ ಎಂದು ಎನ್‌ವಿ ರಮಣ ಶ್ಲಾಘಿಸಿದ್ದರು.




