ಕಲ್ಪೆಟ್ಟಾ ಜುಲೈ 30: ಕೇರಳದ ವಯನಾಡಿನಲ್ಲಿ (Wayanad landslide) ಸಂಭವಿಸಿದ ಗುಡ್ಡ ಕುಸಿತದಲ್ಲಿ ಸಾವಿಗೀಡಾದವರ ಸಂಖ್ಯೆ 120 ದಾಟಿದೆ. ನೂರಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದು ಅವರಿಗಾಗಿ ಹುಡುಕಾಟ ನಡೆಯುತ್ತಿದೆ. ಭೂಕುಸಿತದಿಂದ ಭಾರಿ ಹಾನಿಗೀಡಾದ ಚೂರಲ್ಮಲದಲ್ಲಿ (Chooralmala) ತಾತ್ಕಾಲಿಕ ಸೇತುವೆಯ ನಿರ್ಮಾಣ ಪೂರ್ಣಗೊಂಡಿದೆ. ಈ ಸೇತುವೆಯನ್ನು ಸೇನೆ ಮತ್ತು ಕೇರಳ ಅಗ್ನಿಶಾಮಕ ದಳ ಜಂಟಿಯಾಗಿ ನಿರ್ಮಿಸಿದೆ. ರಾತ್ರಿಯಿಡೀ ರಕ್ಷಣಾ ಕಾರ್ಯಾಚರಣೆ ಮುಂದುವರಿಯಲಿದೆ. ಇಂದು (ಮಂಗಳವಾರ) ಮಧ್ಯಾಹ್ನ, ಸೇನೆ ಮತ್ತು ಎನ್‌ಡಿಆರ್‌ಎಫ್ ಒಳಗೊಂಡ ಮಿಷನ್ ತಂಡವು ನದಿಯನ್ನು ದಾಟಿ ಮುಂಡಕೈ ತಲುಪಿತು. ಮುಂಡಕೈಯಲ್ಲಿ ದುರಂತ ಭೂಮಿಯಲ್ಲಿ ಸಿಲುಕಿದ್ದ ಸುಮಾರು 100 ಮಂದಿ ಪತ್ತೆಯಾಗಿದ್ದಾರೆ. ನದಿಯ ಮೇಲೆ ಹಗ್ಗ ಕಟ್ಟಿ ಅವರನ್ನು ಕಾಪಾಡುವ ಪ್ರಯತ್ನ ನಡೆಯುತ್ತಿದೆ.
ತಾತ್ಕಾಲಿಕ ಸೇತುವೆ ನಿರ್ಮಾಣದ ನಂತರ ರಕ್ಷಣಾ ಕಾರ್ಯಾಚರಣೆ ಚುರುಕುಗೊಳ್ಳುವ ನಿರೀಕ್ಷೆಯಿದೆ. ಕಣ್ಣೂರಿನ ಡಿಫೆನ್ಸ್ ಸೆಕ್ಯುರಿಟಿ ಕಾರ್ಪ್ಸ್ (ಡಿಎಸ್‌ಸಿ) ಕೇಂದ್ರದಿಂದ 200 ಸೈನಿಕರೊಂದಿಗೆ ಭಾರತೀಯ ಸೇನೆಯ ಎರಡು ವಿಭಾಗಗಳು ವಯನಾಡ್ ತಲುಪಿವೆ. ಸೇನಾ ಮೂಲಗಳ ಪ್ರಕಾರ, ಕಣ್ಣೂರಿನ ಮಿಲಿಟರಿ ಆಸ್ಪತ್ರೆಯ ವೈದ್ಯಕೀಯ ತಂಡ ಮತ್ತು ಕೋಝಿಕ್ಕೋಡ್‌ನಿಂದ ಟೆರಿಟೋರಿಯಲ್ ಆರ್ಮಿಯ ಪಡೆಗಳನ್ನು ವಯನಾಡ್‌ಗೆ ನಿಯೋಜಿಸಲಾಗಿದೆ.
ಕೇರಳ ಕಂಡ ಅತಿದೊಡ್ಡ ಭೂಕುಸಿತಕ್ಕೆ ಮುನ್ನ ನದಿ ನೀರಿನ ಬಣ್ಣ ಬದಲಾಗಿತ್ತು. ಪಂಚಾಯಿತ್ ಅಧಿಕಾರಿಗಳು ಹಲವರನ್ನು ಸ್ಥಳಾಂತರಿಸಿದ್ದರು. ಅಪಾಯದ ಎಚ್ಚರಿಕೆಯನ್ನೂ ನೀಡಲಾಗಿತ್ತು. ಆಗಲಿರುವ ಅನಾಹುತವನ್ನು ಊಹಿಸಲು ಸಾಧ್ಯವಾಗದೆ ಮಂಗಳವಾರ ಬೆಳಗಿನ ಜಾವ ಎರಡು ಗಂಟೆ ಸುಮಾರಿಗೆ ಮುಂಡಕೈಯಲ್ಲಿ ಜನರು ಮಲಗಿದ್ದಾಗಲೇ ಮೊದಲ ಭೂಕುಸಿತ ಸಂಭವಿಸಿದೆ. ಘಟನೆಯ ವಿಚಾರ ತಿಳಿದು ಮೇಪ್ಪಾಡಿಯಿಂದ ಹಲವರು ಮುಂಡಕೈಗೆ ಬಂದಿದ್ದರು. ಚೂರಲ್‌ಮಲ ನಿವಾಸಿಗಳು ಇದ್ಯಾವುದೂ ಗೊತ್ತೇ ಆಗಲಿಲ್ಲ,
ಬೆಳಗಿನ ಜಾವ 4.10ರ ವೇಳೆಗೆ ಎರಡನೇ ಬಾರಿಗೆ ಭೂಕುಸಿತ ಸಂಭವಿಸಿದ್ದು, ಚೂರಲ್ಮಲದಲ್ಲಿ ಬಂದ ಕೆಸರು ಹಾಗೂ ಬೇರೆ ಬೇರೆ ಕಡೆ ಹರಿದ ನದಿ ನೀರು, ಜನರ ಜೀವ ಮತ್ತು ಮನೆಗಳನ್ನು ಬಲಿ ತೆಗೆದುಕೊಂಡಿತ್ತು. ಇಲ್ಲಿಂದ ಮೃತದೇಹಗಳು ಸುಮಾರು ಎರಡೂವರೆ ಕಿಲೋಮೀಟರ್ ಕೊಚ್ಚಿ ಹೋಗಿದೆ. ಮೇಪ್ಪಾಡಿ, ಮುಂಡಕೈ, ಚೂರಲ್‌ಮಲ ಸೇರಿದಂತೆ ಹಲವೆಡೆ ಗ್ರಾಮಗಳು ಸಂಪರ್ಕ ಕಡಿದುಕೊಂಡಿತ್ತು.
ಈ ಪ್ರದೇಶದಲ್ಲಿ ಹತ್ತು ಮನೆಗಳು ಮಾತ್ರ ಉಳಿದಿವೆ. ಸುಮಾರು 150 ಮನೆಗಳು ನಾಶವಾಗಿವೆ. ರಕ್ಷಣಾ ಕಾರ್ಯಕರ್ತರು ಅವಶೇಷಗಳನ್ನು ಸ್ಥಳಾಂತರಿಸಿ ಪರಿಶೀಲನೆ ನಡೆಸುತ್ತಿದ್ದು, ಕುಸಿದಿರುವ ಮನೆಗಳಲ್ಲಿ ಜನರಿರಬಹುದು ಎಂದು ಹುಡುಕಾಟ ನಡೆಸುತ್ತಿದ್ದಾರೆ. ಐದು ಸದಸ್ಯರಿದ್ದ ಎರಡು ಕುಟುಂಬಗಳ ಮನೆಗಳು ಸಂಪೂರ್ಣ ನಾಶವಾಗಿವೆ. ಆ ಹತ್ತು ಜನರಲ್ಲಿ ಒಬ್ಬರ ದೇಹ ಮಾತ್ರ ಪತ್ತೆಯಾಗಿದೆ.
ಇದನ್ನೂ ಓದಿ: ಕಳೆದ 10 ವರ್ಷಗಳಲ್ಲಿ ಕೇರಳವನ್ನು ನಡುಗಿಸಿದ ಗುಡ್ಡ ಕುಸಿತ ದುರಂತಗಳಿವು
ಚಹಾ ತೋಟಗಳಲ್ಲಿ ಕೆಲಸ ಮಾಡುತ್ತಿದ್ದ ವಲಸೆ ಕಾರ್ಮಿಕರ ಕುಟುಂಬಗಳು ವಾಸಿಸುತ್ತಿದ್ದ ಮುಂಡಕೈ ಕೊಳೆಗೇರಿಗಳು ಕೊಚ್ಚಿಹೋಗಿವೆ. ಎಚ್ಚರಿಕೆಯನ್ನು ಅನುಸರಿಸಿ ಸುಮಾರು 50 ಜನರು ತಮ್ಮ ಹೆಂಡತಿ ಮತ್ತು ಮಕ್ಕಳೊಂದಿಗೆ ಈ ಗುಂಪನ್ನು ತೊರೆದಿದ್ದಾರೆ ಎಂದು ವರದಿಯಾಗಿದೆ. ಉಳಿದವರ ಬಗ್ಗೆ ಯಾವುದೇ ಸೂಚನೆ ಇಲ್ಲ ಎಂದು ಮಲಯಾಳ ಮನೋರಮ ವರದಿ ಮಾಡಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ