ಕಳೆದು ಹೋದ ಬ್ಯಾಗ್​​ ವಾಪಸ್​ ಪಡೆಯಲು ಇಂಡಿಗೋ ಏರ್​​ಲೈನ್ಸ್​​ನ ವೆಬ್​​ಸೈಟ್ ಹ್ಯಾಕ್​ ಮಾಡಿದೆ ಎಂದ ಬೆಂಗಳೂರು ಮೂಲದ ಪ್ರಯಾಣಿಕ !

| Updated By: Lakshmi Hegde

Updated on: Mar 31, 2022 | 7:55 AM

ನಮ್ಮ ವೆಬ್​ಸೈಟ್ ಹ್ಯಾಕ್​ ಆಗಿಲ್ಲ. ಸೈಬರ್ ಭದ್ರತೆ ವಿಷಯದಲ್ಲಿ ನಾವು ಯಾವುದೇ ರಾಜಿಯನ್ನೂ ಮಾಡಿಕೊಂಡಿಲ್ಲ. ನಮ್ಮಲ್ಲಿ ಐಟಿ ಪ್ರಕ್ರಿಯೆಗಳು ತುಂಬ ದೃಢವಾಗಿದ್ದು, ಹ್ಯಾಕ್​ ಮಾಡುವುದು ಸುಲಭವಲ್ಲ ಎಂದು ಇಂಡಿಗೋ ತಿಳಿಸಿದೆ.

ಕಳೆದು ಹೋದ ಬ್ಯಾಗ್​​ ವಾಪಸ್​ ಪಡೆಯಲು ಇಂಡಿಗೋ ಏರ್​​ಲೈನ್ಸ್​​ನ ವೆಬ್​​ಸೈಟ್ ಹ್ಯಾಕ್​ ಮಾಡಿದೆ ಎಂದ ಬೆಂಗಳೂರು ಮೂಲದ ಪ್ರಯಾಣಿಕ !
ಇಂಡಿಗೋ (ಪ್ರಾತಿನಿಧಿಕ ಚಿತ್ರ)
Follow us on

ಇಂಡಿಗೋ ವಿಮಾನದಲ್ಲಿ (IndiGo Airline) ಪ್ರಯಾಣ ಮಾಡಿದ್ದ ಬೆಂಗಳೂರು ಮೂಲದ ಪ್ರಯಾಣಿಕನೊಬ್ಬ ಇಂಡಿಗೋ ಸಂಸ್ಥೆಯ ವೆಬ್​ಸೈಟ್​​ನ್ನೇ ಹ್ಯಾಕ್​ ಮಾಡಿದ ಘಟನೆ ನಡೆದಿದೆ. ಪ್ರಯಾಣಿಕನ ಹೆಸರು ನಂದನ್​ ಕುಮಾರ್​ ಎಂದಾಗಿದ್ದು, ತಾನು ಹ್ಯಾಕ್​ ಮಾಡಿದ್ದು ಯಾಕೆ ಮತ್ತು ಹೇಗೆ ಎಂಬುದನ್ನು ಸರಣಿ ಟ್ವೀಟ್​ ಮೂಲಕ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಇಂಡಿಗೋ ವೆಬ್​ಸೈಟ್​​​ನಲ್ಲಿ ಎಷ್ಟು ಸುಲಭವಾಗಿ ತನಗೆ ಬೇಕಾದ ಸೂಕ್ಷ್ಮ ಮಾಹಿತಿಗಳನ್ನು ಪಡೆದೆ ಎಂದು ಹೇಳಿರುವ ನಂದನ್​ ಕುಮಾರ್​, ಏರ್​ಲೈನ್ಸ್​ ಅದನ್ನು ಸರಿಪಡಿಸಿಕೊಳ್ಳಬೇಕು. ಇನ್ನಷ್ಟು ಭದ್ರಪಡಿಸಬೇಕು ಎಂಬ ಸಲಹೆಯನ್ನೂ ನೀಡಿದ್ದಾರೆ. ಅಷ್ಟಕ್ಕೂ ನಂದನ್​ ಕುಮಾರ್​ ವೆಬ್​​ಸೈಟ್ ಹ್ಯಾಕ್​ ಮಾಡಲು ಕಾರಣ ಬ್ಯಾಗ್​ ಕಳೆದುಕೊಂಡಿದ್ದು. ನಂದನ್​ ಬ್ಯಾಗ್​​ ಅವರ ಸಹಪ್ರಯಾಣಿಕರೊಟ್ಟಿಗೆ ಹೋಗಿತ್ತು. ಇದು ಕಣ್ತಪ್ಪಿನಿಂದ ಆದ ಎಡವಟ್ಟಾಗಿತ್ತು. ಆದರೆ ಬ್ಯಾಗ್​​ನ್ನು ಪಡೆಯಲು ಇಂಡಿಗೋ ಕೊಟ್ಟ ಸಹಕಾರ ಸೂಕ್ತವಾಗಿರಲಿಲ್ಲ. ನನ್ನ ಬ್ಯಾಗ್​ನಲ್ಲಿ ಅನೇಕ ಮಹತ್ವದ ವಸ್ತುಗಳು ಇದ್ದುದರಿಂದ ಅದನ್ನು ಪಡೆಯಲೇಬೇಕಾಗಿತ್ತು. ಹೀಗಾಗಿ ಇಂಡಿಗೋ ವೆಬ್​ಸೈಟ್​ ಹ್ಯಾಕ್​ ಮಾಡುವ ಮೂಲಕ ಸಹ ಪ್ರಯಾಣಿಕನ ಫೋನ್​​ ನಂಬರ್ ಪಡೆದೆ ಎಂದು ನಂದನ್​ ಹೇಳಿದ್ದಾರೆ.

ಘಟನೆ ಬಗ್ಗೆ ಮಾಹಿತಿ ನೀಡಿದ ನಂದನ್​ ಕುಮಾರ್​, ‘ನಾನು ಪಾಟ್ನಾದಿಂದ ಬೆಂಗಳೂರಿಗೆ ಇಂಡಿಗೋ 6ಇ-185  ಎಂಬ ಫ್ಲೈಟ್​​ನಲ್ಲಿ ಮಾರ್ಚ್​ 27ರಂದು ಪ್ರಯಾಣ ಮಾಡಿದೆ. ಆದರೆ ಬೆಂಗಳೂರಿನಲ್ಲಿ ಇಳಿದಾಗ ನನ್ನ ಬ್ಯಾಗ್​ ಕಳೆದು ಹೋಗಿತ್ತು.  ಅದನ್ನು ಕಣ್ತಪ್ಪಿನಿಂದ ನನ್ನೊಂದಿಗೇ ಪ್ರಯಾಣ ಮಾಡಿದ್ದವ ತೆಗೆದುಕೊಂಡು ಹೋಗಿದ್ದು ನನಗೆ ಗೊತ್ತಾಯಿತು. ನನ್ನ ಮತ್ತು ಅವನ ಬ್ಯಾಗ್​​ ಒಂದೇ ತರ ಇದ್ದುದರಿಂದ ಈ ಪ್ರಮಾದ ಆಗಿತ್ತು. ನನಗೆ ನನ್ನ ಬ್ಯಾಗ್​ ಬೇಕಾಗಿತ್ತು. ಹೀಗಾಗಿ ಇಂಡಿಗೋ ಕಸ್ಟಮರ್​ ಕೇರ್​​ಗೆ ಕರೆ ಮಾಡಲು ಪ್ರಯತ್ನ ಪಟ್ಟೆ. ತುಂಬ ಸಲ ಫೋನ್​ ಮಾಡಿದ ಬಳಿಕ ಕನೆಕ್ಟ್​ ಆಯಿತು. ನಂತರ ಏರ್​​ಲೈನ್​ ಸಂಸ್ಥೆಯ ಇಂಟರಾಕ್ಟಿವ್​ ವೈಸ್​ ರೆಸ್ಪಾನ್ಸ್​ (IVR) ಮೂಲಕ ನ್ಯಾವಿಗೇಟ್​ ಮಾಡಲೂ ಸಾಧ್ಯವಾಯಿತು. ಆದರೆ ನನ್ನೊಂದಿಗೆ ಪ್ರಯಾಣ ಮಾಡಿದ್ದವನನ್ನು ಕನೆಕ್ಟ್ ಮಾಡಲು ಇಂಡಿಗೋ ಕಸ್ಟಮರ್​ ಕೇರ್​ ಎಷ್ಟೇ ಪ್ರಯತ್ನ ಪಟ್ಟರೂ ಸಾಧ್ಯವಾಗಲಿಲ್ಲ. ಆಗ ನಾನು, ಐವಿಆರ್ ಮೂಲಕ ಸಂಪರ್ಕ ಸಾಧ್ಯವಾಗುತ್ತಿಲ್ಲ. ಹೀಗಾಗಿ ನನಗೆ ಆತನ ಫೋನ್​ ನಂಬರ್​ ಕೊಡಿ, ನಾನೇ ಸಂಪರ್ಕ ಮಾಡುತ್ತೇನೆ ಎಂದು ಹೇಳಿದೆ. ಆದರೆ ಇಂಡಿಗೋ ಅದಕ್ಕೆ ಸಿದ್ಧ ಇರಲಿಲ್ಲ. ಇನ್ನೊಬ್ಬರ ಫೋನ್​ ನಂಬರ್​ ಕೊಡಲು ಸಾಧ್ಯವಿಲ್ಲ, ಅದು ಸುರಕ್ಷತಾ ನಿಯಮಗಳಿಗೆ ವಿರುದ್ಧ ಎಂದು ಹೇಳಿದರು’.

ನಿಮ್ಮ ಬ್ಯಾಗ್ ತೆಗೆದುಕೊಂಡು ಹೋದವರ ಸಂಪರ್ಕಕ್ಕೆ ನಿರಂತರವಾಗಿ ಪ್ರಯತ್ನ ಮಾಡುತ್ತಿರುತ್ತೇವೆ. ಅವರ ಕಾಲ್​ ಕನೆಕ್ಟ್​ ಆದ ತಕ್ಷಣ ನಿಮಗೆ ಕಾಲ್​ ಮಾಡುತ್ತೇವೆ ಎಂದು ಏರ್​ಲೈನ್ಸ್​​ನವರು ಹೇಳಿದ್ದರು. ಆದರೆ ಎಷ್ಟು ದಿನ ಕಳೆದರೂ ನನಗೆ ಕರೆ ಬರಲಿಲ್ಲ. ಆಗ ನಾನು ಇಂಡಿಗೋ ವೆಬ್​ಸೈಟ್​ಗೆ ಹೋಗಿ, ಅಲ್ಲಿ ನನ್ನ ಸಹ ಪ್ರಯಾಣಿಕನ ಪಿಎನ್​ಆರ್  ಹಾಕಿದೆ. ಅಂದರೆ ಅವರು ಬಿಟ್ಟು ಹೋಗಿದ್ದ ಬ್ಯಾಗ್​​ನ ಟ್ಯಾಗ್​ ಮೇಲೆ ಹೆಸರು ಇದ್ದಿದ್ದನ್ನು ನೋಡಿಕೊಂಡಿದ್ದೆ. ಆ ಪಿಎನ್​​ಆರ್​ ಹಾಕಿದ ನಂತರವೂ ಹಲವು ರೀತಿಯ ಪ್ರಯತ್ನ ಮಾಡಿದೆ. ಆದರೆ ಪ್ರಯಾಣಿಕನ ಫೋನ್​ ನಂಬರ್ ಸಿಗಲಿಲ್ಲ.  ಅದಾದ ನಂತರ ನಾನು ಎಫ್​ 12 ಬಟನ್​ ಪ್ರೆಸ್ ಮಾಡುವ ಮೂಲಕ ವೆಬ್​ಸೈಟ್​ನ developer console ಓಪನ್​ ಮಾಡಿ ಪ್ರಯಾಣಿಕನ ಫೋನ್​ನಂಬರ್​, ವಿವರಗಳನ್ನೆಲ್ಲ ತೆಗೆದುಕೊಂಡೆ ಎಂದು ನಂದನ್​ ಕುಮಾರ್​ ತಿಳಿಸಿದ್ದಾರೆ.

ಇಂಡಿಗೋ ಹೇಳಿದ್ದೇನು?

ನಮ್ಮ ವೆಬ್​ಸೈಟ್ ಹ್ಯಾಕ್​ ಆಗಿಲ್ಲ. ಸೈಬರ್ ಭದ್ರತೆ ವಿಷಯದಲ್ಲಿ ನಾವು ಯಾವುದೇ ರಾಜಿಯನ್ನೂ ಮಾಡಿಕೊಂಡಿಲ್ಲ. ನಮ್ಮಲ್ಲಿ ಐಟಿ ಪ್ರಕ್ರಿಯೆಗಳು ತುಂಬ ದೃಢವಾಗಿದ್ದು, ಹ್ಯಾಕ್​ ಮಾಡುವುದು ಸುಲಭವಲ್ಲ. ಪಿಎನ್​ಆರ್​, ಕೊನೇ ಹೆಸರು, ಸಂಪರ್ಕ ಸಂಖ್ಯೆ ಅಥವಾ ಇಮೇಲ್​ ವಿಳಾಸ ಬಳಸಿಕೊಂಡು ಯಾವುದೇ ಪ್ರಯಾಣಿಕರೂ ವೆಬ್​ಸೈಟ್​ನಿಂದ ಅವರ ಬುಕ್ಕಿಂಗ್​ ವಿವರಗಳನ್ನು ಪಡೆದುಕೊಳ್ಳಬಹುದಾಗಿರುತ್ತದೆ. ಜಾಗತಿಕವಾಗಿ ಎಲ್ಲ ವಿಮಾನಯಾನ ಸಂಸ್ಥೆಗಳಲ್ಲೂ ಈ ವ್ಯವಸ್ಥೆ ಇದ್ದೇ ಇರುತ್ತದೆ ಎಂದು ಹೇಳಿಕೊಂಡಿದೆ.

ಇದನ್ನೂ ಓದಿ: ಸಾರಿ ಕೇಳುವುದರಿಂದ ನಮ್ಮ ವ್ಯಕ್ತಿತ್ವ ಕಡಿಮೆಯಾಗುತ್ತಾ..! ಹಾಗಾದ್ರೆ ಈ ವಿಡಿಯೋ ನೋಡಿ

Published On - 7:33 am, Thu, 31 March 22