Mohan Bhagwat: ಪುರುಷರಿಗಿಂತಲೂ ಮಹಿಳೆಯರ ಸಾಮರ್ಥ್ಯ ದೊಡ್ಡದು, ಅವರ ಪಾಡಿಗೆ ಅವರನ್ನು ಬಿಡಿ; ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್
Gender Equality: ಮನೆಗಳಲ್ಲಿ ಅವರನ್ನು ಗುಲಾಮರಂತೆ ಶೋಷಿಸುತ್ತೇವೆ. ಮಹಿಳೆಯರ ಸಬಲೀಕರಣವು ನಮ್ಮ ಮನೆಗಳಲ್ಲಿ ಆರಂಭವಾಗಬೇಕಿದೆ ಎಂದು ಕಿವಿಮಾತು ಹೇಳಿದರು.
ನಾಗಪುರ: ಪುರುಷ ಮತ್ತು ಮಹಿಳೆಯರ ನಡುವೆ ದೈಹಿಕ ವ್ಯತ್ಯಾಸಗಳು ಬಿಟ್ಟರೆ ಉಳಿದೆಲ್ಲ ರೀತಿಯಲ್ಲಿ ಅವರು ಸಮಾನರು. ಅವರಿಬ್ಬರಿಗೂ ಸಮಾನ ಸಾಮರ್ಥ್ಯಗಳು ಇವೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (Rashtriya Swayamsevak Sangh – RSS) ಸರಕಾರ್ಯವಾಹ ಮೋಹನ್ ಭಾಗವತ್ (Mohan Bhagwat) ಹೇಳಿದರು. ಸಂಘ ಪರಿವಾರದ ಅಂಗಸಂಸ್ಥೆಯಾಗಿರುವ ರಾಷ್ಟ್ರ ಸೇವಿಕಾ ಸಮಿತಿ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಮಹಿಳೆಯರನ್ನು ‘ಜಗಜ್ಜನನಿ’ (ವಿಶ್ವದ ತಾಯಿ) ಎಂದು ನಾವು ಗೌರಿಸುತ್ತೇವೆ. ಆದರೆ ಮನೆಗಳಲ್ಲಿ ಅವರನ್ನು ಗುಲಾಮರಂತೆ ಶೋಷಿಸುತ್ತೇವೆ. ಮಹಿಳೆಯರ ಸಬಲೀಕರಣವು ನಮ್ಮ ಮನೆಗಳಲ್ಲಿ ಆರಂಭವಾಗಬೇಕಿದೆ. ಸಮಾಜದಲ್ಲಿ ಮಹಿಳೆಯರಿಗೆ ತಕ್ಕ ಸ್ಥಾನಮಾನ ನೀಡಿ ಗೌರವಿಸಬೇಕಿದೆ ಎಂದು ಕಿವಿಮಾತು ಹೇಳಿದರು.
ಮಹಿಳೆಯರನ್ನು ಉದ್ಧಾರ ಮಾಡುತ್ತೇವೆ ಎನ್ನುವ ಮನಸ್ಥಿತಿಯಿಂದ ಪುರುಷರು ಏನೂ ಮಾಡಬೇಕಿಲ್ಲ. ಅದು ಅವರ ಸಾಮರ್ಥ್ಯಕ್ಕೆ ಮೀರಿದ್ದು. ಏಕೆಂದರೆ ಮಹಿಳೆಯರು ಪುರುಷರಿಗಿಂತಲೂ ಹೆಚ್ಚಿನ ಕಾರ್ಯಕ್ಷಮತೆ ಹೊಂದಿದ್ದಾರೆ. ಅವರ ಇಷ್ಟದ ಹಾದಿಯನ್ನು ಆರಿಸಿಕೊಳ್ಳಲು ಮತ್ತು ಅದರಲ್ಲಿ ಮುಂದುವರಿಯಲು ಮಹಿಳೆಯರಿಗೆ ಅವಕಾಶ ಮಾಡಿಕೊಟ್ಟರೆ ಸಾಕು ಎಂದು ಅವರು ಕರೆ ನೀಡಿದರು. ಅವರನ್ನು ಬಹುಕಾಲದಿಂದ ಬಂಧಿಸಿಟ್ಟಿದ್ದೇವೆ. ಈಗಲಾದರೂ ಅವರಿಗೆ ಬಲ ತುಂಬೋಣ. ಪುರುಷ ಪ್ರಾಧಾನ್ಯ ಚಿಂತನೆಯನ್ನು ಬದಿಗಿಟ್ಟು ಮಹಿಳೆಯರನ್ನು ಗೌರವಿಸುವುದನ್ನು ನಾವು ರೂಢಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.
‘ಅಖಿಲ ಭಾರತೀಯ ಮಹಿಳಾ ಚೈತ್ರ ಕೋಶ – ಮೊದಲ ಸಂಪುಟ’ (Akhil Bharatiya Mahila Charitra Kosh First Volume – Ancient India) ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಮಹಿಳೆಯರಿಗಿಂತಲೂ ಪುರುಷರೇ ಶ್ರೇಷ್ಠ ಎನ್ನಲು ಯಾವುದೇ ಆಧಾರವಿಲ್ಲ. ಈ ಬಗ್ಗೆ ಚರ್ಚಿಸುವುದೂ ಅಗತ್ಯವಿಲ್ಲ. ಮಹಿಳೆಯರು ಮತ್ತು ಪುರುಷರು ಸಮಾಜವೆಂಬ ರಥದ ಎರಡು ಚಕ್ರಗಳು ಎಂದರು. ಭಾರತವು ಮತ್ತೊಮ್ಮೆ ‘ವಿಶ್ವಗುರು’ ಆಗಬೇಕು ಎನ್ನುವ ಆಶಯ ಈಡೇರಲು ಮಹಿಳೆಯರ ಪಾತ್ರ ಬಹುದೊಡ್ಡದು. ನಾವು ಮಹಿಳೆಯರ ಸಮಾನ ಪಾಲ್ಗೊಳ್ಳುವಿಕೆಯ ಮೂಲಕ ಭಾರತವನ್ನು ‘ವಿಶ್ವಗುರು’ ಆಗಿಸಬೇಕು. ಎಲ್ಲರ ಹಿನ್ನೆಲೆ ಮತ್ತು ಬದುಕುತ್ತಿರುವ ರೀತಿ ಬೇರೆ. ನಮ್ಮ ಸಮಸ್ಯೆಗಳು ಮತ್ತು ಪರಿಹಾರಗಳೂ ಭಿನ್ನವಾಗಿವೆ ಎಂದು ಅಭಿಪ್ರಾಯಪಟ್ಟರು.
ಮಹಿಳೆಯರ ಬಗೆಗಿನ ದೃಷ್ಟಿಕೋನವು ಕಾಲಕ್ಕೆ ತಕ್ಕಂತೆ ನಿಧಾನವಾಗಿ ಬದಲಾಗುತ್ತಿದೆ. ಆದರೆ ಇದರ ವೇಗ ಹೆಚ್ಚಾಗಬೇಕಿದೆ. ಸ್ಥಳೀಯ ಸ್ವಯಮಾಡಳಿತ ಸಂಸ್ಥೆಗಳಲ್ಲಿ ಶೇ 30ರಷ್ಟು ಮೀಸಲಾತಿ ಕೊಡುವ ವಿಚಾರದ ಬಗ್ಗೆ ಆಕ್ಷೇಪಗಳಿವೆ. ಆದರೆ ಕಾಲಕ್ರಮೇಣ ಎಲ್ಲವೂ ಮಹಿಳೆಯರ ಪರವಾಗಿ ಬದಲಾಗುತ್ತಿವೆ ಎಂದು ಹೇಳಿದರು.
ಮೌಲ್ಯಗಳು, ಮದುವೆ ಮತ್ತು ಮಹಿಳೆಯರ ಸ್ವಾತಂತ್ರ್ಯವನ್ನು ಟೀಕಿಸುತ್ತಿದ್ದವರು ಇಂದು ಭಾರತದ ಕೌಟುಂಬಿಕ ವ್ಯವಸ್ಥೆಯ ಬಗ್ಗೆ ಸಂಶೋಧನೆ ಮಾಡುತ್ತಿದ್ದಾರೆ. ನಾವು ಸಾವಿರಾರು ವರ್ಷಗಳಿಂದ ಏನು ಹೇಳುತ್ತಿದ್ದೇವೆಯೋ ಅದರ ಬಗ್ಗೆ ಅವರು ಈಗ ಮಾತನಾಡುತ್ತಿದ್ದಾರೆ. ಮನೆಗಳಲ್ಲಿ ಮಹಿಳೆಯರನ್ನು ನಾವು ಹೇಗೆ ನಡೆಸಿಕೊಳ್ಳುತ್ತಿದ್ದೇವೆ, ಅವರಿಗೆ ಸೂಕ್ತ ಸ್ಥಾನಮಾನ ಸಿಕ್ಕಿದೆಯೇ ಎನ್ನುವ ಬಗ್ಗೆ ವಿಮರ್ಶಿಸಿಕೊಳ್ಳಲು ಇದು ಸಕಾಲ ಎಂದು ಅಭಿಪ್ರಾಯಪಟ್ಟರು.
Published On - 7:36 am, Fri, 19 August 22