ಮಂಕಿಪಾಕ್ಸ್
Image Credit source: India.com
ತಿರುವನಂತಪುರಂ: ಜಗತ್ತಿನಾದ್ಯಂತ ಮಂಕಿಪಾಕ್ಸ್ (Monkeypox) ಸೋಂಕು ಭಾರೀ ಆತಂಕ ಮೂಡಿಸಿದೆ. ಭಾರತದಲ್ಲೂ ಮಂಕಿಪಾಕ್ಸ್ ಪ್ರಕರಣಗಳು ಹೆಚ್ಚುತ್ತಲೇ ಇದೆ. ಕೇರಳದಲ್ಲಿ 7 ವರ್ಷದ ಬಾಲಕನಿಗೆ ಮಂಕಿಪಾಕ್ಸ್ ಸೋಂಕು ಪತ್ತೆಯಾಗಿದೆ. ಆತನನ್ನು ಕೇರಳದ ಕಣ್ಣೂರು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಾಲಕ ಇಂಗ್ಲೆಂಡ್ನಿಂದ ಅಪ್ಪ-ಅಮ್ಮನ ಜೊತೆ ವಾಪಾಸ್ ಬಂದಿದ್ದ. ಆತನಿಗೆ ಮಂಕಿಪಾಕ್ಸ್ ಸಾಂಕ್ರಾಮಿಕ ರೋಗದ ಲಕ್ಷಣಗಳಿತ್ತು. ಅವರ ಮಾದರಿಗಳನ್ನು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಕಳುಹಿಸಲಾಗಿದೆ. ಬಾಲಕನನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾದ ಪ್ರತ್ಯೇಕ ಕೊಠಡಿಯಲ್ಲಿ ಚಿಕಿತ್ಸೆ ನೀಡಲಾಗಿದೆ. ಇಲ್ಲಿಯವರೆಗೆ ಭಾರತದಲ್ಲಿ 9 ಮಂಕಿಪಾಕ್ಸ್ ಪ್ರಕರಣಗಳು ಮತ್ತು ಒಂದು ಸಾವು ವರದಿಯಾಗಿದೆ.
- ಮಂಕಿಪಾಕ್ಸ್ನ ಒಟ್ಟು 9 ಪ್ರಕರಣಗಳಲ್ಲಿ 4 ಪ್ರಕರಣಗಳು ದೆಹಲಿಯಿಂದ ಬಂದಿದ್ದು, ಉಳಿದ 5 ಕೇರಳದಿಂದ ವರದಿಯಾಗಿದೆ.
- ಐಸಿಎಂಆರ್‌ನಿಂದ ಭಾರತದ ಮೊದಲ 2 ಮಂಕಿಪಾಕ್ಸ್ ಪ್ರಕರಣಗಳು ಯುಎಇಯಿಂದ ಹಿಂದಿರುಗಿದ ಜೋಡಿಯು ಮಂಕಿಪಾಕ್ಸ್ ವೈರಸ್ ಸ್ಟ್ರೈನ್ ಎ.2 ಸೋಂಕಿಗೆ ಒಳಗಾಗಿದೆ ಎಂದು ಪತ್ತೆಯಾಗಿತ್ತು.
- ಕಳೆದ ವರ್ಷ ಅಮೆರಿಕಾದಲ್ಲಿ ಪತ್ತೆಯಾದ ಎ.2 ರೂಪಾಂತರಿ ಇದೀಗ ಎಲ್ಲ ದೇಶಗಳಿಗೂ ಹರಡುತ್ತಿದೆ. ಪ್ರಸ್ತುತ ಏಕಾಏಕಿ ಮಂಕಿಪಾಕ್ಸ್ ವೈರಸ್‌ನ ಬಿ.1 ಸ್ಟ್ರೈನ್‌ನಿಂದ ನಡೆಸುತ್ತಿದೆ ಎಂದು ರಾಷ್ಟ್ರೀಯ ವೈರಾಲಜಿ ಸಂಸ್ಥೆ (ಎನ್‌ಐವಿ)ಯ ಹಿರಿಯ ವಿಜ್ಞಾನಿ ಡಾ. ಪ್ರಜ್ಞಾ ಯಾದವ್ ಹೇಳಿದ್ದಾರೆ.
- ಬಿಹಾರ ಮತ್ತು ಗುಜರಾತ್‌ನಲ್ಲಿ ಮಂಕಿಪಾಕ್ಸ್‌ಗೆ ತುತ್ತಾದ ಶಂಕಿತ ರೋಗಿಗಳಿಗೆ ಇದೀಗ ಮಂಕಿಪಾಕ್ಸ್ ವೈರಸ್ ನೆಗೆಟಿವ್ ದೃಢಪಟ್ಟಿದೆ.
- ಈ ತಿಂಗಳ ಆರಂಭದಲ್ಲಿ, ಕೇಂದ್ರ ಆರೋಗ್ಯ ಸಚಿವಾಲಯವು ರೋಗವನ್ನು ತಡೆಗಟ್ಟಲು ಮಾಡಬೇಕಾದ ಮತ್ತು ಮಾಡಬಾರದ ಪಟ್ಟಿಯನ್ನು ಬಿಡುಗಡೆ ಮಾಡಿತ್ತು.
- ಮಂಕಿಪಾಕ್ಸ್ ಸೋಂಕಿತ ವ್ಯಕ್ತಿಯನ್ನು ಇತರರಿಂದ ದೂರವಿಡಲು ಆರೋಗ್ಯ ಸಚಿವಾಲಯ ಸಲಹೆ ನೀಡಿತ್ತು. ಇದರಿಂದ ರೋಗ ಹರಡುವುದಿಲ್ಲ, ಹ್ಯಾಂಡ್ ಸ್ಯಾನಿಟೈಸರ್ ಬಳಕೆ, ಸೋಪು ಮತ್ತು ನೀರಿನಿಂದ ಕೈಗಳನ್ನು ತೊಳೆಯುವುದು, ಮಾಸ್ಕ್‌ಗಳಿಂದ ಬಾಯಿಯನ್ನು ಮುಚ್ಚಿಕೊಳ್ಳುವುದು ಮತ್ತು ಹ್ಯಾಂಡ್ ಗ್ಲೌಸ್ಗಳನ್ನು ಹಾಕಿಕೊಳ್ಳುವುದು ಮತ್ತು ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸಲು ಸೋಂಕುನಿವಾರಕಗಳನ್ನು ಬಳಸಲು ಸೂಚಿಸಲಾಗಿತ್ತು.
- ಮಂಕಿಪಾಕ್ಸ್ ಸೋಂಕಿಗೆ ಒಳಗಾದ ಜನರೊಂದಿಗೆ ಲಿನಿನ್, ಹಾಸಿಗೆಗಳು, ಬಟ್ಟೆಗಳು, ಟವೆಲ್‌ಗಳನ್ನು ಹಂಚಿಕೊಳ್ಳಬಾರದು. ರೋಗಿಗಳು ಮತ್ತು ಸೋಂಕಿತರಲ್ಲದವರ ಮಣ್ಣಾದ ಲಿನಿನ್ ಬಟ್ಟೆಗಳನ್ನು ಒಟ್ಟಿಗೆ ತೊಳೆಯಬಾರದು. ನಿಮಗೆ ರೋಗದ ಲಕ್ಷಣಗಳು ಇದ್ದರೆ ಸಾರ್ವಜನಿಕ ಕಾರ್ಯಕ್ರಮಗಳನ್ನು ತಪ್ಪಿಸಿ ಎಂದು ಸಚಿವಾಲಯ ಸಲಹೆ ನೀಡಿತ್ತು.
- ಮಂಕಿಪಾಕ್ಸ್ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಅಮೆರಿಕ ಸರ್ಕಾರವು ಗುರುವಾರ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಘೋಷಿಸಿದೆ.
- ಕರ್ನಾಟಕದಲ್ಲಿ ಇದುವರೆಗೆ ಮಂಕಿಪಾಕ್ಸ್ ಪ್ರಕರಣ ಕಂಡುಬಂದಿಲ್ಲ. ಅದಕ್ಕಾಗಿ ಆರಂಭದಿಂದಲೇ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಲಾಗುತ್ತಿದೆ. ಕೇರಳ-ಕರ್ನಾಟಕ ಗಡಿ ಭಾಗದ ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ನಿಗಾ ಇಡಲು ಸೂಚಿಸಲಾಗಿದೆ. ಯಾವುದೇ ವ್ಯಕ್ತಿಗೆ ಸೋಂಕು ದೃಢಪಟ್ಟರೆ ಅವರನ್ನು 21 ದಿನಗಳ ಕಾಲ ಐಸೋಲೇಟ್ ಮಾಡಬೇಕು ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಸ್ಪಷ್ಟಪಡಿಸಿದ್ದಾರೆ.
- ಮಂಕಿಪಾಕ್ಸ್ ಸೋಂಕಿನ ಆರಂಭದಲ್ಲಿ ಜ್ವರ, ಹಾಗೂ ಚರ್ಮದ ಮೇಲೆ ತುರಿಕೆಗಳು ಕಂಡು ದೊಡ್ಡ ಗುಳ್ಳೆಗಳಾಗುತ್ತವೆ. ಈ ಲಕ್ಷಣ ಇದ್ದವರನ್ನು ತಪಾಸಣೆ ಮಾಡಲಾಗುವುದು. ಮುಖ್ಯಮಂತ್ರಿಗಳ ಸೂಚನೆಯಂತೆ, ವಿಮಾನ ನಿಲ್ದಾಣಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಅನುಮಾನ ಬಂದರೆ ತಪಾಸಣೆ ಮಾಡಿ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ. ಸೋಂಕಿತರ ಜೊತೆ ದೀರ್ಘ ಕಾಲದ ಸಂಪರ್ಕ ಹೊಂದಿರುವವರಿಗೆ ಮಾತ್ರ ಇದು ಹರಡಲು ಸಾಧ್ಯವಿದೆ. ಇದು ಕೊವಿಡ್ ರೀತಿ ಹರಡುವ ಸಾಂಕ್ರಾಮಿಕ ರೋಗ ಇದಲ್ಲ ಎಂದು ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ