ಮುಂಬೈ: ಮಹಾರಾಷ್ಟ್ರದ ಏಕನಾಥ್ ಶಿಂಧೆ (Eknath Shinde) ಬಣದ ವಿರುದ್ಧ ನೇತಾಡುತ್ತಿದ್ದ ಶಾಸಕರ ಅನರ್ಹತೆ ಕತ್ತಿಗೆ ಸುಪ್ರೀಂಕೋರ್ಟ್ (Supreme Court) ಈಗ ಬ್ರೇಕ್ ಹಾಕಿದೆ. ಜುಲೈ 12ರವರೆಗೂ ಏಕನಾಥ್ ಶಿಂಧೆ ಬಣದ ಶಾಸಕರಿಗೆ ಡೆಪ್ಯುಟಿ ಸ್ಪೀಕರ್ ನೋಟೀಸ್ಗೆ ಉತ್ತರಿಸಲು ಕಾಲಾವಕಾಶ ನೀಡಿದೆ. ಆದರೆ, ಈಗ ಏಕನಾಥ್ ಶಿಂಧೆ ಏನು ಮಾಡ್ತಾರೆ ಎಂಬ ಕುತೂಹಲ ಇದೆ. ಏಕನಾಥ್ ಶಿಂಧೆ ಏನಾದರೂ ಉದ್ಧವ್ ಠಾಕ್ರೆ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸ್ತಾರಾ? ಎಂಬ ಕುತೂಹಲ ಇದೆ. ಜೊತೆಗೆ ರಾಜ್ಯಪಾಲರಿಗೆ ಬಿಜೆಪಿ ಪಕ್ಷ ಏನಾದರೂ ಉದ್ದವ್ ಠಾಕ್ರೆ (Uddhav Thackeray) ಸರ್ಕಾರಕ್ಕೆ ಬಹುಮತ ಇಲ್ಲ ಎಂದು ದೂರು ಕೊಡುತ್ತಾ? ಎಂಬ ಕುತೂಹಲ ಸೃಷ್ಟಿಯಾಗಿದೆ.
ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟಿನಲ್ಲಿ ಶಿವಸೇನೆಯ ಪಕ್ಷದ 40 ಶಾಸಕರು ದೂರದ ಗುವಾಹಟಿಗೆ ಹೋಗಿ ಠಿಕಾಣಿ ಹೂಡಿ ಉದ್ಧವ್ ಠಾಕ್ರೆ ಸರ್ಕಾರದ ವಿರುದ್ದ ಬಂಡಾಯ ಎದ್ದಿದ್ದಾರೆ. ಉದ್ಧವ್ ಠಾಕ್ರೆ ಸರ್ಕಾರಕ್ಕೆ ನಮ್ಮ ಬೆಂಬಲ ಇಲ್ಲ ಎಂದು ಸುಪ್ರೀಂಕೋರ್ಟ್ಗೂ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಇನ್ನೂ ಯಾವುದೇ ಬಣವಾಗಲಿ, ರಾಜಕೀಯ ಪಕ್ಷವಾಗಲಿ ಸಿಎಂ ಉದ್ಧವ್ ಠಾಕ್ರೆ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿಲ್ಲ. ಆದರೆ, ಉದ್ದವ್ ಠಾಕ್ರೆ ಸರ್ಕಾರದ ವಿರುದ್ಧ ಬಂಡಾಯ ನಾಯಕ ಏಕನಾಥ್ ಶಿಂಧೆ ಅಥವಾ ವಿರೋಧ ಪಕ್ಷ ಬಿಜೆಪಿ ಪಕ್ಷ ಅವಿಶ್ವಾಸ ನಿರ್ಣಯ ಮಂಡಿಸಲು ಕಾನೂನಿನಲ್ಲಿ ಅವಕಾಶ ಇದೆ.
ಮಹಾರಾಷ್ಟ್ರದ ಸಿಎಂ ಉದ್ಧವ್ ಠಾಕ್ರೆ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯದ ನೋಟೀಸ್ ಅನ್ನು ಡೆಪ್ಯುಟಿ ಸ್ಪೀಕರ್ ಮತ್ತು ರಾಜ್ಯಪಾಲರಿಗೆ ನೀಡಬಹುದು. ಅವಿಶ್ವಾಸ ನಿರ್ಣಯವನ್ನು ಶಿಂಧೆ ಬಣವಾಗಲಿ, ಬಿಜೆಪಿ ಪಕ್ಷವಾಗಲಿ ಮಂಡಿಸಿದರೆ ಆಗ ವಿಧಾನಸಭೆಯ ವಿಶೇಷ ಅಧಿವೇಶನವನ್ನು ಕರೆಯಲು ರಾಜ್ಯಪಾಲರು ನಿರ್ಧರಿಸಬಹುದು. ವಿಧಾನಸಭೆಯ ವಿಶೇಷ ಅಧಿವೇಶನ ಕರೆದು ಅವಿಶ್ವಾಸ ನಿರ್ಣಯದ ಮೇಲೆ ಪರ -ವಿರೋಧ ಚರ್ಚೆ ನಡೆದು ವೋಟಿಂಗ್ ನಡೆಯಲಿದೆ.
ಇದನ್ನೂ ಓದಿ: Maharashtra Crisis: ಮಹಾರಾಷ್ಟ್ರ ರಾಜಕೀಯ ಹೈಡ್ರಾಮಾ; ಹೋಟೆಲ್ನಿಂದ ನ್ಯಾಯಾಲಯದ ಮೆಟ್ಟಿಲೇರಿದ ಅತೃಪ್ತ ಶಾಸಕರು
ಆದರೆ, ಈಗ ಶಿವಸೇನೆಯ ಏಕನಾಥ್ ಶಿಂಧೆ ಬಣವೇ ಉದ್ಧವ್ ಠಾಕ್ರೆ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಯೋಚಿಸುತ್ತಿದೆಯಂತೆ. ಉದ್ದವ್ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾದಾಗ, ವಿಧಾನಸಭೆಯಲ್ಲಿ ಹಾಜರಿರುವ ಶಾಸಕರ ಪೈಕಿ ಶೇ.50ಕ್ಕಿಂತ ಹೆಚ್ಚಿನ ಶಾಸಕರು ಸರ್ಕಾರದ ಪರ ಇದ್ದರೆ ಆಗ ಉದ್ದವ್ ಠಾಕ್ರೆ ಸರ್ಕಾರ ಸೇಫ್. ಆದರೆ, ಹಾಜರಿರುವ ಶಾಸಕರ ಪೈಕಿ ಶೇ.50ಕ್ಕಿಂತ ಕಡಿಮೆ ಶಾಸಕರು ಸರ್ಕಾರದ ಪರ ಮತ ಚಲಾಯಿಸಿದರೆ ಸರ್ಕಾರ ಉರುಳಲಿದೆ. ಸಿಎಂ ಸ್ಥಾನಕ್ಕೆ ಉದ್ದವ್ ಠಾಕ್ರೆ ರಾಜೀನಾಮೆ ನೀಡಬೇಕಾಗುತ್ತದೆ.
ಈಗ ಸಿಕ್ಕಿರುವ ಮಾಹಿತಿ ಪ್ರಕಾರ, ಏಕನಾಥ್ ಶಿಂಧೆ ಬಣ ಸಿಎಂ ಉದ್ದವ್ ಠಾಕ್ರೆ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ಸಾಧ್ಯತೆ ಇದೆ. ಅವಿಶ್ವಾಸ ನಿರ್ಣಯ ಮಂಡನೆಯಾದಾಗ, ಶಿಂಧೆ ಬಣದ ಶಾಸಕರು ಗುವಾಹಟಿಯಿಂದ ಮುಂಬೈಗೆ ಬಂದು ವಿಧಾನಸಭೆ ಅಧಿವೇಶನದಲ್ಲಿ ಭಾಗವಹಿಸಿ, ಸರ್ಕಾರದ ವಿರುದ್ಧ ಮತ ಚಲಾಯಿಸಿದರೆ ಉದ್ದವ್ ಠಾಕ್ರೆ ಸರ್ಕಾರ ಪತನವಾಗಲಿದೆ.
ಇದನ್ನೂ ಓದಿ: Maharashtra Crisis: ಮಹಾರಾಷ್ಟ್ರದ ಬಂಡಾಯ ಸಚಿವರ ಖಾತೆಗಳನ್ನು ಬೇರೆ ಸಚಿವರಿಗೆ ಹಸ್ತಾಂತರಿಸಿದ ಸಿಎಂ ಉದ್ಧವ್ ಠಾಕ್ರೆ
ವಾಸ್ತವವಾಗಿ ಸಿಎಂ ಉದ್ದವ್ ಠಾಕ್ರೆ ತಮ್ಮದೇ ಪಕ್ಷದ ಶಾಸಕರು ಬಂಡಾಯ ಎದ್ದು ಸೂರತ್, ಗುವಾಹಟಿಗೆ ಹೋದಾಗಲೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದರಂತೆ. ಆದರೆ, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡದಂತೆ ತಡೆದಿದ್ದಾರೆ. ಸರ್ಕಾರಕ್ಕೆ ಬಹುಮತ ಇಲ್ಲ ಎಂಬುದು ಸದನದಲ್ಲೇ ಸಾಬೀತಾಗಲಿ. ಅಲ್ಲಿಯವರೆಗೂ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದು ಬೇಡ ಎಂದಿದ್ದಾರೆ. ಹೀಗಾಗಿ ಉದ್ದವ್ ಠಾಕ್ರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡದೆ ಬಂಡುಕೋರ ಶಾಸಕರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಜೊತೆಗೆ ಬಂಡಾಯ ಶಾಸಕರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಡೆಪ್ಯುಟಿ ಸ್ಪೀಕರ್ ಗೆ ದೂರು ನೀಡಿ ಕಾನೂನಿನ ಸಂಕಷ್ಟಕ್ಕೆ ಸಿಲುಕಿಸಲು ಯತ್ನಿಸಿದ್ದಾರೆ. ಈಗ ಸುಪ್ರೀಂಕೋರ್ಟ್ ಜುಲೈ 12ರವರೆಗೂ ಶಿಂಧೆ ಬಣದ ಶಾಸಕರಿಗೆ ಡೆಪ್ಯುಟಿ ಸ್ಪೀಕರ್ ಅವರ ನೋಟೀಸ್ ಗೆ ಉತ್ತರಿಸಲು ಕಾಲಾವಕಾಶ ನೀಡಿದೆ. ಜುಲೈ 11ರಂದು ಸುಪ್ರೀಂಕೋರ್ಟ್ ಮತ್ತೆ ವಿಚಾರಣೆ ನಡೆಸಲಿದ್ದು, ನೀಡುವ ಆದೇಶ ಕುತೂಹಲ ಕೆರಳಿಸಿದೆ.