National Drone Policy: ರಾಷ್ಟ್ರೀಯ ಡ್ರೋನ್ ಕರಡು ಮಸೂದೆ ಪ್ರಕಟಿಸಿದ ಕೇಂದ್ರ: ಹಲವು ನಿಯಮಗಳ ಸಡಿಲಿಕೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jul 15, 2021 | 8:32 PM

ಡ್ರೋನ್​​ಗಳ ಟ್ರಾಫಿಕ್ ನಿರ್ವಹಣೆಗೆ ನೀತಿ ರೂಪಿಸಲು ಪ್ರಧಾನಿ ನರೇಂದ್ರ ಮೋದಿ ಈಚೆಗಷ್ಟೇ ಹಿರಿಯ ಸಚಿವರ ಸಭೆ ನಡೆಸಿದ ನಂತರ ಈ ಬೆಳವಣಿಗೆ ನಡೆದಿದೆ.

National Drone Policy: ರಾಷ್ಟ್ರೀಯ ಡ್ರೋನ್ ಕರಡು ಮಸೂದೆ ಪ್ರಕಟಿಸಿದ ಕೇಂದ್ರ: ಹಲವು ನಿಯಮಗಳ ಸಡಿಲಿಕೆ
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ಗುರುವಾರ (ಜುಲೈ 15) ಡ್ರೋನ್ ಕರಡು ನಿಯಮಗಳನ್ನು ಪ್ರಕಟಿಸಿದೆ. ಕಳೆದ ಮಾರ್ಚ್ ತಿಂಗಳಲ್ಲಿ ಪ್ರಕಟಿಸಿದ್ದ ಮಾನವ ರಹಿತ ವೈಮಾನಿಕ ವ್ಯವಸ್ಥೆ ನಿಯಮಗಳ ಬದಲಿಗೆ ಇದೀಗ ಪ್ರಕಟಿಸಿರುವ ಕರಡು ನಿಯಮಗಳು (Unmanned Aircraft System Rules – UAS) ಜಾರಿಗೆ ಬರಲಿವೆ. ಕರಡು ನಿಯಮಗಳನ್ನು ಪರಿಶೀಲಿಸಿ, ಸಾರ್ವಜನಿಕರು ತಮ್ಮ ಪ್ರತಿಕ್ರಿಯೆಯನ್ನು ತಿಳಿಸಲು ಅವಕಾಶವಿದೆ. ಡ್ರೋನ್​​​ಗಳ ಟ್ರಾಫಿಕ್ ನಿರ್ವಹಣೆಗೆ ನೀತಿ ರೂಪಿಸಲು ಪ್ರಧಾನಿ ನರೇಂದ್ರ ಮೋದಿ ಈಚೆಗಷ್ಟೇ ಹಿರಿಯ ಸಚಿವರ ಸಭೆ ನಡೆಸಿದ ನಂತರ ಈ ಬೆಳವಣಿಗೆ ನಡೆದಿದೆ. ಜಮ್ಮು ವಾಯುನೆಲೆಯ ಮೇಲೆ ಡ್ರೋನ್ ದಾಳಿ ನಡೆದ ಹಿನ್ನೆಲೆಯಲ್ಲಿ ಪ್ರಧಾನಿ ಈ ಮಹತ್ವದ ಸಭೆ ನಡೆಸಿದ್ದರು.

ಹೊಸ ಕರಡು ನಿಯಮಗಳ ಪ್ರಕಾರ ವಿಶಿಷ್ಟ ಅನುಮತಿ ಸಂಖ್ಯೆ, ವಿಶಿಷ್ಟ ಪ್ರೊಟೊಟೈಪ್ ಗುರುತಿನ ಸಂಖ್ಯೆ, ದೃಢೀಕರಣ ಪ್ರಮಾಣ ಪತ್ರ, ನಿರ್ವಹಣೆಯನ್ನು ದೃಢೀಕರಿಸುವ ಪ್ರಮಾಣಪತ್ರ, ಆಮದು ಮಾಡಿಕೊಂಡಿರುವ ಡ್ರೋನ್ ಆಗಿದ್ದಲ್ಲಿ ಆಮದು ಅನುಮತಿ ಪತ್ರ, ಕಾರ್ಯಾಚರಣೆಗೆ ಅನುಮೋದನೆ, ವಿದ್ಯಾರ್ಥಿಗಳಿಗೆ ರಿಮೋಟ್ ಪೈಲಟ್ ಲೈಸೆನ್ಸ್​ ನೀಡುವುದೂ ಸೇರಿದಂತೆ ಹಲವು ನಿಯಮಗಳು ಮುಂದಿನ ದಿನಗಳಲ್ಲಿ ಅಸ್ತಿತ್ವದಲ್ಲಿರುವುದಿಲ್ಲ.

ಹೊಸದಾಗಿ ಪ್ರಸ್ತಾಪಿಸಲಾಗಿರುವ ಕರಡು ನಿಯಮಗಳಲ್ಲಿ ವಾಯುಸ್ಥಳದ ನಿರ್ವಹಣೆಗೆ ಒತ್ತು ನೀಡಲಾಗುತ್ತದೆ. ಅದರಂತೆ ಭಾರತದ ವಾಯುಗಡಿಯೊಳಗಿನ ಎಲ್ಲ ಪ್ರದೇಶವನ್ನು ಕೆಂಪು, ಹಳದಿ ಹಾಗೂ ಹಸಿರು ವಲಯಗಳಾಗಿ ವಿಂಗಡಿಸಲಾಗುತ್ತದೆ. ಡಿಜಿಟಲ್ ಸ್ಕೈ ರೂಪದಲ್ಲಿ ಇದನ್ನು ಮುಕ್ತವಾಗಿ ಪ್ರದರ್ಶಿಸಲಾಗುತ್ತದೆ. ನಾಗರಿಕ ವಿಮಾನಯಾನ ಮಹಾನಿರ್ದೇಶಕರು ನಿರ್ವಹಿಸುವ ಡಿಜಿಟಲ್ ಸ್ಕೈ ಪ್ಲಾಟ್​ಫಾರ್ಮ್​ನಲ್ಲಿ ಡ್ರೋನ್ ಚಟುವಟಿಕೆಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಲಭ್ಯವಿರಲಿದೆ.

ಕರಡು ನಿಯಮಗಳು ಪ್ರಕಟವಾದ 30 ದಿನಗಳ ಒಳಗೆ ಕೇಂದ್ರ ಸರ್ಕಾರವು ಡಿಜಿಟಲ್ ಸ್ಕೈ ಪ್ಲಾಟ್​ಫಾರ್ಮ್​ ಪ್ರಕಟಿಸಲಿದೆ. ಇದರಲ್ಲಿ ಡ್ರೋನ್ ಕಾರ್ಯಾಚರಣೆಗೆ ಅವಕಾಶವಿರುವ ದೇಶದ ವಾಯುಗಡಿಯೊಳಗಿನ ನಕಾಶೆ ಲಭ್ಯವಿರಲಿದೆ ಎಂದು ದಾಖಲೆಗಳು ಹೇಳುತ್ತವೆ.

ವಿಮಾನ ನಿಲ್ದಾಣದ ಕೇಂದ್ರದಿಂದ ಈ ಮೊದಲು 45 ಕಿಮೀ ವ್ಯಾಪ್ತಿಯನ್ನು ಹಳದಿ ವಲಯ ಎಂದು ಘೋಷಿಸಲಾಗಿತ್ತು. ಈ ವಲಯದಲ್ಲಿ ಡ್ರೋನ್​​ಗಳ ಹಾರಾಟಕ್ಕೆ ನಿರ್ಬಂಧವಿತ್ತು. ಇದೀಗ ಹಳದಿ ವಲಯದ ವಿಸ್ತೀರ್ಣವನ್ನು 12 ಕಿಮೀ ವ್ಯಾಪ್ತಿಗೆ ಸೀಮಿತಗೊಳಿಸಲಾಗಿದೆ.

ಕೆಂಪು ಅಥವಾ ಹಳದಿ ವಲಯ ಎಂಬ ಸೂಚನೆ ಇಲ್ಲದ ಎಲ್ಲ ಪ್ರದೇಶಗಳು ಹಸಿರು ವಲಯ ಎನ್ನಿಸಿಕೊಳ್ಳುತ್ತವೆ. ಈ ವಲಯದಲ್ಲಿ ಸಮುದ್ರದಿಂದ 400 ಅಡಿ (200 ಮೀಟರ್) ಎತ್ತರದವರೆಗಿನ ಪ್ರದೇಶದಲ್ಲಿ ಡ್ರೋನ್​​ಗಳ ಹಾರಾಟಕ್ಕೆ ಅವಕಾಶವಿದೆ. ವಿಮಾನ ನಿಲ್ದಾಣದಿಂದ 8 ಕಿಮೀ ವಿಸ್ತೀರ್ಣದ ವಲಯ ಕೆಂಪು ಮತ್ತು 12 ಕಿಮೀ ವಿಸ್ತೀರ್ಣದ ಒಳಗಿನ ಪ್ರದೇಶವು ಹಳದಿ ವಲಯದಲ್ಲಿ ಬರುತ್ತದೆ. ಈ ಪ್ರದೇಶದಲ್ಲಿ ಗರಿಷ್ಠ 200 ಅಡಿ (60 ಮೀಟರ್) ಎತ್ತರದವರೆಗೆ ಡ್ರೋನ್ ಹಾರಾಟಕ್ಕೆ ಅವಕಾಶವಿದೆ.

ಏರ್​ಸ್ಪೇಸ್​ ನಕಾಶೆಯು ಮೊಬೈಲ್​ಗಳಲ್ಲಿಯೂ ಸುಲಭವಾಗಿ ಸಿಗುವಂತೆ ಮಾಡಲು ವಿಶೇಷ ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್​ಫೇಸ್ (ಎಪಿಐ) ಅಭಿವೃದ್ಧಿಪಡಿಸಲಾಗುವುದು. ಡ್ರೋನ್​ಗಳ ನಿರ್ವಾಹಕರು ಹಾರಾಟವಲಯವನ್ನು ಸುಲಭವಾಗಿ ಗುರುತಿಸಿಕೊಳ್ಳುವಂತೆ ಆಗಬೇಕು ಎನ್ನುವುದು ಇದರ ಉದ್ದೇಶ. ಯಾವ ವಲಯದಲ್ಲಿ ಹಾರಾಟಕ್ಕೆ ಅನುಮತಿ ಪಡೆಯಬೇಕು ಎಂಬ ಬಗ್ಗೆಯೂ ಸರ್ಕಾರ ಸ್ಪಷ್ಟವಾಗಿ ವಿವರಿಸಲಿದೆ.

(National Drone Draft Policy released government of India this relaxes existing rules)

ಇದನ್ನೂ ಓದಿ: ಜಮ್ಮು ದಾಳಿಯ ನಂತರ ಶ್ರೀನಗರದಲ್ಲಿ ಡ್ರೋನ್‌, ಮಾನವರಹಿತ ವಾಹನಗಳಿಗ ನಿಷೇಧ

ಇದನ್ನೂ ಓದಿ: ಜಮ್ಮು ಗಡಿ ಬಳಿ ಪತ್ತೆಯಾದ ಪಾಕಿಸ್ತಾನಿ ಡ್ರೋನ್ ಮೇಲೆ ಬಿಎಸ್ಎಫ್ ಗುಂಡು ಹಾರಾಟ

Published On - 8:05 pm, Thu, 15 July 21