ಕೊವಿಡ್ 3ನೇ ಅಲೆ ಎದುರಿಸಲು ಮುಂಬೈ ಸಜ್ಜು, ಏನಿದರ ಗುಟ್ಟು?

Mumbai Covid Update: ಅದರಲ್ಲೂ ನಾನು ಇಷ್ಟು ಮುಕ್ತ ಮತ್ತು ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳಲು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರೇ ಕಾರಣ. ಕೊರೊನಾ ನಿಯಂತ್ರಣವೇ ನನ್ನ ಗುರಿಯಾಗಿಟ್ಟುಕೊಂಡು ಯಾವುದೇ ನಿರ್ಧಾರವನ್ನು ಕೈಗೊಳ್ಳಲು ಅವರು ನನಗೆ ಅವಕಾಶ ನೀಡಿದ್ದರು; ಇಕ್ಬಾಲ್ ಸಿಂಗ್

ಕೊವಿಡ್ 3ನೇ ಅಲೆ ಎದುರಿಸಲು ಮುಂಬೈ ಸಜ್ಜು, ಏನಿದರ ಗುಟ್ಟು?
ಬೃಹತ್ ಮುಂಬೈ ಮಹಾನಗರ ಪಾಲಿಕೆಯ ಕಮಿಶನರ್ ಇಕ್ಬಾಲ್ ಸಿಂಗ್
Follow us
guruganesh bhat
| Updated By: Skanda

Updated on: May 08, 2021 | 6:51 AM

ಮುಂಬೈ: ಕಳೆದ ಕೆಲ ದಿನಗಳ ಹಿಂದೆ ಮುಂಬೈ ಎಂದರೆ ದೇಶದ ಜನರು ಬೆಚ್ಚಿಬೀಳುತ್ತಿದ್ದರು. ಏಷ್ಯಾದ ಅತಿ ದೊಡ್ಡ ಸ್ಲಂನ್ನೂ ಹೊಂದಿರುವ ಮುಂಬೈನಲ್ಲಿ ಇತರ ನಗರಗಳಿಗಿಂತ ಅತ್ಯಂತ ತೀವ್ರಗತಿಯಲ್ಲಿ ಕೊವಿಡ್ ಹೆಚ್ಚಳವಾಗುತ್ತಿತ್ತು. ಆಸ್ಪತ್ರೆಗಳು ತುಂಬಿಹೋಗಿದ್ದವು. ಸೋಂಕಿತರು ರಸ್ತೆ ರಸ್ತೆಗಳಲ್ಲಿ ಬೆಡ್​ಗಾಗಿ ಹುಡುಕುತ್ತಿದ್ದರು. ಆದರೆ ಇಂದು ಮುಂಬೈ ಪರಿಸ್ಥಿತಿ ಬದಲಾಗಿದೆ. ಕೊವಿಡ್ ಸೋಂಕಿನ ನೆರಳಿನಿಂದ ದೇಶದ ವಾಣಿಜ್ಯ ರಾಜಧಾನಿ ಹೊರಬರುತ್ತಿದೆ. ಮುಂಬೈ ಮಾದರಿ ಅನುಸರಿಸಿ ಇತರ ರಾಜ್ಯಗಳಲ್ಲಿ ಸೋಂಕು ಕಡಿಮೆ ಮಾಡಬಹುದು ಎನ್ನುತ್ತಾರೆ ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೊರೇಶನ್​ನ ಕಮಿಶನರ್ ಇಕ್ಬಾಲ್ ಸಿಂಗ್. ಇದೇ ಮುಂಬೈ ಅನುಸರಿಸಲು ಸ್ವತಃ ಸುಪ್ರೀಂಕೋರ್ಟ್ ಸಹ ದೆಹಲಿ ಸರ್ಕಾರಕ್ಕೆ ಸೂಚನೆ ನೀಡಿದೆ ಎಂಬುದು ಗಮನಾರ್ಹ.

ಮುಂಬೈನಲ್ಲಿ ಏಪ್ರಿಲ್ ಮೊದಲ ವಾರದಲ್ಲಿ 8 ಸಾವಿರಕ್ಕೂ ಹೆಚ್ಚು ಕೊವಿಡ್ ಸೋಂಕಿತರು ಪತ್ತೆಯಾಗುತ್ತಿದ್ದರು. ಏಪ್ರಿಲ್ 4ರಂದು ಈ ಸಂಖ್ಯೆ ಹನ್ನೊಂದು ಸಾವಿರಕ್ಕೇರಿತ್ತು. ಆದರೆ ಮೇ ಮೊದಲ ವಾರದ ಹೊತ್ತಿಗೆ ಈ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿ ಮೂರು ಸಾವಿರದಲ್ಲಿದೆ. ಈ ಮುಂಬೈ ಮಾದರಿ ದೆಹಲಿ, ಬೆಂಗಳೂರಿನಂತಹ ನಗರಗಳಿಗೂ ಅನ್ವಯವಾಗಲಿ ಎಂದು ಸ್ವತಃ ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.

ದೆಹಲಿಯಲ್ಲೂ ಹೆಚ್ಚುತ್ತಿರುವ ಕೊರೊನಾಕ್ಕೆ ಅಂಕುಶ ಹಾಕಲು ದೆಹಲಿಯ ಅಧಿಕಾರಿಗಳು ಮುಂಬೈ ಕಮಿಶನರ್ ಇಕ್ಬಾಲ್ ಸಿಂಗ್​ರನ್ನು ಸಂಪರ್ಕಿಸಿದರೆ. ಇಕ್ಬಾಲ್ ಸಿಂಗ್ ಹೇಳುವುದು ಒಂದೇ, ‘ಯಾವುದೇ ಆಸ್ಪತ್ರೆಗಳಿಗೂ ಹೆಚ್ಚುವರಿ ಆಕ್ಸಿಜನ್ ಹಾಸಿಗೆ ಹೊಂದಿಸಿಕೊಳ್ಳುವಂತೆ ಒತ್ತಡ ಹಾಕಬೇಡಿ. ಆಕ್ಸಿಜನ್ ಪೂರೈಕೆಯೇ ಇಲ್ಲದೇ ಅವರಾದರೂ ಏನು ಮಾಡುತ್ತಾರೆ? ಲಭ್ಯವಿರುವ ಆಕ್ಸಿಜನ್​ನ್ನೇ ಅತ್ಯಂತ ಸಮರ್ಪಕವಾಗಿ ಬಳಕೆ ಮಾಡಬೇಕು ಎಂಬುದಷ್ಟೇ ಮುಂಬೈನಲ್ಲಿ ಆಕ್ಸಿಜನ್ ಸಮಸ್ಯೆ ಈಗ ಇತಿಹಾಸವಾಗಲು ಕಾರಣ. ಇರುವ ವ್ಯವಸ್ಥೆಯಲ್ಲೇ ಆಕ್ಸಿಜನ್ ಸಂಗ್ರಹ, ಪೂರೈಕೆ ಮತ್ತು ವಿತರಣೆ ಮಾಡಬೇಕು ಎನ್ನುತ್ತಾರೆ ಅವರು. ಜತೆಗೆ ಎರಡನೇ ಅಲೆ ಬರುವ ಮುನ್ನವೇ ಮುಂಬೈನಲ್ಲಿ ಅಚ್ಚುಕಟ್ಟಾದ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿತ್ತು ಎಂಬುದನ್ನು ಸಹ ಅವರು ಒತ್ತಿ ಹೇಳುತ್ತಾರೆ.

ಆಕ್ಸಿಜನ್ ಆಡಿಟ್ ಕಡ್ಡಾಯ ಮುಂಬೈ ಮಹಾನಗರದ ಎಲ್ಲ ಆಸ್ಪತ್ರೆಗಳಲ್ಲೂ ಆಕ್ಸಿಜನ್ ಆಡಿಟ್ ಕಡ್ಡಾಯ. ಯಾವುದೇ ರೋಗಿಯ ಆಕ್ಸಿಜನ್ ಸ್ಯಾಚುರೇಶನ್ ಮಟ್ಟ ಶೇ 94ಕ್ಕಿಂತ ಕಡಿಮೆ ಇರದಂತೆ ಅಗತ್ಯ ಕ್ರಮ ಕೈಗೊಂಡೆವು. ಬೇಕಾಬಿಟ್ಟಿ ಆಕ್ಸಿಜನ್ ಬಳಕೆ ಮಾಡುವಂತಿಲ್ಲ ಎಂಬ ನಿಯಮಗಳನ್ನು ರಾಜ್ಯ ಟಾಸ್ಕ್​ಫೋರ್ಸ್ ಜಾರಿಗೆ ತಂದಿತು. ಈ ಪದ್ಧತಿಯನ್ನು ಮುಂಬೈನ ಎಲ್ಲಾ 171 ಆಸ್ಪತ್ರೆಗಳಲ್ಲೂ ಕಡ್ಡಾಯವಾಗಿ ಅನುಸರಿಸಲಾಯಿತು ಎನ್ನುತ್ತಾರೆ ಅವರು.

ಎರಡನೇ ಅಲೆ ಬರುವ ಮುನ್ನವೇ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಂಖ್ಯೆಯನ್ನು ಸಾಧ್ಯವಾದಷ್ಟರ ಮಟ್ಟಿಗೆ ಹೆಚ್ಚಿಸಲಾಯಿತು. ಬೃಹತ್ ಕೊವಿಡ್ ಆಸ್ಪತ್ರೆಗಳನ್ನು ತೆರೆಯಲಾಯಿತು. ಹೆಚ್ಚು ಹೆಚ್ಚು ಪರೀಕ್ಷೆಗಳನ್ನು ನಡೆಸಲಾಯಿತು.  ಜನರಿಗೆ ಎಲ್ಲಿ ಹಾಸಿಗೆ ಲಭ್ಯವಿದೆ ಎಂದು ತಿಳಿಯಲು ಯಾವುದೇ ಸರ್ಕಸ್ ಮಾಡುವ ಅಗತ್ಯವೇ ಬೀಳಲಿಲ್ಲ. ಕೊವಿಡ್ ವಾರ್​ ರೂಂನ ಅಧಿಕಾರಿಗಳು ಜನಸಾಮಾನ್ಯರ ಒಡನಾಡಿಯಂತೆ ಕೆಲಸ ಮಾಡಿದರು ಎಂದು ಅವರು ಕೊವಿಡ್ ತಡೆದ ಮಾರ್ಗವನ್ನು ಹಂತ ಹಂತವಾಗಿ ವಿವರಿಸಿದರು.

ಅನಗತ್ಯ ಸಮಸ್ಯೆ ಸೃಷ್ಟಿ ಇಲ್ಲ ಹಿಂದೊಮ್ಮೆ ಕೇಂದ್ರ ಗೃಹ ಸಚಿವಾಲಯದಲ್ಲೂ ಕೆಲಸ ನಿರ್ವಹಿಸಿದ್ದ ಇಕ್ಬಾಲ್ ಸಿಂಗ್ ಮುಂಬೈನಲ್ಲಿ ಆಕ್ಸಿಜನ್ ಕೊರತೆ ಇಲ್ಲ ಎಂಬುದನ್ನು ಕೇಂದ್ರ ಸರ್ಕಾರಕ್ಕೆ ಮನದಟ್ಟು ಮಾಡಲು ದೆಹಲಿಗೆ ತೆರಳಿದ್ದರು. ಆಗ ಮುಂಬೈ ಮಾದರಿಯನ್ನು ಕೇಂದ್ರ ಸರ್ಕಾರದ ಅಧಿಕಾರಿಗಳಿಗೆ, ಸಚಿವರಿಗೆ ವಿವರಿಸಿದರು. ಆದರೆ ದೆಹಲಿ ವ್ಯಾಪ್ತಿಯಲ್ಲಿ ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರದ ನಡುವೆ ಹಗ್ಗಜಗ್ಗಾಟ ನಡೆಯುತ್ತಿರುವುದರಿಂದ ಆಕ್ಸಿಜನ್ ಕೊರತೆ ಉಂಟಾಗಿದೆ ಎಂದು ದೆಹಲಿಯ ಅಧಿಕಾರಿಗಳು ಉತ್ತರಿಸಿದರು. ಇಂತಹ ಅನಗತ್ಯ ಸೃಷ್ಟಿಸಿಕೊಳ್ಳುವ ತೊಂದರೆಗಳಿಗೆ ಇಕ್ಬಾಲ್ ಬಳಿಯೂ ಉತ್ತರವಿರಲಿಲ್ಲ.

ಮುಂಬೈಗೆ ಆಕ್ಸಿಜನ್ ಸಿಲಿಂಡರ್​ಗಳನ್ನು ಪೂರೈಸುತ್ತಿದ್ದ ಹಿಂದಿನ ಸ್ಥಳದಿಂದ ಆಕ್ಸಿಜನ್ ತಲುಪಲು ಹೆಚ್ಚಿನ ಸಮಯ ಅಗತ್ಯವಿತ್ತು. ಆದರೆ ಅದಕ್ಕಿಂತ ಹತ್ತಿರದ ರಿಲಾಯನ್ಸ್ ಇಂಡಸ್ಟ್ರಿಯಿಂದ ಆಕ್ಸಿಜನ್ ಸಿಲಿಂಡರ್ ಪೂರೈಕೆ ಮಾಡಿಕೊಳ್ಳಲಾಯಿತು. ಹೀಗಾಗಿ ನೂರಾರು ಸೋಂಕಿತರ ಪ್ರಾಣ ಉಳಿಯಿತು ಎಂದು ಅವರು ಕೇಂದ್ರ ಸರ್ಕಾರದ ಕ್ಯಾಬಿನೆಟ್ ಸೆಕ್ರೆಟರಿಗೆ ತಿಳಿಸಿದರು.

ಸಿಎಂ ಉದ್ಧವ್ ಠಾಕ್ರೆಯೂ ಕಾರಣ ಅದರಲ್ಲೂ ನಾನು ಇಷ್ಟು ಮುಕ್ತ ಮತ್ತು ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳಲು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರೇ ಕಾರಣ. ಕೊರೊನಾ ನಿಯಂತ್ರಣವೇ ನನ್ನ ಗುರಿಯಾಗಿಟ್ಟುಕೊಂಡು ಯಾವುದೇ ನಿರ್ಧಾರವನ್ನು ಕೈಗೊಳ್ಳಲು ಅವರು ನನಗೆ ಅವಕಾಶ ನೀಡಿದ್ದರು. ಇಂತಹ ಮುಕ್ತ ಅವಕಾಶ ದೇಶದ ಇತರ ರಾಜ್ಯದಲ್ಲಿ ನನ್ನದೇ ಹುದ್ದೆಯಲ್ಲಿ ಇರುವವರಿಗೆ ದೊರೆತಿರಲಿಕ್ಕಿಲ್ಲ ಎಂದು ಇಕ್ಬಾಲ್ ಸಿಂಗ್ ಮುಂಬೈ ಕೊರೊನಾದಿಂದ ಹೊರಬರುತ್ತಿರುವ ಬಗೆಯನ್ನು ಹಂತಹಂತವಾಗಿ ವಿವರಿಸಿದರು.

ಮೊದಲ ಅಲೆಯ ನಂತರ ಸಹಜವಾಗಿ ಮುಂದೆ ಎದುರಾಗಬಹುದಿದ್ದ ಎರಡನೇ ಅಲೆಯ ಅಪಾಯವನ್ನು ಮುಂಬೈ ಜನರು, ಅಧಿಕಾರಿಗಳು ಮರೆಯದೇ ಅಗತ್ಯ ತಯಾರಿ ಮಾಡಿಕೊಳ್ಳುತ್ತಿದ್ದರು. ಅಗತ್ಯ ಔಷಧ, ಹಾಸಿಗೆ, ಐಸಿಯು, ವೈದ್ಯರು ಮತ್ತು ದಾದಿಯರು, ಜತೆಗೆ ಅಚ್ಚುಕಟ್ಟಿನಿಂದ ಪರಿಸ್ಥಿತಿ ನಿಭಾಯಿಸಬಲ್ಲ ವ್ಯವಸ್ಥೆಯನ್ನು ರೂಪಿಸಿಕೊಂಡಿದ್ದರು.

ಮೂರನೇ ಅಲೆಗೂ ಎದುಗುಂದೆವು.. ಇದೀಗ ಮೂರನೇ ಅಲೆಗೆ ಸೆಡ್ಡು ಹೊಡೆಯಲು ಮುಂಬೈ ಸನ್ನದ್ಧವಾಗಿದೆ. ಬೃಹತ್ ಆಸ್ಪತ್ರೆ, ಆಕ್ಸಿಜನ್ ಘಟಕ, ಹೆಚ್ಚುವರಿ ಆಸ್ಪತ್ರೆಗಳನ್ನು ಈಗಾಗಲೇ ಹೊಂದಿಸಲಾಗಿದೆ. ಮುಂಬೈನ ಶೇಕಡಾ 70ರಷ್ಟು ಬೆಡ್​ಗಳು ಆಕ್ಸಿಜನ್ ಹೊಂದಿವೆ ಎಂಬುದೇ ಮುಂಬೈ ಕೊವಿಡ್ ಅಲೆಯ ವಿರುದ್ಧ ಹೋರಾಡಿ ಗೆಲ್ಲುತ್ತಿರುವ ಸೂತ್ರವನ್ನು ಸೂಚಿಸುತ್ತದೆ.

ಇದನ್ನೂ ಓದಿ: Explainer: ಮಕ್ಕಳಿಗೆ ಸಮಸ್ಯೆ ತಂದೊಡ್ಡುವ ಕೊರೊನಾ 3ನೇ ಅಲೆ ಎದುರಿಸಲು ಸಿದ್ಧತೆ ಹೇಗಿರಬೇಕು? ತಜ್ಞರ ಅಭಿಪ್ರಾಯ ಇಲ್ಲಿದೆ

ಮಕ್ಕಳಿಗೆ ಅಪಾಯ ಎಂಬ ಆತಂಕವಿರುವ ಕೊವಿಡ್ 3ನೇ ಅಲೆಯನ್ನು ಹೇಗೆ ನಿಭಾಯಿಸ್ತೀರಿ? ಭಾರತ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಪ್ರಶ್ನೆ

(Mumbai is ready to face covid 3rd wave here is mumbai model by BMC chief Iqbal Singh)